ADVERTISEMENT

ಮಳೆಯೇ ಒಂದು ಕವನ...

ಡಾ.ಲಕ್ಷ್ಮಣ ವಿ.ಎ.
Published 23 ಮೇ 2020, 19:30 IST
Last Updated 23 ಮೇ 2020, 19:30 IST
ದನಕರುಗಳಿಗೆ ನೀರು ತೋರಿಸೀತೇ ಈ ಹಾದಿ?! (ಸಾಂದರ್ಭಿಕ ಚಿತ್ರ: ಪ್ರಶಾಂತ್ ಎಚ್.ಜಿ.)
ದನಕರುಗಳಿಗೆ ನೀರು ತೋರಿಸೀತೇ ಈ ಹಾದಿ?! (ಸಾಂದರ್ಭಿಕ ಚಿತ್ರ: ಪ್ರಶಾಂತ್ ಎಚ್.ಜಿ.)   

ಬರೀ ಗಾಳಿ ಗುಡುಗು ಮಿಂಚು ಇದೆ ಅಲ್ಪ ಸ್ವಲ್ಪ ತುಂತುರು ಮಾತ್ರ ಮಳೆ ಕಡಿಮೆ.

ಹಾಗಿದ್ದರೆ ಎಲ್ಲೊ ಜೋರಾಗಿಯೇ ಹುಯ್ಯುತಿದೆ ಮಳೆ ಇಲ್ಲಿ ಅದರ ಅನುವಾದ ಮಾತ್ರ.

ಮಳೆಯೇ ಒಂದು ಕವನ; ಅದರ ಬಗ್ಗೆ ಕವಿತೆ ಬರೆಯುವುದೆಂದರೆ ನಾವು ಕವಿಗಳು ಕೂಡ ಅದರ ಅನುವಾದಕರಷ್ಟೇ. ಮಳೆ ಬೇಕೆಂದಾಗ ಬರುವುದಿಲ್ಲ. ಬೇಡವೆಂದಾಗ ನಿಲ್ಲುವುದೂ ಇಲ್ಲ. ಹೀಗಾಗಿ ಮಳೆ ಕವಿತೆಯಂತೆ, ಪ್ರೇಯಸಿಯ ಮುನಿಸಿನಂತೆ. ಮಳೆಯ ವಿರಾಟ್ ಸ್ವರೂಪ ನೆನಪಾಗಲು ಮತ್ತೊಂದು ಮಳೆಯೇ ಬರಬೇಕು. ಬೀಚಿಯವರು ಹೇಳಿದಂತೆ ಬಯಲು ಸೀಮೆಗೆ ಎರಡೇ ಕಾಲ– ಒಂದು ಬೇಸಿಗೆ ಕಾಲ, ಇನ್ನೊಂದು ಕಡು ಬೇಸಿಗೆ ಕಾಲ. ಬಯಲು ಸೀಮೆಯಲ್ಲಿ ಹುಟ್ಟಿದ ನನಗೆ ಮಳೆಯೆಂದರೆ ಎಂದಿಗೂ ಬೇಸರವಾಗದ ಕಾಲ.

ADVERTISEMENT

ಎಷ್ಟೊಂದು ಹೆಸರು ಈ ಮಳೆಗೆ. ಜಡಿಮಳೆ, ಸುರಿಮಳೆ, ಧೋ ಮಳೆ, ತುಂತುರು ಮಳೆ, ಸೋನೆ ಮಳೆ, ಮಹಾಮಳೆ, ಬಿರುಮಳೆ, ಮುಸಲಧಾರೆ! ಮಳೆ ಆಯಾ ನಕ್ಷತ್ರಕ್ಕೆ ತಕ್ಕಂತೆ. ಮಳೆಯ ಹೆಸರು ಇನ್ನೂ ಚಂದ– ಸ್ವಾತಿ ಮಳೆ, ಹಸ್ತಾ ಮಳೆ, ಚಿತ್ತಾ ಮಳೆ, ಧರಣಿ ಮಳೆ... ಹೆಸರಿಲ್ಲದ ಅಡ್ಡ ಮಳೆ, ಎಲ್ಲೋ ತೂಫಾನಿನಿಂದ ಹುಟ್ಟಿ ಯಾವುದೋ ದೇಶದ ಕಣ್ಣೀರು ಇಲ್ಲಿ ಚೆಲ್ಲಿ ನರ ನಾರಾಯಣರನ್ನೂ ಚೆಂಡಾಡುವ ಚಂಡಮಾರುತದ ಮಳೆ, ಕಳೆದ ವರ್ಷ ಕನ್ನಡಿಗರನ್ನು ಕಣ್ಣೀರಿನಲ್ಲಿ ಕೈ ತೊಳೆಸಿದ
ರುದ್ರ ಮಳೆ.

