ADVERTISEMENT

ಕೊಡಗಿನ ಕೊಂಬಾಟ್‌ ನೃತ್ಯ

ಮಾರ್ಚ್1–3ರ ವರೆಗೆ ವಾರ್ಷಿಕ ಹಬ್ಬ

ಪುತ್ತರಿರ ಕರುಣ್‌ ಕಾಳಯ್ಯ
Published 1 ಮಾರ್ಚ್ 2019, 19:30 IST
Last Updated 1 ಮಾರ್ಚ್ 2019, 19:30 IST
ಪೃಥ್ವಿ ಅಯ್ಯಪ್ಪ
ಪೃಥ್ವಿ ಅಯ್ಯಪ್ಪ   

ವಿಶಿಷ್ಟ ಆಚರಣೆಗಳ ಪ್ರದೇಶ ಕೊಡಗು. ಇಲ್ಲಿ ಮಾತ್ರ ಕಂಡುಬರುವ ಬೊಳಕಾಟ್, ಪೀಲಿಯಾಟ್, ಚೌರಿಯಾಟ್, ಬಂಡ್‌ಕಳಿ, ಹುಲಿವೇಶ, ಕುದುರೆಕಳಿ ಜೊತೆಗೆ ಕಾಣಬರುವ ವಿಶಿಷ್ಟ ರೀತಿಯ ಕುಣಿತದಲ್ಲಿ ಒಂದು ಕೊಂಬಾಟ್.

ಕೊಡಗಿನ ಚೇರಳ ಶ್ರೀಮಂಗಲ ಗ್ರಾಮದ ಚೇರಳ ಭಗವತಿ ದೇವಾಲಯದಲ್ಲಿ ವಿಶಿಷ್ಟ ರೀತಿಯ ಕೊಂಬಾಟ ನಡೆಯುತ್ತದೆ. ಈ ವರ್ಷ ಫೆಬ್ರುವರಿ 26ಕ್ಕೆ ಹಬ್ಬ ದೇವರ ದೀಪವನ್ನಿಟ್ಟು (ಬೊಳಕ್ ಮರ) ಹಬ್ಬದ ಕಟ್ಟು ಬೀಳುವುದು. ಮಾರ್ಚ್ ಒಂದಕ್ಕೆ ಪಟ್ಟಣಿಹಬ್ಬ,
ಎರಡಕ್ಕೆ ಅಯ್ಯಪ್ಪಬನ, ಮೂರಕ್ಕೆ ದೊಡ್ಡಹಬ್ಬ ನಡೆಯಲಿದೆ.

ಹಬ್ಬದ ದಿನ ಸಾಂಪ್ರದಾಯಿಕ ಬಿಳಿಕುಪ್ಪಸ ದಟ್ಟಿಯನ್ನು ಧರಿಸಿದ ಊರಿನವರು ದೇವಾಲಯಕ್ಕೆ ಬರುತ್ತಾರೆ. ಅಲ್ಲಿ ಇಟ್ಟಿರುವ ಜಿಂಕೆಕೊಂಬನ್ನು ಹಿಡಿದು ದೀಪಸ್ತಂಭದ ಮುಂದೆ ಸಾಲಾಗಿ ಬಂದು ದೇವಾಲಯದ ಬಲಭಾಗದಲ್ಲಿ ಕೆಂಪುವಸ್ತ್ರಧಾರಿಗಳಾಗಿ ನಿಂತಿರುವ ಮೇದರ ಕೊಟ್ಟಿಗೆ ಊರಿನ ಹಾಗೂ ದೇವಾಲಯ ತಕ್ಕರು ‘ಹೋ.. ವಯ್ಯ.. ಹೋ..ಹೋ..ವಯ್ಯ ಹೋ...’ ಎಂದು ದೇವರನ್ನು ಕರೆಯುತ್ತಾ 18 ತರಹದ ಕೊಂಬಾಟ್ ನೃತ್ಯಕ್ಕೆ ಹೆಜ್ಜೆ ಹಾಕುತ್ತಾರೆ.

ADVERTISEMENT

ಅನಂತರ ದೇವಾಲಯದಲ್ಲಿ ಕೊಂಬನ್ನು ಅರ್ಪಿಸಿ ದೇವರಿಗೆ ನಮಸ್ಕರಿಸಿ ತೆರಳುವರು.
ಹಿಂದೆ ಬೇಟೆಗೆ ತೆರಳುವಾಗ ಬೇಟೆಗಾರರು ಹರಕೆಹೊತ್ತು ಬೇಟೆಗೆ ತೆರಳುತಿದ್ದರಂತೆ. ಬೇಟೆಯಲ್ಲಿ ಸಿಕ್ಕ ಜಿಂಕೆಯ ಕೊಂಬುಗಳನ್ನು ಹರಕೆಯ ರೂಪವಾಗಿ ಅರ್ಪಿಸುತ್ತಿದ್ದರಂತೆ.

ಈ ಕೊಂಬುಗಳನ್ನು ಹಬ್ಬದ ದಿನದಂದು ಮಾತ್ರ ಹೊರ ತೆಗೆದು ಕೊಂಬಾಟ್ ನೃತ್ಯ ಮಾಡುವ ಕ್ರಮ ಬಂದಿತಂತೆ. ಈ ಕೊಂಬುಗಳನ್ನು ಯಾವುದೇ ಕಾರಣಕ್ಕೂ ದೇವಾಲಯದಿಂದ ಹೊರಕ್ಕೆ ಒಯ್ಯುವಂತಿಲ್ಲ ಎಂಬ ನಿರ್ಬಂಧವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.