ADVERTISEMENT

ಮುತ್ತು ಬೆಳೆದಾವ...

ಗಣೇಶ ಚಂದನಶಿವ
Published 1 ಏಪ್ರಿಲ್ 2023, 19:30 IST
Last Updated 1 ಏಪ್ರಿಲ್ 2023, 19:30 IST
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಐವರ್ನಾಡು ಗ್ರಾಮದ ಯುವ ರೈತ ಸಿ.ಕೆ. ನವೀನ್‌ಚಂದ್ರ ಬೆಳೆದ ಮುತ್ತಿನ ಮಸ್ಸೆಲ್ಸ್‌ನೊಂದಿಗೆ...
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಐವರ್ನಾಡು ಗ್ರಾಮದ ಯುವ ರೈತ ಸಿ.ಕೆ. ನವೀನ್‌ಚಂದ್ರ ಬೆಳೆದ ಮುತ್ತಿನ ಮಸ್ಸೆಲ್ಸ್‌ನೊಂದಿಗೆ...   

ಉಪ್ಪು ನೀರಿನ ತಾಣವಾದ ಕರಾವಳಿಯಲ್ಲಿ ಸಿಹಿ ನೀರಿನಲ್ಲಿ ಬೆಳೆಯುವ ಮುತ್ತೆ? ವಿದೇಶಗಳಲ್ಲಿ ಸಾಮಾನ್ಯವಾಗಿದ್ದ ಮುತ್ತಿನ ಕೃಷಿಯನ್ನು ರಾಜ್ಯದಲ್ಲೂ ಪರಿಚಯಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಐವರ್ನಾಡಿನ ಯುವರೈತ ಸಿ.ಕೆ. ನವೀನ್‌ಚಂದ್ರ ಯಶೋಗಾಥೆ ಇದು...

***

ಮುತ್ತು (Pearl) ಆಭರಣಪ್ರಿಯರ ಅಚ್ಚುಮೆಚ್ಚು. ಇದನ್ನು ನಮ್ಮ ಮನೆ ಅಂಗಳದಲ್ಲಿ ನಾವೇ ಬೆಳೆದರೆ ಹೇಗಿರುತ್ತದೆ?

ADVERTISEMENT

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಐವರ್ನಾಡು ಎಂಬ ಊರಿನ ಯುವರೈತ ಸಿ.ಕೆ. ನವೀನ್‌ಚಂದ್ರ ಅವರು ‘ಸಿಹಿ ನೀರಲ್ಲಿ ಮುತ್ತು ಕೃಷಿ’ ಆರಂಭಿಸಿ, ಆದಾಯದ ಜೊತೆಗೆ ಜನಪ್ರಿಯತೆಯನ್ನೂ ಗಳಿಸುತ್ತಿದ್ದಾರೆ. ಜಪಾನ್‌, ಚೀನಾ, ವಿಯೆಟ್ನಾಂನಲ್ಲಿ ದೊಡ್ಡಮಟ್ಟದಲ್ಲಿ ಇರುವ ಸಿಹಿ ನೀರು ಮುತ್ತು ಕೃಷಿ, ಈಗ ಕರ್ನಾಟಕದಲ್ಲಿಯೂ ಕೃಷಿಕರನ್ನು ಆಕರ್ಷಿಸುತ್ತಿದೆ.

