ADVERTISEMENT

ಬೆಳಗಾವಿ ಜಿಲ್ಲೆಯ ನವಲಿಹಾಳದ ‘ಗಾಂಧಿ ಬಾವಿ’ ಇದು

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 0:11 IST
Last Updated 25 ಜನವರಿ 2026, 0:11 IST
<div class="paragraphs"><p>ಬೆಳಗಾವಿ ಜಿಲ್ಲೆಯ ನವಲಿಹಾಳದ ‘ಗಾಂಧಿ ಬಾವಿ’ ಇದು</p></div>

ಬೆಳಗಾವಿ ಜಿಲ್ಲೆಯ ನವಲಿಹಾಳದ ‘ಗಾಂಧಿ ಬಾವಿ’ ಇದು

   

ಸ್ವಾತಂತ್ರ್ಯಪೂರ್ವದಲ್ಲಿ ಬರಗಾಲಕ್ಕೆ ಕೆರೆ ಮತ್ತು ಬಾವಿಗಳೇ ಪರಿಹಾರವಾಗಿದ್ದವು. ಸ್ವಾತಂತ್ರ್ಯ ಸಂಗ್ರಾಮದ ಕಹಳೆ ಊದುವುದರೊಂದಿಗೆ ಮಹಾತ್ಮ ಗಾಂಧಿ ಅಸ್ಪೃಶ್ಯತೆ ನಿವಾರಣೆ, ಗ್ರಾಮಗಳ ಸ್ವಾವಲಂಬನೆಗೆ ಹೆಚ್ಚು ಒತ್ತು ನೀಡಿದ್ದರು. ಗಾಂಧೀಜಿ ಬರಗಾಲದ ಸಂದರ್ಭದಲ್ಲಿ ಗ್ರಾಮಗಳ ಕಷ್ಟ ನಿವಾರಿಸಲು ಪ್ರಯತ್ನಿಸಿದ ಉದಾಹರಣೆಗಳು ನೂರಾರು. ಅಂತಹ ಪ್ರಯತ್ನದ ಫಲವೇ ನವಲಿಹಾಳ ಗ್ರಾಮದ ‘ಗಾಂಧಿ ಬಾವಿ’.

ಒಂಬತ್ತು ದಶಕಗಳ ಹಿಂದೆ, ಅಂದರೆ ಮಾರ್ಚ್ 7 ಮತ್ತು 8, 1934. ಆ ಎರಡು ದಿನ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ನವಲಿಹಾಳ ಗ್ರಾಮದ ಜನರಿಗೆ ಅವಿಸ್ಮರಣೀಯ, ಕ್ಷಣಗಳು. ‘ಭಾರತದ ಆತ್ಮ ಹಳ್ಳಿಗಳಲ್ಲಿದೆ’ ಎಂಬ ಧ್ಯೇಯ ಹೊಂದಿದ್ದ ಗಾಂಧೀಜಿಯವರಿಗೆ ತಮ್ಮ ಭೇಟಿಯ ಸಂದರ್ಭದಲ್ಲಿ ನವಲಿಹಾಳದಲ್ಲಿ ಬಾವಿ ಅವಶ್ಯಕತೆ ಅರಿವಿಗೆ ಬಂತು. ಕೂಡಲೇ ಸ್ಥಳೀಯ ಮುಖಂಡರ ಕೈಗೆ ₹665 ದೇಣಿಗೆಯನ್ನಿತ್ತು ಬಾವಿ ತೋಡಿಸಲು ಹೇಳಿದರು.

