ಪ್ರಕೃತಿಗೆ ಮಾರಕವಾಗಿರುವ ಪ್ಲಾಸ್ಟಿಕ್‌ನ ವಿಲೇವಾರಿಯೇ ದೊಡ್ಡ ಸವಾಲು. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಪ್ಲಾಸ್ಟಿಕ್‌ಗಳನ್ನು ಬಳಸಿ ರಸ್ತೆ ನಿರ್ಮಿಸಲಾಗಿದೆ. ಇದಕ್ಕಾಗಿ ಸುಮಾರು 170 ಟನ್ ಪ್ಲಾಸ್ಟಿಕ್ ಬಳಕೆಯಾಗಿದೆ.
ಗಾಳಿಯಲ್ಲಿ ತೂರಾಡುತ್ತ ಎಲ್ಲಿಂದಲೋ ಬಂದು ರಸ್ತೆ ಅಂಚಿನಲ್ಲಿ ಅಪ್ಪಚ್ಚಿಯಾಗಿ ಬಿದ್ದಿದ್ದ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಅನ್ನು ಪರಿಸರ ಪ್ರೇಮಿಯೊಬ್ಬ ತೆಗೆದು ಸುರುಳಿ ಸುತ್ತುತ್ತ ಸಾಗುತ್ತಾನೆ. ಮುಂದೆ ಒಂದೊಂದೇ ಕ್ಯಾರಿಬ್ಯಾಗ್ ಸೇರುತ್ತ ಸೇರುತ್ತ ಆ ಸುರುಳಿ ದೊಡ್ಡ ಉಂಡೆಯಾಗಿ, ತಳ್ಳಲಾರದಷ್ಟು ಭಾರವಾಗುತ್ತದೆ. ಅದು ಬೃಹದಾಕಾರವಾಗಿ ಬೆಳೆದು ಆತನನ್ನೇ ನುಂಗುವ ಬ್ರಹ್ಮರಾಕ್ಷಸನ ರೂಪ ತಾಳುತ್ತದೆ...
ಏಕ ಬಳಕೆಯ ಪ್ಲಾಸ್ಟಿಕ್‌ನ ದುಷ್ಪರಿಣಾಮಗಳ ಗಾಢತೆಯನ್ನು ಢಾಳಾಗಿ ಬಿಂಬಿಸಿದ್ದ ಈ ರೀಲ್‌ವೊಂದು ಒಂದೆರಡು ವರ್ಷಗಳ ಹಿಂದೆ ಹಲವರ ಮನಕಲಕಿದ್ದು ಸುಳ್ಳಲ್ಲ. ಬಹಳಷ್ಟು ಮಂದಿ ಇದಕ್ಕೆ ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ಜಾಗ ಕೊಟ್ಟಿದ್ದರು.
ಪ್ರತಿನಿತ್ಯ ಉತ್ಪತ್ತಿಯಾಗುವ ಕಸ, ಅದರಲ್ಲೂ ಮುಖ್ಯವಾಗಿ ಜೀವ ಸಂಕುಲಕ್ಕೆ ಕಂಟಕಪ್ರಾಯವಾದ ಏಕ ಬಳಕೆಯ ಪ್ಲಾಸ್ಟಿಕ್‌ನ ವಿಲೇವಾರಿ ಆಡಳಿತ ವ್ಯವಸ್ಥೆಗೆ ದೊಡ್ಡ ಸವಾಲಾಗಿದೆ. ಡಂಪಿಂಗ್ ಯಾರ್ಡ್‌ಗಳು ಪ್ಲಾಸ್ಟಿಕ್ ಗುಡ್ಡಗಳಾಗಿ ಪರಿವರ್ತನೆಯಾಗುತ್ತಿವೆ. ಪ್ಲಾಸ್ಟಿಕ್ ಬಾಟಲಿಗಳು, ಕುರುಕಲು ತಿಂಡಿಗಳ ಕವರ್‌ಗಳು ಜಲಮೂಲ ಸೇರಿ ಮಾಲಿನ್ಯ ಸೃಷ್ಟಿಸುತ್ತಿವೆ. ಯಾವ ನಗರವೂ ಈ ಸಮಸ್ಯೆಯಿಂದ ಹೊರತಾಗಿಲ್ಲ.
ಸಂಕೀರ್ಣವಾದ ಈ ಪ್ಲಾಸ್ಟಿಕ್ ಕಸದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿ ಪುಟ್ಟ ಪ್ರಯತ್ನವೊಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿದೆ.
ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳು ಮನೆ–ಮನೆಗಳಿಂದ ಸಂಗ್ರಹಿಸಿದ ಕಸದಲ್ಲಿ ಹೆಕ್ಕಿ ತೆಗೆದ ಸುಮಾರು 170 ಟನ್ ಪ್ಲಾಸ್ಟಿಕ್ ಬಳಸಿ ಕರಾವಳಿಯಲ್ಲಿ ಅಂದದ ರಸ್ತೆ ನಿರ್ಮಾಣ ಮಾಡಲಾಗಿದೆ.
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿಯಿಂದ ನಂತೂರುವರೆಗೆ, ಸುರತ್ಕಲ್‌ನಿಂದ ಉಡುಪಿ ಜಿಲ್ಲೆಯ ಸಾಸ್ತಾನದವರೆಗೆ ಕಡಿಮೆ ಸಾಂದ್ರತೆಯ ಪಾಲಿಥಿಲೀನ್ (ಎಲ್‌ಡಿಪಿಇ) ಬಳಸಿ ಒಟ್ಟು 47 ಕಿ.ಮೀ ಸರ್ವಿಸ್ ರಸ್ತೆ, 20 ಕಿ.ಮೀ ಮುಖ್ಯ ರಸ್ತೆ ನಿರ್ಮಿಸಲಾಗಿದೆ. ಪ್ಲಾಸ್ಟಿಕ್ ಪವಡಿಸಿದ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿವೆ.
ಏನಿದು ಪ್ಲಾಸ್ಟಿಕ್ ಹೊದಿಕೆಯ ರಸ್ತೆ?
ಹೆಚ್ಚು ಮಳೆಯಾಗುವ ಕರಾವಳಿಯಂತಹ ಪ್ರದೇಶಗಳಲ್ಲಿ ಡಾಂಬರ್ ರಸ್ತೆಗಳಲ್ಲಿ ಬಹುಬೇಗ ಹೊಂಡಗಳು ಇಣುಕುವುದು ಸಾಮಾನ್ಯ. ಜನರಿಂದ ಹಿಡಿಶಾಪ ಹಾಕಿಸಿಕೊಳ್ಳುವ ಅಧಿಕಾರಿಗಳು ಇದಕ್ಕೆ ಪರಿಹಾರ ಹುಡುಕ ಹೊರಟಾಗ ಹೊಳೆದಿದ್ದು ಪ್ಲಾಸ್ಟಿಕ್ ಹೊದಿಕೆಯ ರಸ್ತೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಂಗಳೂರು ಕಚೇರಿಯ ಯೋಜನಾ ನಿರ್ದೇಶಕರು, ರಸ್ತೆ ನಿರ್ಮಾಣದಲ್ಲಿ ಪ್ಲಾಸ್ಟಿಕ್ ಬಳಸಬಹುದಾದ ಕುರಿತು ಯೋಜನಾ ವರದಿಯೊಂದನ್ನು ಸಿದ್ಧಪಡಿಸಿ ಕೇಂದ್ರ ಹೆದ್ದಾರಿ ಇಲಾಖೆಗೆ ಸಲ್ಲಿಸಿದ್ದರು. ಹೆದ್ದಾರಿ ನಿರ್ಮಾಣಕ್ಕೆ ಮಾನದಂಡ ರೂಪಿಸುವ ಇಂಡಿಯನ್ ರೋಡ್ ಕಾಂಗ್ರೆಸ್ (ಐಆರ್‌ಸಿ) ಈ ವರದಿಗೆ ಒಪ್ಪಿಗೆ ನೀಡಿತು. ಇದರ ಫಲವಾಗಿ ಇಲ್ಲಿ ಈಗ, ಒಟ್ಟು 67 ಕಿ.ಮೀ ರಸ್ತೆ ಪ್ಲಾಸ್ಟಿಕ್ ಹೊದಿಕೆಯೊಂದಿಗೆ ಮೈಚಾಚಿಕೊಂಡಿದೆ.
