ADVERTISEMENT

ಭಾನುವಾರ ಪುರವಣಿಯ ನಕ್ಷತ್ರಪಟ: ರಕ್ತಸಿಕ್ತ ‘ಮಹಾ ಹತ್ಯೆ’ಗಳತ್ತ ಹೊರಳು ನೋಟ...

ಕೆ.ಓಂಕಾರ ಮೂರ್ತಿ
Published 17 ಜುಲೈ 2022, 0:15 IST
Last Updated 17 ಜುಲೈ 2022, 0:15 IST
ಗಾಂಧೀಜಿ
ಗಾಂಧೀಜಿ   

ಕೆಲವು ದಿನಗಳ ಹಿಂದೆಯಷ್ಟೇ ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಹತ್ಯೆ ನಡೆಯಿತು. ಇದೇನು ಜಗತ್ತಿನ ರಾಜಕೀಯ ನಾಯಕನ ಮೊದಲ ಹತ್ಯೆಯೇನೂ ಅಲ್ಲ. ಅದಕ್ಕೊಂದು ದೊಡ್ಡ ಕರಾಳ ಚರಿತ್ರೆಯೇ ಇದೆ. ಆ ಪುಟಗಳನ್ನು ತಿರುವಿದಾಗ...

‘ಯು ಟೂ ಬ್ರೂಟಸ್‌!!!

ನಂಬಿಕಸ್ತನಿಂದಲೇ ಇರಿತಕ್ಕೆ ಒಳಗಾಗಿ ಕೊನೆಯುಸಿರು ಬಿಡುವ ಮುನ್ನ ಜೂಲಿಯಸ್‌ ಸೀಸರ್‌ ಈ ರೀತಿ ಹೇಳಿದ್ದರು. ವಿಲಿಯಂ ಷೇಕ್ಸ್‌ಪಿಯರ್‌ ಬರೆದಿರುವ ‘ಜೂಲಿಯಸ್‌ ಸೀಸರ್‌’ ನಾಟಕದಲ್ಲಿ ಈ ಪ್ರಸ್ತಾಪವಿದೆ.

ADVERTISEMENT

ಕ್ರಿಸ್ತಪೂರ್ವ 44ರಲ್ಲಿ ರೋಮ್‌ನ ಸರ್ವಾಧಿಕಾರಿ, ಮಿಲಿಟರಿ ಜನರಲ್‌ ಸೀಸರ್‌ನನ್ನು ಆತನ ನಂಬಿಕಸ್ತ ಮಾರ್ಕಸ್‌ ಬ್ರೂಟಸ್‌ ಸೇರಿದಂತೆ ಸೆನೆಟರ್‌ಗಳೇ ಇರಿದು ಕೊಂದು ಹಾಕಿದ್ದರು. ಅಧಿಕಾರದ ಲಾಲಸೆಯೇ ಕೊಲೆಯ ಪಿತೂರಿಗೆ ಕಾರಣವಾಗಿತ್ತು.

ಇಂಥ ‘ಮಹಾ ಹತ್ಯೆ’ಗಳ ಇತಿಹಾಸವೇ ದೊಡ್ಡದು. ಅವೆಲ್ಲಾ ದುರಂತ ಅಂತ್ಯಗಳು, ದುರಂತ ಕಥೆಗಳು. ಮೊನ್ನೆ ಮೊನ್ನೆ ಯಾಮಾಗಾಮಿ ಟೆಟ್ಸುಯಾ ಎಂಬಾತ ಹಾರಿಸಿದ ಎರಡು ಗುಂಡುಗಳು ಜಪಾನ್ ದೇಶದ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ದೇಹ ಹೊಕ್ಕಿ ಕೊಂದು ಹಾಕಿದವು. ಹಂತಕ ಮನೆಯಲ್ಲೇ ಪಿಸ್ತೂಲ್‌ ತಯಾರಿಸಿದ್ದ ಎಂಬ ಮಾಹಿತಿ ಹೊರಬಿತ್ತು. ಧಾರ್ಮಿಕ ನಾಯಕನ್ನು ಕೊಲ್ಲಲು ಬಂದಿದ್ದ, ತಪ್ಪಿ ಅಬೆಯತ್ತ ಗುಂಡು ಹಾರಿತು ಎನ್ನಲಾಗಿದೆ.ಅದೇನೇ ಇರಲಿ;ಜಗತ್ತು ಮತ್ತೆ ಬೆಚ್ಚಿಬಿದ್ದಿದೆ.

