ಸಮಾಜದಲ್ಲಿನ ಕಟ್ಟುಪಾಡುಗಳು ಗಂಡಿನ ವಿಕೃತ ಮನಸ್ಸುಗಳು ಹುಟ್ಟುಹಾಕುವ ಸಂದರ್ಭಗಳನ್ನು ಒಟ್ಟಿಗೆ ಎದುರಿಸುವ ಹೆಣ್ಣು ಅದರ ಒಳಗೆ ಸಾಧಿಸಬಹುದಾದ ಸಂಗತಿಗಳ ಕಡೆಗೆ ಸಾಗುತ್ತಾಳೆ. ಸಮ್ಮಾನಗಳಿಗಿಂತ ಅವಮಾನಗಳನ್ನು ಹೊರುತ್ತಾಳೆ. ಸಮಾಜ ಅವಳಿಂದ ಮತ್ತೂ ನಿರೀಕ್ಷಿಸುತ್ತದೆ– ನೀನು ಮತ್ತಷ್ಟು ವಿನಮ್ರವಾಗು ಎಲ್ಲವನ್ನೂ ತಾಳಿಕೋ. ಇಂಥಾ ಹೊತ್ತಿನಲ್ಲಿ ಅಕ್ಷರವನ್ನು ನಂಬಿ, ಸೀಮಾರೇಖೆಗಳ ಒಳಗೇ ಸಾಧಿಸಬಹುದಾದ ಜಗತ್ತು ಮಹತ್ತೇ ಎಂದು ನಂಬಿ ಬರೆದವರು ಕನ್ನಡಕ್ಕೆ ಹೆಮ್ಮೆಯನ್ನು ತಂದಿತ್ತಿರುವ ಬಾನು ಮುಷ್ತಾಕ್.
ತನ್ನಂತೆ ಪರರೂ ಎಂದು ನಂಬಿರುವ ಸರಳ ವ್ಯಕ್ತಿತ್ವದ ಅವರು ಯಾವ ಜೀವಗಳಲ್ಲೂ ತಾರತಮ್ಯವನ್ನು ಎಣಿಸುವುದಿಲ್ಲ. ತಾನು ಹುಟ್ಟಿರುವ ಧರ್ಮ ವಿಶ್ವಧರ್ಮಕ್ಕೆ ಏನನ್ನು ಹೇಳುತ್ತದೆ ಎಂದು ಹೇಳದೇ ಹೋದರೆ ಅದು ಅಪರಾಧ. ನಿನ್ನ ಸುತ್ತಮುತ್ತಲಿನ ನಲವತ್ತು ಮನೆಗಳು ಅದು ಯಾವ ಧರ್ಮದವರದ್ದೇ ಆಗಲಿ ಅಲ್ಲಿ ಯಾರೂ ಹಸಿವಿನಿಂದ ಮಲಗಬಾರದು, ಯಾರೂ ನೋವನ್ನು ಅನುಭವಿಸಬಾರದು ಹಾಗೆ ನೋಡಿಕೊಳ್ಳಬೇಕಿರುವುದು ನಿನ್ನ ಧರ್ಮ ಎಂದು ಪೈಗಂಬರ್ ಸಾರಿದ್ದಾರೆ. ಇದನ್ನು ಮುಂದಿನ ಜನಾಂಗಕ್ಕೆ ದಾಟಿಸದೇ ಹೋದರೆ ನಾವು ದ್ರೋಹಿಗಳಾಗುತ್ತೇವೆ- ಯಾಕೆಂದರೆ ವಿಶ್ವದ ಯಾವ ಧರ್ಮವೂ ಜೀವ ವಿರೋಧಿಯಲ್ಲ ಎಂದಿದ್ದು ನೆನಪಾಗುತ್ತದೆ. ‘ಫಕೀರನೊಬ್ಬ ಹಾಡುತ್ತಿದ್ದ ತತ್ವ ಪದ ‘ಹಂದಿಯನೇಕೆ ಹೀಗಳೆವೆ ಮನದಲ್ಲಿ ಹಂದಿ, ಮನೆಯಲ್ಲಿ ಹಂದಿ, ಮೈಯಲ್ಲಿ ಹಂದಿ ಹೊತ್ತವನೇ- ಹಂದಿ ಮಾಂಸವು ಮುಸ್ಲಿಮರಿಗೆ ಹರಾಂ ಅದರಂತೆಯೇ ಕೋಪವು ಕೂಡಾ’ (ಬೆಂಕಿ ಮಳೆ) ಎನ್ನುತ್ತಾ ಜೀವ ವಿರೋಧವಾದದ್ದನ್ನು ಹೊತ್ತು ಸಾಗದಂತೆ ಹೇಳುವ ಜೀವ ಕಾರುಣ್ಯವನ್ನು ಹಂಚುವ ಅವರು