ಕುವೆಂಪು
ಕೋರೆದಿಂಗಳ್ (ನಾ). ವಕ್ರಚಂದ್ರ; ಬಾಲಚಂದ್ರ
ರಾಮಚಂದ್ರನು ಶಿವಸಹಿತ ಶಕ್ತ್ಯಾಯುಧವನ್ನು ಬಿಡಲು ಕುಂಭಕರ್ಣನ ತಲೆಗೆ ತಾಗಿ, ಅವನ ಶಿರ ಭೂಮಿಗೆ ಉರುಳುತ್ತದೆ. ಆಗ ಕುಂಭಕರ್ಣನಿಗೆ ಆದ ಅನುಭವವನ್ನು ಕವಿ ಹೀಗೆ ಬಣ್ಣಿಸಿದ್ದಾರೆ.
ತಿರೆನುಗ್ಗಿತಾಗಸಕೆ, ತತ್ತರಿಸಿ
ರವಿಯಬಿಂಬಂ ತಾಗಿದುದು ಶಶಿಯ ಬಿಂಬಕ್ಕೆ.
ತುಂಬಿದುದು ವರ್ಣವರ್ಣ ವಿಚಿತ್ರಮೊರ್ ಜ್ಯೋತಿ
ಭುವನಾಂಡಮಂ ನಾದಮಯ ವಾಯುಮಂಡಲಂ
ನಕ್ಷತ್ರ ವೃಷ್ಟಿಮಯ ಮಾದತ್ತು, ಹಬ್ಬಿದುವು
ಹೊಗೆ ಬೆಂಕೆಗಳ್, ನೀಲಿಗೆಂಪುಗಳ್, ಸೂರ್ಯ ಬಿಂಬಂ
ಬಡಿದ ರಭಸಕೆ ಮುರಿದ ರಭಸಕೆ ಮುರಿದ ಕೋಡಿನ ಕೋರೆದಿಂಗಳ್
ತಿವಿಯೆ, ಸೀಳಿದು, ಪಡವಿ ಪುಡಿವೋಯ್ತು.
ಕವಿ ಮೇಲಿನ ಕಲ್ಪನಾ ಚಿತ್ರದಲ್ಲಿ ವಿಶ್ವದ ಅಲ್ಲೋಲ ಕಲ್ಲೋಲವನ್ನು ಕಡೆದಿಟ್ಟಿದ್ದಾರೆ. ಸೂಯಬಿಂಬ ಬಡಿದ ರಭಸಕ್ಕೆ ವಕ್ರಚಂದ್ರನ ಕೋಡುಮುರಿಯಿತು! ಅದು ತಿವಿದಾಗ ಭೂಮಿ ಪುಡಿಯಾಯಿತು! ಕುಂಭಕರ್ಣನ ವಧೆ ಅಸಾಧಾರಣವಾದುದು. ಆ ಮಹಾಶರೀರ ಕೆಡೆದುಬಿದ್ದಾಗ ಉಂಟಾದ ಭಯಂಕರತೆಯ ತೀವ್ರತೆಗೆ ಪ್ರತಿಮೆಯಾಗಿ ಕೋರೆದಿಂಗಳು, ಅದರ ಕೋಡು, ಅದು ಭೂಮಿಯನ್ನು ತಿವಿದದ್ದು ಒಂದು ಅತಿಶಯ ಘೋರ ಕ್ರಿಯೆ ಕಣ್ಮುಂದೆ ಸುಳಿಯುವಂತೆ ಮಾಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.