ನನ್ನ ಬಯಲು ಸೀಮೆಯ ಬಿರುಬೇಸಿಗೆಯಲ್ಲಿ ಆಗ ಸಾಕಿದ ಎಮ್ಮೆ ಕರು ಆಡುಗಳಿಗೆ ನೀರು ಕುಡಿಸುವುದೇ ಒಂದು ಸವಾಲಾಗಿರುತ್ತಿತ್ತು. ಸರಿಯಾಗಿ ಕರೆಂಟು ಬರುವ ಸಮಯ ನೋಡಿಕೊಂಡು ಯಾರದಾದರೂ ಬಾವಿಯ ಮೋಟಾರು ಶುರುವಿದ್ದರೆ ಅದರ ಕಾಲುವೆಗೆ ಹೊಡೆದುಕೊಂಡು ಹೋಗಿ ನಿಲ್ಲಿಸಿ ನೀರು ಕುಡಿಸಬೇಕಿತ್ತು. ಆಗ ನಮ್ಮೂರಿನಲ್ಲಿ ಅಷ್ಟಾಗಿ ಬಾವಿಗಳಿರಲಿಲ್ಲ. ಅಲ್ಲಿ ಮೋಟಾರು ಶುರುವಾದ ಸದ್ದು ಕೇಳಿಸಿದೊಡನೆ ಅಥವಾ ಯಾರಾದರೂ ಹೇಳಿದೊಡನೆ ಅಲ್ಲಿಗೆ ದನ ಹೊಡೆದುಕೊಂಡು ಹೋಗುವಷ್ಟರಲ್ಲಿ ನೀರು ಬರುತ್ತಿದ್ದರೆ ನಮ್ಮ ಅದೃಷ್ಟ. ಇಲ್ಲವೆಂದರೆ ಇಡೀ ರಾತ್ರಿ ಆ ಮೂಕಪ್ರಾಣಿಗಳ ಸಂಕಟ ನೋಡಲಾಗುತ್ತಿರಲಿಲ್ಲ.

ಹೀಗೆ ಈಗಲೂ ಬಯಲು ಸೀಮೆಯ ಬಹುಪಾಲು ಜನರ ನೋಟ ಬಹುತೇಕ ಸಮಯ ಆಗಸದ ಕಡೆಗೇ ನೆಟ್ಟಿರುತ್ತದೆ. ಯಾವುದೋ ಮೂಲೆಯಲ್ಲಿ ಚೂರು ಮೋಡ ಕಂಡರೆ ಇವರ ಕಣ್ಣುಗಳಲ್ಲಿ ಮಿಂಚು. ಮೈ ಮನಗಳಲ್ಲಿ ವಿದ್ಯುತ್ ಹರಿದ ಕಂಪನ. ದೇವಮೂಲೆಯಲಿ ಮಿಂಚಿದರೆ ಖಂಡಿತ ಮಳೆಯಾಗುತ್ತದೆ ಎನ್ನುವ ನಂಬಿಕೆಯೂ ಇತ್ತು. ಹಾಗೋ ಹೀಗೋ ಮೇ ಕಳೆದು ಜೂನ್ ಎನ್ನುವಷ್ಟರಲ್ಲಿ ಮಾನ್ಸೂನು ಶುರುವಾಗಿ ಅಲ್ಲಲ್ಲಿ ಹಸುರು ಮೂಡಿ ಕೆರೆ ಕಟ್ಟೆಗಳಲ್ಲಿ ನೀರು ತುಂಬುವುದಕ್ಕೂ ನಮ್ಮ ಶಾಲೆ ಶುರುವಾಗುವುದಕ್ಕೂ ಸರಿ ಹೊಂದಿ ಇನ್ನು ಮುಂದಿನ ಅಕ್ಟೋಬರ್ ರಜೆಯವರೆಗೆ ದನ ಕರುಗಳ ಸುದ್ದಿ ನಮ್ಮ ಕಿವಿಗಳಿಗೆ ಬೀಳುತ್ತಿರಲಿಲ್ಲ.

ಹೈಸ್ಕೂಲು ಮುಗಿಸಿ ಧಾರವಾಡಕ್ಕೆ ಕಾಲೇಜಿನ ಅಡ್ಮಿಷನ್ ಮಾಡಿಸಲು ಬಂದಾಗ ಏಪ್ರಿಲಿನ ಏರು ಬಿಸಿಲು. ಆದರೂ ಕರ್ನಾಟಕ ಕಾಲೇಜು ಮರದ ನೆರಳೊಳಗೆ ಅಡಗಿ ಕುಳಿತ ತಣ್ಣನೆಯ ಮಡಿಕೆಯಂತಿತ್ತು. ಅಷ್ಟು ದೂರದಲ್ಲಿ ಆಕಾಶವಾಣಿ ನಿಲಯ. ಮಳೆಯ ಸುದ್ದಿ, ರೈತರಿಗೆ ಸಲಹೆ ಕೊಡುವ ಕಾರ್ಯಕ್ರಮ, ಕರಿಯೆತ್ತ ಕಾಳಿಂಗ ಬಿಳಿಯೆತ್ತ ಮಾಳಿಂಗ, ತುಸು ದೂರ ನಡೆದರೆ ಬೆಂದ್ರೆಯವರು ಕರೆದಂತೆ ಬಾರೋ ಸಾಧನಕೇರಿಗೆ.

