ADVERTISEMENT

ಶತಾವಧಾನಿ ಆರ್. ಗಣೇಶ್ ಲೇಖನ: ಸೌಂದರ್ಯತತ್ತ್ವಜ್ಞ ಕೆ. ಕೃಷ್ಣಮೂರ್ತಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 2:11 IST
Last Updated 20 ಜುಲೈ 2025, 2:11 IST
ಕೆ.ಕೃಷ್ಣಮೂರ್ತಿ
ಕೆ.ಕೃಷ್ಣಮೂರ್ತಿ   

ಮಾನವ ಸಂಸ್ಕೃತಿಯ ಒಂದು ಪ್ರಮುಖ ಲಕ್ಷಣ ಸೌಂದರ್ಯ ಸಂವೇದನೆ. ಪ್ರಕೃತಿಯಲ್ಲಿ ಕಂಡ ಚೆಲುವನ್ನು ರುಚಿಗೊಪ್ಪುವಂತೆ ಪುನರ್ನಿರ್ಮಿಸಿಕೊಳ್ಳುವ ಹವಣು ಕಲೆಯೆಂದರೆ ತಪ್ಪಲ್ಲ. ಕಲೆಯ ಹುಟ್ಟಿನೊಡನೆ ಅದರ ಗುಟ್ಟನ್ನು ಭೇದಿಸುವ, ಸೊಗಸನ್ನು ಆಸ್ವಾದಿಸುವ, ಆಸ್ವಾದನೆಯ ನೆಲೆ-ಬೆಲೆಗಳನ್ನು ನಿರ್ಧರಿಸುವ ಕೃಷಿಯೂ ಸಾಗಿತು. ಇದೇ ಸೌಂದರ್ಯ ಮೀಮಾಂಸೆ. ಈ ವಿದ್ಯೆಯನ್ನು ಸಹಸ್ರಮಾನಗಳಿಂದ ಬೆಳೆಸಿಕೊಂಡು ಬಂದ ಬಲ್ಮೆ ಭಾರತೀಯರದು. ಸಹಜವಾಗಿಯೇ ಈ ಸೌಂದರ್ಯಚಿಂತನೆ ಸಂಸ್ಕೃತದಲ್ಲಿ ಬೆಳೆದುಬಂದಿದೆ. ಇದನ್ನು ಆಧುನಿಕ ಜಗತ್ತಿಗೆ ಇಂಗ್ಲಿಷ್ ಭಾಷೆಯ ಮೂಲಕ ಕೊಟ್ಟವರಲ್ಲಿ ನಮ್ಮ ನಾಡಿನವರೇ ಆದ ಎಂ.ಹಿರಿಯಣ್ಣವರೂ ಸೇರಿದಂತೆ ಅನೇಕರಿದ್ದಾರೆ. ಕನ್ನಡದಲ್ಲಿ ಇದನ್ನು ವ್ಯಾಪಕವಾಗಿ ತಂದುಕೊಟ್ಟವರ ಪೈಕಿ ಕೆ. ಕೃಷ್ಣಮೂರ್ತಿಯವರ ಸ್ಥಾನ ಅನನ್ಯ. ನೂರು ವರ್ಷಗಳಿಗೂ ಮುನ್ನ ಜನಿಸಿದ ಇವರು ಕನ್ನಡ, ಸಂಸ್ಕೃತ, ಇಂಗ್ಲಿಷ್ ಭಾಷೆಗಳಲ್ಲಿ ಪರಿಣತರು; ಅಲಂಕಾರಶಾಸ್ತ್ರ ಎಂದು ಹೆಸರಾದ ಭಾರತೀಯ ಸೌಂದರ್ಯ ಮೀಮಾಂಸೆಯ ಒಳ-ಹೊರಗನ್ನು ಬಲ್ಲ ವಿದ್ವಾಂಸರು.

