
ಮನೆ ಮುಂದೆ ಶವ ದಹನ
ಇದೀಗ ಅಂತಿಮ ಪಯಣದ ಪದ್ಧತಿಯಲ್ಲೂ ಕೆಲವು ಗಮನಾರ್ಹ ಬದಲಾವಣೆಗಳು ಆಗಿವೆ. ಇದಕ್ಕೆ ಕಾಲದ ಒತ್ತಡವೂ ಕಾರಣವಾಗಿದೆ. ಜೊತೆಗೆ ಸದಾ ಧಾವಂತದಲ್ಲಿರುವ ಜನರೂ ಹೊಸ ಪದ್ಧತಿಗಳಿಗೆ ತಮ್ಮನ್ನು ಒಗ್ಗಿಸಿಕೊಳ್ಳುತ್ತಿದ್ದಾರೆ. ಕೇರಳ ರಾಜ್ಯದ ಪಕ್ಕದಲ್ಲೇ ಇರುವ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಅಲ್ಲಿಂದ ಪ್ರಭಾವಿತ ಕೂಡ ಆಗಿವೆ. ಹೀಗಾಗಿ ಶವ ಸಂಸ್ಕಾರದಲ್ಲಿ ಆಗಿರುವ ಪಲ್ಲಟಗಳನ್ನು ಈ ಲೇಖನ ಅನಾವರಣಗೊಳಿಸುತ್ತದೆ.
ಘಟನೆ–ಒಂದು
ಅದು ಕೊಡಗು ಜಿಲ್ಲೆಯ ಗಡಿಭಾಗ. ನೆರೆಯ ಕೇರಳಕ್ಕೆ ಕೂಗಳತೆ ದೂರದಲ್ಲಿರುವ ಕುಟ್ಟ ಗ್ರಾಮದ ಸಮೀಪ ವ್ಯಕ್ತಿಯೊಬ್ಬರು ಮೃತಪಟ್ಟರು. ಬಂಧು–ಬಳಗದವರು ಅಂತಿಮ ದರ್ಶನ ಪಡೆಯಲು ಸೇರಿದರು. ಅಷ್ಟರಲ್ಲೇ ಜೀಪ್ ಯಂತ್ರವನ್ನು ಎಳೆದುಕೊಂಡು ಬಂದು ಮನೆ ಮುಂದೆ ನಿಂತಿತು. ಸಿಬ್ಬಂದಿ ಅದರಿಂದ ಯಂತ್ರವನ್ನು ಬೇರ್ಪಡಿಸಿದರು. ಅದು ಎಂಆರ್‌ಐ ಸ್ಕ್ಯಾನಿಂಗ್ ಯಂತ್ರವನ್ನು ಹೋಲುವಂತಿತ್ತು. ಎಲ್ಲರೂ ಅದನ್ನು ಕುತೂಹಲದಿಂದಲೇ ನೋಡುತ್ತಾ ನಿಂತರು. ಯಂತ್ರದ ಸಿಬ್ಬಂದಿ ಮೃತರ ಮನೆಯವರು ಅನುಮತಿ ಪಡೆದರು. ಮೃತದೇಹವನ್ನು ತಾವೇ ಎತ್ತಿಕೊಂಡು ಯಂತ್ರದಲ್ಲಿದ್ದ ಸ್ಟ್ರೆಚರ್‌ಗೆ ಮಲಗಿಸಿ, ಬಾಗಿಲನ್ನು ಭದ್ರವಾಗಿ ಮುಚ್ಚಿದರು. ಬಳಿಕ ಅಂತ್ಯಸಂಸ್ಕಾರದ ವಿಧ–ವಿಧಾನಗಳು ನೆರವೇರಿದವು. ಮೃತರ ಪುತ್ರನಿಂದ ಯಂತ್ರದ ಪುಟಾಣಿ ಕಿಂಡಿಯಿಂದ ಕೊಳ್ಳಿಯನ್ನು ಇರಿಸಲಾಯಿತು. ಎಲ್‌ಪಿಜಿ ಗ್ಯಾಸ್‌ಗಳಿಂದ ಈ ಯಂತ್ರ ದೊಡ್ಡ ಗ್ಯಾಸ್ ಸ್ಟೌನಂತೆ ‘ಭರ್...’ ಎಂದು ಸದ್ದು ಮಾಡುತ್ತಾ ಶವ ದಹನ ಕಾರ್ಯವನ್ನು ಶುರು ಮಾಡಿತು. ಕ್ರಮೇಣ ಚಿಮಣಿ ಮೂಲಕ ಹೊಗೆ ಹೊರಗೆ ಚಿಮ್ಮುತ್ತಿತ್ತು. ಮೂರು ಗ್ಯಾಸ್ ಸಿಲಿಂಡರ್‌ಗಳು ಖಾಲಿ ಆಗುವ ಹೊತ್ತಿಗೆ ಶವ ಬೂದಿ ಆಯಿತು. ಸಿಬ್ಬಂದಿ ಆ ಬೂದಿಯನ್ನು ಕುಡಿಕೆಯಲ್ಲಿ ಶೇಖರಿಸಿ ಕುಟುಂಬಸ್ಥರಿಗೆ ನೀಡಿದರು. ಬಳಿಕ ಸಿಬ್ಬಂದಿಯೇ ಯಂತ್ರ ಹಾಗೂ ಅದು ನಿಂತಿದ್ದ ಜಾಗವನ್ನು ಸ್ವಚ್ಛಗೊಳಿಸಿ ಮತ್ತೊಂದು ಊರಿಗೆ ಶವ ದಹನಕ್ಕಾಗಿ ತೆರಳಿದರು.
ಘಟನೆ–ಎರಡು
ಅದು ಮಳೆಗಾಲ. ಕೊಡಗಿನಲ್ಲಿ ‘ಧೋ’ ಎಂದು ಒಂದೇ ಸಮನೆ ಸುರಿದಿದ್ದ ಮಳೆ ಬಿಡುವು ನೀಡಿತ್ತು. ಶವ ದಹಿಸಲು ಸೌದೆಯನ್ನು ಎಷ್ಟು ಹುಡುಕಿದರೂ ಸಿಗಲಿಲ್ಲ. ಬೇರೆ ದಾರಿ ಕಾಣದೆ ಶವವನ್ನು ಹೂಳಲು ಮೃತರ ಮನೆಯವರು ನಿರ್ಧರಿಸಿದರು. ಸರಿ, ಬಂಧುಗಳು ಸ್ಮಶಾನಕ್ಕೆ ಹೋಗಿ ಗುಂಡಿ ತೆಗೆಯಲು ಮುಂದಾದರು. ಅಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ಹೂತಿದ್ದ ಶವದ ಅಳಿದುಳಿದ ಭಾಗಗಳು ಸಿಕ್ಕವು. ಇದೇ ರೀತಿ ನಾಲ್ಕಾರು ಕಡೆ ಅಗೆದರು. ನಂತರ ಒಂದು ಕಡೆ ಸಿಕ್ಕ ಮೂಳೆಗಳನ್ನು ಅದೇ ಗುಂಡಿಯಲ್ಲಿ ಒಂದು ಕಡೆ ಇರಿಸಿದರು. ಶವವನ್ನು ತರಲು ತಿಳಿಸಿದರು. ಬಂಧುಗಳು ಶವವನ್ನು ಸ್ಮಶಾನಕ್ಕೆ ಹೊತ್ತು ತರುವಷ್ಟರಲ್ಲೇ ಗುಂಡಿಯಲ್ಲಿ ನೀರು ತುಂಬಿಕೊಂಡಿತ್ತು. ವಿಧಿ ಇಲ್ಲದೇ ನೀರು ತುಂಬಿದ್ದ ಅದೇ ಗುಂಡಿಯಲ್ಲಿ ಶವವನ್ನು ಮಣ್ಣು ಮಾಡಿದರು.