ಕಥೆಗಾರ್ತಿ, ಅಂಕಣಗಾರ್ತಿ, ವಕೀಲೆ, ಅಂತಃಕರಣದಲ್ಲಿ ಅಪ್ಪಟ ಮನುಷ್ಯೆ. ಇಂದು ಕನ್ನಡಿಗರ ಮನದುಂಬುವಂತೆ ಮಾಡಿದ್ದಾರೆ ತಮ್ಮದೇ ಕಥೆಗಳಿಂದ. ಬೂಕರ್ ಕನ್ನಡಕ್ಕೆ ಬರಬಹುದು ಎನ್ನುವ ಕಲ್ಪನೆಯೇ ರೋಮಾಂಚನವನ್ನು ಹುಟ್ಟು ಹಾಕುತ್ತಿದ್ದಾಗ ಅದನ್ನು ನನಸಾಗಿಸಿ ಪ್ರತಿ ಎದೆಯಲ್ಲೂ ಹಣತೆ ಹಚ್ಚಿದವರು. ನನಗೆ ತುಂಬಾ ಹತ್ತಿರವಾಗಿದ್ದು ‘ಹಸೀನಾ’ ಸಿನಿಮಾದಿಂದ. ಮೂಲ ಕಥೆಯ ಹೆಸರು ‘ಕರಿ ನಾಗರಗಳು’. ಹೆಣ್ಣು ಮಾತ್ರ ಹೆರುವ ಯಂತ್ರವೇ ಆಗಿರಬೇಕು. ಮಕ್ಕಳನ್ನು ಬೆಳೆಸಲಿಕ್ಕೆ ಯೋಗ್ಯತೆ ಇಲ್ಲದಿದ್ದರೂ ಮಕ್ಕಳು ಬೇಕು ಎಂದು ಬಯಸುತ್ತಾನೆ ಗಂಡು. ಅದರಲ್ಲೂ ಗಂಡು ಮಗುವಿನ ಹಂಬಲ ಅಳಿಯಲಾಗದ್ದು. ಗಂಡಿನ ದರ್ಪದ ಪ್ರವೃತ್ತಿಯನ್ನು ಅತ್ಯಂತ ತಣ್ಣಗೆ ಪ್ರತಿಭಟಿಸುವ ಹಸೀನಾ ತನ್ನ ಮಕ್ಕಳ ಭವಿಷ್ಯಕ್ಕಾಗಿ ಹೋರಾಡುತ್ತಾ, ಸಾಮುದಾಯಿಕವಾಗಿ ಬೆಳೆಯುತ್ತಾ, ತನ್ನತನವನ್ನು ಮರೆಯದ ಪಾತ್ರವಾಗಿ ಕಣ್ಣೆದುರು ಕಟ್ಟುತ್ತಾಳೆ. ಕೊನೆಯಲ್ಲಿ ಮಕ್ಕಳಾಗದಂತೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತೇನೆನ್ನುವ ಅವಳ ಸಂಕಲ್ಪ ಆಶಾದಾಯಕ ಸ್ಥಿತಿಯನ್ನು ಪ್ರತಿನಿಧೀಕರಿಸುತ್ತದೆ.
ಎಲ್ಲ ವಯೋಮಾನದ ಶ್ರಮಜೀವಿಗಳು ಬಾನು ಮುಷ್ತಾಕ್ ಅವರ ಕಥೆಗಳ ನಾಯಕಿಯರು. ಗಂಡನಿಂದ ನಿಂದನೆಗೊಳಗಾದವಳು, ತಾಯ ಸಾವಿನ ನಂತರ ಅಪ್ಪ ಇನ್ನೊಂದು ಮದುವೆಯಾದರೂ ತಾನೇ ತಾಯಂತೆ ತಮ್ಮ ತಂಗಿಯರನ್ನು ಸಲಹುವ ಪುಟ್ಟ ಬಾಲೆ, ಗಂಡನ ದೌರ್ಜನ್ಯಕ್ಕೆ ಒಳಗಾಗಿ ಜೀವವನ್ನೇ ಕಳಕೊಳ್ಳಲು ಹೊರಟವಳು, ತನ್ನದೇ ಜೀವದ ಕುಡಿಯ ಮಾತುಗಳಿಂದ ಚೈತನ್ಯ ತುಂಬಿಕೊಂಡವಳು... ಇವೆಲ್ಲವೂ ಸ್ತ್ರೀ ಅನುಭವ ವೇದ್ಯವಾದ ಗಾಢ ಸಂವೇದನೆಯ ಕಥೆಗಳು ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.
