ಅವರು ಶಾಲೆಯ ಅಂಗಳಕ್ಕೆ ಕಾಲಿಟ್ಟರು. ಅಲ್ಲಿ ಆಟವಾಡುತ್ತಿದ್ದ ಮಕ್ಕಳು ಅವರನ್ನು ಗುರುತಿಸಿ ಜೋರಾಗಿ ಚಪ್ಪಾಳೆ ತಟ್ಟುತ್ತಾ, ಮುಗಿಬಿದ್ದು ಕೈಕುಲುಕುತ್ತಾ, ಕೇಕೆ ಹಾಕಿ ಸಂಭ್ರಮಿಸಿದರು. ಹೀಗೆ ಆ ಮಕ್ಕಳು ಮುತ್ತಿಗೆ ಹಾಕಿದ್ದು ಸಿನಿಮಾ ಸೆಲಿಬ್ರಿಟಿಯನ್ನಲ್ಲ, ತಮಗೆ ಸಮವಸ್ತ್ರ, ನೋಟ್‌ಬುಕ್, ಪೆನ್, ಪೆನ್ಸಿಲ್‌ಗಳನ್ನು ಕೊಡಿಸಿದ ಜೋಗತಿ ಪಿ.ರಾಜಮ್ಮ ಅವರನ್ನು!
‘ಇವರು ಯಾರು ಗೊತ್ತಾ’ ಎಂದು ಕೇಳಿದ ಕೂಡಲೇ ‘ನಮಗೆ ಯೂನಿಫಾರಮ್ಮು ಗಿಫ್ಟ್ ಕೊಟ್ಟವರು’ ಎಂದು ಒಂದೇ ಸ್ವರದಲ್ಲಿ ಕೂಗಿದರು. ತಾವು ಧರಿಸಿದ್ದ ಸಮವಸ್ತ್ರವನ್ನು ಅವರಿಗೆ ತೋರಿಸಿ ಖುಷಿಪಟ್ಟರು. ತಮ್ಮ ಅಜ್ಜಿಯೇ ಶಾಲೆಗೆ ಬಂದಿದ್ದಾಳೆ ಅನ್ನುವಷ್ಟು ಅಕ್ಕರೆಯಿಂದ ಮಾತನಾಡಿದರು.
ನಾನು ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕಿನ ಸುಗ್ಗೇನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ರಾಜಮ್ಮ ಅವರನ್ನು ಭೇಟಿ ಮಾಡಿದಾಗ ಇಂಥ ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾದೆ.
ಜೋಗತಿ ರಾಜಮ್ಮ ಅವರು ಏಕಾಂಗಿ. ಬೇಡಿ ಬದುವುದೇ ಕಾಯಕ. ನಿತ್ಯಜೀವನಕ್ಕೆ ಖರ್ಚಾಗಿ ಉಳಿದ ಹಣವನ್ನು ಕೂಡಿಟ್ಟರು. ಜೋಪಾನ ಮಾಡಿದ ಈ ಹಣವನ್ನು ಸದುಪಯೋಗ ಮಾಡಬೇಕು ಎನ್ನುವ ಯೋಚನೆ ಮನಸ್ಸಿನಲ್ಲಿ ಮೊಳಕೆಯೊಡೆದಿತ್ತು. ಕಳೆದ ವರ್ಷ ತನ್ನೂರಿನ ಪಕ್ಕದಲ್ಲಿರುವ ಶಾರದಾ ನಗರ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳಿಗೆ ಸಮವಸ್ತ್ರ, ನೋಟ್‌ಬುಕ್, ಪೆನ್, ಪೆನ್ಸಿಲ್ ಕೊಡಿಸಿದರು. ಇದಕ್ಕಾಗಿ ₹ 40 ಸಾವಿರ ಖರ್ಚಾಯಿತು. ಈ ವರ್ಷ ಹುಟ್ಟೂರಿನ ಶಾಲೆ ಮಕ್ಕಳಿಗೆ ₹65 ಸಾವಿರ ಖರ್ಚು ಮಾಡಿದ್ದಾರೆ.
