ADVERTISEMENT

ಅವನು ಮನೆಯಲ್ಲಿ..ಅವಳು ಕಚೇರಿಯಲ್ಲಿ!

ಕೃಷ್ಣಿ ಶಿರೂರ
Published 20 ಜುಲೈ 2019, 2:06 IST
Last Updated 20 ಜುಲೈ 2019, 2:06 IST
Bhoomika
Bhoomika   

ಒಮ್ಮೆ ಫ್ಲ್ಯಾಷ್‌ಬ್ಯಾಕ್‌ಗೆ ಹೋಗಿ– ಪುರುಷನ ಕೆಲಸ ಏನಿದ್ದರೂ ದುಡಿದು ಹಣ ಸಂಪಾದಿಸುವುದು, ಮಕ್ಕಳ ಶಿಕ್ಷಣದ ಹೊರೆ ಹೊರುವುದು, ಮನೆ ಸಾಲ, ವಾಹನ ಸಾಲ ಎಂದು ಇಎಂಐ ಕಟ್ಟುವುದು, ಮನೆಯ ಖರ್ಚು–ವೆಚ್ಚವನ್ನೆಲ್ಲ ನೋಡಿಕೊಂಡು ಮನೆಯಲ್ಲಿರುವಷ್ಟು ಹೊತ್ತು ವಿಶ್ರಾಂತಿ ಪಡೆಯುವುದು. ಇನ್ನು ಮನೆಯ ಯಜಮಾನಿಯ ಕೆಲಸ ಅಡುಗೆ, ಕ್ಲೀನಿಂಗ್‌, ಮಕ್ಕಳ ನಿಗಾ ನೋಡಿಕೊಳ್ಳುವುದು, ಮನೆಯ ಹಿರಿಯರ ಕಾಳಜಿ ತೆಗೆದುಕೊಳ್ಳುವುದು..

ಈಗ ಸ್ವಲ್ಪ ಮುಂದಕ್ಕೆ ಬರೋಣ– ಪುರುಷರು ಮನೆಯಲ್ಲೇ ಇದ್ದು ಗೃಹಿಣಿ ಮಾಡುವ ಈ ಎಲ್ಲ ಕೆಲಸಗಳನ್ನು ನಿಭಾಯಿಸಿದರೆ ಹೇಗೆ? ಅಡುಗೆ ಮಾಡುವುದು, ಮನೆಯನ್ನು ಕ್ಲೀನ್‌ ಮಾಡುವುದು, ಮಕ್ಕಳನ್ನು ನೋಡಿಕೊಳ್ಳುವುದು... ಎಲ್ಲವನ್ನೂ ತನ್ನ ಹೆಗಲ ಮೇಲೆ ಹೊತ್ತುಕೊಂಡರೆ...

ಯಾಕಾಗಬಾರದು?

ADVERTISEMENT

ಹೌದು, ಕಾಲ ಬದಲಾಗಿದೆ. ಮನೆಯ ಒಳಹೊರಗಡೆ ಎಷ್ಟೊಂದು ಬದಲಾವಣೆ ಆಗಿದೆ! ಹೆಚ್ಚು ಹೆಚ್ಚು ಮಹಿಳೆಯರು ಹೊಸ್ತಿಲು ದಾಟಿ ಹೊರಬಂದಿದ್ದಾರೆ; ಉನ್ನತ ವ್ಯಾಸಂಗದಲ್ಲಿ ಮೇಲುಗೈ ಸಾಧಿಸಿದ್ದಾರೆ; ಪರ್ಸ್‌ ತುಂಬಿ ತುಳುಕುವಷ್ಟು ಸಂಬಳ ಪಡೆಯುತ್ತಿದ್ದಾರೆ, ಕೆಲವೊಮ್ಮೆ ಗಂಡನಿಗಿಂತ ಜಾಸ್ತಿ; ಕಚೇರಿಯಲ್ಲಿ ಹಿಂದೆ ಮರೀಚಿಕೆಯಾಗಿದ್ದ ಉನ್ನತ ಸ್ಥಾನವನ್ನೂ ಅಲಂಕರಿಸಿ ಬೀಗುತ್ತಿದ್ದಾರೆ; ಅಲ್ಲಿಂದ ಮಕ್ಕಳು, ಮನೆ, ನೌಕರಿ ಈ ಮೂರನ್ನು ನಿಭಾಯಿಸಲು ಜಾರಿಗೆ ಬಂದಿದ್ದೇ ಫ್ಯಾಮಿಲಿ ಬ್ಯಾಲೆನ್ಸ್‌ (ಕುಟುಂಬ ಹೊಂದಾಣಿಕೆ) ಎಂಬ ಪದ ಪ್ರಯೋಗ. ಮುಖ್ಯವಾಗಿ ‘ಪುರುಷ ಪ್ರಧಾನ’ ವ್ಯವಸ್ಥೆಯಲ್ಲಿ ‘ಹೊಂದಾಣಿಕೆ’ ಪದ ಹೆಚ್ಚು ಜಾಗ ಗಿಟ್ಟಿಸಿಕೊಂಡಿತು. ಇಂಥ ಬದಲಾವಣೆ ದಿಢೀರ್‌ ಆಗಿ ಬಂದಿದ್ದಲ್ಲ. ಹಂತಹಂತವಾಗಿ, ಹಲವು ಮಜಲುಗಳನ್ನು ದಾಟುತ್ತ ಗಂಡು ಗೃಹ ಕೃತ್ಯ ಮಾಡುವಷ್ಟರ ಮಟ್ಟಿಗೆ ಬಂದು ತಲುಪಿದೆ.

