ADVERTISEMENT

ಗೆಳೆಯರು ಹುಡುಕಿದ ಹೂಬಳಕೆಯ ದಾರಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 19:30 IST
Last Updated 14 ಮಾರ್ಚ್ 2020, 19:30 IST
Flower power
Flower power   

2015ನೆಯ ಇಸವಿಯ ಒಂದು ದಿನ ಬೆಳಿಗ್ಗೆ ಅಂಕಿತ್ ಅಗರ್ವಾಲ್ ಮತ್ತು ಆತನ ಸ್ನೇಹಿತ ಕಾನ್ಪುರದಲ್ಲಿ ಗಂಗಾ ನದಿಯ ದಂಡೆಯ ಮೇಲೆ ಕುಳಿತಿದ್ದರು. ಕಾನ್ಪುರ ಈ ಸ್ನೇಹಿತರ ಊರು ಕೂಡ ಹೌದು. ನದಿಯ ನೀರು ಕಲುಷಿತ ಆಗಿರುವುದು ಮೇಲ್ನೋಟಕ್ಕೇ ಗೊತ್ತಾಗುವಂತೆ ಇತ್ತು. ಆದರೂ ಭಕ್ತರು ನದಿಯ ನೀರಿನಲ್ಲಿ ಮುಳುಗುಹಾಕಿ, ಆ ನೀರನ್ನು ಕುಡಿಯುತ್ತಿದ್ದುದನ್ನು ನೋಡಿ ಇಬ್ಬರೂ ಸ್ನೇಹಿತರು ಬೇಸರಗೊಂಡರು.

ಭಕ್ತರು ಮತ್ತು ದೇವಸ್ಥಾನಗಳು ನದಿ ನೀರಿಗೆ ಹೂವುಗಳನ್ನು ಚೆಲ್ಲುತ್ತಿರುವ ಕಾರಣದಿಂದಾಗಿ, ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತಿದೆ ಎಂಬುದನ್ನು ಇವರಿಬ್ಬರೂ ಕಂಡುಕೊಂಡರು. ಆಗ ಅವರಿಗೆ ಹೊಳೆದಿದ್ದು, ಪವಿತ್ರ ಗಂಗೆಯ ಮಾಲಿನ್ಯವನ್ನು ಕಡಿಮೆ ಮಾಡುವಲ್ಲಿ ಸಹಾಯವಾಗುವ ಒಂದು ಉಪಾಯ.

‘ಹೆಲ್ಪ್‌ಅಸ್‌ಗ್ರೀನ್‌’ (ಎಚ್‌ಯುಜಿ) ಹುಟ್ಟಿಕೊಂಡಿದ್ದು ಈ ಮೂಲಕ. ತನ್ನ ಬಾಲ್ಯ ಸ್ನೇಹಿತ ಕರಣ್ ರಸ್ತೋಗಿ ಜೊತೆ ಸೇರಿ ಅಂಕಿತ್, ತ್ಯಾಜ್ಯದ ರೀತಿಯಲ್ಲಿ ಎಸೆಯಲಾದ ಹೂವುಗಳನ್ನು ಪುನರ್‌ಬಳಕೆ ಮಾಡುವ ಆಲೋಚನೆಯನ್ನು ಅನುಷ್ಠಾನಕ್ಕೆ ತಂದರು. ತಿಂಗಳುಗಳ ಕಾಲ ಸಂಶೋಧನೆ ನಡೆಸಿದ ಈ ಇಬ್ಬರು, ಹೂವುಗಳನ್ನು ಬಳಸಿ ಅಗರಬತ್ತಿ ಹಾಗೂ ಸಾವಯವ ಗೊಬ್ಬರ ಮಾಡುವ ವಿಧಾನವನ್ನು ಅಭಿವೃದ್ಧಿಪಡಿಸಿದರು.