ಮೈಸೂರು ವಿಶ್ವವಿದ್ಯಾನಿಲಯದ ಅತ್ಯುತ್ತಮ ವಿದ್ಯಾರ್ಥಿಯಾಗಿ ಹೊಮ್ಮಿದ ಕೃಷ್ಣಮೂರ್ತಿ ನಮ್ಮ ರಾಜ್ಯದ ಮೊದಲ ಸಂಸ್ಕೃತ ಪಿಎಚ್.ಡಿ ಪದವೀಧರರೂ ಹೌದು. ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿದ್ದ ಇವರು ತಮ್ಮ ಪಾಂಡಿತ್ಯದ ಮೂಲಕ ದೇಶ-ವಿದೇಶಗಳ ವಿದ್ವಾಂಸರನ್ನು ಅಲ್ಲಿಗೆ ಆಕರ್ಷಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತು, ಕೇಂದ್ರ ಸಾಹಿತ್ಯ ಅಕಾಡೆಮಿ ಮೊದಲಾದ ಅನೇಕ ಸಾಹಿತ್ಯ ಸಂಸ್ಥೆಗಳ ಸಹಯೋಗದಲ್ಲಿ ಹತ್ತಾರು ಮೌಲಿಕ ಪ್ರಕಲ್ಪಗಳನ್ನು ಕೈಗೊಂಡು ಒಳ್ಳೆಯ ಕೃತಿಗಳು ಹೊರಬರುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಸ್ಫೂರ್ತಿದಾಯಕ ಪ್ರಾಧ್ಯಾಪಕರಾಗಿ ಅನೇಕ ವಿದ್ಯಾರ್ಥಿಗಳನ್ನು ರೂಪಿಸಿದ್ದಲ್ಲದೆ ಹತ್ತಾರು ಮಂದಿಗೆ ಸಂಶೋಧನ ಮಾರ್ಗದರ್ಶಕರಾಗಿ ವಿದ್ವತ್ತೆಯ ಪರಂಪರೆಯನ್ನು ಬೆಳೆಸಿದರು. ಮೂರು ಭಾಷೆಗಳಲ್ಲಿ ಎಪ್ಪತ್ತಕ್ಕೂ ಹೆಚ್ಚು ಗ್ರಂಥಗಳನ್ನೂ ನೂರಾರು ಲೇಖನಗಳನ್ನೂ ರಚಿಸಿದ ಬಿಡುವಿಲ್ಲದ ದುಡಿಮೆ ಇವರದು.

ಕೃಷ್ಣಮೂರ್ತಿಯವರು ಸಾವಿರ ವರ್ಷಗಳಿಂದ ಕನ್ನಡದಲ್ಲಿ ಅವತರಿಸದಿದ್ದ ಅಲಂಕಾರಶಾಸ್ತ್ರದ ಹತ್ತಾರು ಮೌಲಿಕ ಗ್ರಂಥಗಳನ್ನು ಅತ್ಯಂತ ಸಮರ್ಥವಾಗಿ ಅನುವಾದಿಸಿ ನಮ್ಮ ನುಡಿಯನ್ನು ಸಮೃದ್ಧಗೊಳಿಸಿದರು. ‘ಧ್ವನ್ಯಾಲೋಕ ಮತ್ತು ಲೋಚನಸಾರ’, ‘ಕನ್ನಡ ಕಾವ್ಯಪ್ರಕಾಶ’, ‘ಕನ್ನಡ ಕಾವ್ಯಾಲಂಕಾರ’, ‘ಕನ್ನಡ ಕಾವ್ಯಮೀಮಾಂಸೆ’ ಮುಂತಾದ ಅನೇಕ ಅನುವಾದಗಳು ಇವರ ಯೋಗದಾನವನ್ನು ಸಾರಿವೆ. ಧ್ವನ್ಯಾಲೋಕ ಮತ್ತು ವಕ್ರೋಕ್ತಿಜೀವಿತಗಳ ಮೊತ್ತಮೊದಲ ಪರಿಷ್ಕೃತ ಆವೃತ್ತಿಗಳನ್ನು ಇಂಗ್ಲಿಷ್ ಅನುವಾದದೊಡನೆ ಜಗತ್ತಿಗೆ ನೀಡಿದ ಶ್ರೇಯಸ್ಸು ಇವರದು.