ಇತಿಹಾಸದಲ್ಲಿ ರಾಜ, ಮಹಾರಾಜರು, ಚಕ್ರವರ್ತಿಗಳು ಸಾಮ್ರಾಜ್ಯಗಳನ್ನು ಕೈವಶ ಮಾಡಿಕೊಳ್ಳಲು ಯುದ್ಧಭೂಮಿಯಲ್ಲಿ ಪರಸ್ಪರ ಬಡಿದಾಡಿಕೊಂಡು ವೀರ ಮರಣ ಅಪ್ಪಿದ್ದನ್ನೂಮೋಸದಿಂದ ಬೆನ್ನಿಗೆ ಚೂರಿಹಾಕಿದ್ದನ್ನೂ ಕೇಳಿದ್ದೇವೆ. ಆದರೆ, ಆಧುನಿಕ ಜಗತ್ತಿನ ಆಡಳಿತದ ಚುಕ್ಕಾಣಿ ಹಿಡಿದವರು, ಹಿಡಿಯುವ ಹಾದಿಯಲ್ಲಿರುವವರು, ಹೋರಾಟಗಾರರನ್ನು ಅಧಿಕಾರದ ಲಾಲಸೆಯಿಂದಲೋ, ಸೈದ್ಧಾಂತಿಕ ವಿರೋಧ, ಇನ್ಯಾವುದೋ ದ್ವೇಷ, ಯಾರೋ ಕ್ರಾಂತಿಕಾರಿಯ ಆಕ್ರೋಶಕ್ಕೋ, ಭಯೋತ್ಪಾದಕರ ಗುಂಡಿಗೋ, ಬಾಂಬ್‌ ದಾಳಿಗೋ ಬಲಿ ತೆಗೆದುಕೊಳ್ಳಲಾಗಿದೆ. ಆಗಾಗ್ಗೆ ರಕ್ತಸಿಕ್ತ ಅಧ್ಯಯನಗಳ ಪುಟಗಳು ತೆರೆದುಕೊಳ್ಳುತ್ತಲೇ ಇರುತ್ತವೆ.

ಜಪಾನ್‌ ದೇಶದ ಮಟ್ಟಿಗೆ ಪ್ರಧಾನಿ ಆಗಿದ್ದವರ ಹತ್ಯೆ ಹೊಸದೇನಲ್ಲ. ಏಕೆಂದರೆ ಶಿಂಜೋ ಅಬೆ ಅವರ ದುರಂತ ಅಂತ್ಯಕ್ಕೂ ಮುನ್ನ ನಾಲ್ವರು ಮಾಜಿ ಪ್ರಧಾನಿಗಳ ಹತ್ಯೆ ನಡೆದಿತ್ತು. ಅಬೆ 2006–07, 2012–2020ರ ಅವಧಿಯಲ್ಲಿ ಅಬೆ ಪ್ರಧಾನಿಯಾಗಿದ್ದರು. ಹಂತಕನ ಗುಂಡಿಗೆ ಬಲಿಯಾದಾಗಲೂ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ಭಾರತದೊಂದಿಗೆ ತುಂಬಾ ಆತ್ಮೀಯವಾಗಿದ್ದರು. ಮೂವರುವ್ಯಕ್ತಿಗಳನ್ನು ಮಾತ್ರ ಅಬೆತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಫಾಲೋ ಮಾಡುತ್ತಿದ್ದರು.ಅವರಲ್ಲಿ ಒಬ್ಬರು ಪ್ರಧಾನಿ ನರೇಂದ್ರ ಮೋದಿ.ಭಾರತದಲ್ಲೂ ಶೋಕಾಚರಣೆ ನಡೆಯಿತು.

ಹೊರ ದೇಶಗಳ ಮಹಾನ್‌ ನಾಯಕರ ಹತ್ಯೆಯ ಬೆನ್ನತ್ತುವ ಮುನ್ನ ನಮ್ಮ ದೇಶದ ಮೂವರು ಮಹಾನ್‌ ನಾಯಕರ ಹತ್ಯೆಯತ್ತ (ಅಸಾಸಿನೇಷನ್‌) ಒಮ್ಮೆ ಕಣ್ಣು ಬೀರೋಣ.