ADVERTISEMENT

ಅವರು ತಾವು ಅಭಿವೃದ್ಧಿಪಡಿಸಿದ ವಿಧಾನವನ್ನು ‘ಹೂಬಳಕೆ’ ಎಂದು ಕರೆದುಕೊಂಡಿದ್ದಾರೆ. ಇದು ತ್ಯಾಜ್ಯದ ರೂಪದಲ್ಲಿ ಎಸೆಯುವ ಹೂವುಗಳನ್ನು ಮರುಬಳಕೆ ಮಾಡಿಕೊಳ್ಳುವ ಲಾಭದಾಯಕ ಮಾರ್ಗವೂ ಹೌದು.

ಮಹಿಳಾ ಕೆಲಸಗಾರರು ದೇವಸ್ಥಾನಗಳು ಹಾಗೂ ಮಸೀದಿಗಳಿಂದ ಹೂವುಗಳನ್ನು ಸಂಗ್ರಹಿಸಿ ತರುತ್ತಾರೆ. ಆ ಹೂವುಗಳನ್ನು ವಿಂಗಡಣೆ ಮಾಡಲಾಗುತ್ತದೆ. ನಂತರ ಅವುಗಳ ಮೇಲೆ ಜೈವಿಕ ದ್ರಾವಣ ಸಿಂಪಡಿಸಲಾಗುತ್ತದೆ. ನಂತರ ಆ ಹೂವುಗಳನ್ನು ತೊಳೆದು, ಅದಕ್ಕೆ ಬಳಕೆಯಾದ ನೀರನ್ನು ಗೊಬ್ಬರ ಮಾಡುವ ಪ್ರಕ್ರಿಯೆಯಲ್ಲಿ ಬಳಸಿಕೊಳ್ಳಲಾಗುತ್ತದೆ.

ಹೂವಿನ ದಳಗಳನ್ನು ಒಣಗಿಸಿ, ಕುಟ್ಟಿ ಪುಡಿ ಮಾಡಿ, ಹಿಟ್ಟಿನ ಹದಕ್ಕೆ ತರಲಾಗುತ್ತದೆ. ಅದನ್ನು ಅಗರಬತ್ತಿ ಸಿದ್ಧಪಡಿಸಲು ಬಳಸಲಾಗುತ್ತದೆ. ಹೂವುಗಳ ಹಸಿರು ಭಾಗಗಳಿಂದ ಗೊಬ್ಬರ ತಯಾರಿಸಲಾಗುತ್ತದೆ.

‘ಹೂಬಳಕೆ’ ಪ್ರಕ್ರಿಯೆಯನ್ನು ಇನ್ನೊಂದು ಹಂತಕ್ಕೆ ಒಯ್ದಿರುವ ಈ ಸ್ನೇಹಿತರು, ‘ಫ್ಲೋರಾಫೋಮ್’ ಎನ್ನುವ ಹೂವಿನಿಂದ ಸಿದ್ಧಪಡಿಸಿದ ವಿಶ್ವದ ಮೊದಲ ಥರ್ಮಾಕೋಲ್ ಸಿದ್ಧಪಡಿಸಿದ್ದಾರೆ. ಇದು ಕೊಳೆತು ಮಣ್ಣಿಗೆ ಸೇರುವ ಗುಣ ಹೊಂದಿದೆ ಕೂಡ. ಇದನ್ನು ಸಿದ್ಧಪಡಿಸಲು ಐಐಟಿಯ ಕೆಲವು ಎಂಜಿನಿಯರ್‌ಗಳ ಸಹಾಯವನ್ನು ಪಡೆಯಲಾಗಿತ್ತು.

ಇವರು ಈಗ ಕೃತಕ ಚರ್ಮವನ್ನು ಸಿದ್ಧಪಡಿಸುವ ಯೋಜನೆ ಹಾಕಿಕೊಂಡಿದ್ದಾರೆ. ಎಚ್‌ಯುಜಿ ಸಂಸ್ಥೆಗೆ ವಿಶ್ವಸಂಸ್ಥೆಯ ಪ್ರಶಸ್ತಿ ಕೂಡ ಲಭಿಸಿದೆ. ಇದು ಈಗ ಗಂಗಾ ನದಿ ಹರಿಯುವ ಇತರ ಕಡೆಗಳಲ್ಲೂ ತನ್ನ ಚಟುವಟಿಕೆ ವಿಸ್ತರಿಸುವ ಚಿಂತನೆಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.