ಬೊಜ್ಜು (ಪ್ರಾತಿನಿಧಿಕ ಚಿತ್ರ)
ನನಗೆ ಸಿಸೇರಿಯನ್ ಹೆರಿಗೆಯಾಗಿ ಎರಡು ತಿಂಗಳಾಗಿದೆ. ಹೊಟ್ಟೆ ತುಂಬಾ ಮುಂದೆ ಇದ್ದು, ಹೆರಿಗೆ ಮಾಡಿಸಿದ ವೈದ್ಯರು ಹೊಟ್ಟೆಗೆ ಬಟ್ಟೆ ಸುತ್ತುವುದರಿಂದ ಅಥವಾ ಬೆಲ್ಟ್ ಹಾಕುವುದರಿಂದ ತೂಕವೇನೂ ಕಡಿಮೆಯಾಗದು ಎಂದಿದ್ದಾರೆ. ಹಾಗಾಗಿ, ಬೆಲ್ಟ್ ಹಾಕುತ್ತಿಲ್ಲ. ನಮ್ಮ ಅಕ್ಕನಿಗೆ 5 ವರ್ಷದ ಮಗನಿದ್ದಾನೆ. ಅವಳಿಗೆ ಹೊಟ್ಟೆ ಮುಂದೆ ಇಲ್ಲ. ಹೆರಿಗೆಯಾಗಿ ಮೂರು ತಿಂಗಳವರೆಗೆ ಅವಳು ಹೊಟ್ಟೆಗೆ ಬಟ್ಟೆ ಸುತ್ತಿಕೊಳ್ಳುತ್ತಿದ್ದಳಂತೆ. ನನ್ನ ಹೊಟ್ಟೆ ಹೀಗೇ ಉಳಿದುಬಿಡುತ್ತದೇನೋ ಅನ್ನುವ ಚಿಂತೆ ಕಾಡುತ್ತಿದೆ. ಏನು ಮಾಡಲಿ?
ವನಜಾ, ಬೆಂಗಳೂರು
ಮೊದಲನೆಯದಾಗಿ, ಹೆರಿಗೆಯ ನಂತರ ಹೊಟ್ಟೆಗೆ ಸೀರೆ ಸುತ್ತುವುದು ಅಥವಾ ಬೆಲ್ಟ್ ಹಾಕುವುದರಿಂದ, ಎದ್ದು ಓಡಾಡುವಾಗ, ಎದೆ ಹಾಲುಣಿಸುವಾಗ, ಮಗುವನ್ನು ಆಟವಾಡಿಸುವಂತಹ ಸಂದರ್ಭಗಳಲ್ಲಿ ಬೆನ್ನಿಗೆ ಮತ್ತು ಹೊಟ್ಟೆಗೆ ಒಂದು ರೀತಿ ಬೆಂಬಲ (ಸಪೋರ್ಟ್) ಸಿಕ್ಕಂತೆ ಆಗುತ್ತದೆ ಅಷ್ಟೇ. ಅದರ ಹೊರತಾಗಿ ತೂಕ ಕಡಿಮೆ ಮಾಡುವ ಅಥವಾ ಹೊಟ್ಟೆ ಕರಗಿಸುವ ವಿಧಾನ ಅದಲ್ಲ. ಸಿಸೇರಿಯನ್ ಹೆರಿಗೆ ಆದಾಗ, ಎರಡು ದಿನಕ್ಕೆಲ್ಲಾ ಗಾಯದ ಮೇಲ್ಭಾಗದಲ್ಲಿ ಸಡಿಲವಾಗಿ ಹತ್ತಿಯ ಸೀರೆ ಸುತ್ತಬಹುದು. ನಂತರ ಹೆರಿಗೆಯಾಗಿ ತಿಂಗಳಾದ ಮೇಲೆ ಸೂಕ್ತ ಬೆಲ್ಟನ್ನು ಮೂರ್ನಾಲ್ಕು ತಿಂಗಳವರೆಗೆ ಧರಿಸುತ್ತಾ ಬರಬಹುದು. ರಾತ್ರಿ ಮಲಗುವಾಗ, ಊಟ, ತಿಂಡಿ ಮಾಡುವಾಗ ಬೆಲ್ಟ್ ಧರಿಸುವುದು ಬೇಡ.
