ಎಷ್ಟೇ ಮುಖ್ಯವಾದ ಕೆಲಸ ಕಾರ್ಯಗಳಿದ್ದರೂ ಅವುಗಳನ್ನೆಲ್ಲ ಬದಿಗೊತ್ತಿ, ಪ್ರತಿನಿತ್ಯ ರಾತ್ರಿ 9 ರಿಂದ 12 ಗಂಟೆವರೆಗೆ ಬಿಡುವು ಮಾಡಿಕೊಳ್ಳುತ್ತಾರೆ. ಈ ಅವಧಿಯಲ್ಲಿ ಅವರು ಕರೆಗಳ ನಿರೀಕ್ಷೆಯಲ್ಲಿ ಇರುತ್ತಾರೆ. ಗಡಿಯಾರದ ಮುಳ್ಳು 12 ದಾಟಿ, ದಿನಾಂಕ ಬದಲಾದ ಬಳಿಕವೇ ಅವರು ಮಲಗುವುದು. ಕಳೆದ 22 ವರ್ಷಗಳಿಂದ ಅವರು ಇದೇ ದಿನಚರಿ ಪಾಲಿಸಿಕೊಂಡು ಬಂದಿದ್ದಾರೆ. ಅವರ ಈ ಕಾಯುವಿಕೆ ಕುಟುಂಬಸ್ಥರ, ಪರಿಚಯಸ್ಥರ ಅಥವಾ ಒಡನಾಡಿಗಳ ಕರೆಗಾಗಿ ಅಲ್ಲ. ಬದಲಾಗಿ, ಭಾಷೆಯ ಬಗೆಗೆ ತಿಳಿಯಬೇಕೆಂಬ ಹಂಬಲ ಹೊಂದಿರುವ ಕನ್ನಡದ ಮನಸ್ಸುಗಳ ಕರೆಗಳಿಗಾಗಿ.
ಹೌದು, ಕನ್ನಡವನ್ನೇ ಉಸಿರಾಗಿಸಿಕೊಂಡು, ನಾಲ್ಕು ದಶಕಗಳಿಂದ ಕನ್ನಡ ಪರ ಕಾಯಕ ಮಾಡುತ್ತಾ ಬಂದವರು ಕೆ.ರಾಜಕುಮಾರ್. ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆತಿದೆ. ‘ಕನ್ನಡವೆಂದರೆ ಬರಿ ನುಡಿಯಲ್ಲ, ಹಿರಿದಿದೆ ಅದರರ್ಥ...’ ಎಂದು ಕವಿ ಕೆ.ಎಸ್. ನಿಸಾರ್ ಅಹಮದ್ ಹೇಳಿದ್ದರು. ಇಂತಹ ಕನ್ನಡವನ್ನು ಆಡಳಿತ, ನ್ಯಾಯಾಂಗ ಸೇರಿ ವಿವಿಧ ಕ್ಷೇತ್ರಗಳಲ್ಲಿ ಪೂರ್ಣ ಪ್ರಮಾಣ ಅನುಷ್ಠಾನಕ್ಕೆ ಸಂಬಂಧಿಸಿದಂತೆಯೂ ಇವರು ಮಾರ್ಗದರ್ಶನ ಮಾಡುತ್ತಿದ್ದಾರೆ. ವಯೋಸಹಜ ಅನಾರೋಗ್ಯ ಸಮಸ್ಯೆಯನ್ನೂ ಲೆಕ್ಕಿಸದೆ ಕನ್ನಡಕ್ಕಾಗಿ ಸದಾ ಮಿಡಿಯುತ್ತಿರುವ ಇವರು, ಎಲೆಮರೆಯ ಕಾಯಿಯಂತೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕನ್ನಡ ಸೇವೆ ಮಾಡುತ್ತಿದ್ದಾರೆ.