ರಸ್ತೆ ನಿರ್ಮಾಣದಲ್ಲಿ ಜಲ್ಲಿ ಮತ್ತು ಬಿಟುಮಿನ್ ಮಿಶ್ರಣದ ತಂತ್ರಜ್ಞಾನ ಹೆಚ್ಚು ಪ್ರಚಲಿತದಲ್ಲಿದೆ. ಸುಮಾರು 160 ಡಿಗ್ರಿ ಸೆಲ್ಸಿಯಸ್ ಉಷ್ಣತೆಯಲ್ಲಿ ಡಾಂಬರ್ ಬಿಸಿ ಮಾಡುವಾಗ, ಸಂಸ್ಕರಿಸಿದ ಎಲ್‌ಡಿಪಿಇ ಪ್ಲಾಸ್ಟಿಕ್ ಜೊತೆ ಸೇರಿಸಿ, ಅದನ್ನು ಜಲ್ಲಿ ಮೇಲೆ ಸುರಿದರೆ ರಸ್ತೆಯ ಗಟ್ಟಿತನ ಹೆಚ್ಚಾಗಿ, ದೀರ್ಘ ಬಾಳಿಕೆ ಬರುತ್ತದೆ. ಡಾಂಬರ್ ಮತ್ತು ಎಲ್‌ಡಿಪಿಇ ಪ್ಲಾಸ್ಟಿಕ್ ಅನ್ನು ಶೇಕಡ 90:10ರ ಅನುಪಾತದಲ್ಲಿ ಬಳಕೆ ಮಾಡಲಾಗುತ್ತದೆ ಎನ್ನುತ್ತಾರೆ ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಅಬ್ದುಲ್ ಜಾವೇದ್ ಅಜ್ಮಿ.
ಪ್ಲಾಸ್ಟಿಕ್ ಎಲ್ಲಿಂದ?
ಐಆರ್‌ಸಿ ಅನುಮತಿ ಸಿಕ್ಕಿದೇ ತಡ ಗುತ್ತಿಗೆದಾರ ಕಂಪನಿ ದೊಡ್ಡ ಪ್ರಮಾಣದ ಎಲ್‌ಡಿಪಿಇ ಎಲ್ಲಿ ಸಿಗಬಹುದೆಂದು ಹುಡುಕಾಟ ನಡೆಸಿದಾಗ ಅವರ ಕಣ್ಣಿಗೆ ಬಿದ್ದಿದ್ದು ಸಮಗ್ರ ಘನತ್ಯಾಜ್ಯ ನಿರ್ವಹಣಾ ಕೇಂದ್ರಗಳು (ಎಂಆರ್‌ಎಫ್).
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೆಂಕ ಎಡಪದವು, ಕೆದಂಬಾಡಿ, ಶಂಭೂರು, ಉಜಿರೆ ಈ ನಾಲ್ಕು ಸ್ಥಳಗಳಲ್ಲಿ ಎಂಆರ್‌ಎಫ್‌ಗಳನ್ನು ಸ್ಥಾಪನೆ ಮಾಡಲಾಗಿದೆ. ಈ ಕೇಂದ್ರಗಳಲ್ಲಿ ಜನವರಿಯಿಂದ ಮೇ ವರೆಗೆ ಸಂಗ್ರಹವಾದ ಕ್ಯಾರಿಬ್ಯಾಗ್, ಪ್ಯಾಕೇಜಿಂಗ್ ಕವರ್‌ಗಳನ್ನು ಸಂಸ್ಕರಿಸಿ, ರಸ್ತೆ ನಿರ್ಮಾಣಕ್ಕೆ ನೀಡಲಾಗಿದೆ.
ಕುರ್‌ಕುರೆ, ಲೇಸ್‌ನಂತಹ ಕುರುಕಲು ತಿಂಡಿಯ ಪ್ಲಾಸ್ಟಿಕ್ ಕವರ್‌ಗಳು, ನೀರು ಕುಡಿದು ಎಸೆಯುವ ಬಾಟಲಿಗಳು, ಪಾರ್ಸೆಲ್ ಸುತ್ತಿಕೊಂಡು ಬರುವ ರಟ್ಟು, ರದ್ದಿ ಪೇಪರ್‌ಗಳು, ಕ್ಯಾರಿಬ್ಯಾಗ್‌ಗಳು...
