ADVERTISEMENT

ರಂಗದ ಮೇಲೆ ಜೈಲು ಹಕ್ಕಿಗಳು

ಕೈದಿಗಳು ಆಡಿದರು ‘ದನ ಕಾಯೋರ ದೊಡ್ಡಾಟ’!

ಕೆ.ನರಸಿಂಹ ಮೂರ್ತಿ
Published 16 ಫೆಬ್ರುವರಿ 2019, 19:45 IST
Last Updated 16 ಫೆಬ್ರುವರಿ 2019, 19:45 IST
ಮಾಸ್ತರನೊಂದಿಗೆ ಪೌರಾಣಿಕ ಪಾತ್ರಗಳ ಸಂಭಾಷಣೆ
ಮಾಸ್ತರನೊಂದಿಗೆ ಪೌರಾಣಿಕ ಪಾತ್ರಗಳ ಸಂಭಾಷಣೆ   

ಸದ್ದಿಲ್ಲದ ಸುಧಾರಣೆ ಕಾರ್ಯಗಳಿಂದ ಸುದ್ದಿಯಾಗುವ ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ‘ದನ ಕಾಯೋರ ದೊಡ್ಡಾಟ’ ನಾಟಕ ಆಡ್ತಾರಂತೆ ಎಂಬ ಮಾಹಿತಿ ಹೊರಬಿದ್ದಾಗ, ಜೈಲಿನಲ್ಲಿದ್ದ ಇತರೆ ಕೈದಿಗಳಿಗೂ ಆಶ್ಚರ್ಯವಾಗಿತ್ತು.

ಸಾಧ್ಯವಾದಷ್ಟೂ ಗುಟ್ಟಾಗಿ, ಸಹಕೈದಿಗಳಲ್ಲಿ ಯಾರಿಗೂ ಗೊತ್ತಾಗದಂತೆ ಮತ್ತು ದಿನನಿತ್ಯದ ಕೆಲಸಗಳಿಗೆ ತೊಂದರೆ ಆಗದಂತೆ ನಾಟಕದ ತಾಲೀಮನ್ನು ನಡೆಸಿದ್ದೇ ಅದರ ಹೆಗ್ಗಳಿಕೆ. ಪ್ರದರ್ಶನ ನೀಡಿದ್ದು ಬೇರೊಂದು ಸಾಹಸ.

ಅಕ್ಷರ ಕಲಿಯದ ದನ ಕಾಯೋರು ಮಹಾಭಾರತ ನಾಟಕವನ್ನು ಅಭಿನಯಿಸಿದರೆ ಹೇಗಿರುತ್ತದೆ? ನಾಟಕವನ್ನು ಹೇಳಿಕೊಡುವಾಗ ಆಗುವ ಆಭಾಸಗಳು ಎಂಥವು? ನಾಟಕ ಹೇಳಿಕೊಡುವ ಮಾಸ್ತರನ ಸಂಕಟಗಳೇನು ಎಂಬುದೆಲ್ಲವೂ ನಾಟಕದ ಒಂದು ಭಾಗವಾದರೆ, ಸಾಕ್ಷರತೆಯ ಸಂದೇಶ ಬೇರೊಂದು ರೂಪ ತಾಳಿ, ಕೈದಿಗಳಿಗೆ ಸಾಕ್ಷರತೆಯಿಂದ ಆಗುವ ಪ್ರಯೋಜನಗಳ ಕಡೆಗೆ ಹೊರಳುವುದು ಇನ್ನೊಂದು ಭಾಗ.