ADVERTISEMENT

ಜಗತ್ತೇ ಹೆಮ್ಮೆ ಪಡುವ ಮಹಾನ್ ಚೇತನ ತಮ್ಮೂರಲ್ಲಿ ಬಾವಿ ತೋಡಿಸಲು ದೇಣಿಗೆ ನೀಡಿದ್ದು ಗ್ರಾಮಕ್ಕೆ ಹೆಮ್ಮೆ ಅನಿಸಿತು. ಹಾಗಾಗಿ ತಮ್ಮದೂ ಒಂದಿಷ್ಟು ಪಾಲು ಇರಲಿ ಎಂದು ಗ್ರಾಮಸ್ಥರೂ ₹400 ದೇಣಿಗೆ ಸಂಗ್ರಹಿಸಿದರು. ಸುತ್ತಮುತ್ತಲಿನ ಪ್ರಭಾವಿ ವ್ಯಕ್ತಿಗಳೂ ದೇಣಿಗೆ ನೀಡಿದರು. ಆಗಿನ ಸರ್ಕಾರ ಬಾವಿ ತೋಡಿಸಲು ₹1,965 ಅನುದಾನ ನೀಡಿತು. ಹೀಗೆ ಒಟ್ಟು ₹4,266 ದೇಣಿಗೆ ಸಂಗ್ರಹವಾಯಿತು. ಗಾಂಧೀಜಿ ಭೇಟಿ ನೀಡಿದ ಎರಡು ದಶಕಗಳ ಬಳಿಕ ಗ್ರಾಮದಲ್ಲಿ ನೀರು ಸೇದುವ 40 ರಿಂದ 50 ಅಡಿ ಆಳದ ಬಾವಿ ಸಿದ್ಧವಾಯಿತು. ಜುಲೈ 12, 1954 ರಂದು ಬಾವಿ ಲೋಕಾರ್ಪಣೆಗೊಂಡಿತು. ಈ ವಿವರ ಬಾವಿಕಟ್ಟೆಯ ಮೇಲೆ ದಾಖಲಿಸಲಾಗಿದೆ.

ಗಾಂಧೀಜಿ ನೀಡಿದ ದೇಣಿಗೆಯಿಂದ ನಿರ್ಮಾಣವಾದ ಬಾವಿಯನ್ನು ಇಲ್ಲಿನ ಜನರು ‘ಗಾಂಧಿ ಬಾವಿ’ಎಂದು ಕರೆಯುತ್ತಾರೆ. ಗ್ರಾಮದ ಹೃದಯಭಾಗದಲ್ಲಿರುವ ‘ಗಾಂಧಿ ಬಾವಿ’ ಗ್ರಾಮಸ್ಥರ ಬಾಯಾರಿಕೆ ನೀಗಿಸುತ್ತಿದೆ. ಗ್ರಾಮ ಪಂಚಾಯಿತಿ ಕೊರೆಯಿಸಿದ ಕೊಳವೆಬಾವಿಯಲ್ಲಿ ನೀರು ಕಡಿಮೆಯಾದರೂ, ಗಾಂಧಿ ಬಾವಿಯಲ್ಲಿ ನೀರು ಬತ್ತಿದ ಉದಾಹರಣೆಯೇ ಇಲ್ಲವಂತೆ. ಗಡಗಡೆ ಮೂಲಕ ಗ್ರಾಮಸ್ಥರು ಬೇಸಿಗೆಯಲ್ಲಿ ಹಗ್ಗ ಇಳಿಬಿಟ್ಟು ನೀರನ್ನು ಸೇದುತ್ತಾರೆ.

