‘ರಿಮ್ ಜಿಮ್ ಗಿರೇ ಸಾವನ್... ಸುಲಗ್ ಸುಲಗ್ ಜಾಯೇ ಮನ್... ಭಿಗೆ ಆಜ್ ಇಸ್ ಮೌಸಮ್ ಮೇ...ಲಗಿ ಕೈಸಿ ಯೇ ಅಗನ್.....’ ಹೊರಗಡೆ ಮಳೆ ರಭಸವಾಗಿ ಸುರಿಯುತ್ತಿದ್ದರೆ ಪುರಾತನ ಗ್ರಾಮೋಫೋನ್ ಹಿಂದಿಯ ‘ಮಂಜಿಲ್’ ಸಿನಿಮಾದ ಕಿಶೋರ್ ಕುಮಾರ್ ಹಾಡಿದ ಹಾಡನ್ನು ಹೊರಸೂಸುತ್ತಿತ್ತು. ಅಲ್ಲಿ ನೆರೆದವರು ಹಳೆಯ ಕಾಲದ ಗ್ರಾಮೋಫೋನ್ ನೋಡುತ್ತ ಮಂತ್ರಮುಗ್ಧರಾಗಿದ್ದರು.
ಪಕ್ಕದಲ್ಲೇ ‘ಈ ಗದೆ ಯಾರದ್ದು?’ ಎಂದು ಮಗು ತನ್ನ ಅಜ್ಜನ ಬಳಿ ಕೇಳಿತು. ಅದಕ್ಕವರು ‘ಪುಟ್ಟಾ, ಇದು ಗದೆಯಲ್ಲ, ಮಜ್ಜಿಗೆ ಕಡೆಯುವ ಬಳಸುವ ಕಡಗೋಲು’ ಎಂದು ವಿವರಿಸಿದರು. ಆಗ ಮಗು, ಕಲ್ಲಿನ ಪಾತ್ರೆಯೊಂದರತ್ತ ಕಣ್ಣರಳಿಸಿ ನೋಡುತ್ತಾ ‘ನಮ್ಮ ಮನೆಯಲ್ಲಿ ಇದು ಇಲ್ಲವಲ್ಲ’ ಎಂದಾಗ, ‘ನಿನಗೂ, ನನಗೂ ಗೊತ್ತಿಲ್ಲದ್ದು ಸಾಕಷ್ಟಿದೆ. ಅದಕ್ಕಾಗಿಯೇ ಇಲ್ಲಿ ಬಂದು ನೋಡುತ್ತಿದ್ದೇವೆ’ ಎಂದು ಮುಗುಳ್ನಕ್ಕರು.
ಹೀಗೆ ಇಂದಿನ ಪೀಳಿಗೆಗೆ ಪರಿಚಯವೇ ಇಲ್ಲದ ಶತಮಾನಗಳ ಹಿಂದಿನ ಅಸಂಖ್ಯ ದಿನಬಳಕೆ, ಕೃಷಿ ಉಪಕರಣಗಳು ಕಾಲಗರ್ಭದಲ್ಲಿ ಹುದುಗಿ ಹೋಗುತ್ತಿವೆ. ಅವುಗಳನ್ನು ಸಂಗ್ರಹಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಸವಾಲು ಇಂದಿದೆ. ಆದರೆ ಅಂಥ ಸವಾಲನ್ನು ಸ್ವೀಕರಿಸಿ ನೂರಾರು ವಸ್ತುಗಳನ್ನು ಸಂಗ್ರಹಿಸಿರುವ ‘ಕಣಜ’ ಹೆಸರಿನ ವಸ್ತುಸಂಗ್ರಹಾಲಯವೊಂದು ಶಿರಸಿ ನಗರದಲ್ಲಿದೆ.
ಇಲ್ಲಿನ ‘ವಿದ್ಯಾನಗರ ರುದ್ರಭೂಮಿ ಸಮಿತಿ’ಯಡಿ ವಸ್ತುಸಂಗ್ರಹಾಲಯವು ಸಾರ್ವಜನಿಕರಿಗೆ ಹಳೆಯ ವಸ್ತುಗಳ ಬಗ್ಗೆ ಇರುವ ಕುತೂಹಲ ತಣಿಸುವ ಕೆಲಸ ಮಾಡುತ್ತಿದೆ. ಸುಮಾರು 600 ಚದರಡಿ ವಿಸ್ತೀರ್ಣದ ಕಟ್ಟಡದಲ್ಲಿ ವೈವಿಧ್ಯಮಯ ವಸ್ತುಗಳ ಜತೆ ಜ್ಞಾನ ತೃಷೆ ತಣಿಸುವ ಮಾಹಿತಿ ಹಾಗೂ ಮಾರ್ಗದರ್ಶನವೂ ಲಭ್ಯವಿದೆ. ಪುರಾತನವಾಗಿ ಲಭ್ಯವಿದ್ದ ನಮ್ಮ ನೆಲಮೂಲದ ಜ್ಞಾನದ ಸಂಗ್ರಹ, ಪರಿಷ್ಕಾರ ಮತ್ತು ಹೊಸ ಜ್ಞಾನದ ಸೃಷ್ಟಿ ಇವು ‘ಕಣಜ’ದ ಸ್ಥೂಲ ಚಟುವಟಿಕೆಗಳಾಗಿವೆ.
