ADVERTISEMENT

ಮಲ್ಲಕಂಬಕ್ಕೊಂದೇ ತುಳಸಿಗೇರಿ: ಇದು ಬಾಗಲಕೋಟೆ ಜಿಲ್ಲೆ ತುಳಸಿಗೇರಿ ಮಕ್ಕಳ ಸಾಹಸಗಾಥೆ

ಬಸವರಾಜ ಹವಾಲ್ದಾರ
Published 20 ಏಪ್ರಿಲ್ 2025, 0:50 IST
Last Updated 20 ಏಪ್ರಿಲ್ 2025, 0:50 IST
ಮಲ್ಲಕಂಬ ಪ್ರದರ್ಶನ
ಚಿತ್ರಗಳು: ಇಂದ್ರಕುಮಾರ ದಸ್ತೇನವರ್
ಮಲ್ಲಕಂಬ ಪ್ರದರ್ಶನ ಚಿತ್ರಗಳು: ಇಂದ್ರಕುಮಾರ ದಸ್ತೇನವರ್   

ಪೂರ್ವದಲ್ಲಿ ಸೂರ್ಯ ಆಗಷ್ಟೇ ಕಣ್ಣು ಬಿಡುತ್ತಿದ್ದ. ಶಿವಾನಂದ ಸೈಕಲ್‌ ಏರಿ ತಮ್ಮೂರಿನ ಓಣಿ ಓಣಿಗಳಲ್ಲಿ ‘ಟ್ರಿಣ್‌..ಟ್ರಿಣ್‌...’ ಎಂದು ಬೆಲ್‌ ಬಾರಿಸಿಕೊಂಡು ಹೋಗುತ್ತಿದ್ದ. ಉಳಿದವರು ಆ ಬೆಲ್‌ ಅನ್ನೇ ಸಿಗ್ನಲ್‌ ಎಂದು ಅರ್ಥೈಸಿಕೊಂಡು ಒಬ್ಬೊಬ್ಬರಾಗಿ ಆತನನ್ನು ಹಿಂಬಾಲಿಸಿಕೊಂಡು ಹೊರಟರು. ಆಗ ಹಿರಿಯರಿಬ್ಬರ ಸಂಭಾಷಣೆ ಹೀಗೆ ನಡೆಯುತ್ತಿತ್ತು–‘ಒದಾದಕ್ಕ ಎದ್ದಾಳತಾರೋ, ಬಿಡತಾರೋ ಗೊತ್ತಿಲ್ಲ. ಆದ್ರ ಮಲ್ಲಕಂಬ ಆಡದಕ್ಕ ಮಾತ್ರ ಗಂಟಿ ಹೊಡದಂಗ ಹೋಗ್ತಾರ. ಅವ್ವ-ಅಪ್ಪಾ ಬೈದ್ರೂ ಕಿವ್ಯಾಗ ಬೀಳೋದೆ ಇಲ್ಲ. ಸಾಲಿಗೆ ಒಂಟಿಗಾಲಿನ್ಯಾಗ ಓಡಿ ಹೊಕ್ಕಾರ. ಏನಾದ್ರಗಲಿ ನಮ್ಮೂರಿನ ಹೆಸ್ರ ಜಗತ್ತಿಗೇ ಗೊತ್ತಾಗಂಗ ಮಾಡ್ಯಾರ’.

ಇತ್ತ ಕಡೆ ಶಾಲಾ ಮೈದಾನದತ್ತ ಹೆಜ್ಜೆ ಹಾಕುವ ಭರತ, ಮಂಜುನಾಥ, ಭೀಮಣ್ಣ, ಮುಂತಾದವರು ಸ್ನೇಹಿತರ ಮನೆಗಳತ್ತ ಕೂಗು ಹಾಕುತ್ತಾರೆ. ಕೆಲವರು ತಮ್ಮ ಮಗನನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುವಂತೆ ಕೇಳಿಕೊಂಡರೆ, ಅಲ್ಲೊಬ್ಬರು, ಇಲ್ಲೊಬ್ಬರು ‘ಕೆಲಸ, ಬೊಗಸಿ ಬಿಟ್ಟು ನಸಕಿನ್ಯಾಗಾ ಆಡಲಿಕ್ಕೆ ನೀನ ಹೋಗದಲ್ಲದ ನನ್ನ ಮಗನ್ನೂ ಕರಕೊಂಡ ಹೊಂಟಿಯಾ’ ಎನ್ನುವ ಮಾತು ಪೋಷಕರಿಂದ ಬರುತ್ತಿತ್ತು. ಆದರೆ ಅವರು ಇಂಥ ಮಾತುಗಳನ್ನು ಕಿವಿ ಮೇಲೆ ಹಾಕಿಕೊಳ್ಳುತ್ತಿರಲಿಲ್ಲ.