ಸ್ನಾತಕೋತ್ತರ ಪದವೀಧರರಾಗಿರುವ ಸಿ.ಕೆ. ನವೀನ್‌ಚಂದ್ರ ಕೃಷಿ ಚಟುವಟಿಕೆಯಲ್ಲದೆ, ಮೊಲ, ಕೋಳಿ ಸಾಕಾಣಿಕೆಯ ಜೊತೆಗೆ ಉಪ ಕೃಷಿಯನ್ನಾಗಿ ಮುತ್ತು ಬೆಳೆಯುತ್ತಿದ್ದಾರೆ. ತಮ್ಮ ತೋಟದಮನೆ ಆವರಣದಲ್ಲಿ ಐದು ಸಾವಿರ ಲೀಟರ್‌ ಸಾಮರ್ಥ್ಯದ ಹೊಂಡ ನಿರ್ಮಿಸಿದ್ದಾರೆ. ಆರಂಭದಲ್ಲಿ ಅದರಲ್ಲಿ ಅರ್ಧ ನೀರು ತುಂಬಿಸಿ ಪಾಚಿ ಬೆಳೆಸಿದ್ದಾರೆ. ಆ ನಂತರ ಪೂರ್ತಿ ನೀರು ತುಂಬಿಸಿ, ಮಸ್ಸೆಲ್ಸ್‌ ಅಂದರೆ ಚಿಪ್ಪು (ಕಪ್ಪೆಚಿಪ್ಪು) ಅಥವಾ ಸಿಂಪಿಗಳನ್ನು (ಮಸ್ಸೆಲ್ಸ್‌–mussels) ಅದರಲ್ಲಿ ಬಿಟ್ಟಿದ್ದಾರೆ. ಮಸ್ಸೆಲ್ಸ್‌ನ ಒಳಗಿನ ಜೀವಿಯಿಂದಲೇ ಮುತ್ತು ಉತ್ಪಾದನೆಯಾಗುತ್ತದೆ.

ಈ ಕೃಷಿಯ ಆಸಕ್ತಿ ಬಗ್ಗೆ ಅವರು ಹೇಳುವುದು ಹೀಗೆ... ‘ಒಳನಾಡು ಮೀನುಗಾರಿಕೆ, ಸಮುದ್ರ ಪಾಚಿ ಕೃಷಿ ಮತ್ತು ಮುತ್ತು ಕೃಷಿಯ ಬಗ್ಗೆ ಸಚಿವರಾಗಿದ್ದ ನಮ್ಮ ಶಾಸಕರು ನಮಗೆಲ್ಲ ಮಾಹಿತಿ ನೀಡಿದರು. ನನಗೆ ಆಸಕ್ತಿ ಹುಟ್ಟಿತು. ಬೆಂಗಳೂರಿನ ಕೃಷಿ ಮೇಳಕ್ಕೆ ಹೋಗಿದ್ದೆ. ಅಲ್ಲಿ ಒಳನಾಡು ಮೀನುಗಾರಿಕಾ ಘಟಕದ ಪ್ರದರ್ಶನ ಮಳಿಗೆಯಲ್ಲಿ ಮುತ್ತು ಕೃಷಿಯ ಮಾಹಿತಿ ನೀಡಲಾಗುತ್ತಿತ್ತು. ಅಲ್ಲಿ ಇನ್ನಷ್ಟು ಮಾಹಿತಿ ಸಂಗ್ರಹಿಸಿ, ಬೆಂಗಳೂರಿನ ಜಿಕೆವಿಕೆಯಲ್ಲಿ ಐದು ದಿನಗಳ ತರಬೇತಿ ಪಡೆದು ಈ ಕೃಷಿ ಆರಂಭಿಸಿದೆ. ‌

ಸಿಹಿ ನೀರಲ್ಲಿ ಮುತ್ತು ಕೃಷಿ ಮಾಡಲು ತಾಂತ್ರಿಕ ಜ್ಞಾನವೂ ಬೇಕು. ಹೊಂಡದಲ್ಲಿ ಹಾಗೇ ಮಸ್ಸೆಲ್ಸ್‌ಗಳನ್ನು ಬಿಟ್ಟರೆ ಅವು ತಳಕ್ಕೆ ಹೋಗುತ್ತವೆ. ಹೀಗಾದರೆ ಅವುಗಳ ಮೇಲೆ ನಿಗಾ ಇಡಲು ಆಗುವುದಿಲ್ಲ. ಈ ಕಾರಣಕ್ಕಾಗಿಯೇ ಪ್ಲಾಸ್ಟಿಕ್‌ ಟ್ರೇಗಳಲ್ಲಿ ಅವುಗಳನ್ನು ಹಾಕಬೇಕು ಮತ್ತು ಆ ಟ್ರೇಗಳು ತೇಲುವಂತೆ ಮಾಡಬೇಕು.