ಶಿರಸಿ ಸೇರಿದಂತೆ ಸುತ್ತಮುತ್ತಲ ತಾಲ್ಲೂಕುಗಳ ಹವ್ಯಕ ಮನೆತನಕ್ಕೆ ಸಂಬಂಧಿಸಿ ಎರಡು, ಮೂರು ತಲೆಮಾರಿನ ಹಿಂದೆ ಬಳಸುತ್ತಿದ್ದ ದಿನ ಬಳಕೆ ವಸ್ತುಗಳು ಈಗ ಎಲ್ಲಿಯೂ ಕಾಣ ಸಿಗುವುದಿಲ್ಲ. ಆದರೆ, ಕಣಜದಲ್ಲಿ ಈಗಲೂ ಅತಿ ಪುರಾತನವಾದ ಎರಡು ಬತ್ತಿಯ ಮೇಜು ದೀಪಗಳು, ಹಿತ್ತಾಳೆ ಚಿಮಣಿಗಳು, ತಾಮ್ರದ ಚಿಮಣಿಗಳು, ಮೈಯಾಸ ಬೀಗಗಳು, ಲೋಟ ಸಹಿತ ತಿರುಗಣಿ ತಂಬಿಗೆಗಳು, ವಿವಿಧ ಆಕೃತಿಯ ಕಡಗೋಲು, ತಗಡಿನ ಕಂದೀಲುಗಳು, ನಳಿಕೆ ಇಲ್ಲದ ತೀರ್ಥ ತಟ್ಟೆ, ಬೆತ್ತದ ಪೆಟ್ಟಿಗೆ, ಬೆತ್ತದ ಕೋಲುಗಳು, ಸೇರು ಮಾಪುಗಳು, ನಳಿಕೆ ಇರುವ ಗಿಚಿಡಿ, ಒನಕೆ, ಗಾಜಿನ ದೀಪ, ಚನ್ನೆಮಣೆ, ಕೂರ್ಮಪೀಠ, ಬೌದ್ಧ ಧರ್ಮೀಯರ ಘಂಟೆ, ಕೂರ್ಮಾರತಿ, ಗಂಧಾಕ್ಷತೆ ಬಟ್ಟಲು, ವಿವಿಧ ಬಗೆಯ ಚಮಚಗಳು ನೋಡುಗರ ಉತ್ಸಾಹ ಇಮ್ಮಡಿಸುತ್ತವೆ.
ಬೈನೆ ಮರದಿಂದ ಮಾಡಿದ ಕೊಳಗ, ಕದಿರು ತಕಲಿ, ಗಂಧಾಕ್ಷತೆ ದೀವಟಿಗೆ, ಗದೆ, ಗಂದಾಕ್ಷತೆ ಬಟ್ಟಲು, ನಾಲ್ಕು ಹಣತೆ ಇರುವ ಹಿತ್ತಾಳೆ ದೀಪ, ಬಿದಿರು ಶಿದ್ದೆ, ರೊಟ್ಟಿಮಣೆ, ಉರಟಣಿ ದೋಣಿ, ಕಟ್ಟಿಗೆ ಮರಿಗೆ, ಸಣ್ಣ ಕಲ್ಲು ಮರಿಗೆ, ಕಲ್ಲಿನ ದೋಸೆ ಬಂಡಿ, ಹಾಲಿನ ಪಾತ್ರೆ, ಮಣ್ಣಿನ ಮಡಿಕೆ, ಪಾತ್ರೆಗಳು, ಹುಟ್ಟುಗಳು, ಅಡ್ಡ ಕತ್ತರಿಗಳು, ಕುಟಾಣಿ, ಅರೆಯುವ ಕಲ್ಲು, ಬಾಚಣಿಕೆಗಳು, ತಾಮ್ರದ ಹರಿವಾಣ, ಹಳೆಯ ತಾಮ್ರದ ಕೊಡಗಳು ಸೇರಿದಂತೆ ಸಾವಿರಕ್ಕೂ ಹೆಚ್ಚಿನ ವಸ್ತುಗಳು ನೋಡುಗರನ್ನು ಆಕರ್ಷಿಸುತ್ತಿವೆ. ಇವುಗಳ ಜತೆಗೆ 1934ರ ಗ್ರಾಮೋಫೋನ್ ಕೂಡ ಇದ್ದು, ಇಂದಿಗೂ ಸುಸ್ಥಿತಿಯಲ್ಲಿದ್ದು, ಹಾಡನ್ನು ಗುನುಗನಿಸುತ್ತದೆ!