ADVERTISEMENT

ಪುರಾಣ ಮತ್ತು ಈ ಕಾಲವನ್ನು ಬೆಸೆದು ಸಾಕ್ಷರತೆಯ ಮಹತ್ವ ಸಾರಲೆಂದೇ ಕೆಲವು ದಶಕಗಳ ಹಿಂದೆ ಬಳ್ಳಾರಿಯ ಕಲಾವಿದ ಶಂಕರನಾಯ್ಡು ಬರೆದ ನಾಟಕ ಸಾವಿರಾರು ಪ್ರದರ್ಶನಗಳನ್ನು ಕಂಡಿರಬಹುದು. ಆದರೆ, ಪ್ರತಿ ಬಾರಿಯ ಪ್ರದರ್ಶನವು ಕಾಲ ಮತ್ತು ದೇಶದ ಸನ್ನಿವೇಶಕ್ಕೆ ತಕ್ಕಂತೆ ಸ್ವರೂಪ ಬದಲಾವಣೆ ಮಾಡಿಕೊಳ್ಳುವುದೇ ಅದರ ವಿಶೇಷ.

ಕೇವಲ ಸಂದೇಶವಲ್ಲ. ಸಮಕಾಲೀನ ವಾಸ್ತವವನ್ನು ಚಿಕಿತ್ಸಕ ಮತ್ತು ವ್ಯಂಗ್ಯ ನೋಟದ ಮೂಲಕ ಮಂಡಿಸಿ ನಗೆಯುಕ್ಕಿಸುವ ಹಾಸ್ಯವೂ ದೊಡ್ಡಾಟದಲ್ಲಿ ಉಂಟು. ಸರೀಕರ ನಡುವೆ ಅಪರೂಪದ ಸಮಯಪ್ರಜ್ಞೆ ಮತ್ತು ಹಾಸ್ಯಪ್ರಜ್ಞೆಯಿಂದ ಯಾವಾಗಲೂ ನಗೆಯುಕ್ಕಿಸುವ ಕಲಾವಿದ, ಫೋಟೊಗ್ರಾಫರ್‌ ಪುರುಷೋತ್ತಮ ಹಂದ್ಯಾಳ್‌ ಈ ದೊಡ್ಡಾಟದ ನಿರ್ದೇಶಕ.

ಜೈಲಿನ ಕೈದಿಗಳಿಗೆ ನಾಟಕ ಹೇಳಿಕೊಟ್ಟಿದ್ದು ಕೂಡ ಒಂದು ಸಾಹಸವೇ. ಮಧ್ಯಾಹ್ನ 2 ಗಂಟೆಗೆ ಜೈಲಿನೊಳಗೆ ಹೋದರೆ, ಕೈದಿಗಳನ್ನು ಸೆಲ್‌ಗಳೊಳಕ್ಕೆ ಕಳಿಸುವ ಸಂಜೆ 6 ಗಂಟೆಯವರೆಗೂ ಕೊಠಡಿಯೊಂದರಲ್ಲಿ ನಿರಂತರ ತಾಲೀಮು ನಡೆಯುತ್ತಿತ್ತು.

ಸುಮಾರು ಒಂದೂವರೆ ತಿಂಗಳ ಕಾಲ ನಡೆದ ಈ ತಾಲೀಮಿನ ಆರಂಭದಲ್ಲಿ ಬಂದ ಹಲವರು ‘ನಮಗೆ ನಾಟಕದ ಸಹವಾಸ ಬೇಡ’ ಎಂದು ವಾಪಸು ಹೋದರು.

ಉಳಿದವರು ಜಯದೇವಪ್ಪ, ದುರ್ಗಪ್ಪ, ಗೌಡರ ತಿಪ್ಪೇಶಿ, ಗಣೇಶ ಭಜಂತ್ರಿ, ನೀಲಕಂಠ, ಕೆ.ಕೆ.ಹಾಳ್‌ ಮಲ್ಲಯ್ಯ, ವಿ.ಹುಲಿಗೆಪ್ಪ, ಸಿದ್ಧಾರೂಡ, ಗಣೇಶ್‌, ಅಂದಾನಪ್ಪ, ಜಡೆಪ್ಪ, ಸುಂಕಪ್ಪ, ಪರುಸಪ್ಪ. ಒಬ್ಬೊಬ್ಬರಿಗೆ ಒಂದೊಂದು ಪಾತ್ರ. ಗೌಡ, ಗಣಪತಿ, ದುರ್ಯೋಧನ, ದುಶ್ಯಾಸನ, ದ್ರೌಪದಿ, ನಕುಲ, ಸಹದೇವ, ಭೀಮ, ಕೃಷ್ಣ, ಅಗಸ ಅವರ ಜೊತೆಗೆ ಮಾಸ್ತರನ ಪಾತ್ರದಲ್ಲಿ ಪುರುಷೋತ್ತಮ.