‘ಭಿಕ್ಷೆ ಬೇಡ್ಬೇಕು. ನನ್ನ ಬದ್ಕು ನಡಿಬೇಕು. ನನ್ನ ಬದ್ಕಿಗೆ ಆಗಿ ಉಳಿದಿದ್ದು ಮಕ್ಕಳಿಗೆ ಕೊಡ್ಬೇಕು ಅನ್ನಿಸ್ತು. ನನ್ನ ಆತ್ಮಕ್ಕೂ ಇಂಥದ್ದೊಂದು ಮಾಡಬೇಕು ಅನಿಸ್ತಿತ್ತು. ಅದಕ್ಕಾ ಬಟ್ಟೆ ಕೊಡುಸುದ್ನ್ಯಾ. ಮಕ್ಕಳೂ ಸಂತೋಷದಿಂದ ಬಟ್ಟೆ ತಗೊಂಡ್ಯಾರ. ನಾನಿರೋವರ್ಗು ಇದನ್ನು ಮಾಡ್ಕೆಂತಾ ಬರ್ತಿನಿ’ ಎಂದು ರಾಜಮ್ಮ ಹೇಳಿದರು.
ಕೂಡಿಟ್ಟ ಹಣವನ್ನು ಹೀಗೆ ಖರ್ಚು ಮಾಡದಂತೆ, ಮುಪ್ಪಿನ ಕಾಲಕ್ಕೆ ಬಳಸಿಕೊಳ್ಳುವಂತೆಯೂ ಹಲವರು ಇವರಿಗೆ ಕಿವಿಮಾತು ಹೇಳಿದ್ದಾರೆ. ಕೆಲವರು ‘ಇಷ್ಟು ಹಣ ಎಲ್ಲಿಂದ ಬಂತು?’ ಎಂದು ಅನುಮಾನದಿಂದಲೇ ಕೇಳಿದ್ದಾರೆ. ಆದರೆ, ಅದ್ಯಾವುದನ್ನೂ ಇವರು ತಲೆಗೇ ಹಾಕಿಕೊಂಡಿಲ್ಲ. ‘ಜನ ಏನಾದರೂ ಹೇಳಲಿ, ಮನಸ್ಸಿಗೆ ಸಮಾಧಾನ ಎನಿಸಿದ್ದನ್ನು ಮಾಡುತ್ತಿರುತ್ತೇನೆ’ ಎಂದು ದೃಢವಾಗಿ ಹೇಳಿದರು.
‘ಹುಟ್ಟಿದಾಗ ನನಗ ಆರೋಗ್ಯ ಇದ್ದಿಲ್ಲಂತ ಅಪ್ಪ–ಅವ್ವ ಬಾಳ ಖರ್ಚು ಮಾಡ್ಯಾರ. ಹೊಲ, ಭೂಮಿ ಮಾರ್‍ಯಾರ. ಕೂಲಿ ಕೆಲಸ ಮಾಡಿ ಬದುಕ್ತಿದ್ದ ಅವರು ನನ್ನ ಸಾಲಿಗೇ ಕಳ್ಸಿಲ್ಲ. ನನ್ನೂರಿನ ಮಕ್ಕಳಾದರೂ ಸಾಲಿಲಿ ಚೆನ್ನಾಗಿ ಕಲಿಲೀ ಅಂತ ಬಟ್ಟೆ ಕೊಡುಸುದ್ನ್ಯಾ... ’ ಎಂದು ಮುಗ್ಧವಾಗಿಯೇ ಹೇಳಿದರು.
ರಾಜಮ್ಮ ಅವರ ಈ ಉದಾತ್ತ ಕೆಲಸವನ್ನು ಮೆಚ್ಚಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಂಸೆ ಪತ್ರ ಕೊಟ್ಟಿದ್ದೇ ತಡ, ಈಗ ಹಲವರು ಅವರನ್ನು ಸನ್ಮಾನಿಸುತ್ತಿದ್ದಾರೆ. ಹಲವು ಶಾಲೆಗಳ ಶಿಕ್ಷಕರು ಸಂಪರ್ಕಿಸಿ ತಮ್ಮ ಮಕ್ಕಳಿಗೂ ಬಟ್ಟೆ ಕೊಡಿಸುವಂತೆ ಕೇಳುತ್ತಿದ್ದಾರೆ. ಆದರೆ, ತಮ್ಮ ಬಳಿ ಸದ್ಯಕ್ಕೆ ಹಣವಿಲ್ಲ ಎಂದು ಹೇಳಿರುವ ರಾಜಮ್ಮ, ಮುಂದಿನ ವರ್ಷ ಬಟ್ಟೆ ಕೊಡಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ.
