ಅಜ್ಜಿ, ಅವ್ವ ಹಾಡುತ್ತಿದ್ದ ನೂರಾರು ಪದಗಳು ಚಿಕ್ಕಂದಿನಲ್ಲೇ ಮೋಹನ್ ಕುಮಾರ್ ಎದೆಯೊಳಗೆ ಇಳಿದಿದ್ದವು. ಅವುಗಳೊಂದಿಗೇ ಬೆಳೆದ ಇವರು ಈಗ ತಮ್ಮದೇ ಕಾಡುಗೊಲ್ಲರ ಜನಪದವನ್ನು ಸಂಗ್ರಹಿಸಿ ದಾಖಲಿಸುವ ದೊಡ್ಡ ಕೆಲಸವನ್ನು ಮಾಡಿದ್ದಾರೆ.
ಎಲ್ಲವನ್ನೂ ಕಳೆದುಕೊಂಡು ನಿರಾಶನಾಗಿ, ಭವಿಷ್ಯವು ಗಾಢ ಕತ್ತಲಿನಂತೆ ಅಸ್ಪಷ್ಟವಾಗಿರುವಾಗ, ಎಲ್ಲಿಂದಲೋ ಹಾರಿ ಬಂದು ದಾರಿ ತೋರುವ ಮಿಂಚುಹುಳದಂತೆ ಮೋಹನ್ ಕುಮಾರ್‌ಗೆ ಕಂಡಿದ್ದು ರಾಮನಗರದ ಜಾನಪದ ಲೋಕ. ಬಡತನವನ್ನು ಬೆನ್ನಿಗಂಟಿಸಿಕೊಂಡೇ ಹುಟ್ಟಿ, ಬೆಳೆದ ಮೋಹನ್ ಅವರಿಗೆ ಅಟೊಮೊಬೈಲ್ ಡಿಪ್ಲೊಮಾದ ಪಾಠಗಳು ಅರ್ಥವಾಗಲೇ ಇಲ್ಲ. ಅತ್ತ ಡಿಪ್ಲೊಮಾ ಕಲಿಕೆ ಮುಂದುವರಿಸಲೂ ಆಗದೇ, ಇತ್ತ ಮನೆಗೆ ಮರಳಲೂ ಆಗದ ಸ್ಥಿತಿ. ಆಗ ಅವರಿಗೆ ಹೊಸ ಬಾಳ್ವೆ ನೀಡಿದ್ದು ಜಾನಪದ ಲೋಕ. ಅಲ್ಲಿಗೆ ನೀಡಿದ ಮೊದಲ ಭೇಟಿ ಬದುಕಿಗೆ ಹೊಸ ಮುನ್ನುಡಿ ಬರೆಯಿತು. ಅಲ್ಲಿನ ಒಂದೊಂದು ಚಿತ್ರ ನೋಡಿದಾಗಲೂ ಕಣ್ಣ ಮುಂದೆ ಬಾಲ್ಯ ಕುಣಿದಾಡತೊಡಗಿತು. ಭವಿಷ್ಯ ಹಾದು ಹೋಯಿತು. ಅಲ್ಲಿ ಪಡೆದ ಸರ್ಟಿಫಿಕೆಟ್ ಕೋರ್ಸ್, ಕಾಡುಗೊಲ್ಲರ ಹಟ್ಟಿಯ ಯುವಕನನ್ನು ವಿಶ್ವವಿದ್ಯಾಲಯವೊಂದರ ಸಿಂಡಿಕೇಟ್ ಸದಸ್ಯನಾಗುವಷ್ಟರ ಮಟ್ಟಿಗೆ ಬದುಕಿನ ದಿಕ್ಕನ್ನೇ ಬದಲಾಯಿಸಿತು.