‘ಸರ್ಜರಿ’ ಎಂಬುದು ಈ ಕೃಷಿಯಲ್ಲಿ ಬಹುಮುಖ್ಯ ಪ್ರಕ್ರಿಯೆ. ಮಸ್ಸೆಲ್ಸ್‌ಗಳಿಗೆ ಸರ್ಜರಿ ಮಾಡಬೇಕು. ಅಂದರೆ ಚಿಪ್ಪುಗಳನ್ನು ಸ್ವಲ್ಪ ಓಪನ್‌ ಮಾಡಿ (ಗರಿಷ್ಠ 10 ಮಿಲಿ ಮೀಟರ್‌) ಅದರಲ್ಲಿ ನ್ಯೂಕ್ಲೀ (nuclei) ಎಂಬ ವಸ್ತುವನ್ನು ಅಳವಡಿಸಬೇಕು. ಹೀಗೆ ಓಪನ್‌ ಮಾಡಿ ಹೊರವಸ್ತು ಅಳವಡಿಕೆಗೆ ಸರ್ಜರಿ ಎಂದು ಕರೆಯಲಾಗುತ್ತದೆ. ಸರ್ಜರಿ ಮಾಡಿದ ನಂತರ ಒಂದು ದಿನ ಅದರ ಮೇಲೆ ನಿಗಾ ವಹಿಸಬೇಕು. ಒಂದು ದಿನದ ನಂತರ ಆ ಚಿಪ್ಪು ಬಾಯಿ ಬಿಟ್ಟಿದ್ದರೆ ಅದರಲ್ಲಿಯ ಜೀವಿ ಸತ್ತಿದೆ ಎಂದರ್ಥ. ಅಂತಹದ್ದನ್ನು ತೆಗೆದು ಹೊರಗೆ ಎಸೆಯಬೇಕು. ಶೇ 10ರಷ್ಟು ಹೀಗೆ ಸಾಯುವ ಸಾಧ್ಯತೆ ಇರುತ್ತದೆ.

ಈ ಸರ್ಜರಿಗೆ ಒಂದಿಷ್ಟು ವೈಜ್ಞಾನಿಕ ಪ್ರಕ್ರಿಯೆ ಅನುಸರಿಸಬೇಕು. ಒಂದು ಟ್ರೇನಲ್ಲಿ ನೀರು ಹಾಕಿ, ಅದರಲ್ಲಿ ಲವಂಗದ ಒಂದು ಹನಿ ಎಣ್ಣೆ ಹಾಕಿ, ಒಂದು ತಾಸು ಈ ಮಸ್ಸೆಲ್ಸ್‌ಗಳನ್ನು ಹಾಗೇ ಇಡಬೇಕು. ಇದು ಆ ಜೀವಿಗೆ ಅರಿವಳಿಕೆ ಕೊಟ್ಟಂತೆ. ಒಂದು ತಾಸಿನ ನಂತರ ಸ್ವಲ್ಪ ತೆರೆದು ಅದರಲ್ಲಿ ನ್ಯೂಕ್ಲೀ (nuclei) ವಸ್ತುವನ್ನು ಅಳವಡಿಸಿ ಅದನ್ನು ಮತ್ತೆ ಮುಚ್ಚಬೇಕು. ನಾವು ಹೀಗೆ ಮಾಡುವುದರಿಂದ ಅದರ ಒಳಗಿನ ಜೀವಿಗೆ ಜ್ವರ ಬರುವ ಸಾಧ್ಯತೆ ಇರುತ್ತದೆ.

ಸಿಹಿನೀರ ಮುತ್ತು ಕೃಷಿಯಲ್ಲಿಯ ಮಸ್ಸೆಲ್ಸ್‌ಗಳಲ್ಲಿ ಬೆಳೆದಿರುವ ಮುತ್ತು ಪ್ರಜಾವಾಣಿ ಚಿತ್ರಗಳು /ಫಕ್ರುದ್ದೀನ್‌ ಎಚ್‌.