ವಿರಾಜಪೇಟೆ ತಾಲ್ಲೂಕಿನ ಹೊಸೂರು ಗ್ರಾಮ ಫಂಚಾಯಿತಿಯಲ್ಲಿರುವ ಮನೆ ಮುಂದೆ ಶವ ದಹಿಸುವಂತಹ ಸಂಚಾರಿ ಶವ ದಹಿಸುವ ಯಂತ್ರ
ಘಟನೆ–ಮೂರು
ಕೊಡಗು ಜಿಲ್ಲೆಯ ಮತ್ತೊಂದು ಊರಿನಲ್ಲಿ ಸ್ಮಶಾನದಲ್ಲಿ ಗುಂಡಿ ತೆಗೆಯಲು ಜಾಗವೇ ಇರಲಿಲ್ಲ. ಆದ್ದರಿಂದ ಹೂಳುವುದನ್ನು ಕೈಬಿಟ್ಟು ವಿದ್ಯುತ್ ಚಿತಾಗಾರದಲ್ಲಿ ಶವವನ್ನು ದಹಿಸಲಾಯಿತು.
ಈ ಮೂರೂ ಘಟನೆಗಳು ಶವ ಸಂಸ್ಕಾರ ಪದ್ದತಿಯಲ್ಲಾಗುತ್ತಿರುವ ಪಲ್ಲಟಗಳಿಗೆ ಮುನ್ನುಡಿಯಂತಿವೆ.
ಹೆಚ್ಚೇನೂ ಇಲ್ಲ, ಹತ್ತಿಪ್ಪತ್ತು ವರ್ಷಗಳ ಹಿಂದಿನ ಮಾತು. ಊರಿಂದ ಹೊರಗೆ ಯಾರೂ ಸುಳಿಯದ ಜಾಗದಲ್ಲಿ ಶವ ಹೂತು ಸಮಾಧಿ ನಿರ್ಮಿಸುತ್ತಿದ್ದ ಕಾಲದಿಂದ ಹಿಡಿದು ತೀರಾ ಇತ್ತೀಚಿನ ವರ್ಷಗಳವರೆಗೆ ಶವ ಸಂಸ್ಕಾರದಲ್ಲಿ ಅಚ್ಚರಿ ಎನಿಸುಷ್ಟರ ಮಟ್ಟಿಗೆ ಬದಲಾವಣೆಗಳಾಗಿವೆ, ಆಗುತ್ತಲೇ ಇವೆ.
ಅದೊಂದಿತ್ತು ಕಾಲ...
ಯಾರಾದರೂ ಮೃತಪಟ್ಟರೆ ಪರ ಊರಿನಲ್ಲಿರುವ ಸಂಬಂಧಿಕರಿಗೆ ತಿಳಿಸಲೆಂದೇ ಒಬ್ಬೊಬ್ಬರನ್ನು ಒಂದೊಂದು ದಿಕ್ಕಿಗೆ ಸ್ಕೂಟರ್ ಇಲ್ಲವೇ ಬೈಕ್ ಕೊಟ್ಟು ಕಳುಹಿಸಲಾಗುತ್ತಿತ್ತು. (ಇದಕ್ಕೂ ಮೊದಲು ಸೈಕಲ್‌ನಲ್ಲಿ ಹೋಗುತ್ತಿದ್ದರು) ತಾವು ಹೋಗುವ ದಾರಿಯಲ್ಲಿ ಸಿಕ್ಕ ಊರಿನಲ್ಲಿರುವ ಆ ಕುಟುಂಬದ ಸಂಬಂಧಿಕರಿಗೆ ಸುದ್ದಿ ಮುಟ್ಟಿಸಿ ಮುಂದಿನ ಊರಿಗೆ ತೆರಳುತ್ತಿದ್ದರು. ಎಲ್ಲ ಊರಿನ ಸಂಬಂಧಿಕರು, ಬಂಧು–ಬಳಗದವರು ಬಂದ ನಂತರ ಅಂತ್ಯಸಂಸ್ಕಾರ ನೆರವೇರುತ್ತಿತ್ತು. ಮೊಬೈಲ್ ಫೋನ್ ಬಂದ ನಂತರ ಈ ಕೆಲಸ ತುಂಬಾ ಸರಾಗವಾಗಿದೆ.