ಶಾಂತಿಯ ದೂತನಿಗೆ ಗುಂಡಿಟ್ಟಿದ್ದ ಗೋಡ್ಸೆ: ಭಾರತ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಜೀವನವನ್ನೇ ಮುಡುಪಾಗಿಟ್ಟು, ಆ ಗುರಿ ಸಾಧಿಸಿ ಶಾಂತಿ ದೂತ ಎಂದೇ ಕರೆಸಿಕೊಂಡಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರಂಥವರೂ ದುಷ್ಟ ಶಕ್ತಿಗಳಿಂದ ಪಾರಾಗಲು ಸಾಧ್ಯವಾಗಲಿಲ್ಲ. 1948ರ ಜನವರಿ 30ರಂದು ದೆಹಲಿಯಲ್ಲಿ ಗಾಂಧಿ ತಾತನನ್ನು ನಾಥೂರಾಮ್‌ ಗೋಡ್ಸೆ ಸನಿಹದಿಂದಲೇ ಗುಂಡು ಹಾರಿಸಿ ಕೊಂದು ಬಿಟ್ಟ. ‘ಹೇ ರಾಮ್‌’ ಎನ್ನುತ್ತಲೇ ಗಾಂಧಿ ಕೊನೆಯುಸಿರೆಳೆದಿದ್ದರು. ಗೋಡ್ಸೆಯನ್ನು ಬಂಧಿಸಿ ಗಲ್ಲಿಗೇರಿಸಲಾಯಿತು.

ಅದು ಸ್ವಾತಂತ್ರ್ಯ ಭಾರತದ ಮೊದಲ ‘ಮಹಾನ್ ನಾಯಕ’ರೊಬ್ಬರ ಹತ್ಯೆ. ‘ಅಖಂಡ ಭಾರತ ವಿಭಜನೆಯಾಗಿ ಭಾರತ–ಪಾಕಿಸ್ತಾನ ಇಬ್ಭಾಗವಾಗಲು ಗಾಂಧಿ ಕಾರಣ, ವಿಪರೀತವಾಗಿ ಮುಸ್ಲಿಮರಓಲೈಕೆ ಮಾಡುತ್ತಿದ್ದಾರೆ’ ಎಂಬಗೋಡ್ಸೆಯಆಲೋಚನೆ ಆತನನ್ನು ಈ ಕೃತ್ಯದಲ್ಲಿ ತೊಡಗಿಸಿತ್ತು.

ಅಂಗರಕ್ಷಕರೇ ಗುಂಡು ಹಾರಿಸಿದರು: ಪ್ರಧಾನಿಯಾಗಿ ‘ಐರನ್‌ ಲೇಡಿ’ ಎಂದೇ ಕರೆಸಿಕೊಳ್ಳುತ್ತಿದ್ದ ಇಂದಿರಾ ಗಾಂಧಿ ಅವರನ್ನು ದೆಹಲಿಯ ಸಫ್ದರ್‌ಜಂಗ್‌ ರಸ್ತೆಯ ನಿವಾಸದ ಮುಂದೆಯೇ ಅಂಗರಕ್ಷಕರೇ ಹತ್ಯೆ ಮಾಡಿದ್ದರು. ಬೆಳ್ಳಂಬೆಳಿಗ್ಗೆ ಇಡೀ ದೇಶ ಆಘಾತಕ್ಕೆ ಒಳಗಾಗಿತ್ತು. ದೇಶದ ಮೊದಲ ಮಹಿಳಾ ಪ್ರಧಾನಿಯ ದಾರುಣ ಅಂತ್ಯವಾಯಿತು. ಅಮೃತಸರದಲ್ಲಿನ ಸಿಖ್ಖರ ಪವಿತ್ರ ಸ್ವರ್ಣ ಮಂದಿರದ ಮೇಲೆ ‘ಆಪರೇಷನ್‌ ಬ್ಲೂಸ್ಟಾರ್‘ ಕಾರ್ಯಾಚರಣೆ ಘೋಷಿಸಿ ಖಲಿಸ್ತಾನಿ ಉಗ್ರರ ಸದೆಬಡಿದ ಗಟ್ಟಿಗಿತ್ತಿಇಂದಿರಾ ಅವರನ್ನು 1984ರ ಅಕ್ಟೋಬರ್‌ 31ರಂದು ಬೆಳಿಗ್ಗೆ ಹತ್ಯೆ ಮಾಡಲಾಗಿತ್ತು. ಬರೋಬ್ಬರಿ 33 ಗುಂಡುಗಳು ಅವರ ದೇಹ ಹೊಕ್ಕಿದ್ದವು. ಘಟನೆಯ ನಂತರ ಹಂತಕರು ಶರಣಾದರು.