ರಾಜಕುಮಾರ್ ಅವರು 45 ವರ್ಷಗಳಿಂದ ಕನ್ನಡ ಪರ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾ ಬಂದಿದ್ದಾರೆ. 2003ರ ನ.15ರಿಂದ ಅವರು ಕನ್ನಡದ ಬಗೆಗೆ ಉಚಿತ ಮಾರ್ಗದರ್ಶನ ಸೇವೆ ಒದಗಿಸುತ್ತಿದ್ದಾರೆ. ಇದಕ್ಕೂ ಮೊದಲು ಅವರ ಬಳಿ ಮೊಬೈಲ್ ಫೋನ್ ಇರದಿದ್ದರಿಂದ ಅವರ ಈ ಯೋಚನೆ ಕಾರ್ಯಗತವಾಗಿರಲಿಲ್ಲ. ಪ್ರಯಾಣ, ತೀವ್ರ ಅನಾರೋಗ್ಯ ಸಮಸ್ಯೆ ಇದ್ದಾಗ ಹೊರತುಪಡಿಸಿ, ವರ್ಷದ ಬಹುತೇಕ ಎಲ್ಲ ದಿನ ಅವರು ಈ ಸೇವೆ ನೀಡುತ್ತಾ ಬಂದಿದ್ದಾರೆ. ಪ್ರತಿನಿತ್ಯ ರಾತ್ರಿ 9ರಿಂದ 12 ಗಂಟೆಯ ಅವಧಿಯಲ್ಲಿ ಏಳರಿಂದ ಎಂಟು ಮಂದಿ ಕನ್ನಡಕ್ಕೆ ಸಂಬಂಧಿಸಿದಂತೆ ಇವರನ್ನು ಸಂಪರ್ಕಿಸುತ್ತಿದ್ದಾರೆ.
‘ಆಡಳಿತದಲ್ಲಿ ಕನ್ನಡ ಇನ್ನೂ ಇಡಿಯಾಗಿ ಅನುಷ್ಠಾನವಾಗಿಲ್ಲ ಏಕೆ? ಗೋಕಾಕ್ ವರದಿ, ಮಹಿಷಿ ವರದಿ ಜಾರಿಯಾಗಿವೆಯೇ? ಮಹಾಜನ್ ವರದಿಯ ಕಥೆಯೇನು?, ಸಿಮ್‌ಗೆ ಕನ್ನಡಲ್ಲಿ ಏನು ಹೇಳುತ್ತಾರೆ?...’ ಹೀಗೆ ಹಲವು ಪ್ರಶ್ನೆಗಳು ಅವರಿಗೆ ಪ್ರತಿನಿತ್ಯ ಎದುರಾಗುತ್ತಿವೆ.
ಕಳೆದ ವರ್ಷ ಅವರು ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಶಸ್ತ್ರಚಿಕಿತ್ಸೆಯ ಮರು ದಿನವೇ ಅವರು ವೈದ್ಯರ ಸಲಹೆಯನ್ನೂ ಲೆಕ್ಕಿಸದೆ ಆಸ್ಪತ್ರೆಯಿಂದಲೇ ಮೊಬೈಲ್ ಕರೆಗಳನ್ನು ಸ್ವೀಕರಿಸಿ, ಕನ್ನಡದ ಬಗೆಗೆ ಮಾರ್ಗದರ್ಶನ ನೀಡಿದ್ದು ಶುಶ್ರೂಷಕರ ಕಣ್ಣು ಕೆಂಪಾಗಿಸಿತ್ತು. ಇತ್ತೀಚಿನ ವರ್ಷಗಳಲ್ಲಿ ಅವರು ವಾಟ್ಸ್‌ಆ್ಯಪ್ ಮೂಲಕವೂ ಈ ಸೇವೆ ಒದಗಿಸುತ್ತಿದ್ದಾರೆ. ಅಧಿಕಾರಿಗಳು, ನ್ಯಾಯಾಧೀಶರು, ಚಲನಚಿತ್ರ ಕಲಾವಿದರು, ರಾಜಕಾರಣಿಗಳು ಸೇರಿ ವಿವಿಧ ವರ್ಗದವರು ಕೂಡ ಕನ್ನಡ ಪದಗಳ ಬಳಕೆ ಹಾಗೂ ಭಾಷೆಯ ಬಗೆಗಿನ ಗೊಂದಲಕ್ಕೆ ಇವರನ್ನು ಸಂಪರ್ಕಿಸುತ್ತಾ ಬಂದಿದ್ದಾರೆ.