ಅದಕ್ಕಾಗಿ ಇನ್ನೊಂದು ಟ್ರೇನಲ್ಲಿ ಒಂದು ಪ್ಯಾರಾಸಿಟಮಲ್‌ ಮಾತ್ರೆಯನ್ನು ನೀರಿನಲ್ಲಿ ಕರಗಿಸಿ, ಸರ್ಜರಿ ಮಾಡಿದ ಮಸ್ಸೆಲ್ಸ್‌ಗಳನ್ನು ಆ ನೀರಿನಲ್ಲಿ ಒಂದು ದಿನ ಇಡುತ್ತೇವೆ. ಮುತ್ತು ನಮಗೆ ಬೇಕಾದ ಆಕಾರದಲ್ಲಿ ಬೆಳೆಯುವಂತೆ ಮಾಡಬಹುದು. ಅದರಲ್ಲಿ ಅಳವಡಿಸುವ ವಸ್ತುವಿನ (ನ್ಯೂಕ್ಲೀ –nuclei) ಆಕಾರದ ಮೇಲೆ ಅದು ಬೆಳವಣಿಗೆ ಹೊಂದುತ್ತ ಹೋಗುತ್ತದೆ. ಗಣೇಶ ವಿಗ್ರಹ, 786, ಸ್ವಸ್ತಿಕ... ಹೀಗೆ ಬಗೆ ಬಗೆಯ ವಿನ್ಯಾಸಗೊಳ್ಳುವಂತೆ ಮಾಡಬಹುದು ಎನ್ನುತ್ತಾರೆ ಈ ರೈತ.

600 ಮಸ್ಸೆಲ್ಸ್‌, ₹1 ಲಕ್ಷ ಆದಾಯ: ನಾನು ಒಟ್ಟಾರೆ 600 ಮಸ್ಸೆಲ್ಸ್‌ಗಳನ್ನು ತಂದು ಹೊಂಡದಲ್ಲಿ ಹಾಕಿದ್ದೇನೆ. ಹೊಂಡ ನಿರ್ಮಾಣ ಸೇರಿದಂತೆ ಇದಕ್ಕೆ ಒಟ್ಟಾರೆ ₹40 ಸಾವಿರ ಖರ್ಚಾಗಿದೆ. ಈವರೆಗೆ ನಮ್ಮಲ್ಲಿ ಬೆಳೆದಿರುವ 700 ಮುತ್ತುಗಳನ್ನು ಮಾರಾಟ ಮಾಡಿದ್ದೇನೆ (ಒಂದು ಮಸ್ಸೆಲ್ಸ್‌ನಲ್ಲಿ ಎರಡು ಮುತ್ತು ಉತ್ಪಾದನೆಯಾಗುತ್ತಿದ್ದು, ಅದನ್ನು ಕಟ್‌ ಮಾಡದೇ ಮಾರಾಟ ಮಾಡುವುದರಿಂದ ಒಂದು ಮುತ್ತಿಗೆ ₹150 ದರದಂತೆ ಖರೀದಿಸಲಾಗುತ್ತಿದೆ). ಹೈದರಾಬಾದ್‌ನಲ್ಲಿ ಮುತ್ತು ಮಾರುಕಟ್ಟೆ ಇದ್ದು, ನಾವು ಅಲ್ಲಿಗೆ ಮಾರಾಟ ಮಾಡುತ್ತಿದ್ದೇವೆ. ಈವರೆಗೆ ನನಗೆ ಮುತ್ತು ಮಾರಾಟದಿಂದ ₹1.05 ಲಕ್ಷ ಹಣ ಬಂದಿದೆ ಎನ್ನುತ್ತಾರೆ ಇವರು.