ಮುಂಜಾನೆ ಆರೂವರೆ ಗಂಟೆಗೆ ಬಾಗಲಕೋಟೆ ತಾಲ್ಲೂಕಿನ ತುಳಸಿಗೇರಿಯ ಶಾಲಾ ಆವರಣದಲ್ಲಿ ಐವತ್ತಕ್ಕೂ ಹೆಚ್ಚು ಮಲ್ಲಕಂಬ ಕ್ರೀಡಾಪಟುಗಳ ಕಲರವವಿತ್ತು. ಅವರೆಲ್ಲ ಯೋಗದೊಂದಿಗೆ ಅಭ್ಯಾಸವನ್ನು ಆರಂಭಿಸಿದರು.

ADVERTISEMENT

ಏಳು ವರ್ಷದಿಂದ ಹಿಡಿದು ಹದಿನಾಲ್ಕು ವರ್ಷದವರೆಗಿನ ವಿದ್ಯಾರ್ಥಿಗಳು ಸರಸರನೇ ಮಲ್ಲಕಂಬದ ತುದಿ ಏರಿದರೆ, ಇನ್ನೊಂದೆಡೆ ವಿದ್ಯಾರ್ಥಿನಿಯರು ಹಗ್ಗ ಹಿಡಿದು ಇಪ್ಪತ್ತು ಅಡಿಯಷ್ಟು ಎತ್ತರವನ್ನು ಕಣ್ಣುಮುಚ್ಚಿ ಕಣ್ಣು ಬಿಡುವುದರೊಳಗೆ ಏರಿ ವಿವಿಧ ಆಸನಗಳನ್ನು ತೋರಿಸಿದರು. ಉಸಿರು ಬಿಗಿ ಹಿಡಿದು ಕುಳಿತ ಪೋಷಕರು ತಮ್ಮ ಮಕ್ಕಳ ಸಾಹಸವನ್ನು ನೋಡುತ್ತಿದ್ದರು. ಮಕ್ಕಳು ಸಾಹಸ ಪ್ರದರ್ಶಿಸುವ ವೇಳೆ ರಕ್ಷಣೆಗೆಂದು ಕೆಳಗಡೆ ಬೆಡ್‌ಗಳನ್ನು ಹಾಕಲಾಗಿತ್ತು. ಆದರೂ, ಮಕ್ಕಳು ಆಯತಪ್ಪಿ ಬಿದ್ದುಬಿಟ್ಟಾರು ಎನ್ನುವ ಉದ್ವೇಗದಲ್ಲಿ ಕಣ್ಣು ಕೀಲಿಸದೇ ಅವರನ್ನೇ ನೋಡುತ್ತಿದ್ದರು. ಅಲ್ಲಿ ಮಕ್ಕಳು ಪ್ರದರ್ಶಿಸಿದ ವಿವಿಧ ಭಂಗಿಯ ಸಾಹಸ ಮೈನವಿರೇಳಿಸುವಂತಿತ್ತು.

ಮಲ್ಲಕಂಬ ಸಾಹಸ ಕ್ರೀಡೆಗಳಲ್ಲಿ ಒಂದು. ಇಂಥ ಕ್ರೀಡೆಗೆ ಸೇರಿಕೊಳ್ಳಲು ಮಕ್ಕಳು, ಸೇರಿಸಲು ಪೋಷಕರು ಹಿಂಜರಿಯುತ್ತಾರೆ. ಆದರೆ, ತುಳಸಿಗೇರಿಯಲ್ಲಿ ಮನೆಗೊಬ್ಬರು ಮಲ್ಲಕಂಬ ಕ್ರೀಡಾಪಟು ಸಿಗುತ್ತಾರೆ. ಗಂಡು, ಹೆಣ್ಣು ಎಂಬ ಭೇದಭಾವ ಇಲ್ಲ. ಕುಸ್ತಿ,
ಕಬಡ್ಡಿ, ಸೈಕ್ಲಿಂಗ್‌ಗೆ ಮಕ್ಕಳನ್ನು ಕಳುಹಿಸುತ್ತಿದ್ದ ಪೋಷಕರು ಈಗ ಮಲ್ಲಕಂಬಕ್ಕೂ ಕಳುಹಿಸುತ್ತಾರೆ.