ರಾತ್ರಿ ಶವದ ಮುಂದೆ ಭಜನೆ ನಡೆಸಲಾಗುತ್ತಿತ್ತು. ಯಾರೊಬ್ಬರೂ ಮಲಗದೇ ಎಚ್ಚರವಾಗಿರುತ್ತಿದ್ದರು. ಮರುದಿನ ಶವ ವನ್ನು ಹೊತ್ತೊಯ್ಯಲು ತಾಮುಂದು ನಾಮುಂದು ಎನ್ನುವಂತಹ ದೃಶ್ಯ. ಒಂದಷ್ಟು ದೂರ ಒಬ್ಬೊಬ್ಬರು ಶವಕ್ಕೆ ಹೆಗಲು ಕೊಟ್ಟರೆ, ತಕ್ಷಣವೇ ಇನ್ನೊಬ್ಬರು ಸಿದ್ಧವಾಗಿ ಹೆಗಲು ಕೊಡುತ್ತಿದ್ದರು. ಈಗ ಸ್ಮಶಾನಕ್ಕೆ ಶವ ಸಾಗಿಸಲು ವಾಹನ ಸೌಲಭ್ಯವಿದೆ. ಹೀಗಾಗಿ ಹೆಗಲು ಕೊಡುವ ಪ್ರಮೇಯವೇ ಇಲ್ಲ.ಮದುವೆಗೆ ಹೋಗದಿದ್ದರೂ ಪರವಾಗಿಲ್ಲ, ಸಾವಿಗೆ ಹೋಗಬೇಕು ಎನ್ನುವ ಮಾತಿದೆ. ಅಲ್ಲದೇ, ತೀರಾ ಇತ್ತೀಚಿನವರೆಗಿನ ಮೌಲ್ಯವೂ ಇದೇ ಆಗಿತ್ತು. ಕೆಲವೊಂದು ಊರುಗಳಲ್ಲಿ ಶವ ನೋಡಲು ಬಂದವರಿಗೆ ಅಕ್ಕಪಕ್ಕದ ಮನೆಯವರು ಅಡುಗೆ ಮಾಡಿ ಊಟ ಹಾಕುತ್ತಿದ್ದರು. ಸತ್ತವರ ಮನೆಗೆ ಬಂದು ಹಸಿದು, ಸಂಕಟಪಟ್ಟು ಹೋಗಬಾರದು ಎನ್ನುವ ಭಾವದಿಂದ ಬಂದವರೆಲ್ಲರೂ ಸ್ವಲ್ಪವಾದರೂ ಊಟ ಮಾಡಿಯೇ ತೆರಳುತ್ತಿದ್ದರು. ಈಗಲೂ ಹಳ್ಳಿಗಳಲ್ಲಿ ಈ ಪದ್ಧತಿ ಇದೆ.
ಇದೇ ನೋಡಿ ಸಂಚಾರಿ ಶವ ದಹನ ಯಂತ್ರ
ಶವ ಸಂಸ್ಕಾರ ಮಾಡುವ ವಿಧಾನದಲ್ಲಿ ಕ್ಷಿಪ್ರಗತಿಯಲ್ಲಿ ಬದಲಾವಣೆಯಾಗುತ್ತಿದೆ. ಜನಸಂಖ್ಯೆ ಹೆಚ್ಚುತ್ತಿದೆಯೇ ಹೊರತು ಭೂಮಿ ಅಷ್ಟೇ ಇದೆ. ಹಾಗಾಗಿ, ಇರುವ ಜಾಗದಲ್ಲೇ ಅಂತ್ಯ ಸಂಸ್ಕಾರ ಮಾಡಬೇಕಿದೆ. ಅದಕ್ಕಾಗಿ ವಿಧಾನಗಳು ಬದಲಾವಣೆಯಾಗುತ್ತಿವೆ.– ಪೌಲಸ್ ಎಂ.ಕೆ., ಶಿರಾಡಿ ಗ್ರಾಮ ಪಂಚಾಯಿತಿ ಸದಸ್ಯ
ಲಯನ್ಸ್ ಸಂಸ್ಥೆ ವತಿಯಿಂದ ಹೊಸೂರು ಗ್ರಾಮ ಪಂಚಾಯಿತಿಗೆ ನೀಡಿರುವ ಸಂಚಾರಿ ಶವ ದಹನ ಯಂತ್ರ ಸಂಪೂರ್ಣ ಪರಿಸರ ಸ್ನೇಹಿಯಾಗಿದೆ. ಇದರಿಂದ ವಾಯುಮಾಲಿನ್ಯ ಆಗುವುದಿಲ್ಲ.– ಧನು ಉತ್ತಯ್ಯ, ಗೋಣಿಕೊಪ್ಪಲು ಲಯನ್ಸ್ ವಿದ್ಯಾ ಸಂಸ್ಥೆಯ ಮುಖ್ಯಸ್ಥ
ಒಂದೇ ಗುಂಡಿಯೊಳಗೆ ಶವಗಳು!