ಅವರ ಪೈಕಿ ಕೆಲವರಿಗಷ್ಟೇ ನಾಟಕ ಆಡಿದ ಅಭ್ಯಾಸವಿತ್ತು. ಉಳಿದವರಿಗೆ ನಟನೆ, ಬಣ್ಣ, ವೇಷಭೂಷಣ, ನೃತ್ಯ, ವೇದಿಕೆ, ಸಂಭಾಷಣೆ ಎಲ್ಲವೂ ತೆರೆಯ ಮೇಲಿನ ಅನುಭವ!

‘ಅಂಥವರನ್ನು ಕಟ್ಟಿಕೊಂಡು ಒಂದೂವರೆ ತಿಂಗಳು ನಾಟಕವಾಡುವುದನ್ನು ಹೇಳಿಕೊಟ್ಟಿದ್ದು ಒಂದು ಹೊಸ ಅನುಭವ’ ಎನ್ನುವ ಪುರುಷೋತ್ತಮ, ‘ಏಕಾಕಿತನ, ಅಪರಾಧಿ ಪ್ರಜ್ಞೆ, ವಿಷಾದ, ಖಿನ್ನತೆಯೊಳಗೆ ಮುಳುಗಿದ್ದ ಕೈದಿಗಳು ನಾಟಕದ ತಾಲೀಮು ಶುರುವಾಗುತ್ತಿದ್ದಂತೆಯೇ ಹಕ್ಕಿಯಂತಾಗುತ್ತಿದ್ದರು. ಕಲೆಯಿಂದ ಮೂಡುವ ಅನಿಕೇತನ ಪ್ರಜ್ಞೆ ಅವರನ್ನು ಮಾನಸಿಕವಾಗಿ ಜೈಲಿನಿಂದಾಚೆಗೆ ಕರೆದೊಯ್ದು, ಯಾವ ಬಂಧನಗಳೂ  ಇಲ್ಲದ ಕಲೆಯ ಲೋಕದಲ್ಲಿ ಇಳಿಸಿಬಿಡುತ್ತಿತ್ತು’ ಎಂದು ಸ್ಮರಿಸುತ್ತಾರೆ.

ಒಂದು ಗಂಟೆ ಅವಧಿಯ ನಾಟಕ ಮೊದಲೇ ಹಾಸ್ಯದ್ದು, ಕೈದಿಗಳೂ ಅದರಲ್ಲಿ ಮುಳುಗೇಳುತ್ತಿದ್ದರು. ಪಾತ್ರ ಮತ್ತು ಪಾತ್ರಧಾರಿಗಳು ಏಕಕಾಲಕ್ಕೆ ರಂಗದ ಮೇಲೆ ಕಾಣಿಸಿಕೊಂಡು ಸ್ವಕೀಯ ಮತ್ತು ಪರಕೀಯ ನೆಲೆಯಲ್ಲಿ ಮಾತನಾಡುತ್ತಲೇ ನಾಟಕವನ್ನು ಮುನ್ನಡೆಸುವ ಶೈಲಿ ಪ್ರೇಕ್ಷಕರಲ್ಲೂ ನಗೆಯುಕ್ಕಿಸುತ್ತಿತ್ತು. ಪ್ರೇಕ್ಷಕರ ನಡುವಿನಿಂದಲೇ ಪಾತ್ರಗಳು ನಡೆದು ವೇದಿಕೆ ಏರುವ, ಇಳಿದು ಓಡಾಡುವ ದೃಶ್ಯಗಳು ಇಡೀ ಜೈಲನ್ನೇ ಒಂದು ರಂಗಸಜ್ಜಿಕೆಯನ್ನಾಗಿ ಬಳಸಿಕೊಂಡಿದ್ದಕ್ಕೆ ಸಾಕ್ಷಿಯಾಗಿತ್ತು.