ADVERTISEMENT

ಕೃಷ್ಣಮೂರ್ತಿಯವರು ಭಾಸ, ಕಾಳಿದಾಸ, ಶೂದ್ರಕ, ಭವಭೂತಿ, ಶಕ್ತಿಭದ್ರ ಮುಂತಾದವರ ಶ್ರೇಷ್ಠ ನಾಟಕಗಳನ್ನೂ ಅಭಿಜಾತ ಶೈಲಿಯಲ್ಲಿ ಕನ್ನಡಿಸಿದ್ದಾರೆ. ‘ಕನ್ನಡದಲ್ಲಿ ಕಾವ್ಯತತ್ತ್ವ’, ‘ಭಾರತೀಯ ಕಾವ್ಯಮೀಮಾಂಸೆ: ತತ್ತ್ವ ಮತ್ತು ಪ್ರಯೋಗ’, ‘ಸೃಜನಶೀಲತೆ ಮತ್ತು ಪಾಂಡಿತ್ಯ’, ‘ಬಸವಣ್ಣನವರ ವಚನಗಳ ಮೀಮಾಂಸೆ’ ಮೊದಲಾದ ಅಪೂರ್ವ ಒಳನೋಟಗಳುಳ್ಳ ಸ್ವೋಪಜ್ಞ ಗ್ರಂಥಗಳನ್ನು ನಿರ್ಮಿಸಿದ ಇವರು ‘ಸಂಸ್ಕೃತಕಾವ್ಯ’ದ ಮೂಲಕ ದೇವವಾಣಿಯ ಸಾಹಿತ್ಯಕ್ಕೆ ಅನನ್ಯ ಪ್ರವೇಶಿಕೆಯನ್ನು ಒದಗಿಸಿದ್ದಾರೆ. ನೂರಾರು ಸಂಶೋಧನ ಪ್ರಬಂಧಗಳನ್ನು ಬರೆದಿರುವುದಲ್ಲದೆ ಕನ್ನಡ ವಿಶ್ವಕೋಶಕ್ಕೂ ತಮ್ಮ ಯೋಗದಾನ ನೀಡಿದ್ದಾರೆ.

‘The Dhvanyaloka and its Critics,’ ‘Essays in Sanskrit Criticism,’ ‘Studies in Indian Aesthetics and Criticism,’ ‘Indian Literary Theories: A Reappraisal’ ಮೊದಲಾದ ಅನೇಕ ಸ್ವೋಪಜ್ಞ ಗ್ರಂಥಗಳನ್ನು ಇಂಗ್ಲಿಷಿನಲ್ಲಿ ನಿರ್ಮಿಸಿ ನಮ್ಮ ನಾಡಿನ ವಿದ್ವತ್ತೆಗೆ ಅಂತರರಾಷ್ಟ್ರೀಯ ಖ್ಯಾತಿಯನ್ನು ತಂದುಕೊಟ್ಟಿದ್ದಾರೆ.

ಕೆ.ಕೃಷ್ಣಮೂರ್ತಿ

ಸಂಸ್ಕೃತ ಕಾವ್ಯಮೀಮಾಂಸೆಯ ತತ್ತ್ವಗಳು ಆ ಭಾಷೆಗಷ್ಟೇ ಸೀಮಿತವಲ್ಲ, ಅವು ವೈಶ್ವಿಕವೆಂಬುದನ್ನು ತಮಗಿದ್ದ ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದ ಆಳವಾದ ಪಾಂಡಿತ್ಯದ ಮೂಲಕ ಪ್ರಾಯೋಗಿಕ ವಿಮರ್ಶೆಯೊಡನೆ ಕೃಷ್ಣಮೂರ್ತಿಯವರು ಸಾಬೀತು ಮಾಡಿದ್ದಾರೆ. ಇದನ್ನು ಅವರ ಶ್ರೇಷ್ಠ ಕಾಣಿಕೆಯೆನ್ನಬಹುದು. ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳನ್ನು ಸಮರ್ಥವೂ ಸುಂದರವೂ ಆದ ರೀತಿಯಲ್ಲಿ ಬಳಸಬಲ್ಲ ಪ್ರೌಢಿಮೆಯನ್ನು ಹೊಂದಿದ್ದ ಇವರು ಈ ನುಡಿಗಳಲ್ಲಿ ಗದ್ಯದಂತೆಯೇ ಪದ್ಯವನ್ನೂ ಲೀಲೆಯಿಂದ ರಚಿಸುತ್ತಿದ್ದರು. ಹೀಗಾಗಿ ಇವರು ಮಾಡಿದ ಶಾಸ್ತ್ರ-ಕಾವ್ಯ ಅನುವಾದಗಳು ಆ ಜಾಡಿನ ಉತ್ಕೃಷ್ಟ ಮಾದರಿಗಳಾಗಿ ನಿಂತಿವೆ. ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳಿಗೆ ನಿಯತವಾಗಿ ಗ್ರಂಥ ವಿಮರ್ಶೆಯನ್ನು ಮಾಡುತ್ತಿದ್ದ ಕೃಷ್ಣಮೂರ್ತಿ ಕೇವಲ ಸಾಂಪ್ರದಾಯಿಕ ವಿದ್ವಾಂಸರಾಗಿ ಉಳಿಯದೆ ಆಧುನಿಕ ಮನಸ್ಸಿನ ಸಹೃದಯ ಸಮೀಕ್ಷಕರೂ ಆಗಿದ್ದರು.