‘ಹಳೆಯ ವಸ್ತುಗಳ ಜತೆ ಉತ್ತರ ಕನ್ನಡ ಜಿಲ್ಲೆಯ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡ ಬಹುತೇಕ ಸಾಹಿತಿಗಳ ಸಾವಿರಾರು ಪುಸ್ತಕಗಳು ಲಭ್ಯವಿವೆ. ಜತೆಗೆ, 30ಕ್ಕೂ ಹೆಚ್ಚು ವಿವಿಧ ಜಿಲ್ಲಾ ಹಂತದ ಪತ್ರಿಕೆಗಳು ಓದುಗರ ಜ್ಞಾನ ದಾಹ ತಣಿಸುತ್ತಿವೆ’ ಎನ್ನುತ್ತಾರೆ ಇಲ್ಲಿಗೆ ಓದಲು ಬರುವ ರಮೇಶ ಹೆಗಡೆ.
‘ವಸ್ತುಸಂಗ್ರಹಾಲಯದಲ್ಲಿರುವ ಎಲ್ಲ ವಸ್ತುಗಳು ದಾನಿಗಳು ಕೊಡುಗೆ ನೀಡಿದ್ದಾಗಿವೆ. ಈಗಲೂ ಹಲವರು ಅಮೂಲ್ಯ ವಸ್ತುಗಳನ್ನು ಕೊಡುತ್ತಾರೆ. ಅವುಗಳನ್ನು ಜೋಡಿಸಿ, ಅದರ ಮಾಹಿತಿ ಪಡೆದು ನೀಡುವ ಕೆಲಸ ಮಾಡಲಾಗುತ್ತದೆ. ಕಣಜವು ನಿತ್ಯ ಸಂಜೆ 4 ರಿಂದ 6 ಗಂಟೆಯವರೆಗೆ ತೆರೆದಿರುತ್ತದೆ. ಯಾರು ಬೇಕಿದ್ದರೂ ಬಂದು ಓದಬಹುದು. ಪೂರ್ವಜರು ಬಳಸುತ್ತಿದ್ದ ವಸ್ತುಗಳನ್ನು ನೋಡಿ ಆನಂದಿಸಬಹುದು. ಪ್ರತಿ ವಸ್ತುವಿನ ಮೇಲೆ ಅದರ ಹೆಸರಿನ ಲೇಬಲ್ ಅಳವಡಿಸಲಾಗಿದೆ. ಅವುಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಅಲ್ಲಿಯೇ ವೀಕ್ಷಕರಿಗೆ ವಿವರಿಸಲಾಗುತ್ತದೆ. ವೀಕ್ಷಣೆಗೆ ಯಾವುದೇ ಪ್ರವೇಶ ಶುಲ್ಕವಿಲ್ಲ’ ಎಂದು ಇಲ್ಲಿನ ಉಸ್ತುವಾರಿ ವಿ.ಪಿ.ಹೆಗಡೆ ವೈಶಾಲಿ ಹೇಳಿದರು.
ಅಡ್ಡಕತ್ತರಿಗೆ ಮಾರುಹೋಗುವ ಮನಸ್ಸು...
ರಾಜರ ಕಾಲದಲ್ಲಿ ತಾಂಬೂಲಕ್ಕೆ ಬೇಕಾದ ಅಡಿಕೆಗಳನ್ನು ತುಂಡರಿಸಲು ಉಪಯೋಗಿಸುವ ಅಡ್ಡಕತ್ತರಿಗಳು ವಸ್ತು ಸಂಗ್ರಹಾಲಯದ ಸೌಂದರ್ಯ ಹೆಚ್ಚಿಸಿವೆ. ಬ್ರಿಟಿಷ್ ಕಾಲದಲ್ಲಿ ಬಳಕೆಯಲ್ಲಿದ್ದ ಬೂಟಿನ ಆಕಾರದ ಪುಟ್ಟ ಆ್ಯಶ್ ಟ್ರೇಗಳು ಆಗಿನ ಕಾಲದ ಚಿತ್ರಣವನ್ನು ಕಟ್ಟಿಕೊಡುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.