ಒಬ್ಬರು ರಾತ್ರಿ ಕರೆ ಮಾಡಿ ಭಾಷಣಕ್ಕೆ ಒತ್ತಾಯಿಸಿದ ಘಟನೆಯನ್ನು ನೆನಪಿಸಿಕೊಳ್ಳುವ ಅವರು, ‘ರಾತ್ರಿ 9 ಗಂಟೆಗೆ ಸರಿಯಾಗಿ ಮೊಬೈಲು ರಿಂಗಣಿಸಿತು. ಕೋಲಾರದ ಜಾಲಿಬಾರಿನಲ್ಲಿ ಕುಳಿತು ಹಿರಿಯ ಮಿತ್ರರೊಬ್ಬರು ಮಾಡಿದ್ದ ಕರೆಯದು. ನೀವು ಕನ್ನಡಕ್ಕೆ ಸಂಬಂಧಿಸಿದಂತೆ ಬಹಳ ಚೆನ್ನಾಗಿ ಭಾಷಣ ಮಾಡುತ್ತೀರಿ ಎಂದು ನನ್ನ ಗೆಳೆಯರಿಗೆ ಹೇಳಿದ್ದೇನೆ. ನೀವು ಇತ್ತೀಚಿಗೆ ಮಾಡಿದ ‘ಕನ್ನಡದ ಅರಿವು ಮತ್ತು ಅಭಿಮಾನ’ ಎಂಬ ಉಪನ್ಯಾಸ ತುಂಬಾ ಮಾಹಿತಿ ಪೂರ್ಣವಾಗಿತ್ತು. ಅದನ್ನು ಈಗ ಮಾಡಿ, ನನ್ನ ಗೆಳೆಯರು ಕೇಳಬೇಕು ಎಂದು ಅವರು ಹೇಳಿದರು. ಉಪನ್ಯಾಸ ಮಾಡಲು ಸಾಧ್ಯವಾಗದು ಎಂದರೂ ಅವರು ಬಿಡಲೇ ಇಲ್ಲ. ನೀವು ಉಪನ್ಯಾಸ ಮಾಡಬೇಕು. ಅದು ನನ್ನ ‘ಇಜ್ಜತ್ ಕಾ ಸವಾಲ್’ ಎಂದು ಕಾಡಿದರು. ಸರಿ, ಉತ್ಸಾಹವನ್ನು ಆವಾಹನೆ ಮಾಡಿಕೊಂಡು ಒಂದು ಗಂಟೆ ಮಾತನಾಡಿದೆ. ಆ ಕಡೆಯಿಂದ ಒಂದು ಸ್ಮಾಲು, ಒಂದು ಲಾರ್ಜು ಎಂದು ಪಾನಗೋಷ್ಠಿ ಮುಂದುವರೆದಿತ್ತು’ ಎಂದು ನಕ್ಕರು.