ಮಾನವ ಬಾಂಬ್‌: ಇಂದಿರಾ ಹತ್ಯೆ ನಂತರ ಪ್ರಧಾನಿ ಹುದ್ದೆಗೇರಿದವರು ಅವರ ಪುತ್ರ ರಾಜೀವ್‌ ಗಾಂಧಿ. 1991ರ ಮೇ 21ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಅವರನ್ನು ಎಲ್‌ಟಿಟಿಇ ಉಗ್ರರು ಮಾನವ ಬಾಂಬ್‌ ಸ್ಫೋಟಿಸಿ ಹತ್ಯೆ ಮಾಡಿದ್ದರು. ರಾಜೀವ್‌ ದೇಹ ಛಿದ್ರವಾಗಿತ್ತು.

ದೇಶದ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಅವರು, ಜನಾಂಗೀಯ ಕಲಹಕ್ಕೆ ಸಿಲುಕಿದ್ದ ಶ್ರೀಲಂಕಾಕ್ಕೆ 1987ರಲ್ಲಿ ಭಾರತೀಯ ಶಾಂತಿಪಾಲನಾ ಪಡೆ (ಐಪಿಕೆಎಫ್‌) ಕಳುಹಿಸಿದ್ದೇ ಹತ್ಯೆಗೆ ಕಾರಣ ಎಂಬುದು ನಂತರದ ದಿನಗಳಲ್ಲಿ ಗೊತ್ತಾಯಿತು.

‘ವಿಶ್ವದ ದೊಡ್ಡಣ್ಣ’ ಅಮೆರಿಕ ಅಧ್ಯಕ್ಷರೂ ಹತ್ಯೆಯಿಂದ ಪಾರಾಗಲು ಸಾಧ್ಯವಾಗಿಲ್ಲ. ಅಬ್ರಹಾಂ ಲಿಂಕನ್‌, ಜಾನ್‌ ಎಫ್‌. ಕೆನಡಿ ಅವರಂಥ ಮಹಾನಾಯಕರು ದುರಂತ ಅಂತ್ಯ ಕಂಡರು. 40ನೇ ಅಧ್ಯಕ್ಷ ರೊನಾಲ್ಡ್ ರೇಗನ್‌ ಹತ್ಯೆಗೂ ಯತ್ನ ನಡೆದಿತ್ತು. ಸ್ವಲ್ಪದಲ್ಲಿ ಬಚಾವ್‌ ಆಗಿದ್ದರು.

16ನೇ ಅಧ್ಯಕ್ಷರಾಗಿದ್ದ ಲಿಂಕನ್‌ ಅವರನ್ನು 1865ರ ಏಪ್ರಿಲ್‌ 14ರಂದು ಬರ್ಬರವಾಗಿ ಹತ್ಯೆ ಮಾಡಲಾಯಿತು. ಅದು ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ ಮಹಾನ್‌ ಹತ್ಯೆ. ವಾಷಿಂಗ್ಟನ್‌ನ ಫೋರ್ಡ್ಸ್ ರಂಗಮಂದಿರಕ್ಕೆ ನಾಟಕ ನೋಡಲು ಬಂದಿದ್ದ ಅವರನ್ನು ನಟ ಜಾನ್‌ ವಿಲ್ಕ್ಸ್‌ ಬೂಥ್‌ ಎಂಬಾತ ಗುಂಡಿಟ್ಟು ಹತ್ಯೆ ಮಾಡಿದ್ದ. ಲಿಂಕನ್‌ಅಮೆರಿಕದಲ್ಲಿ ಗುಲಾಮಗಿರಿ ನಿಷೇಧಿಸುವ ಕಾನೂನು ತಂದು ಜಮೀನ್ದಾರರ ವಿರೋಧ ಕಟ್ಟಿಕೊಂಡಿದ್ದರು. ಕಪ್ಪು ವರ್ಣೀಯರಿಗೆ ಮತದಾನ ಹಕ್ಕು ಕೊಟ್ಟಿದ್ದರು. ಅದೇ ಲಿಂಕನ್‌ ಅವರಿಗೆ ತಿರುಗೇಟಾಯಿತು ಎಂಬುದು ನಂತರದ ವಿಶ್ಲೇಷಣೆ.