ಹೀಗೆ ಮನೆಯಲ್ಲಿ ನಿತ್ಯ ಉತ್ಪತ್ತಿಯಾಗುವ ಕಸವೇ ಇಲ್ಲಿ ಕಾಸು ತಂದು ಕೊಡುತ್ತಿವೆ. ಕಸದಿಂದ ಬರುವ ಆದಾಯವೇ ಇಲ್ಲಿ ದುಡಿಯುವ ಮಹಿಳೆಯರಿಗೆ ನಿತ್ಯದ ತುತ್ತು ನೀಡುತ್ತಿದೆ. ಮಂಗಳೂರಿನ ಮಂಗಳಾ ರಿಸೋರ್ಸಸ್ ಮ್ಯಾನೇಜ್‌ಮೆಂಟ್ ಸಂಸ್ಥೆ ಈ ಎಂಆರ್‌ಎಫ್‌ಗಳ ನಿರ್ವಹಣೆಯ ಹೊಣೆ ವಹಿಸಿಕೊಂಡಿದೆ.
ಜಿಲ್ಲೆಯಲ್ಲಿ 223 ಗ್ರಾಮ ಪಂಚಾಯಿತಿಗಳು ಇವೆ. ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿ ಎಲ್ಲ ಪಂಚಾಯಿತಿಗಳೂ ಸ್ವಚ್ಛ ಸಂಕೀರ್ಣ ಘಟಕಗಳನ್ನು ಹೊಂದಿವೆ. ಪ್ರತಿ ಮನೆಯಿಂದ ಸಂಗ್ರಹಿಸುವ ಒಣ ಕಸವನ್ನು ಇಲ್ಲಿ ಪ್ರತ್ಯೇಕಿಸಿ ಎಂಆರ್‌ಎಫ್‌ಗೆ ಪೂರೈಕೆ ಮಾಡಲಾಗುತ್ತದೆ.
‘ಎಂಆರ್‌ಎಫ್‌ನಲ್ಲಿ ಪೇಪರ್, ರಟ್ಟು, ಟೆಟ್ರಾ ಪ್ಯಾಕ್, ಕ್ಯಾರಿಬ್ಯಾಗ್, ಪೆಟ್ ಬಾಟಲ್, ಮಲ್ಟಿ ಲೇಯರ್ ಪ್ಲಾಸ್ಟಿಕ್, ಬಟ್ಟೆ... ಹೀಗೆ 33 ಪ್ರತ್ಯೇಕ ವಿಭಾಗಗಳಲ್ಲಿ ಕಸವನ್ನು ವಿಂಗಡಣೆ ಮಾಡುತ್ತೇವೆ. ಕೇಂದ್ರಕ್ಕೆ ಬೇಕಾದ ಯಂತ್ರಗಳು ಜಿಲ್ಲಾ ಪಂಚಾಯಿತಿಯ ಮುತುವರ್ಜಿಯಲ್ಲಿ ಅಳವಡಿಕೆಯಾಗಿವೆ’ ಎನ್ನುತ್ತಾರೆ ಮಂಗಳಾ ರಿಸೋರ್ಸಸ್ ಮ್ಯಾನೇಜ್‌ಮೆಂಟ್ ನಿರ್ದೇಶಕ ಸಚಿನ್ ಶೆಟ್ಟಿ.
ಎಂಆರ್‌ಎಫ್‌ಗಳಲ್ಲಿ ಕೆಲಸ ಮಾಡುವವರಲ್ಲಿ ಶೇಕಡ 80ರಷ್ಟು ಮಹಿಳೆಯರು. ಅವರು ಕೈಗೆ ಗ್ಲೌಸ್, ಮೈಗೆ ಏಪ್ರಾನ್ ಹಾಕಿಕೊಂಡು ಯಂತ್ರದ ಧಾರೆಯಲ್ಲಿ ಸರಸರನೆ ಮುಂದೆ ಓಡುವ ಕಸವನ್ನು ಹೆಕ್ಕಿ ಹೆಕ್ಕಿ ಪ್ರತ್ಯೇಕಿಸುತ್ತಾರೆ. ಪುರುಷರು ಅವುಗಳನ್ನು ಬಂಡಲ್ ಕಟ್ಟಿ ಪೇರಿಸಿಡುತ್ತಾರೆ. ಸ್ವಚ್ಛತೆಯೇ ಮೊದಲ ಆದ್ಯತೆ ಎಂಬಂತೆ ಘಟಕಗಳನ್ನು ಅತ್ಯಂತ ಶಿಸ್ತುಬದ್ಧವಾಗಿ, ಅಚ್ಟುಕಟ್ಟಾಗಿ ನಿರ್ವಹಿಸುವಲ್ಲಿ ಈ ಮಹಿಳೆಯರ ಪಾತ್ರ ದೊಡ್ಡದು.