ಸಾಕಾಣಿಕೆ ಮಾಡುವ ಒಂದು ಮಸ್ಸೆಲ್ಸ್‌ಗೆ ₹10 ದರ ಇದೆ. ಮಹಾರಾಷ್ಟ್ರದ ಜಲಾಶಯಗಳಿಂದ ಇವುಗಳನ್ನು ತಂದು ಮಾರಲಾಗುತ್ತದೆ. ಅದರಲ್ಲಿ ಅಳವಡಿಸುವ ವಸ್ತುವಿಗೆ (nuclei) ₹10 ಇದೆ. ಒಂದು ಮುತ್ತು ಉತ್ಪಾದನೆಗೆ ಒಂಬತ್ತು ತಿಂಗಳು ಬೇಕು. ಮುಖ್ಯ ಕೃಷಿಯನ್ನಾಗಿ ಮಾಡುವುದಕ್ಕಿಂತ ಉಪ ಕೃಷಿಯನ್ನಾಗಿ ಇದನ್ನು ಮಾಡಬಹುದು. ನಿತ್ಯ ಅರ್ಧಗಂಟೆ ಸಮಯ ಕೊಟ್ಟರೂ ಸಾಕು. ಈ ಹೊಂಡದಲ್ಲಿ ಮೀನು ಸಾಕಾಣಿಕೆಯನ್ನೂ ಮಾಡಬಹುದು. ಹೊಂಡದ ನೀರಿನ ಗುಣಮಟ್ಟ ಕಾಪಾಡಿಕೊಳ್ಳುವುದು, ತಾಪಮಾನ ಹೆಚ್ಚಾಗದಂತೆ ನೋಡಿಕೊಳ್ಳಲು ನೆರಳಿನ ಪರದೆ ಹಾಕುವುದು ಅನಿವಾರ್ಯ.

ಭಾರತದಲ್ಲಿ ಮುತ್ತುಗಳಿಗೆ ಬೇಡಿಕೆ ಹೆಚ್ಚಿದ್ದರೂ ಉತ್ಪಾದನೆ ಅಷ್ಟಾಗಿ ಇಲ್ಲ. ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ ಇದರ ಉತ್ಪಾದನೆ ಹೆಚ್ಚಿದೆ. ನಮ್ಮ ರಾಜ್ಯದಲ್ಲಿ ಈ ಕೃಷಿ ಬಗ್ಗೆ ತರಬೇತಿ ಹೆಚ್ಚಬೇಕು. ನಮ್ಮಲ್ಲಿಯೂ ಸಾಕಷ್ಟು ಅವಕಾಶ ಇದ್ದು, ಯುವಕರು ಮನಸ್ಸು ಮಾಡಬೇಕು.

ಈವರೆಗೆ ನನ್ನ ಬಳಿ 50ಕ್ಕಿಂತ ಹೆಚ್ಚು ಜನರು ಬಂದು ಹೋಗಿದ್ದಾರೆ. ಅವರಲ್ಲಿ ಹೆಚ್ಚಿನವರು ಈ ಕೃಷಿಗೆ ಆಸಕ್ತಿ ವಹಿಸಿದ್ದಾರೆ. ಮನೆಯ ಚಾವಣಿಯ ಮೇಲೂ ಈ ಕೃಷಿ ಮಾಡಬಹುದು. ಬಕೆಟ್‌, ಫೈಬರ್‌ ಟ್ಯಾಂಕ್‌ಗಳಲ್ಲಿಯೂ ಮಾಡಬಹುದು. ಕರ್ನಾಟಕದಲ್ಲಿ ಮೀನುಗಾರಿಕೆ ಇಲಾಖೆಯಿಂದ ಕಡಲ ಚಿಪ್ಪು ಸಾಕಾಣಿಕೆಗೆ ಹೊಂಡ ನಿರ್ಮಾಣಕ್ಕೆ ₹20 ಸಾವಿರ ಸಹಾಯಧನ ನೀಡುವ ಯೋಜನೆ ಇದೆ. ಇದರ ಹೊರತಾಗಿಯೂ ಸರ್ಕಾರ ನಮ್ಮ ರಾಜ್ಯದ ಜಲಾಶಯ–ನದಿಗಳ ದಡದಲ್ಲಿ ಸಿಗುವ ಮಸ್ಸೆಲ್ಸ್‌ಗಳನ್ನು ಸಂಗ್ರಹಿಸಿ ಪೂರೈಸುವ ವ್ಯವಸ್ಥೆ ಮಾಡಬೇಕು. ಈ ಕೃಷಿಕರಿಗೆ ತರಬೇತಿ, ಮಾರುಕಟ್ಟೆ ವ್ಯವಸ್ಥೆ ಮಾಡಬೇಕು ಎನ್ನುವುದು ನವೀನ್‌ಚಂದ್ರ (ಮೊ.94810 23765) ಅವರ ಸಲಹೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.