ಯೋಗಾಸನಗಳನ್ನು ನೆಲದ ಮೇಲೆ ಮಾಡುವುದೇ ಕಷ್ಟ. ಆದರೆ ಇಲ್ಲಿ ಮಕ್ಕಳು ಮಲ್ಲಕಂಬ ಹಾಗೂ ಹಗ್ಗದ ಮೇಲೆ ಪದ್ಮಾಸನ, ಸಂಖ್ಯಾಸನ, ನಟರಾಜಾಸನ, ಪರ್ವತಾಸನ ಸೇರಿದಂತೆ ಹಲವು
ಆಸನಗಳನ್ನು ಪ್ರದರ್ಶಿಸುತ್ತಾರೆ. ಒಂದಾದ ಮೇಲೊಂದರಂತೆ ಆಸನಗಳನ್ನು ಪ್ರದರ್ಶಿಸುತ್ತಲೇ ಇರುತ್ತಾರೆ. ಒಂದೇ ಹಗ್ಗದಲ್ಲಿ ನಾಲ್ಕಾರು ಮಕ್ಕಳು ಒಂದೊಂದು ಆಸನ ಮಾಡಿ ಬೆರಗುಗೊಳಿಸುತ್ತಾರೆ.

ಹಾವೇರಿ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ‘ಕರ್ನಾಟಕ ರಾಜ್ಯ ಅಮೆಚೂರ್ ಮಲ್ಲಕಂಬ ಸಂಸ್ಥೆ’ ನಡೆಸುತ್ತಿರುವ ಸಿಪಿಇಡಿ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದ ಚನ್ನಪ್ಪ ಚನ್ನಾಳ, 2003ರಲ್ಲಿ ತುಳಸಿಗೇರಿಯ ಸರ್ಕಾರಿ ಪ್ರೌಢಶಾಲೆಗೆ ದೈಹಿಕ ಶಿಕ್ಷಣ ಶಿಕ್ಷಕರಾಗಿ ನೇಮಕಗೊಂಡರು. 2004 ರಿಂದ ಇಲ್ಲಿ ಆರಂಭವಾದ ಮಲ್ಲಕಂಬದ ಕ್ರೀಡೆಯ ಸಾಧನೆ ರಾಷ್ಟ್ರದಾದ್ಯಂತ ಹರಡಿಕೊಂಡಿದೆ.

ಮಲ್ಲಕಂಬಕ್ಕೆ ವಿಶೇಷ ದೈಹಿಕ ಸಿದ್ಧತೆ ಹೊಂದಿರಬೇಕಾದ ಅವಶ್ಯಕತೆಯಿಲ್ಲ. ಆದರೆ ಮಾನಸಿಕ ದೃಢತೆ ಹೊಂದಿರಬೇಕು. ಏಕೆಂದರೆ ಮಲ್ಲಕಂಬದಲ್ಲಿ ಹತ್ತುವ ಇಳಿಯುವ ಕಸರತ್ತು, ಹಿಂದೆ–ಮುಂದೆ ಬಾಗುವುದು ಸೇರಿದಂತೆ ವಿವಿಧ ಭಂಗಿಗಳಿವೆ.

ಪ್ರತಿ ವರ್ಷ ಪ್ರಾಥಮಿಕ, ಪ್ರೌಢಶಾಲೆಯ ಮೂವತ್ತರಿಂದ ನಲವತ್ತು ವಿದ್ಯಾರ್ಥಿಗಳು ಮಲ್ಲಕಂಬದ ಕಸರತ್ತಿಗೆ ಮುಂದಾಗುತ್ತಾರೆ. ಶಾಲಾ ಮೈದಾನದಲ್ಲಿ ಮೂರು ಮಲ್ಲಕಂಬಗಳನ್ನು ಸ್ಥಾಪಿಸಲಾಗಿದೆ. ಗ್ರಾಮದಲ್ಲಿ ಐದುನೂರಕ್ಕೂ  ಹೆಚ್ಚು ಮಲ್ಲಕಂಬದ ಕ್ರೀಡಾಪಟುಗಳಿದ್ದಾರೆ. ಗ್ರಾಮದ ಮಕ್ಕಳ ಉಸಿರಿನೊಳಗೆ ಮಲ್ಲಕಂಬ ಸೇರಿಕೊಂಡಿದೆ. ಗ್ರಾಮದ ಹೆಸರನ್ನು ಜಿಲ್ಲಾ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಬೆಳಗಿದ್ದಾರೆ, ಬೆಳಗುತ್ತಿದ್ದಾರೆ.