ಘಟಕ ಭರ್ತಿಯಾದಂತೆ ಈ ಬಂಡಲ್‌ಗಳು ಲಾರಿಯಲ್ಲಿ ಕಲಬುರಗಿ, ಬೆಳಗಾವಿ, ಸೂರತ್, ಮುಂಬೈ ಭಾಗಗಳ ಸಿಮೆಂಟ್ ಫ್ಯಾಕ್ಟರಿ, ರಿಸೈಕಲ್ ಘಟಕಗಳನ್ನು ಸೇರುತ್ತವೆ. ಅಲ್ಲಿ ಸುಂದರ ಉತ್ಪನ್ನಗಳಾಗಿ ರೂಪುಗೊಂಡು ಮತ್ತೆ ಮಾರುಕಟ್ಟೆಗೆ ಬರುತ್ತವೆ.
‘ಹಲವಾರು ಧಾರ್ಮಿಕ ಕ್ಷೇತ್ರಗಳನ್ನು ಹೊಂದಿರುವ ಜಿಲ್ಲೆಗೆ ವರ್ಷವಿಡೀ ಪ್ರವಾಸಿಗರ ಭೇಟಿ ಇದ್ದೇ ಇರುತ್ತದೆ. ನದಿಗಳಲ್ಲಿ ಸ್ನಾನ ಮಾಡಿ ಬಟ್ಟೆಯನ್ನು ಅಲ್ಲಿಯೇ ಬಿಸಾಡಿ ಹೋಗುವವರೂ ಇರುತ್ತಾರೆ. ಇಂತಹ ಬಟ್ಟೆಗಳೂ ಎಂಆರ್‌ಎಫ್‌ಗೆ ಬರುತ್ತವೆ. ಬಹುಪ್ರಮಾಣದಲ್ಲಿ ಬರುವ ಬಟ್ಟೆ, ಚಪ್ಪಲಿಗಳ ಪರ್ಯಾಯ ಬಳಕೆ ಬಗ್ಗೆ ಯೋಚಿಸುತ್ತಿದ್ದೇವೆ’ ಎನ್ನುತ್ತಾರೆ ಮಂಗಳಾ ರಿಸೋರ್ಸಸ್ ಮ್ಯಾನೇಜ್‌ಮೆಂಟ್‌ನ ಅಧ್ಯಕ್ಷ ದಿಲ್‌ರಾಜ್ ಆಳ್ವ.
‘ಶೂನ್ಯ ರೂಪಾಯಿ ಮಾದರಿ’ ಎಂಆರ್‌ಎಫ್, ಶೂನ್ಯ ತ್ಯಾಜ್ಯದ ಮಾದರಿ ಕೂಡ ಆಗಿದೆ. ಇಲ್ಲಿ ಯಾವುದೇ ವಸ್ತುವನ್ನೂ ‘ತ್ಯಾಜ್ಯ’ ಎಂದು ಭುವಿಯ ಒಡಲಿಗೆ ಎಸೆಯುವುದಿಲ್ಲ. ಎಲ್ಲವೂ ಪುನರ್ಬಳಕೆಯಾಗುತ್ತವೆ. ತ್ಯಾಜ್ಯವನ್ನು ತಗ್ಗಿಸಿ ಅದನ್ನೇ ಸಂಪನ್ಮೂಲವಾಗಿ ಸದ್ಬಳಕೆ ಮಾಡಿಕೊಳ್ಳುವ ಪ್ರಯತ್ನ ಇಲ್ಲಿ ಯಶಸ್ವಿಯಾಗಿದೆ.
ಯಶಸ್ಸು ಇಲ್ಲಿ ಮಾತ್ರ
ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ದಕ್ಷಿಣ ಕನ್ನಡ, ಉಡುಪಿ, ಬಳ್ಳಾರಿ ಮತ್ತು ರಾಮನಗರ ಜಿಲ್ಲೆಗಳಲ್ಲಿ ಎಂಆರ್‌ಎಫ್ ಘಟಕಗಳನ್ನು ಪ್ರಾಯೋಗಿಕವಾಗಿ ನಿರ್ಮಿಸಲು 2023ರಲ್ಲಿ ಯೋಜನೆ ರೂಪಿಸಿತ್ತು. ಅವುಗಳಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಾತ್ರ ಈ ಘಟಕಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.