ವೃತ್ತಿಯಲ್ಲಿ ವಕೀಲೆಯಾದರೂ ಬಾನು ಅವರು ಎಲ್ಲೂ ವಕೀಲಿಕೆಯ ಗತ್ತು ಗೈರತ್ತನ್ನು ತರುವುದಿಲ್ಲ. ಬದಲಿಗೆ ಹೃದಯದಿಂದ ಮಾತನಾಡುತ್ತಾರೆ. ಸಮಾನತೆಯನ್ನು ನೀಡುವ ಕಾನೂನಿನ ಆಚೆಗೆ ಸಾಮಾಜಿಕ ಪರಿವೇಶ ತೊಟ್ಟ ಎಲ್ಲ ನೀತಿ ನಿಯಮಗಳ ಒಳಗೆ ತೊಳಲುವ ಹೆಣ್ಣುಗಳಿಗೆ ಬಿಡುಗಡೆಯ ಹಾದಿಯೊಂದಿದೆ ಎನ್ನುವುದನ್ನು ಹೇಳುವ ಅವರು ತಮ್ಮ ಜನಾಂಗದ ಒಳಗಿನ ಸ್ತ್ರೀ ಸಂಹಿತೆಯೊಂದನ್ನು ಚಳವಳಿಯಂತೆ ಹುಟ್ಟು ಹಾಕುತ್ತಾರೆ. ಕುಟುಂಬ ಉಳಿಯಲಿ ಎಂದು ಮಾಡಿಕೊಳ್ಳುವ ಹೊಂದಾಣಿಕೆಯನ್ನು ದೌರ್ಬಲ್ಯ ಎಂದು ಭಾವಿಸುವ ಗಂಡು ಅವಳನ್ನು ತುಳಿಯಲಿಕ್ಕೆ ನೋಡುತ್ತಾನೆ. ಅಂತರಂಗದ ನೋವಲ್ಲಿ ಕುದ್ದು ಪರಿಪಾಕಗೊಂಡು ಶುದ್ಧಾತ್ಮವಾದ ಹೆಣ್ಣುಗಳು ಪರಿಸ್ಥಿತಿಯನ್ನು ಚಿಮ್ಮುಹಲಗೆಯಾಗಿ ಮಾರ್ಪಡಿಸಿಕೊಳ್ಳುತ್ತಾರೆ. ಇದು ಅವರ ಹೆಜ್ಜೆ ಮೂಡದ ಹಾದಿ, ಬೆಂಕಿ ಮಳೆ, ಎದೆಯ ಹಣತೆ, ಸಫೀರಾ, ಬಡವರ ಮಗಳು ಹೆಣ್ಣಲ್ಲ ಎನ್ನುವ ಐದು ಸಂಕಲನಗಳ ಕಥೆಗಳ ಹೂರಣ. ಸಣ್ಣ ಸಣ್ಣ ವಿವರಗಳ ಮೂಲಕ ತಾನು ಬದುಕುತ್ತಿರುವ ಪರಿಸರದ ತನ್ನದೇ ಸಮುದಾಯದ ಹೆಣ್ಣುಗಳ ನೋವು ಸಂಕಟಗಳಿಗೆ ಆರ್ದ್ರವಾಗುತ್ತಾ, ವಿಶ್ಲೇಷಿಸುತ್ತಾ, ವಿಮರ್ಶಿಸುತ್ತಾ ನಮ್ಮನ್ನೂ ಒಳಗಾಗುವಂತೆ ಮಾಡುತ್ತಾರೆ.
ಬರವಣಿಗೆಯೂ ಅವಳ ಅಂತರಂಗದ ತುಡಿತವನ್ನು ಮೀರಬಹುದಾದ ಸಾಮಾಜಿಕ ಸಂಗತಿಗಳನ್ನು ಒಳಗೊಳ್ಳುವ ಹಾಗಿಲ್ಲ ಎನ್ನುವ ಸಮಾಜ ಕಟ್ಟುಗಳನ್ನು ಮೀರಿ ಬರೆದ ಕಥೆಗಳು ಕನ್ನಡವನ್ನು ವಿಸ್ತರಿಸಿವೆ. ದೀಪಾ ಭಾಸ್ತಿಯವರ ಶಕ್ತವಾದ ಅನುವಾದದಿಂದಾಗಿ ಇಂದು ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಲಭಿಸಿದೆ. ಅವರಿಗೂ ಕನ್ನಡ ಋಣಿಯಾಗಿದೆ. ಅಲ್ಲದೆ ಹೋಗಿದ್ದರೆ ಈ ಬೆಳಕು ಅಲ್ಲಿ ಹೇಗೆ ಚಲ್ಲವರಿಯುತ್ತಿತ್ತು! ಕನ್ನಡದ ಕೃತಿಗಳು ಹೆಚ್ಚು ಸತ್ವಶಾಲಿ ಎಂದು ನಿರೂಪಿಸಿದ ಇಬ್ಬರಿಗೂ ಅಭಿನಂದನೆಗೆಳು.
ಲೇಖಕಿ: ಸಾಹಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.