ಇವೆಲ್ಲಾ ವಿಧಾನಗಳಿಂದ ಹೊಟ್ಟೆಯ ತೂಕ ಕಡಿಮೆಯಾಗುವುದಿಲ್ಲ. ಗರ್ಭಧಾರಣೆಯಲ್ಲಿ ಹೆಚ್ಚುವರಿಯಾಗಿ ಕೊಬ್ಬು ಶೇಖರಣೆಯಾಗಿರುತ್ತದೆ. ಮಗುವಿಗೆ 6 ತಿಂಗಳು ಬರೀ ಎದೆಹಾಲು ಕುಡಿಸುವುದರಿಂದ ಇಡೀ ಶರೀರದ ಕೊಬ್ಬು ಕರಗಿ ಹೊಟ್ಟೆಯ ಬೊಜ್ಜೂ ಕರಗುತ್ತದೆಯೇ ವಿನಾ ಹೊಟ್ಟೆಯ ಬೊಜ್ಜನ್ನಷ್ಟೇ ಅದರಿಂದ ಕರಗಿಸಲು ಸಾಧ್ಯವಿಲ್ಲ. ಹೆಚ್ಚಿನ ಮಹಿಳೆಯರಿಗೆ ಹೊಟ್ಟೆಯ ಮಾಂಸಖಂಡಗಳ ದೃಢತೆ ಸರಿಯಾಗಿ ಇರದೇ ಇದ್ದಾಗ, ಹೊಟ್ಟೆಯ ಸ್ನಾಯುಗಳ ಬಲವನ್ನು ಕಾಯ್ದುಕೊಳ್ಳದೇ ಇದ್ದಾಗ ಹೆರಿಗೆಯ ನಂತರ, ವಯಸ್ಸಾಗುತ್ತಿದ್ದ ಹಾಗೆ ಹೊಟ್ಟೆ ಮುಂದೆ ಬರುತ್ತದೆ. ಸಿಸೇರಿಯನ್ ಹೆರಿಗೆ ಆಗಿದ್ದರೂ 6 ವಾರಗಳ ನಂತರ, ದೀರ್ಘವಾಗಿ ಉಸಿರನ್ನು ತೆಗೆದುಕೊಂಡು ಹೊಟ್ಟೆಯ ಸ್ನಾಯುಗಳನ್ನು ಒಳಗೆ ಎಳೆದುಕೊಳ್ಳುತ್ತಾ ಓಡಾಡಬೇಕು, ಮಂಡಿಯನ್ನು ಮಡಚದೆ, ನಿಧಾನವಾಗಿ ಎರಡೂ ಕಾಲುಗಳನ್ನು 30 ಡಿಗ್ರಿ ಮತ್ತು 60 ಡಿಗ್ರಿಗೆ ಎತ್ತುತ್ತಾ ಬರಬೇಕು. ಹೀಗೆ ಹೊಟ್ಟೆಯ ಸ್ನಾಯುಗಳ ದೃಢತೆಯನ್ನು ಕಾಪಾಡಿಕೊಂಡರೆ ಉದರ ಭಾಗದಲ್ಲಿ ಬೊಜ್ಜು ಹೆಚ್ಚು ಶೇಖರಣೆಯಾಗುವುದಿಲ್ಲ. ಇದರ ಜೊತೆಗೆ ಅಧಿಕ ಕೊಬ್ಬಿನ ಆಹಾರ ಹಾಗೂ ಜಂಕ್‍ಫುಂಡ್ ಸೇವನೆ ತ್ಯಜಿಸುವುದು, ಹೆಚ್ಚು ಹೆಚ್ಚು ಹಸಿರುಸೊಪ್ಪು, ತರಕಾರಿ, ಬೇಳೆಕಾಳುಗಳ ಸೇವನೆಯಿಂದಲೂ ತೂಕವನ್ನು ನಿಯಂತ್ರಿಸಿಕೊಳ್ಳಬಹುದು. ಬಾಣಂತನವೆಂದು ಅತಿಯಾಗಿ ವಿಶ್ರಾಂತಿ ತೆಗೆದುಕೊಳ್ಳದೆ, ನಿಮ್ಮ ಹಾಗೂ ನಿಮ್ಮ ಮಗುವಿನ ಕೆಲಸಗಳನ್ನು ನೀವೇ ಮಾಡಿಕೊಳ್ಳುತ್ತಿರಿ. ಇದರಿಂದ ನಿಮ್ಮ ಟಮ್ಮಿ ಟ್ರಿಮ್ ಆಗಿರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.