ರಾಜ್ಯೋತ್ಸವ ಪ್ರಶಸ್ತಿ, ಅಖಿಲ ಭಾರತ ಪ್ರಾಚ್ಯ ವಿದ್ಯಾಸಮ್ಮೇಳನದ ಅಧ್ಯಕ್ಷತೆ, ರಾಷ್ಟ್ರಪತಿ ಪುರಸ್ಕಾರ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಉತ್ತರ ಪ್ರದೇಶ ಸಂಸ್ಕೃತ ಅಕಾಡೆಮಿ ಪ್ರಶಸ್ತಿ, ಪಿ. ವಿ. ಕಾಣೆ ಸ್ವರ್ಣಪದಕ ಮುಂತಾದ ಅನೇಕ ಗೌರವಗಳು ಕೃಷ್ಣಮೂರ್ತಿಯವರನ್ನು ಅರಸಿಬಂದವು. ಇವರ ಸಲಹೆ, ಮಾರ್ಗದರ್ಶನಗಳನ್ನು ಪಡೆಯಲು ದೇಶ-ವಿದೇಶಗಳ ಹೆಸರಾಂತ ವಿದ್ವಾಂಸರು ಬಂದು ಕೃತಾರ್ಥರಾಗುತ್ತಿದ್ದರು. “ಕೃಷ್ಣಮೂರ್ತಿಯವರು ಸಾಹಿತ್ಯ ಮೀಮಾಂಸೆಯನ್ನು ಕುರಿತು ಹೇಳುವುದು ಕೇವಲ ಅಭಿಪ್ರಾಯವಲ್ಲ, ಅದು ನಿರ್ಣಯ” ಎಂಬ ವಿದ್ವನ್ಮಾನ್ಯತೆಯನ್ನು ಗಳಿಸಿದ್ದ ಇವರು ನಮ್ಮನ್ನಗಲಿ ಮೂರು ದಶಕಗಳೇ ಉರುಳುತ್ತ ಬಂದಿವೆ. ಆದರೂ ಅವರ ವಿದ್ವತ್ತಾಕಾರ್ಯ ಮಸಕಾಗಿಲ್ಲ. ಇದು ಮತ್ತೆಷ್ಟೋ ಕಾಲ ಬೆಳಗಲಿದೆ. ಈ ಸಾರಸ್ವತ ಕಾರ್ಯವನ್ನು ಹಸುರಾಗಿ ಉಳಿಸುವಲ್ಲಿ ಮೂರು ದಶಕಗಳಿಂದ ದುಡಿಯುತ್ತಿರುವ ಕೃಷ್ಣಮೂರ್ತಿಯವರ ಪುತ್ರಿ ಕೆ. ಲೀಲಾಪ್ರಕಾಶ್ ಅವರ ಕ್ರತುಶಕ್ತಿ ಸ್ತವನೀಯ.

ಇಂಥ ಮಹನೀಯರ ಜನ್ಮಶತಮಾನೋತ್ಸವದ ಸಮಾರೋಪ ಸಮಾರಂಭ ಜುಲೈ 26, 2025 ರ ಶನಿವಾರ ಮೈಸೂರಿನಲ್ಲಿ ನಡೆಯಲಿದೆ. ಇದರಲ್ಲಿ ನಾಡಿನ ಹೆಸರಾಂತ ವಿದ್ವಾಂಸರು ಪಾಲ್ಗೊಳ್ಳಲಿದ್ದಾರೆ. ಕೃಷ್ಣಮೂರ್ತಿಯವರ ಕನ್ನಡ ಲೇಖನಗಳ ಸಂಗ್ರಹ ‘ಕಾವ್ಯತತ್ತ್ವೋಲ್ಲೇಖ’ ಮತ್ತು ಶತಾಬ್ದಸಂಸ್ಮರಣಗ್ರಂಥ ‘ಕೃಷ್ಣಾಲೋಕ’ ಈ ವೇದಿಕೆಯಲ್ಲಿ ಲೋಕಾರ್ಪಣೆಗೊಳ್ಳಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.