1881ರ ಜುಲೈ 2ರಂದು ಅಮೆರಿಕದ 20ನೇ ಅಧ್ಯಕ್ಷ ಜೇಮ್ಸ್‌ ಗಾರ್‌ಫೀಲ್ಡ್‌ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. 79 ದಿನಗಳ ನಂತರ ಪ್ರಾಣ ಬಿಟ್ಟರು. ತನಗೆ ಯಾವುದೇ ಸ್ಥಾನಮಾನ ನೀಡಲಿಲ್ಲ ಎಂಬ ಕಾರಣಕ್ಕೆ ಚಾರ್ಲ್ಸ್‌ ಎಂಬಾತ ಈ ಹತ್ಯೆಮಾಡಿದ್ದ. ಅಮೆರಿಕದ 25ನೇ ಅಧ್ಯಕ್ಷರಾಗಿದ್ದ ವಿಲಿಯಂ ಮೆಕೆನ್ಲಿ ಅವರನ್ನು 1901ರ ಸೆಪ್ಟೆಂಬರ್‌ನಲ್ಲಿನ್ಯೂಯಾರ್ಕ್‌ನಲ್ಲಿ ಗುಂಡಿಟ್ಟು ಸಾಯಿಸಲಾಯಿತು. ಆರ್ಥಿಕ ಹಿಂಜರಿತದಲ್ಲಿ ಕೆಲಸ ಕಳೆದುಕೊಂಡಿದ್ದ ಲಿಯೋನ್‌ ಜೋಲ್ಗಾಸ್‌ ಸಿಟ್ಟಿಗೆದ್ದು ಈ ಹತ್ಯೆ ಮಾಡಿದ್ದ.

35ನೇ ಅಧ್ಯಕ್ಷರಾಗಿದ್ದ ಕೆನಡಿ ಅವರನ್ನು 1963ರ ನವೆಂಬರ್‌ 22ರಂದು ಟೆಕ್ಸಾಸ್‌ ರಾಜಧಾನಿ ಡಲ್ಲಾಸ್‌ನ ರಸ್ತೆಯಲ್ಲಿ ಹತ್ಯೆ ಮಾಡಿದ್ದರು. ಆಡಳಿತದಲ್ಲಿದ್ದಾಗಲೇ ಹತ್ಯೆಯಾದ ಅಮೆರಿಕದ ನಾಲ್ಕನೇ ಅಧ್ಯಕ್ಷ. ಚುನಾವಣಾ ರ‍್ಯಾಲಿಯಲ್ಲಿ ಭಾರಿ ಜನಸ್ತೋಮದ ನಡುವೆ ತೆರೆದ ಕಾರಿನಲ್ಲಿ ತೆರಳುತ್ತಿದ್ದಾಗ ಈ ದುರಂತ ನಡೆದಿತ್ತು. ಒಂದು ಗುಂಡು ತಲೆಗೆ, ಮತ್ತೊಂದು ಗುಂಡು ಕೊರಳಿಗೆ ನುಸುಳಿತ್ತು. ಸಾವಿಗೆ ಕಾರಣ ಗೊತ್ತಾಗಲೇ ಇಲ್ಲ. ಪೊಲೀಸರ ವಶದಲ್ಲಿದ್ದ ಹಂತಕ ಲೀ ಹಾರ್ವೆ ಓಸ್ವಾಲ್ಡ್‌ನನ್ನು ಜಾಕ್‌ ರುಬಿ ಎಂಬಾತ ಗುಂಡಿಟ್ಟು ಹತ್ಯೆ ಮಾಡಿದ್ದ!