ಆಕೆ ತನ್ನ ಗಂಡನಿಗಿಂತ ಹೆಚ್ಚು ಸಂಪಾದಿಸುತ್ತಿದ್ದಾಳೆ ಎಂದುಕೊಳ್ಳೋಣ. ಒಂದು ನೆನಪಿಡಿ, ಇಲ್ಲಿ ಪುರುಷ ಅಥವಾ ಮಹಿಳೆಯ ಅಹಂ ಬಗ್ಗೆ ಹೇಳುವುದಕ್ಕೆ ಹೊರಟಿಲ್ಲ. ಕಣ್ಮುಂದೆ ಹೀಗೊಂದು ದೃಶ್ಯವನ್ನು ಕಲ್ಪಿಸಿಕೊಳ್ಳಿ. ಆಕೆಗೊಂದು ಮಗುವಿದೆ, ಕುಟುಂಬದ ಹಿರಿಯರ ಬೆಂಬಲವಿಲ್ಲ. ಹಾಗಂತ ಮಗುವನ್ನು ಆಯಾ ಜೊತೆಯೋ ಅಥವಾ ಡೇಕೇರ್‌ನಲ್ಲಿ ಬಿಟ್ಟು ಹೋಗಲೂ ಮನಸ್ಸಿಲ್ಲ. ಮಗುವಿನ ಲಾಲನೆ–ಪಾಲನೆಗೆ ಇಡೀ ದಿನ ಪೋಷಕರಲ್ಲಿ ಒಬ್ಬರಾದರೂ ಮನೆಯಲ್ಲಿರಬೇಕು ಎಂಬ ಇರಾದೆ. ಇಂತಹ ಸಂದರ್ಭದಲ್ಲಿ ಮಗುವಿನ ತಂದೆ– ತಾಯಿ ಪರಸ್ಪರ ತಮ್ಮ ಪಾತ್ರಗಳನ್ನು ಅದಲು ಬದಲು ಮಾಡಿಕೊಂಡರೆ ಹೇಗೆ? ತಂದೆ ಮನೆಯಲ್ಲೇ ಇದ್ದು ಮಗುವಿನ ಜವಾಬ್ದಾರಿ ನೋಡಿಕೊಂಡರೆ, ತಾಯಿ ಯಾವುದೇ ತಪ್ಪಿತಸ್ಥ ಮನೋಭಾವವಿಲ್ಲದೇ ನಿರಾಳವಾಗಿ ಕಚೇರಿಗೆ ಹೋಗಿ ಬರಬಹುದಲ್ಲ! ಇದಕ್ಕಿಂತ ಉತ್ತಮ ಪರಿಹಾರ ಇನ್ನೇನಿದೆ?