ತಮ್ಮ ಉಳಿತಾಯದ ಹಣವನ್ನು ಮಕ್ಕಳ ಶಿಕ್ಷಣಕ್ಕಾಗಿ ವಿನಿಯೋಗಿಸಿರುವ ಇವರಿಗೆ ಸ್ವಂತ ಸೂರಿಲ್ಲ. ಸರ್ಕಾರಿ ಜಾಗದಲ್ಲಿ ಶೆಡ್ ಹಾಕಿಕೊಂಡು ಜೀವನ ನಡೆಸುತ್ತಿದ್ದಾರೆ. ಹೂ, ಕುಂಕುಮ, ಮೂರ್ತಿಯುಳ್ಳ ಪಡ್ಲಿಗಿ ಹಿಡಿದು, ರಸ್ತೆಬದಿಯಲ್ಲಿ ನಿಲ್ಲುವ ರಾಜಮ್ಮ, ದಾರಿ ಹೋಕರ ಬಳಿ ಭಿಕ್ಷೆ ಬೇಡುತ್ತಾರೆ. ‘ದಿನಕ್ಕೆ ₹250–₹300 ಸಿಗುತ್ತದೆ. ಇಷ್ಟೇ ನನ್ನ ಬದುಕು’ ಎಂದು ಖುಷಿಯಿಂದಲೇ ಹೇಳಿದರು.
ಜೋಗತಿಯಾಗಿದ್ದು ಹೇಗೆ?
ರಾಜಮ್ಮ ಅವರಿಗೆ ಹುಟ್ಟಿದಾಗಿನಿಂದಲೂ ಸಣ್ಣಪುಟ್ಟ ಅನಾರೋಗ್ಯ ಇತ್ತು. ಇದಕ್ಕಾಗಿಯೇ ತಂದೆ–ತಾಯಿ ಸಾಕಷ್ಟು ಖರ್ಚು ಮಾಡಿಕೊಂಡಿದ್ದರು. ಜತೆಗೆ, ಮನೆಯಲ್ಲಿ ಕಿತ್ತುತಿನ್ನುವ ಬಡತನ. ಇದರ ನಿವಾರಣೆಗೆ ಜ್ಯೋತಿಷಿಯೊಬ್ಬರ ಸಲಹೆ ಕೇಳಿದ್ದ ತಂದೆ–ತಾಯಿಗೆ, ‘ನಿಮ್ಮ ಮನೆಯಲ್ಲಿ ದೇವಿ ಇದ್ದಾಳೆ, ಹುಲಿಗಿ ಮಾರೆಮ್ಮನಿಗೆ ಹೋಗಿ ದೀಕ್ಷೆ ಪಡೆದು ಬನ್ನಿ’ ಎಂದು ಸಲಹೆ ನೀಡಿದ್ದರು. ಅದರಂತೆ ಹದಿಮೂರು ವರ್ಷದವರಾಗಿದ್ದಾಗ ಇವರಿಗೆ ದೀಕ್ಷೆ ಕೊಡಿಸಿದ್ದರು.
ರಾಜಮ್ಮ ಮುತ್ತಜ್ಜನೂ ಹೀಗೆಯೇ ಜೋಗತಿಯಾಗಿದ್ದರು. ಅವರದ್ದೇ ಛಾಯೆ ಇವರಲ್ಲೂ ಇದೆ ಎಂದು ಕುಟುಂಬ ಭಾವಿಸಿತ್ತು. ಅದಕ್ಕೂ ಮಿಗಿಲಾಗಿ, ತಮ್ಮಲ್ಲಿಯೂ ಹೆಣ್ಣಿನ ಭಾವನೆಗಳು ಗಾಢವಾಗಿದ್ದವು ಎಂದು ರಾಜಮ್ಮ ಹೇಳಿದರು.
‘ನಾನು ಹಿಂಗ ಸೀರೆಯುಟ್ಟು ಐವತ್ತು ವರ್ಷವಾತು’ ಎಂದ 63 ವರ್ಷದ ರಾಜಮ್ಮ, ಅರ್ಧಶತಮಾನದ ತಮ್ಮ ಜೋಗತಿ ಬದುಕನ್ನು ಅತ್ಯಂತ ಸರಳವಾಗಿ ಬಣ್ಣಿಸಿದರು.