ಸಾಧನೆಯ ಹಾದಿ...

ಮಾರುತಿ ಬಾರಕೇರ ರಾಷ್ಟ್ರಮಟ್ಟದಲ್ಲಿ ಆರು ಬಾರಿ ಸ್ಥಾನ ಗಳಿಸಿದ್ದಾರೆ. ಸುರೇಶ ಲಾಯಣ್ಣವರ, ವಿಜಯ ಶಿರಬೂರ, ಲಕ್ಷ್ಮಣ ಸೊನ್ನದ, ಮಂಜುನಾಥ ಲಾಯಣ್ಣವರ, ಭೀಮಣ್ಣ ಹಡಪದ ಸೇರಿದಂತೆ ಎಪ್ಪತ್ತಕ್ಕೂ ಹೆಚ್ಚು ಕ್ರೀಡಾಪಟುಗಳು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.

ರಾಜ್ಯಮಟ್ಟದಲ್ಲಿ ಸಮರ್ಥ ಹಡಪದ, ಕಾರ್ತಿಕ ವಾಲೀಕಾರ, ಅನುಪಮಾ ಕೆರಕಲಮಟ್ಟಿ, ರೂಪಾ ಶಿರಬೂರ, ಭರತ ಹಡಪದ, ದೀಪಾ ಶಿರಬೂರ, ಹನಮವ್ವ ಲಾಯಣ್ಣವರ ಸೇರಿದಂತೆ ಹಲವರು ಪದಕಗಳನ್ನು ಗೆದ್ದುಕೊಂಡಿದ್ದಾರೆ.

ಇಲ್ಲಿ ಮಲ್ಲಕಂಬ ಕಲಿತ ಹಲವರು ರಾಜ್ಯದ ವಿವಿಧೆಡೆ ಮಲ್ಲಕಂಬ ತರಬೇತುದಾರರಾಗಿದ್ದಾರೆ. ಸಿರಿಗೆರೆ ಮಠ, ಸುತ್ತೂರು ಮಠ, ಕಲಾದಗಿ ಸೇರಿದಂತೆ ಹಲವು ಕಡೆಗಳಲ್ಲಿ ಮಲ್ಲಕಂಬ ತರಬೇತಿ ನೀಡುತ್ತಿದ್ದಾರೆ. ಶಿಕ್ಷಕ ಚನ್ನಾಳ ಅವರು, ತುಳಸಿಗೇರಿಗೆ ತಂದಿದ್ದ ಮಲ್ಲಕಂಬ ಈಗ ಆಲದಮರದಂತೆ ವಿಸ್ತಾರವಾಗಿ ಹರಡಿಕೊಂಡಿದೆ. ಅವರ ಮಾರ್ಗದರ್ಶನದಲ್ಲಿ ಕಲಿತ ಹಲವಾರು ವಿದ್ಯಾರ್ಥಿಗಳು ಉದ್ಯೋಗ ಕಂಡುಕೊಂಡಿದ್ದಾರೆ.

ಶಾಲಾ ಕ್ರೀಡೆಗಳಿಗೆ ಸೇರ್ಪಡೆ

ಮೊದಲು ಮಲ್ಲಕಂಬ ಶಾಲಾ ಕ್ರೀಡಾಕೂಟದಲ್ಲಿ ಸೇರ್ಪಡೆಯಾಗಿರಲಿಲ್ಲ. ಈಗ ಇದನ್ನು ಸೇರಿಸಲಾಗಿದೆ. ಆದ್ದರಿಂದ ರಾಷ್ಟ್ರಮಟ್ಟದಲ್ಲಿ ಗೆಲ್ಲುವವರಿಗೆ ಹಲವಾರು ಸೌಲಭ್ಯಗಳು ದೊರೆಯಲಿವೆ. ರಾಷ್ಟ್ರೀಯ ಕ್ರೀಡೆಗಳಲ್ಲಿ ಪ್ರದರ್ಶನ ಕ್ರೀಡೆಯಾಗಿದ್ದ ಮಲ್ಲಕಂಬ ಈಗ ಪದಕ ಕ್ರೀಡೆಯಾಗಿದೆ ಎಂದು ಭಾರತೀಯ ಒಲಿಂಪಿಕ್‌ ಸಂಸ್ಥೆ ತಿಳಿಸಿದೆ.

ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಮೊದಲ ಬಾರಿಗೆ ನಡೆದ ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆಯನ್ನು ತುಳಸಿಗೇರಿ ಶಾಲೆಯಲ್ಲಿ ಆಯೋಜಿಸಲಾಗಿತ್ತು.

‘ಬೆಳಿಗ್ಗೆ–ಸಂಜೆ ಅಭ್ಯಾಸ ಮಾಡುವುದರಿಂದ ಓದಿಗೆ ಯಾವುದೇ ತೊಂದರೆಯಾಗುವುದಿಲ್ಲ. ಮಲ್ಲಕಂಬ ಅಭ್ಯಾಸದಿಂದ ದಿನಪೂರ್ತಿ ಚಟುವಟಿಕೆಯಿಂದ ಇರುತ್ತೇವೆ. ಆರೋಗ್ಯವೂ ಚೆನ್ನಾಗಿರುತ್ತದೆ. ಓದಿನಲ್ಲೂ ಮುಂದಿದ್ದೇವೆ’ ಎನ್ನುತ್ತಾರೆ ತರಬೇತಿಯಲ್ಲಿದ್ದ ವಿದ್ಯಾರ್ಥಿಗಳು.

ಈ ಊರಿನ ವಿದ್ಯಾರ್ಥಿಗಳು ಬೇರೆ ಕ್ರೀಡೆಗಳಲ್ಲಿ ಭಾಗವಹಿಸುತ್ತಾರಾದರೂ, ಮಲ್ಲಕಂಬಕ್ಕೆ ಮೊದಲ ಆದ್ಯತೆ ನೀಡುತ್ತಾರೆ. ಈ ಕ್ರೀಡೆ ಬಗ್ಗೆ ಅವರು ಹೊಂದಿರುವ ಉತ್ಸಾಹ ನೋಡಿದರೆ ಮಲ್ಲಕಂಬ ಕ್ರೀಡೆಯು ಅವರ ಮನದಲ್ಲಿ ಅಚ್ಚೊತ್ತಿರುವುದು ಕಂಡು ಬರುತ್ತದೆ.

ಗ್ರಾಮದಲ್ಲಿ ಕುಸ್ತಿ, ಸೈಕ್ಲಿಂಗ್‌ ಕ್ರೀಡಾಪಟುಗಳಿದ್ದಾರೆ. ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಗಳಿಸಿದ್ದಾರೆ. ಅವರಲ್ಲಿ ಕೆಲವರು ರೈಲ್ವೆ ಸೇರಿದಂತೆ ವಿವಿಧೆಡೆ ಕ್ರೀಡಾ ಕೋಟಾದಲ್ಲಿ ಕೆಲಸವನ್ನೂ ಗಿಟ್ಟಿಸಿಕೊಂಡಿದ್ದಾರೆ. ಶಾಲಾ ಕ್ರೀಡಾಕೂಟದಲ್ಲಿ ಇಲ್ಲದ ಕಾರಣ ಮಲ್ಲಕಂಬ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶಗಳು ಸಿಗುತ್ತಿರಲಿಲ್ಲ. ಹಾಗಾಗಿ, ಕೆಲವರ ಮನೆಯಲ್ಲಿ ಬೈಯುತ್ತಿದ್ದರು. ಆದರೂ, ವಿದ್ಯಾರ್ಥಿಗಳ ಉತ್ಸಾಹ ಕುಂದಿರಲಿಲ್ಲ. ಎರಡು ದಶಕಗಳಿಂದ ಅಭ್ಯಾಸ ಮಾಡಿಕೊಂಡೇ ಬಂದಿದ್ದಾರೆ. ಈಗ ಶಾಲಾ ಕ್ರೀಡಾಕೂಟದಲ್ಲಿ ಸೇರಿಸಿವುದರಿಂದ ಉದ್ಯೋಗವಕಾಶದ ಬಾಗಿಲು ತೆರೆಯಲಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವಿದ್ಯಾರ್ಥಿಗಳು ಅಭ್ಯಾಸಕ್ಕೆ ಸೇರಿದರೆ ಅಚ್ಚರಿಯಿಲ್ಲ.