ಪಿತೃತ್ವದ ರಜೆ

ಚಿಕ್ಕ ಮಗುವನ್ನು ಬೆಳೆಸುವುದು ಸುಲಭದ ಮಾತಲ್ಲ ಎಂಬುದು ನಮ್ಮೆಲ್ಲರಿಗೂ ಗೊತ್ತು. ಹಾಗೆಯೇ ಮನೆಯ ಕೆಲಸಗಳನ್ನು ನಿಭಾಯಿಸುವುದೂ ಕಷ್ಟವೇ. ಇಲ್ಲಿ ಅಪ್ಪನಾದವನು ಏನೂ ಮಾಡುತ್ತಿಲ್ಲ, ಉದ್ಯೋಗ ಸಿಗದೇ ಖಾಲಿ ಕುಳಿತಿದ್ದಾನೆ ಎಂದೇನೂ ಭಾವಿಸುವುದು ಸರಿಯಲ್ಲ. ಈ ‘ಪಿತೃತ್ವದ ರಜೆ’ಯನ್ನು ಹೊಸ ಬಗೆಯ ಕೌಶಲ ಕಲಿಯಲು ಅಥವಾ ಹೊಸ ಹವ್ಯಾಸವನ್ನು ರೂಢಿಸಿಕೊಳ್ಳಲು ಅಥವಾ ತನ್ನ ಆಸಕ್ತಿಯ ಇನ್ನಿತರ ಯಾವುದೇ ಕೆಲಸದಲ್ಲಿ ತೊಡಗಲು ಬಳಸಿಕೊಳ್ಳಬಹುದು. ಎಲ್ಲಕ್ಕಿಂತ ಮಗುವಿನ ಜೊತೆ ಕಳೆಯುವ ಈ ಸಮಯ ನಿಜವಾಗಿಯೂ ಚಿನ್ನದಂತಹ ಅವಕಾಶ ಎನ್ನಬಹುದು.

ಮನೆಯಲ್ಲೇ ಉಳಿಯುವ ಅಪ್ಪಂದಿರು

ಇಂತಹ ‘ಮನೆಯಲ್ಲೇ ಉಳಿಯುವ ಅಪ್ಪಂದಿರ’ ಸಂಖ್ಯೆ ಈಗ ಜಾಸ್ತಿಯಾಗುತ್ತಿದೆ. ಆತ ತನ್ನ ಉದ್ಯೋಗದಲ್ಲಿ ಮೇಲಕ್ಕೇರಲು ಸಾಧ್ಯವಾಗುತ್ತಿಲ್ಲ ಅಥವಾ ವೇತನ ಕಡಿಮೆ ಎನ್ನುವ ಮಾತಿಲ್ಲ. ಔದ್ಯೋಗಿಕ ಬದುಕಿನ ಒತ್ತಡದಿಂದ ಒಂದು ಸಣ್ಣ ಬ್ರೇಕ್‌. ಫಾರ್ಮಾಸ್ಯೂಟಿಕಲ್‌ ಕಂಪನಿಯ ಮಾರ್ಕೆಟಿಂಗ್‌ ಮ್ಯಾನೇಜರ್‌ ಹುದ್ದೆಗೆ ರಾಜೀನಾಮೆ ಕೊಟ್ಟು ಪುಟ್ಟ ಮಗನನ್ನು ನೋಡಿಕೊಳ್ಳುತ್ತಿರುವ ರಾಹುಲ್‌ ಹುಯಿಲಗೋಳ ಮಾತಿನಲ್ಲೇ ಹೇಳುವುದಾದರೆ ‘ಕತ್ತೆ ಚಾಕರಿಯಿಂದ ತಾತ್ಕಾಲಿಕ ಮುಕ್ತಿ’.

‘ಫೋಟೊಗ್ರಫಿಯಲ್ಲಿ ಆಸಕ್ತಿ ಇದೆ. ಸದ್ಯಕ್ಕಂತೂ ನನ್ನ ಮಗನ ಪ್ರತಿಯೊಂದು ಚಟುವಟಿಕೆಯನ್ನೂ ಕ್ಯಾಮೆರಾದಲ್ಲಿ ಸೆರೆಹಿಡಿದು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್‌ ಮಾಡುತ್ತಿದ್ದೇನೆ. ಮುಂದೆ ಅದೇ ನನ್ನ ದುಡಿಮೆಗೆ ದಾರಿಯಾಗಬಹುದು’ ಎಂಬ ರಾಹುಲ್‌ ಮಾತಿನಲ್ಲಿ ‘ಪೂರ್ಣ ಪ್ರಮಾಣದ ಹೌಸ್‌ ಹಸ್ಬೆಂಡ್‌’ ಪಾತ್ರ ನಿರ್ವಹಿಸುತ್ತಿರುವ ಬಗ್ಗೆ ಹೆಮ್ಮೆಯಿತ್ತು.