ಮೋಹನ್ ಕುಮಾರ್ ತುಮಕೂರು ತಾಲ್ಲೂಕಿನ ತಂಬುಗನಹಟ್ಟಿಯವರು. ಹಟ್ಟಿಯ ಸಂಪ್ರದಾಯದಂತೆ ಹುಟ್ಟಿದ ಕೂಡಲೇ ತಾಯಿಯ ಜೊತೆ ಎರಡು ತಿಂಗಳು ಮನೆಯಿಂದ ಹೊರಗಿರಬೇಕಾಯಿತು. ಅನಾರೋಗ್ಯಕ್ಕೀಡಾಗಿ ಬದುಕುವುದೇ ಇಲ್ಲ ಎಂಬಂತಿದ್ದ ಮಗುವನ್ನು, ತಾಯಿ ದೊಡ್ಡಮ್ಮ ಅದ್ಯಾವುದೋ ಗಿಡಮೂಲಿಕೆಯನ್ನು ಹಾಲಿನಲ್ಲಿ ಬೆರೆಸಿಕೊಟ್ಟು ಜೀವ ಉಳಿಸಿದರಂತೆ. ಹಟ್ಟಿಯಲ್ಲಿ ಅಮ್ಮನ ಹಾಡುಗಳನ್ನು ಕೇಳಿ ಬೆಳೆದ ಮೋಹನ್, ಶಾಲೆಯಲ್ಲಿ ಜನಪದಗೀತೆ ಸ್ಪರ್ಧೆಯಲ್ಲಿ ಬಹುಮಾನ ತನ್ನದಾಗಿಸಿಕೊಳ್ಳುತ್ತಿದ್ದರು. ರಾಗಿ ಬೀಸುವಾಗ, ಕಡಲೆ ಬಿಡಿಸುತ್ತಿದ್ದಾಗ ಅಜ್ಜಿ ಕೆಂಗಮ್ಮ ಹಾಡುತ್ತಿದ್ದ ಪದಗಳು, ಕೃಷಿ ಕೆಲಸ ಮಾಡುವಾಗ, ಹಬ್ಬ ಹರಿದಿನಗಳಲ್ಲಿ, ಶುಭ ಸಮಾರಂಭಗಳಲ್ಲಿ, ಜಾತ್ರೆ ವೇಳೆಯಲ್ಲಿ ಹಾಡುತ್ತಿದ್ದ ಪದಗಳೆಲ್ಲಾ 10ನೇ ತರಗತಿ ವೇಳೆಗೆ ಮೋಹನ್ ನಾಲಿಗೆಯಲ್ಲಿದ್ದವು.
‘ಕರ್ನಾಟಕದಲ್ಲಿ ಕಾಡುಗೊಲ್ಲ ಸಮುದಾಯದ ಜನಸಂಖ್ಯೆ ಸುಮಾರು 6.5 ಲಕ್ಷ. ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಟ್ಟಿಯಲ್ಲಿ ಹುಟ್ಟಿನಿಂದ ಸಾವಿನವರೆಗೂ ಪ್ರತಿಯೊಂದು ಆಚರಣೆಗೂ ಹಾಡುಗಳಿವೆ. ‘ಸೂತಕ, ಸಂತಸ, ನೋವು, ನಲಿವು… ಹೀಗೆ ಎಲ್ಲವನ್ನೂ ಹಾಡಿನಲ್ಲೇ ಅಭಿವ್ಯಕ್ತಪಡಿಸುವ ವಿಶಿಷ್ಟ ಸಂಪ್ರದಾಯ ನಮ್ಮದು. ಬಾಲ್ಯದಲ್ಲಿ ಅಜ್ಜಿ ಹಾಗೂ ಅಮ್ಮ ಹಾಡುತ್ತಿದ್ದ ಪದಗಳು ನನಗೆ ಕುತೂಹಲ ಹುಟ್ಟಿಸುತ್ತಿದ್ದವು. ನಮ್ಮ ಪೂರ್ವಿಕರ ಸಾಹಸಗಳನ್ನು ಪ್ರತಿಬಿಂಬಿಸುವ, ಅವರನ್ನು ಹೊಗಳುವ ಕಥೆಗಳನ್ನು ಹಾಡಿನ ರೂಪದಲ್ಲಿ ಹೇಳುತ್ತಿದ್ದರು. ಅವೆಲ್ಲವೂ ತಲೆತಲಾಂತರದಿಂದ ಬಾಯಿಂದ ಬಾಯಿಗೆ ಬಂದವು. ಅವ್ಯಾವುವೂ ಲಿಖಿತ ರೂಪದಲ್ಲಿ ಇರಲಿಲ್ಲ. ಹೀಗಾಗಿ ಅವುಗಳನ್ನು ದಾಖಲೆ ಮಾಡಬೇಕು ಎಂದು ನಿರ್ಧರಿಸಿ ಕಾರ್ಯಪ್ರವೃತ್ತನಾದೆ’ ಎನ್ನುತ್ತಾರೆ ಮೋಹನ್.