ಅಮೆರಿಕದ ಮಾನವ ಹಕ್ಕುಗಳ ಹೋರಾಟಗಾರ ಮಾರ್ಟಿನ್‌ ಲೂಥರ್ ಕಿಂಗ್‌ ಜೂನಿಯರ್‌ ಅವರನ್ನು 1968ರ ಏಪ್ರಿಲ್‌ 4ರಂದು ಹೋಟೆಲ್‌ನ ಬಾಲ್ಕನಿಯಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಯಿತು. ಅವರು ವರ್ಣಭೇದ ನೀತಿ ವಿರುದ್ಧ, ಬಿಳಿಯರ ವಿರುದ್ಧ ದೊಡ್ಡ ಹೋರಾಟ ರೂಪಿಸಿದ್ದರು. ಕಪ್ಪು ವರ್ಣೀಯರನ್ನು ಒಂದುಗೂಡಿಸಲು ಪ್ರಯತ್ನ ನಡೆಸಿದ್ದರು.

ಅಷ್ಟೇ ಏಕೆ; ಪಕ್ಕದ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ನಾಯಕರನ್ನೂ ಹತ್ಯೆ ಮಾಡಲಾಗಿದೆ. ಬಾಂಗ್ಲಾದೇಶದ ಪಿತಾಮಹ ಶೇಖ್‌ ಮುಜಿಬರ್‌ ರೆಹಮಾನ್‌ ಅವರನ್ನು 1975ರ ಆಗಸ್ಟ್‌ 15ರಂದು ಢಾಕಾದಲ್ಲಿ ಗುಂಡಿಟ್ಟು ಸಾಯಿಸಲಾಯಿತು. ಮೊದಲ ಅಧ್ಯಕ್ಷ, ಮೊದಲ ಪ್ರಧಾನಿಯಾಗಿ ಅವರು ಕಾರ್ಯನಿರ್ವಹಿಸಿದ್ದರು. ಆ ದೇಶದ ಅಧ್ಯಕ್ಷರಾಗಿದ್ದ ಜಯೂರ್‌ ರೆಹಮಾನ್‌ ಅವರನ್ನು 1981ರಲ್ಲಿ ಹತ್ಯೆ ಮಾಡಲಾಯಿತು.

ಪಾಕಿಸ್ತಾನದ ಮೊದಲ ಪ್ರಧಾನಿ ಲಿಯಾಖತ್‌ ಅಲಿ ಖಾನ್‌ ಅವರನ್ನು 1951ರ ಅಕ್ಟೋಬರ್‌ 16ರಂದು ರಾವಲ್ಪಿಂಡಿಯಲ್ಲಿ ಪ್ರಚಾರದಲ್ಲಿ ತೊಡಗಿದ್ದಾಗ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದರು. 2007ರ ಡಿಸೆಂಬರ್‌ 27ರಂದು ರಾವಲ್ಪಿಂಡಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಪಾಕ್‌ ಮಾಜಿ ಪ್ರಧಾನಿ ಬೆನಜಿರ್‌ ಭುಟ್ಟೊ ಅವರು ಆತ್ಮಾಹುತಿ ದಾಳಿಗೆ ಬಲಿಯಾದರು. ಒಂಬತ್ತು ವರ್ಷಗಳ ಬಳಿಕ ಪಾಕ್‌ಗೆ ಬಂದು ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದರು. ಇಸ್ಲಾಮಿಕ್‌ ಉಗ್ರರು ಬಾಂಬ್‌ ದಾಳಿ ನಡೆಸಿದ್ದರು.

ನೇಪಾಳದ ರಾಜ ಬೀರೇಂದ್ರ,ಶ್ರೀಲಂಕಾದ ರಣಸಿಂಘೆ ಪ್ರೇಮದಾಸ ಸೇರಿದಂತೆ ಹಲವು ದೇಶಗಳ ನಾಯಕರ ಹತ್ಯೆ ನಡೆದಿದೆ. ರಾಜಕೀಯ, ದ್ವೇಷ, ಅಧಿಕಾರ ಲಾಲಸೆ ಹತ್ಯೆಗೆ ಕಾರಣ. ಈ ರಕ್ತಸಿಕ್ತ ಚರಿತ್ರೆಗೆ ಅಂತ್ಯವಿದೆಯೇ?!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.