ಕೋಲಾರದವರಾದ ಇವರು, ಸದ್ಯ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನೆಲೆಸಿದ್ದಾರೆ. 67 ವರ್ಷದ ಅವರಿಗೆ ವಯೋಸಹಜ ಅನಾರೋಗ್ಯ ಸಮಸ್ಯೆ ಕಾಡುತ್ತಿದ್ದು, ಇದನ್ನು ಲೆಕ್ಕಿಸದೆ ಹಗಲಿರುಳು ಕನ್ನಡಕ್ಕಾಗಿ ಮಿಡಿಯುತ್ತಿದ್ದಾರೆ. ಎಸ್ಸೆಸ್ಸೆಲ್ಸಿಯಲ್ಲಿ ರ್‍ಯಾಂಕ್ ವಿದ್ಯಾರ್ಥಿಯಾಗಿದ್ದ ಅವರು, ಪದವಿಪೂರ್ವ ಶಿಕ್ಷಣದ ಬಳಿಕ ಕನ್ನಡ ಪರ ಹೋರಾಟಗಳಲ್ಲಿ ತಮ್ಮನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡರು. ಬಳಿಕ ಪದವಿ ಶಿಕ್ಷಣವನ್ನು ಮೊಟಕುಗೊಳಿಸಿದರು. ಕನ್ನಡದಲ್ಲಿ ಪರಿಣತಿ, ಪಾಂಡಿತ್ಯ ಹೊಂದಿರುವ ಅವರು ಆರು ಭಾಷೆಗಳನ್ನು ಬಲ್ಲವರಾಗಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಸೇರಿ 17 ಇಲಾಖೆಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಕನ್ನಡದ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಅವರು, ‘ಕನ್ನಡದ ಕೆಲಸವೆಂದರೆ ನನಗೆ ಸಮಗ್ರವಾದದ್ದು. ಬಿಡಿ ಬಿಡಿ ಎಳೆಯಲ್ಲ. ಸಾಹಿತ್ಯ, ಚಲನಚಿತ್ರ, ಕಲೆ, ಸಂಗೀತ, ವಾಸ್ತು, ನೃತ್ಯ, ಜನರ ಬದುಕು–ಬವಣೆ ಎಲ್ಲವನ್ನೂ ಕನ್ನಡ ಒಳಗೊಳ್ಳಲಿದೆ. ಕನ್ನಡದ ಕೆಲಸಕ್ಕೆ ಇರುವ ಮಾರ್ಗಗಳನ್ನೆಲ್ಲ ಬಳಸಿಕೊಂಡು, ಕನ್ನಡ ಕಾಯುತ್ತಾ ಬಂದಿದ್ದೇನೆ’ ಎನ್ನುತ್ತಾರೆ ರಾಜಕುಮಾರ್. ಪ್ರಕಾಶಕರೂ ಆಗಿದ್ದ ಅವರು, ಪುಸ್ತಕ ಸಲಹಾ ಕೇಂದ್ರವನ್ನು ಪ್ರಾರಂಭಿಸಿ, ಅಂಚೆ ಮೂಲಕ ಬರಹಗಾರರಿಗೆ ಸಲಹೆ ಸೂಚನೆಗಳನ್ನು ನೀಡಿ ಪ್ರೋತ್ಸಾಹಿಸಿದ್ದರು.
ಗೋಕಾಕ್ ಚಳವಳಿ, ಕನ್ನಡಿಗರಿಗೆ ಉದ್ಯೋಗ ಹೋರಾಟ, ಆಡಳಿತದಲ್ಲಿ ಕನ್ನಡ ಅನುಷ್ಠಾನ ಸೇರಿ ವಿವಿಧ ಹೋರಾಟಗಳಲ್ಲಿ ಪಾಲ್ಗೊಂಡಿರುವ ಅವರು, ಹಲವು ಕಮ್ಮಟ, ಶಿಬಿರಗಳನ್ನು ಮುನ್ನಡೆಸಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ನೆರೆಯ ರಾಜ್ಯಗಳಲ್ಲಿಯೂ ಉಪನ್ಯಾಸ ನೀಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಇವರು ಇತ್ತೀಚೆಗೆ ರಾಜ್ಯ ಸರ್ಕಾರದ 2024–25ನೇ ಸಾಲಿನ ‘ಸಂಗೊಳ್ಳಿ ರಾಯಣ್ಣ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ಕನ್ನಡನಾಡಿನ ನೆಲ, ಜಲ, ಭಾಷೆ ಹಾಗೂ ಸಂಸ್ಕೃತಿಗಾಗಿ ನಿಸ್ವಾರ್ಥದಿಂದ ಹೋರಾಡಿದವರನ್ನು ಗುರುತಿಸಿ, ಪ್ರತಿ ವರ್ಷವೂ ಒಬ್ಬರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ.
⇒ರಾಜಕುಮಾರ್ ಅವರ ಸಂಪರ್ಕ ಸಂಖ್ಯೆ: 9035313490
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.