2008ರಲ್ಲಿ ‘ಜಾನಪದ ಲೋಕ’ಕ್ಕೆ ಸೇರಿ ಅಲ್ಲಿ ತಜ್ಞರಾದ ಟಿ. ಗೋಂವಿದರಾಜು ಹಾಗೂ ಕುರುವ ಬಸವರಾಜು ಅವರಿಂದ ತರಬೇತಿ ಪಡೆದು ಜಾನಪದ ಅಧ್ಯಯನದಲ್ಲಿ ಪರಿಣತಿ ಪಡೆದರು. ಕ್ಷೇತ್ರ ಕಾರ್ಯ ಆರಂಭಿಸಿದ ಮೋಹನ್, ತನ್ನ ಸಮುದಾಯದ ಹಾಡು, ಒಗಟು, ಗಾದೆ, ಸೊಲ್ಲು, ಸೋಬಾನೆ ಹಾಗೂ ಕೋಲಾಟದ ಪದಗಳು, ಸಂಪ್ರದಾಯ, ಆಚರಣೆಗಳನ್ನು ದಾಖಲು ಮಾಡಲು ಪ್ರಾರಂಭಿಸಿದರು. ಶಿರಾ ತಾಲ್ಲೂಕು ಒಂದರಲ್ಲೇ ಸಾವಿರಕ್ಕೂ ಅಧಿಕ ಮನೆಗಳಿಗೆ ಭೇಟಿ ನೀಡಿ ಹಾಡುಗಳನ್ನು ಸಂಗ್ರಹಿಸಿದ್ದಾರೆ. ತೀರಾ ಅಂತರ್ಮುಖಿಗಳಾದ ಕಾಡುಗೊಲ್ಲ ಸಮುದಾಯದ ಜನರ ಮನವೊಲಿಸಿ, ಅವರಿಂದ ಪದಗಳನ್ನು ಹಾಡಿಸಿ, ಹಾಡುವ ಸಂದರ್ಭಕ್ಕೆ ಕಾದು ಅವುಗಳನ್ನು ದಾಖಲಿಸಿದ್ದಾರೆ. ಟೇಪ್, ವಾಯ್ಸ್, ವಿಡಿಯೊ ರೆಕಾರ್ಡರ್‌ನಲ್ಲಿ ಅವುಗಳನ್ನು ದಾಖಲಿಸಿಕೊಂಡು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ.
2010ರಲ್ಲಿ ಸಾಣೇಹಳ್ಳಿಯಲ್ಲಿ ಅವರು ರಂಗಭೂಮಿಯಲ್ಲಿ ಡಿಪ್ಲೊಮೊ ಮುಗಿಸಿದರು. ಗೊ.ರು ಚನ್ನಬಸಪ್ಪನವರು ಅಧ್ಯಕ್ಷರಾಗಿದ್ದ ವೇಳೆ ಜಾನಪದ ಅಕಾಡೆಮಿಯ ‘ಜಾನಪದ ನಿಘಂಟು’ ಯೋಜನೆಗೆ ತುಮಕೂರು ಜಿಲ್ಲಾ ಸಂಗ್ರಹಕಾರರಾಗಿ ಕೆಲಸ ಮಾಡಿದರು. ಜಾನಪದ ವಿವಿ ರಚನೆಯಲ್ಲೂ ಕೆಲಸ ಮಾಡಿದ್ದ ಮೋಹನ್, 2010 ರಿಂದ 2017ರಲ್ಲಿ ಅಲ್ಲಿಯೇ ನೌಕರರಾಗಿ ಕೆಲಸ ಮಾಡಿದರು. ‘ಜಾನಪದ ವಿಶ್ವವಿದ್ಯಾಲಯದಲ್ಲಿ ಟೇಬಲ್, ಕುರ್ಚಿಗಳನ್ನು ಸ್ವಚ್ಛ ಮಾಡಿದ್ದೇನೆ. ಶೌಚಾಲಯಗಳನ್ನೂ ಶುಚಿ ಮಾಡಿದ್ದೇನೆ. ಅಲ್ಲಿನ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಲೇ ಅಧ್ಯಯನವನ್ನೂ ಮುಂದುವರಿಸಿದೆ. ಈ ನಡುವೆ ಹಟ್ಟಿಗಳಿಗೆ ಭೇಟಿ ನೀಡುವ ಕೆಲಸ ನಡೆದೇ ಇತ್ತು. ನನ್ನ ಕೆಲಸ ಗುರುತಿಸಿದ ವಿವಿ, ಕಾಡುಗೊಲ್ಲರ ಕೋಲಾಟದ ಹಾಗೂ ಬೆಡಗಿನ ಪದಗಳ ಬಗ್ಗೆ ಬರೆದ ಪುಸ್ತಕವನ್ನು ಪ್ರಸಾರಂಗ ಪ್ರಕಟಿಸಿತು. 2024ರಲ್ಲಿ ಅದೇ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯನಾದೆ’ ಎಂದು ಮೋಹನ್ ಹೆಮ್ಮೆಯಿಂದ ಹೇಳಿಕೊಂಡರು.