ಸದ್ಯಕ್ಕೆ ಜನರ ಮನಸ್ಸಿನಲ್ಲಿ ಒಂದು ಆದರ್ಶ ಕುಟುಂಬದ ಕಲ್ಪನೆ ಮನೆ ಮಾಡಿದೆ. ಜನರು ಅಂತಹ ಪರಿಸ್ಥಿತಿಗೆ ಹೇಗೆ ಒಗ್ಗಿಕೊಂಡಿದ್ದಾರೆ ಎಂದರೆ ‘ಕುಟುಂಬದ ಖರ್ಚಿಗಾಗುವಷ್ಟು ದುಡಿಯುತ್ತಿಲ್ಲ ಆತ. ಅದಕ್ಕೇ ಮನೆಯಲ್ಲಿ ಕೂತಿದ್ದಾನೆ’ ಎಂದು ಟೀಕಿಸುವುದು, ‘ಆಕೆ ಎಂತಹ ಸ್ವಾರ್ಥಿ ನೋಡು, ಅಷ್ಟು ಚಿಕ್ಕ ಮಗುವನ್ನು ಮನೆಯಲ್ಲೇ ಬಿಟ್ಟು ನೌಕರಿ ಮಾಡುವಂಥ ಅಗತ್ಯ ಏನಿದೆ?’ ಎಂದು ಅನಗತ್ಯ ಮೂಗು ತೂರಿಸುವುದು ಮೆಟ್ರೊ ನಗರಗಳಲ್ಲಿ ಇನ್ನೂ ಇದೆ.

ಹವ್ಯಾಸದತ್ತ..

ಆಕೆ ಒಳ್ಳೆಯ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿರುವಾಕೆ. ಪತಿ ಪಿಂಕ್‌ ಸ್ಲಿಪ್‌ ಪಡೆದು ಉದ್ಯೋಗ ಕಳೆದುಕೊಳ್ಳಬೇಕಾಯಿತು. ಸ್ಟಾರ್ಟ್‌ಅಪ್‌ನಲ್ಲೂ ಕೈ ಕೂರಲಿಲ್ಲ. ಆದರೆ ಮನೆಯಲ್ಲಿ ಆರು ವರ್ಷದ ಮಗಳನ್ನು ಶಾಲೆಗೆ ಕರೆದುಕೊಂಡು ಹೋಗುವುದು, ಬರುವುದು, ತಿಂಡಿ ತಿನ್ನಿಸುವುದು, ತರಕಾರಿ, ಸಾಮಾನು, ಬಿಲ್‌... ಎಲ್ಲವನ್ನೂ ನೋಡಿಕೊಂಡು ತನ್ನ ಬರೆಯುವ ಹವ್ಯಾಸವನ್ನೂ ಮುಂದುವರಿಸಿಕೊಂಡು ಹೋಗುವಾತ. ಆಕೆಗೂ ನೆಮ್ಮದಿ. ಕಚೇರಿಯ ಕೆಲಸವನ್ನು ಒತ್ತಡವಿಲ್ಲದೆ ನಿರ್ವಹಿಸುವ ಖುಷಿ. ಪುಟ್ಟ ಮಗಳಿಗೂ ವಿವರಿಸಿ ಹೇಳುವಷ್ಟು ವಿಶಾಲ ಮನೋಭಾವ. ತನ್ನ ಸ್ನೇಹಿತೆಯರ ಮನೆಯಲ್ಲಿ ಈ ರೀತಿ ಇಲ್ಲವಲ್ಲ ಎಂದೆನಿಸಿದರೂ ಆ ಮಗುವಿಗೆ ಅಮ್ಮನ ಮಾತಿನಲ್ಲಿ ಅಪಾರ ನಂಬಿಕೆ.