ಜೋಗತಿಯರು ತಮ್ಮ ಇಡೀ ಜೀವನವನ್ನು ದೀಕ್ಷೆ ಪಡೆದ ದೇವಿಗೆ ಮುಡಿಪಾಗಿಡುತ್ತಾರೆ. ಪಡ್ಲಿಗಿ (ಸಣ್ಣ ಬುಟ್ಟಿ) ಹಿಡಿದು ಬೇಡಿ ಬದುಕುತ್ತಾರೆ. ಜನರ ಸಮಸ್ಯೆಗಳನ್ನು ಅವರು ತಮ್ಮವೇ ಎಂದು ಭಾವಿಸುತ್ತಾರೆ. ಹಸಿದವರಿಗೆ ಅನ್ನ ಕೊಡಬೇಕು, ಕಷ್ಟದಲ್ಲಿರುವವರಿಗೆ ನೆರವಾಗಬೇಕು, ನೆರಳಾಗಬೇಕು ಎನ್ನುವುದನ್ನು ಪಾಲಿಸಿಕೊಂಡು ಬರುತ್ತಾರೆ. ಜೋಗತಿಯರು ವ್ರತದಂತೆ ಪಾಲಿಸಿಕೊಂಡು ಬರುವ ಈ ಗುಣವೇ ರಾಜಮ್ಮ ಅವರ ಸಮಾಜಮುಖಿ ಕಾಯಕದ ಮೂಲ ಎನ್ನಬಹುದೇನೋ.
ಸಾಮಾಜಿಕ ಮಾಧ್ಯಮಗಳಲ್ಲಿ ಏನೇನೋ ವಿಚಾರಗಳು ಹರಿದಾಡುತ್ತವೆ. ಆದರೆ ಇಂಥವರ ಸಮಾಜ ಸೇವೆ ಮುನ್ನೆಲೆಗೆ ಬರುವುದೇ ಇಲ್ಲ. ಆದರೂ ರಾಜಮ್ಮ ಅವರ ಸೇವೆಯನ್ನು ಮುಖ್ಯಮಂತ್ರಿ ಗುರುತಿಸಿದ್ದಾರೆ. ಈ ವಿಚಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಬೇಕು. ಜನರಲ್ಲಿ ಪರಿವರ್ತನೆ ತರಬೇಕು. ಇವರನ್ನು ನೋಡಿಯಾದರೂ ಒಂದಷ್ಟು ಜನ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಬೇಕು. ಆಗ ನಮ್ಮ ಶೈಕ್ಷಣಿಕ ವ್ಯವಸ್ಥೆ ಬದಲಾಗುತ್ತದೆ.ಭೂಮೇಶ್ವರ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಕಂಪ್ಲಿ
ಮುಖ್ಯಮಂತ್ರಿಯ ಶ್ಲಾಘನೆ
‘ಪಿ.ರಾಜಮ್ಮ ಅವರ ಸಾಮಾಜಿಕ ಕಳಕಳಿ ಅನನ್ಯವಾದುದು. ಲಿಂಗತ್ವ ಅಲ್ಪಸಂಖ್ಯಾತರು ಎದುರಿಸುವ ಸವಾಲುಗಳು ಮತ್ತು ಹೋರಾಟದ ಬದುಕಿನ ನಡುವೆಯೂ ಅವರು ಮಾಡಿರುವ ಸಮಾಜ ಸೇವೆ ಆದರ್ಶಪ್ರಾಯವಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಸಮವಸ್ತ್ರ ಬಟ್ಟೆ ಪುಸ್ತಕ ಹಾಗೂ ಲೇಖನ ಸಾಮಗ್ರಿಗಳನ್ನು ನೀಡುತ್ತಿರುವ ಉದಾತ್ತ ಚಿಂತನೆ ಶ್ಲಾಘನೀಯ. ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನುತರುವ ರಾಜಮ್ಮ ಅವರ ನಿಸ್ವಾರ್ಥ ಸೇವೆ ಸಮಾಜಕ್ಕೆ ಮಾದರಿಯಾಗಿದೆ. ರಾಜಮ್ಮನವರ ಸಮಾಜಮುಖಿ ಕಾರ್ಯಕ್ಕೆ ಅಭಿನಂದನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರದಲ್ಲಿ ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.