ಸ್ಮಶಾನದಲ್ಲಿ ಶವಗಳನ್ನು ಹೂಳಲು ಜಾಗವೇ ಸಿಗುತ್ತಿಲ್ಲ. ಈ ಸಮಸ್ಯೆ ಎಲ್ಲ ಧರ್ಮದವರನ್ನೂ ಕಾಡುತ್ತಿದೆ. ಬಹುತೇಕರು ಅಂತ್ಯಕ್ರಿಯೆಯ ವಿಧಾನವನ್ನು ಬದಲಾಯಿಸಿಕೊಳ್ಳಲು ಮುಂದಾಗಿದ್ದಾರೆ. ಒಂದೇ ಗುಂಡಿಯಲ್ಲಿ ಹತ್ತಾರು ಶವಗಳನ್ನು ಹಾಕುವ ಪದ್ಧತಿಯೂ ಚಾಲ್ತಿಗೆ ಬಂದಿದೆ. ಇದನ್ನು ‘ರ‍್ಯಾಕ್ ಪದ್ಧತಿ’ ಎನ್ನಬಹುದು!
ರ‍್ಯಾಕ್ ಪದ್ಧತಿ ಅಂದ್ರೆ...
ಹೀಗೆ ಶವ ಹಾಕುವಂತಹ ಪದ್ದತಿ ಕೇರಳದಲ್ಲಿ ಬಹು ಹಿಂದಿನಿಂದಲೂ ಇದೆ. ಗುಂಡಿ 9 ಅಡಿ ಆಳ, 4 ಅಡಿ ಅಗಲ ಇರುತ್ತದೆ. ಅದರಲ್ಲಿ ರ‍್ಯಾಕ್ ಮತ್ತು ಶವಪೆಟ್ಟಿಗೆಯನ್ನು ಇಡಲಾಗುತ್ತದೆ. ಮತ್ತೊಬ್ಬರು ಮೃತಪಟ್ಟರೆ ಈಗಾಗಲೇ ಇಟ್ಟಿರುವ ಶವಪೆಟ್ಟಿಗೆಯನ್ನು ರ‍್ಯಾಕ್‌ನಿಂದ ಹಿಂದಕ್ಕೆ ತಳ್ಳಿ ಹೊಸ ಪೆಟ್ಟಿಗೆಯನ್ನು ಇಡುತ್ತಾರೆ. ಹೀಗೆ ತಳ್ಳಿದ ಶವಪೆಟ್ಟಿಗೆಯು ಹಿಂದೆ ಇರುವ ಗುಂಡಿಗೆ ಬೀಳುತ್ತದೆ. ಈ ಬಗೆಯಲ್ಲಿ ಹನ್ನೆರೆಡು ರ‍್ಯಾಕ್ ಇರುವ ಈ ವಿಶಿಷ್ಟ ಮಾದರಿಗಳು ದಕ್ಷಿಣ ಕನ್ನಡ ಜಿಲ್ಲೆಯ ಶಿರಾಡಿ ಸೇರಿದಂತೆ ಅಲ್ಲಲ್ಲಿ ಇವೆ. ಹೊಸ ಸ್ಮಶಾನ ಮತ್ತು ಸಮುದಾಯ ಭವನವು ಜ.17ರಂದು ಶಿರಾಡಿ ಗ್ರಾಮದ ಸೇಂಟ್ ಪೀಟರ್ ಆ್ಯಂಡ್ ಸೇಂಟ್ ಪಾಲ್ ಚರ್ಚ್‌ನಲ್ಲಿ ಉದ್ಘಾಟನೆಯಾಗಲಿದೆ.