ಬದ್ಧತೆ, ವೃತ್ತಿ ಬಗೆಗೆ ಅಪಾರ ಪ್ರೀತಿ ಮತ್ತು ಗೌರವ ಹೊಂದಿರುವ ದೈಹಿಕ ಶಿಕ್ಷಣ ಶಿಕ್ಷಕ ಮನಸು ಮಾಡಿದರೆ ಇಂಥ ಅದ್ಭುತ ಸಾಧ್ಯವಾಗುತ್ತದೆ ಎನ್ನುವುದಕ್ಕೆ ತುಳಸಿಗೇರಿ ಮಕ್ಕಳ ಸಾಧನೆಯೇ ಸಾಕ್ಷಿ.

ಮಲ್ಲಕಂಬದ ಶಾಲೆ

ರಾಜ್ಯದಲ್ಲಿ ಎಲ್ಲಿಯೇ ಹೋಗಿ ತುಳಸಿಗೇರಿ ಶಾಲೆ ಹೆಸರು ಹೇಳುತ್ತಿದ್ದಂತೆಯೇ ‘ಮಲ್ಲಕಂಬ’ ಹೆಸರಿನಲ್ಲಿಯೇ ಗುರುತಿಸುತ್ತಾರೆ. ರಾಜ್ಯ, ರಾಷ್ಟ್ರದ ಯಾವುದೇ ಮೂಲೆಯಲ್ಲಿ ಮಲ್ಲಕಂಬ ಕ್ರೀಡಾಕೂಟ ನಡೆಯಲಿ, ಅಲ್ಲಿ ತುಳಸಿಗೇರಿ ಶಾಲೆಯ ಮಕ್ಕಳು ಇರುತ್ತಾರೆ. ಪದಕದೊಂದಿಗೇ ಮರಳುತ್ತಾರೆ.

‘ಐದು ಬಾರಿ ರಾಷ್ಟ್ರೀಯ ಮಟ್ಟದಲ್ಲಿ, ಖೇಲೋ ಇಂಡಿಯಾದಲ್ಲಿ ಆಡಿದ್ದೇನೆ. ಏಳು ವರ್ಷಗಳಿಂದ ಅಭ್ಯಾಸ ಮಾಡುತ್ತಿದ್ದೇನೆ. ಮಲ್ಲಕಂಬದಿಂದಾಗಿ ಊರವರು, ಸುತ್ತಲಿನ ಹಳ್ಳಿಯವರು ಗುರುತಿಸುತ್ತಾರೆ. ಆಗ ಹೆಮ್ಮೆ ಅನಿಸುತ್ತದೆ. ಈಗ ಶಾಲಾ ಕ್ರೀಡಾಕೂಟದಲ್ಲಿ ಸೇರ್ಪಡೆ ಮಾಡಿರುವುದರಿಂದ ಉದ್ಯೋಗಕ್ಕೂ ಅನುಕೂಲವಾಗಲಿದೆ’ ಎಂದು ಕ್ರೀಡಾಪಟು ಇಂದಿರಾ ಎಸ್‌. ಅನುಭವ ಹಂಚಿಕೊಂಡರು.

ಚನ್ನಾಳರ ಛಲ ಮಲ್ಲಕಂಬ ಫಲ

ಎರಡು ದಶಕಗಳ ಹಿಂದೆ ಹಾವೇರಿಯಿಂದ ತುಳಸಿಗೇರಿ ಸರ್ಕಾರಿ ಪ್ರೌಢಶಾಲೆಗೆ ಬಂದ ಚನ್ನಪ್ಪ ಚನ್ನಾಳರಿಗೆ ಇಲ್ಲಿಯೂ ಮಲ್ಲಕಂಬ ಕ್ರೀಡೆ ಬೆಳೆಸಬೇಕು ಎಂಬ ಛಲ. ಅದರ ಪರಿಣಾಮ ಗ್ರಾಮದ ಮನೆ, ಮನೆಯಲ್ಲಿ ಕ್ರೀಡಾಪಟುಗಳಿದ್ದಾರೆ.