ಹದಿನೇಳು ವರ್ಷಗಳಿಂದ ಕಾಡುಗೊಲ್ಲ ಬುಡಕಟ್ಟು ಸಮುದಾಯದ ಸಾವಿರಾರು ಮೂಲ ಜನಪದ ಗೀತೆಗಳನ್ನು ಸಂಗ್ರಹಿಸಿ ಅದಕ್ಕೊಂದು ಜೀವಕೊಟ್ಟಿದ್ದಾರೆ. ಇದಕ್ಕಾಗಿ ಕಾಲ, ಕಾಲು ಸವೆಸಿದ್ದಾರೆ. ಧಾರವಾಡದ ಬಾಲವಿಕಾಸ ಅಕಾಡೆಮಿಗೆ 70ಕ್ಕೂ ಅಧಿಕ ಮಕ್ಕಳ ಆಟಗಳನ್ನು ಸಂಗ್ರಹ ಮಾಡಿಕೊಟ್ಟಿದ್ದಾರೆ. ರಾಜ್ಯದ ವಿವಿಧ ರಂಗಾಯಣದ ವಿದ್ಯಾರ್ಥಿಗಳಿಗೆ ಕಾಡುಗೊಲ್ಲ ಸಮುದಾಯದ ಹಾಡುಗಳ ತರಬೇತಿ ನೀಡಿದ್ದಾರೆ. ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ಸಂಸ್ಥೆಯ ಕಲಿ-ಕಲಿಸು ಯೋಜನೆಯ ಸಂಪನ್ಮೂಲ ವ್ಯಕ್ತಿಯಾಗಿ ರಾಜ್ಯದ ಸರ್ಕಾರಿ ಶಾಲೆಯ ಸಾವಿರಾರು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಬುಡಕಟ್ಟು ಸಂಸ್ಕೃತಿಯ ಬಗ್ಗೆ ತರಬೇತಿ ನೀಡಿದ್ದಾರೆ. ಕಾಡುಗೊಲ್ಲ ಬುಡಕಟ್ಟು ಸಂಸ್ಕೃತಿ ಕುರಿತು ಅಧ್ಯಯನ ಮಾಡಿ ಅನಕ್ಷರಸ್ಥ ಕಲಾವಿದರ ಮೂಲ ಹಾಡುಗಳನ್ನು ದಾಖಲಿಸಿ, ಆ ಸಮುದಾಯದ ಬಗ್ಗೆ ಸಂಶೋಧನಾತ್ಮಕ ಕೃತಿಗಳನ್ನು ರಚಿಸಿದ್ದಾರೆ.