ಇನ್ನೂ ಕೆಲವೆಡೆ ಒಂದು ಕುಟುಂಬಕ್ಕೆ ಒಂದು ಅಥವಾ ಎರಡು ಗುಂಡಿಗಳೆಂದು ನಿಗದಿಪಡಿಸಿ ನೀಡಿರುತ್ತಾರೆ. ಆ ಕುಟುಂಬದಲ್ಲಿ ಎಷ್ಟೇ ಮಂದಿ ಮೃತಪಟ್ಟರೂ ತಮ್ಮ ಕುಟುಂಬಕ್ಕೆ ನಿಗದಿಪಡಿಸಿದ ಗುಂಡಿಗಳಲ್ಲೇ ಹೂಳುವ ಕ್ರಮವೂ ಈಗ ಹೆಚ್ಚಾಗುತ್ತಿದೆ.
ರ‍್ಯಾಕ್ ಪದ್ಧತಿ ಅಂದ್ರೆ ಇದೇನೇ...
ಸಾವು ಕೇವಲ ನೋವಿನ ವಿಚಾರವಲ್ಲ, ಬಡವರಿಗೆ, ಮಧ್ಯಮ ವರ್ಗದವರಿಗೆ ಹೊರೆಯೂ ಆಗಿದೆ. ಹಾಗಾಗಿ, ಸಂಚಾರಿ ಶವ ದಹನ ಯಂತ್ರ ಖರೀದಿಸಲು ಇಚ್ಛಿಸಿದ್ದೇವೆ. ಅಂತ್ಯ ಸಂಸ್ಕಾರದ ಹೊರೆಯನ್ನು ತಗ್ಗಿಸುವುದಕ್ಕೆ ಎಲ್ಲರೂ ಕೈಜೋಡಿಸಬೇಕು.– ವಿನೂಪ್ ಕುಮಾರ್, ವಿರಾಜಪೇಟೆ ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ
ಕೊಡಗಿನಲ್ಲಿ ಅಂದಾಜು ಸುಮಾರು 300ಕ್ಕೂ ಅಧಿಕ ಶವಗಳನ್ನು ಸಂಚಾರಿ ಶವ ದಹನ ಯಂತ್ರದಲ್ಲಿ ದಹಿಸಲಾಗಿದೆ. ಇದು ಪರಿಸರಸ್ನೇಹಿ ಹಾಗೂ ಹೆಚ್ಚು ಶ್ರಮವಿಲ್ಲದ ವಿಧಾನ. ಮೃತರ ಕುಟುಂಬಸ್ಥರು ನಿಗದಿಪಡಿಸಿದ ಜಾಗದಲ್ಲಿ ಸಂಸ್ಕಾರ ಮಾಡಲಾಗುತ್ತದೆ. ಶವ ದಹಿಸಲು ಒಂದೂವರೆಯಿಂದ ಎರಡು ಗಂಟೆಗಳ ಬೇಕಾಗುತ್ತದೆ. ಕೊಯಮತ್ತೂರಿನಲ್ಲಿ ಈ ಬಗೆಯ ಯಂತ್ರಗಳು ಸಿಗುತ್ತವೆ.– ಶಾಂತಕುಮಾರ್, ‘ಐವರ್ ಮಡಂ’ (ಸಂಚಾರಿ ಶವದಹಿಸುವ ಸಂಸ್ಥೆ) ಪ್ರತಿನಿಧಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.