2003 ರಲ್ಲಿ ಮಲ್ಲಕಂಬ ಕ್ರೀಡೆ ಅಭ್ಯಾಸ ಆರಂಭಿಸಿದಾಗ ಕಂಬದ ಮೇಲೆ ಕಠಿಣ ಅಭ್ಯಾಸ ಮಾಡಬೇಕಾಗಿದ್ದರಿಂದ ಪೆಟ್ಟಾದರೆ ಹೇಗೆ ಎಂಬ ಕಾರಣಕ್ಕೆ ಹಲವು ಪೋಷಕರು ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕಿದ್ದರು. ಮನೆ, ಮನೆಗೆ ತೆರಳಿ ಪೋಷಕರ ಮನವೊಲಿಸಿದ್ದರು.

ಅಭ್ಯಾಸ ಮಾಡಿಸುವಾಗ ಮುಂಚೂಣಿಯಲ್ಲಿ ನಿಲ್ಲುವ ಚನ್ನಾಳರು, ಮಕ್ಕಳೊಂದಿಗೆ ಫೋಟೊಕ್ಕೆ ಕರೆಯುತ್ತಿದ್ದಂತೆಯೇ ಹಿಂದಕ್ಕೆ ಸರಿದರು. ‘ಎಲ್ಲವೂ ನಮ್ಮ ಮುಖ್ಯ ಶಿಕ್ಷಕರ, ಶಿಕ್ಷಕರ, ಪೋಷಕರ ಸಹಕಾರವೇ ಕಾರಣ. ಅವರನ್ನೇ ಮಾತನಾಡಿಸಿ’ ಎಂದರು ಸಂಕೋಚದಿಂದಲೇ.

‘ಚನ್ನಾಳರ ಪರಿಶ್ರಮವೇ ಸಾಧನೆಗೆ ಕಾರಣ. ಅವರೊಂದಿಗೆ ನಾವೂ ಕೈಜೋಡಿಸಿದ್ದೇವೆ ಅಷ್ಟೇ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಮುಖ್ಯ ಶಿಕ್ಷಕ ಎಂ.ವಿ. ಫಕೀರಣ್ಣವರ.

ಬಾಲಕಿಯಿಂದ ಮಲ್ಲಕಂಬ ಪ್ರದರ್ಶನ
ಸಿ.ಕೆ. ಚನ್ನಾಳ
ಮಲ್ಲಕಂಬ ಪ್ರದರ್ಶನ
ಮಲ್ಲಕಂಬದಲ್ಲಿ ಗೆದ್ದ ಪ್ರಶಸ್ತಿಗಳೊಂದಿಗೆ ಕ್ರೀಡಾಪಟುಗಳು

ಖೇಲೋ ಇಂಡಿಯಾ ಯೋಜನೆಯಡಿ ದೇಸಿ ಕ್ರೀಡೆಗಳಿಗೆ ಪ್ರಾಶಸ್ತ್ಯ ನೀಡಲಾಗುತ್ತಿದೆ. ಇದರಿಂದಾಗಿ ಮಲ್ಲಕಂಬದಂತಹ ಕ್ರೀಡೆಗಳಿಗೂ ಪ್ರಾಮುಖ್ಯತೆ ಸಿಕ್ಕಿದೆ

–ಸಿ.ಕೆ. ಚನ್ನಾಳ ದೈಹಿಕ ಶಿಕ್ಷಣ ಶಿಕ್ಷಕ ಸರ್ಕಾರಿ ಪ್ರೌಢಶಾಲೆ ತುಳಸಿಗೇರಿ

ಮಲ್ಲಕಂಬ ಯೋಗದಿಂದ ಆರೋಗ್ಯ ಚೆನ್ನಾಗಿರುತ್ತದೆ. ಇದನ್ನು ಹವ್ಯಾಸವಾಗಿಸಿಕೊಂಡಿದ್ದೇನೆ. ರಾಜ್ಯ ರಾಷ್ಟ್ರಮಟ್ಟದಲ್ಲಿ ಪದಕ ಗೆದ್ದಿರುವುದು ಖುಷಿ ಕೊಡುತ್ತದೆ

–ಶಿವಾನಂದ ಲಾಯಣ್ಣವರ ಮಲ್ಲಕಂಬ ಕ್ರೀಡಾಪಟು

****

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.