ಇಲ್ಲಿ ಗಂಡಿನ ಹೊಂದಾಣಿಕೆ ಗುಣವೇ ಪ್ರಮುಖ ಪಾತ್ರ ವಹಿಸುತ್ತದೆ. ಇದು ಮನೆಯಿಂದ ಹೊರಗೆ ‘ಜಾಬ್‌’ ಅನ್ನೋ ಹೆಸರಿನಲ್ಲಿ ದುಡಿಯುವ ಮಹಿಳೆಯ ಸಂಸಾರದ ಸಾರವಾದರೆ, ಇನ್ನು ಕಲಾಕ್ಷೇತ್ರದಲ್ಲಿ ಸಾಧನೆ ಮಾಡಿದ ಎಲ್ಲ ಮಹಿಳೆಯರ ಹಿಂದೆ ಕೆಲಸ ಬಿಟ್ಟುಕೊಂಡ ಅವರ ಪತಿಯಂದಿರ ತ್ಯಾಗ ಮೆಚ್ಚುವಂತದ್ದು. ಅವರ ಸಾಧನೆಯ ಹೆಜ್ಜೆಯಲ್ಲಿ ಅವರ ಪತಿಯ ಹೆಜ್ಜೆಯೂ ಮೂಡಿರುತ್ತದೆ. ಅಂಥ ಸಾಕಷ್ಟು ದೃಷ್ಟಾಂತಗಳು ನಮ್ಮ ಸಮಾಜದಲ್ಲಿ ಕಾಣಸಿಗುತ್ತವೆ.

ಹಳೆಯ ಸಂಪ್ರದಾಯ, ಸ್ಟೀರಿಯೋಟೈಪ್‌ ರೀತಿಯನ್ನು ಬದಲಿಸಲು ಇದು ಸಕಾಲ. ನಮಗೇನು ಅನುಕೂಲವೋ ಅದನ್ನೇ ಮಾಡಿದರೇನು ತಪ್ಪು? ಖ್ಯಾತ ಲೇಖಕ, ಕಾದಂಬರಿಕಾರ ಚೇತನ್‌ ಭಗತ್‌ ಬರವಣಿಗೆಗಾಗಿ ತಮ್ಮ ಉದ್ಯೋಗ ತ್ಯಜಿಸಿ ಮನೆಯಲ್ಲೇ ಕೂತರು. ಅವರ ಪತ್ನಿ ಅನುಷಾ ಉದ್ಯೋಗದಲ್ಲಿ ಮುಂದುವರಿದರು. ಭಗತ್‌ ಬರವಣಿಗೆಯಲ್ಲಿ ಯಶಸ್ಸು ಗಳಿಸಿದರೆನ್ನಿ. ಎಲ್ಲರೂ ಅವರಷ್ಟು ಯಶಸ್ಸು ಗಳಿಸದಿದ್ದರೂ ತಮ್ಮದೇ ಆದ ಹವ್ಯಾಸ ಮುಂದುವರಿಸಿ ಜೀವನದ ಖುಷಿ ಅನುಭವಿಸಬಹುದು.

‘ನನ್ನ ಪತಿ ಹೋಂಮೇಕರ್‌..

ಮದುವೆಯಾಗಿ 7 ವರ್ಷಗಳಾದವು. ಬ್ಯುಸಿನೆಸ್‌ ಅನಾಲಿಸ್ಟ್‌ ಆಗಿದ್ದ ಪತಿ ಪುಟ್ಟ ಮಗಳ ಸಲುವಾಗಿ ಉದ್ಯೋಗ ತ್ಯಜಿಸಿ ಮೂರೂವರೆ ವರ್ಷಗಳಾದವು. ಮನೆಯ ಕೆಲಸ, ಮಗಳ ಕೆಲಸ ಮಾಡುತ್ತ, ತನ್ನ ವೆಬ್‌ ವಿನ್ಯಾಸದ ಹವ್ಯಾಸವನ್ನು ಮುಂದುವರಿಸುತ್ತಿರುವ ಪತಿ ಹೊಸ ಕೌಶಲಗಳ ಕಲಿಕೆಯಲ್ಲಿ ತೊಡಗಿದ್ದಾರೆ. ಸಂಬಂಧಿಕರು ಮೊದಲು ತರಾವರಿ ಮಾತನಾಡಿದರು. ಆದರೆ ಈ ವ್ಯವಸ್ಥೆ ನನಗೆ ಕೂಡ ಓಕೆ.

– ಶಾಲಿನಿ ಎನ್‌.ಪೆರುಮಾಳ್‌, ಟೆಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.