‘ಈ ನಾಟಕವಾಡಿ ಏನು ಕಲಿತಿರಿ’ ಎಂದರೆ, ಕೈದಿಗಳು, ‘ನಗುವುದನ್ನು ಕಲಿತೆವು’ ಎಂದರು.

‘ಜೈಲಿನೊಳಗೇ ಇದ್ದರೂ, ಹೊರಗೇ ಇದ್ದರೂ, ಜೈಲು ಒಂದು ಮನೋಸ್ಥಿತಿ ಎಂಬುದು ಗೊತ್ತಾಯಿತು. ಅದನ್ನು ಮೀರಿಯೂ ಖುಷಿಯಾಗಿ ಇರಬಹುದು ಎಂಬುದನ್ನೂ ಕಲಿತೆವು. ಈ ನಾಟಕ ಅದನ್ನು ಹೇಳಿಕೊಟ್ಟಿತು’ ಎಂದು ಅವರು ಹೇಳುವಾಗ, ಮೇಕಪ್‌ ಇನ್ನೂ ಅವರ ಮುಖದ ಮೇಲಿಂದ ಮಾಸಿರಲಿಲ್ಲ.

‘ದನಕಾಯೋರಾಗಿ ನಾವು ಇತರೆ ಕೈದಿಗಳಿಗಿಂತಲೂ ಭಿನ್ನರಾದೆವು’ ಎಂಬ ಪ್ರಜ್ಞೆ ಆ ಪರಿಸರದಲ್ಲಿ ಅವರ ಕಣ್ಣುಗಳಲ್ಲಿ
ಲಾಸ್ಯವಾಡಿತ್ತು.

‘ಇಷ್ಟಕ್ಕೂ ಬುದ್ಧ– ಅಂಗುಲಿಮಾಲನ ಕತೆಯನ್ನು ಕೈದಿಗಳಿಂದ ಆಡಿಸಬೇಕು ಎಂಬ ಯೋಚನೆ ಇತ್ತು. ಆದರೆ, ದನ ಕಾಯೋರ ದೊಡ್ಡಾಟ ಇನ್ನೂ ಸರಳವಾಗಿ, ನೇರವಾಗಿ ಕೈದಿಗಳಿಗೆ ಪರಿವರ್ತನೆಯ ಸಂದೇಶವನ್ನು ಮೂಡಿಸುತ್ತದೆ ಎಂಬ ಕಾರಣಕ್ಕೆ ಅದನ್ನೇ ಆಯ್ಕೆ ಮಾಡಲಾಯಿತು’ ಎಂದು ಹೇಳುತ್ತಲೇ ಕಾರಾಗೃಹ ಅಧೀಕ್ಷಕ ಡಾ.ಪಿ. ರಂಗನಾಥ್‌ ನಿಂತಲ್ಲಿಂದ ಬಲಗಡೆಗೆ ನೋಟ ಹರಿಸಿದರು. ಅಲ್ಲಿ ಪಿರಮಿಡ್‌ ಧ್ಯಾನ ಕೇಂದ್ರದ ಕಟ್ಟಡ ನಿರ್ಮಾಣದ ಸಿದ್ಧತೆಯ ಕುರುಹುಗಳು ಕಾಣಿಸಿದವು.

ಒಂದೆಡೆ ಏಕಾಂತದ ಧ್ಯಾನ, ಮತ್ತೊಂದೆಡೆ ಲೋಕಾಂತದ ನಾಟಕ. ಕಾರಾಗೃಹವೊಂದು ಮನರಂಜನೆಯ, ಮನಪರಿವರ್ತನೆಯ ಲೋಕವಾಗುವುದು ಹೀಗೇ ಏನೋ ಅನ್ನಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.