ADVERTISEMENT

ಕುವೆಂಪು ಪದ ಸೃಷ್ಟಿ: ನಲ್ಮಗು

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2023, 0:30 IST
Last Updated 17 ಡಿಸೆಂಬರ್ 2023, 0:30 IST
<div class="paragraphs"><p>ಕುವೆಂಪು</p></div>

ಕುವೆಂಪು

   

ನಲ್ಮಗು

ನಲ್ಮಗು (ನಾ). ಸುಂದರವಾದ ಮಗು; ಅಂದವಾದ ಶಿಶು. ನಲ್ಮಕ್ಕಳು (ಬಹುವಚನ)

ADVERTISEMENT

(ನಲ್+ಮಗು)

ಕುವೆಂಪು ಅವರು ಕೋಸಲ ದೇಶದ ಚಕ್ರವರ್ತಿ ದಶರಥನ ಸರಯೂ ನದಿ ದಡದಲ್ಲಿರುವ ಅಯೋಧ್ಯೆಯ ಸಮೃದ್ಧಿ, ಸೊಬಗು ರವಿವಂಶದ ಅರಸರಿಗೆ ಕೀರ್ತಿಯ ಕಿರೀಟವಿಡುವಂತಿತ್ತು ಎಂದು ವರ್ಣಿಸಿದ್ದಾರೆ. ಅದು ಹೆದ್ದಾರಿಯ ಸಾಲುಮರಗಳಿಂದ, ನಿತ್ಯ ಮಳೆಗರೆವ ಹೂವಿನ ಉದುರುಗಳಿಂದ, ಸುಂದರ ಸುಸಂಸ್ಕೃತ ಲತಾಂಗಿಯರ ರಂಗವಲ್ಲಿಯ ಲಲಿತ ಕಲೆಯಿಂದ ಶೋಭಿಸುತ್ತಿತ್ತು. ಅದು ಹಕ್ಕಿಗಳನ್ನು ಅಣಕಿಸುವ ಕೊರಳ ಇಂಚರದ ನಲ್ಮಕ್ಕಳಿಂದ ಸ್ವರ್ಗದ ಊರನ್ನೆ ಸೂರೆಗೊಂಡಂತಿತ್ತು ಎಂದು ಚಿತ್ರಿಸಿದ್ದಾರೆ. ಅವರು ಹೊಸದಾಗಿ ಹೆಣೆದು ಪ್ರಯೋಗಿಸಿರುವ ಪದ ‘ನಲ್ಮಕ್ಕಳು’ ಕನ್ನಡದ ಒಲ್ಮೆ. ಅದು ಮಕ್ಕಳ ಆನಂದ ಪ್ರೀತಿ ಸೌಂದರ್ಯದ ಮನೋಹರ ಕಾವ್ಯಾಭಿವ್ಯಕ್ತಿ.

ಕೊರಳಿಂಚರದಿ

ಪಕ್ಕಿಗಳನಣಕಿಸುವ ನಲ್ಮಕ್ಕಳಿಂದಮಾ

ಸಗ್ಗದೂರನೆ ಸೂರೆಗೊಂಡಂತೆ ಮೆರೆದುದಯ್

ನಿಚ್ಚಿ ಸೊಗದಾವಾಸದೋಲ್, ಚಕ್ರವರ್ತಿಯದಕ್ಕೆ

ದಶರಥಂ.

ಗಿಳಿವಿಂಡಕ್ಷತೆ

ಕುವೆಂಪು ಅವರು ಭಾದ್ರಪದದಲ್ಲಿ ಗೌರಿ ಗಣೇಶರು ‘ಶ್ರಾವಣ ನೀರದ ನೀಲ ರಥದಲಿ’ ಆಗಮಿಸುವ ಸಂಭ್ರಮವನ್ನು ಪ್ರಕೃತಿಯ ಪ್ರತಿಮೆಗಳಿಂದ ಅನನ್ಯವಾಗಿ ವರ್ಣಿಸಿದ್ದಾರೆ. ಬನ ದೇವಿಯು ಆ ಮುಗಿಲಿನ ತೇರಿಗೆ ಬೆಳ್ಳಕ್ಕಿಯ ಸಾಲಿನ ಹೂ ಮಾಲೆಯ ತೋರಣ ಕಟ್ಟಿದ್ದಾಳೆ. ಕೊಕ್ಕಿನ ಕುಂಕುಮ ಬೆರೆಸಿದ ಹಸುರಿನ ಗಿಳಿವಿಂಡಿನ ಅಕ್ಷತೆ ಎರಚಿದ್ದಾಳೆ ಎಂದು ನವನವೀನ ಪ್ರತಿಮೆಗಳಲ್ಲಿ ಚಿತ್ರಿಸಿದ್ದಾರೆ. ಅವರ ಪ್ರತಿಭಾ ದೃಷ್ಟಿಗೆ ಗಿಳಿಗಳ ಗುಂಪುಗಳ ಇಳಿದಾಟ ‘ಗಿಳಿವಿಂಡಕ್ಷತೆ’ಯಾಗಿ ಗೋಚರಿಸಿದೆ.

‘ಕೊಕ್ಕಿನ ಕುಂಕುಮ ವೆರಸಿದ ಪಸುರಿನ

ಗಿಳಿವಿಂಡಕ್ಷತೆ;

ತಳಿವಳು ಬನದೇವಿ,

ಹೊಸ ಅತಿಥಿಯನೋವಿ.’

(ಗಣೇಶ ಗಾಥೆ- ಅಗ್ನಿಹಂಸ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.