ಸಿನಿಮಾದಲ್ಲೂ ನಟನೆ: ಶಿವರಾಜ್ ಕುಮಾರ್ ಅವರು ಅಭಿನಯಿಸಿದ ‘ವೇದ’ ಸಿನಿಮಾದ ‘ಜುಂಜಪ್ಪ’ ಹಾಡಿಗೆ ಧ್ವನಿ ನೀಡಿದ್ದಲ್ಲದೆ, ಹೆಜ್ಜೆ ಹಾಕಿದ್ದಾರೆ. ‘ಅಂತರ್ಜಲ’ ಹಾಗೂ ‘ಕೋಳಿ ಎಸ್ರು’ ಸಿನಿಮಾಗಳಿಗೆ ಕಂಠ ನೀಡಿದ್ದಾರೆ. ಕರ್ನಾಟಕ ಪ್ರಿಮಿಯರ್ ಲೀಗ್‌ನಲ್ಲಿ ಚಿಯರ್ ಲೀಡರ್ಸ್‌ಗೆ ಬದಲಾಗಿ ಜನಪದ ಕಲೆಯನ್ನು ಪರಿಚಯಿಸಿದ ಕೀರ್ತಿಯೂ ಮೋಹನ್‌ಗೆ ಸಲ್ಲಬೇಕು. ಜಾಲತಾಣಗಳಲ್ಲಿ ಅವರು ಹಾಕುವ ತಮ್ಮ ಸಮುದಾಯ ಹಾಡುಗಳಿಗೆ ಅಪಾರ ಅಭಿಮಾನಿಗಳ ಬಳಗವೇ ಇದೆ. ಇವರ ಹಾಡುಗಳು ಕೆಲವರಿಗೆ ಹೊಸ ಸಂಸ್ಕೃತಿಯನ್ನು ಪರಿಚಯ ಮಾಡಿಕೊಟ್ಟರೆ, ಇನ್ನು ಕೆಲವರಿಗೆ ಸಾಂತ್ವನದ ನುಡಿಗಳಾಗಿವೆ. ‘ನಿಮ್ಮ ಹಾಡು ಕೇಳಿ ನೋವು ಮರೆತೆವು ಎಂದು ಕರೆ ಮಾಡಿದವರು ತುಂಬಾ ಮಂದಿ’ ಎನ್ನುವಾಗ ಮೋಹನ್ ಮಾತಲ್ಲಿ ಸಾರ್ಥಕತೆಯ ಭಾವವಿತ್ತು.
ಸಮುದಾಯದ ಮೌಢ್ಯ ತೊಡೆಯುವ ಪ್ರಯತ್ನ
ಕಾಡುಗೊಲ್ಲ ಸಮುದಾಯ ಪಾಲಿಸುತ್ತಿರುವ ಮೌಢ್ಯದ ಬಗ್ಗೆ ಅರಿವು ಮೂಡಿಸುವ ಕೆಲಸವನ್ನೂ ಮೋಹನ್ ಮಾಡುತ್ತಿದ್ದಾರೆ. ಋತುಮತಿಯಾದರೆ ಮನೆಯಿಂದ ಹೊರಗಿಡುವ, ಹೆರಿಗೆಯಾದರೆ ಮಗುವಿನೊಂದಿಗೆ ಎರಡು ತಿಂಗಳು ಮನೆಯಿಂದ ಹೊರಗೆ ಇರಿಸುವ ಸಂಪ್ರದಾಯದ ವಿರುದ್ಧ ಜಾಗೃತಿ ಅಭಿಯಾನ ಮಾಡುತ್ತಿದ್ದಾರೆ. ಸಮುದಾಯದ ಮಕ್ಕಳನ್ನು ಶಿಕ್ಷಣಕ್ಕೆ ಪ್ರೇರೇಪಿಸುವ, ಅವರಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಬಿತ್ತುವ ಕೆಲಸವನ್ನು ಟ್ರಸ್ಟ್ ಮೂಲಕ ಮಾಡುತ್ತಿದ್ದಾರೆ. ಸಮುದಾಯದ ಮುಗ್ಧ ಜನರು ಈ ಬದಲಾವಣೆಗೆ ನಿಧಾನವಾಗಿ ಹೊಂದಿಕೊಳ್ಳುತ್ತಿದ್ದಾರೆ. ಅವರಲ್ಲಿಯೂ ಜಾಗೃತಿ ಮೂಡುತ್ತಿದೆ ಎಂದು ಮೋಹನ್ ವಿವರಿಸಿದರು. ಕತ್ತಲೆಯಲ್ಲೇ ಬದುಕುತ್ತಿರುವ ಕಾಡುಗೊಲ್ಲ ಸಮುದಾಯಕ್ಕೆ ಮೋಹನ ರಾಗ ಬೆಳಕನ್ನು ತರಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.