ಗಾಂಧಿ ವಾಸ್ತವ್ಯದ ಮನೆ

ಮಾರ್ಚ್ 7 ಮತ್ತು 8, 1934 ರಂದು ಎರಡು ದಿನ ಗುಜರಾತ್ ಮೂಲದ ವ್ಯಾಪಾರಿ ಅಕ್ಷಯಚಂದ ಗುಜ್ಜರ ಎಂಬುವವರ ತೋಟದ ಮನೆಯಲ್ಲಿ ಗಾಂಧೀಜಿ ವಾಸ್ತವ್ಯ ಹೂಡಿದ್ದರು. ಗಾಂಧೀಜಿ ವಾಸವಿದ್ದ ಮನೆಯನ್ನು ಗುಜ್ಜರ ಕುಟುಂಬ ಇದೀಗ ಬಳಸುತ್ತಿಲ್ಲ. ಯಾರೂ ವಾಸವಿರದೇ ಪಾಳು ಬಿದ್ದಿದೆ. ಈ ಮನೆಯಲ್ಲಿ ಗಾಂಧೀಜಿ ಭಾವಚಿತ್ರವೊಂದು ಅನಾಥವಾಗಿ ಕಾಣಿಸುತ್ತದೆ. ಇದೇ ಮನೆಯ ಮುಂದೆ ಗಾಂಧೀಜಿ ಮಾವಿನಸಸಿಯೊಂದನ್ನು ನೆಟ್ಟಿದ್ದರು. ಇದೀಗ ಹೆಮ್ಮೆರವಾಗಿ ಗಾಂಧಿ ವಾಸವಿದ್ದ ಮನೆಗೆ ನೆರಳಾಗಿದೆ. ಈ ಮನೆಯನ್ನು ಸಂರಕ್ಷಿಸಿ ಸ್ಮಾಕರವನ್ನಾಗಿ ಮಾಡಬೇಕು ಎಂಬ ಬೇಡಿಕೆ ಗ್ರಾಮಸ್ಥರದು. ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲೀ ಇತ್ತ ಗಮನ ಹರಿಸುತ್ತಲೇ ಇಲ್ಲ.

ಗಾಂಧೀಜಿ ನವಲಿಹಾಳದಲ್ಲಿ ಇನ್ನೊಂದು ಮಹತ್ತರವಾದ ಕಾರ್ಯ ಮಾಡಿದ್ದರು, ಅದುವೇ ಮಿಷನ್ ಹಾಸ್ಪಿಟಲ್. ಗ್ರಾಮದ ಬಡಜನರಿಗೆ ಉಚಿತ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಕೊಲ್ಹಾಪುರದ ರಾಜಾರಾಮ ಮಹಾರಾಜರು ಹಾಗೂ ಗಾಂಧೀಜಿ ಪ್ರಯತ್ನದಿಂದ ಗ್ರಾಮದ ಮನೆಯೊಂದರಲ್ಲಿ ಉಚಿತ ಆಸ್ಪತ್ರೆ ತೆರೆಯಲಾಗಿತ್ತು. ಕಾಲಾಂತರದಲ್ಲಿ ಈ ಆಸ್ಪತ್ರೆ ಮಹಾರಾಷ್ಟ್ರದ ಮಿರಜ್ ಪಟ್ಟಣಕ್ಕೆ ಸ್ಥಳಾಂತರವಾಯಿತು. ಇಂದಿಗೂ ಆ ಮನೆಯನ್ನು ಸ್ಥಳೀಯರು ‘ದವಾಖಾನಿ ಮನೆ’ ಎಂದು ಕರೆಯುತ್ತಾರೆ.

ನವಲಿಹಾಳದಲ್ಲಿ ಗಾಂಧೀಜಿಯ ಹೆಜ್ಜೆ ಗುರುತುಗಳನ್ನು ರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಕಾಯ್ದುಕೊಂಡು ಹೋಗಬೇಕಿದ್ದ ಜಿಲ್ಲಾಡಳಿತ ನಿರ್ಲಕ್ಷ್ಯ ಮಾಡಿದೆ. ಸ್ಥಳೀಯ ಸರ್ಕಾರಿ ಶಾಲೆಯ ಶಿಕ್ಷಕ ವಿಶ್ವನಾಥ ಧುಮಾಳ ಎಂಬುವವರು ನವಲಿಹಾಳದಲ್ಲಿ ಗಾಂಧೀಜಿ ಭೇಟಿ ನೀಡಿದ ಬಗ್ಗೆ ‘ನಮ್ಮೂರಿನಲ್ಲಿ ಗಾಂಧೀಜಿ’ ಎಂಬ ಕಿರುಹೊತ್ತಿಗೆ ಪ್ರಕಟಿಸಿ, ಶಾಲಾ ಮಕ್ಕಳಿಗೆ ಹಾಗೂ ಗ್ರಾಮಸ್ಥರಿಗೆ ಉಚಿತವಾಗಿ ಹಂಚುವ ಮೂಲಕ ಇತಿಹಾಸ ಮೆಲುಕು ಹಾಕುವ ಕೆಲಸ ಮಾಡಿದ್ದಾರೆ.

***

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.