ಧಾರವಾಡದ ನಡು ಮಧ್ಯಾಹ್ನಗಳು ಅಸಹನೀಯವೆನಿಸಿದರೂ ಸಂಜೆಯಾಗುತ್ತಿದ್ದಂತೆ ಟೈವಾಕ್ ಫ್ಯಾಕ್ಟರಿ, ಕರ್ನಾಟಕ ಯುನಿವರ್ಸಿಟಿ ಕಡೆಯಿಂದ ಬೀಸುವ ತಣ್ಣನೇ ಗಾಳಿಗೆ ಮೈ ಮನಸೆಲ್ಲ ಪುಳಕಗೊಳ್ಳುತ್ತಿತ್ತು. ಅದರಲ್ಲೂ ಸಂಜೆ ಐದರ ಮಳೆ ಹೊಡೆದ ನಂತರ ವಾಕಿಂಗ್ ಹೊರಟರಂತೂ ಮಾವಿನ ತೋಟದ ಕಂಪು ಹಾಗು ಮಣ್ಣಿನ ಘಮ ಬೋನಸ್ಸು. ಸಾಮಾನ್ಯವಾಗಿ ಪರೀಕ್ಷೆಗಳು ಈ ಬಿರುಬಿಸಿಲಿನ ಕೆಂಡದ ದಿನಗಳಲ್ಲೇ ನಡೆಯುತ್ತಿದ್ದುರಿಂದ ತಲೆ ಬಿಸಿ ಕೂಡ ಜಾಸ್ತಿ. ಆದರೂ ನಾಳೆ ಪರೀಕ್ಷೆ ಇಟ್ಟುಕೊಂಡು ಹೀಗೆ ದೂರದ ತನಕ ವಾಕಿಂಗ್ ಮಾಡುವ ಥ್ರಿಲ್ಲೇ ಬೇರೆ.

ಪರೀಕ್ಷೆ ಮುಗಿದು ಊರಿಗೆ ತೆರಳಿ ಮರಳಿ ಧಾರವಾಡಕ್ಕೆ ಬಂದರೆ ಊರು ಬಿಡುವಾಗ ಧೂಳು ಮೆತ್ತಿದ ಸಿಬಿಟಿಯಿಂದ ಯುನಿವರ್ಸಿಟಿಗೆ ಹೋಗುವ ರಸ್ತೆಯ ಇಕ್ಕೆಲದ ಮೇಲಿನ ಕಂಪೌಂಡುಗಳ ಮೇಲೆ ಮಳೆಯ ಗುರುತೆಂಬಂತೆ ಹಚ್ಚ‌ ಹಸಿರು ಪಾಚಿ, ಮತ್ತು ಮನ್ಸೂನಿನ ಮಳೆಯಲ್ಲಿ ನಡುಗುತ್ತ ನಿಂತ ಮರ ಗಿಡಗಳು. ಶಾಲೆ ಕಾಲೇಜಿಗೆ ನೆನೆಯುತ್ತ ಹೊರಟ ಬಾಲ- ಬಾಲೆಯರು ಮತ್ತು ಬೆಂದ್ರೆಯವರ ಮನಸಿನ ಚಿತ್ತಾ ಮಳೆ ಚಿತ್ತ ಹರಿದಂತೆ ಚಿತ್ರ ಬರೆದಂತೆ ಊರ ಮಾಡು ಗೋಡೆಗಳ ಮೇಲೆಲ್ಲ.

ಆಮೇಲೆ ಅಕ್ಟೋಬರ್ ನವೆಂಬರ್ ವರೆಗೆ ಮಳೆಯೋ ಮಳೆ. ನನಗಂತೂ ಆ ಮಳೆಯಲ್ಲಿ ನಡೆಯುತ್ತ ಹೋಗುವುದೇ ಇಷ್ಟ. ಯಾಕೆಂದರೆ ಇಲ್ಲಿ ಈ ಧಾರವಾಡದಲ್ಲಿ ಬಿದ್ದ ಒಂದಂಶದ ಮಳೆಯೂ ಊರಿನಲ್ಲಿ ಬೀಳುತ್ತಿರಲಿಲ್ಲ. ಊರಿನ ಪತ್ರ ಬಂದರೆ ಬರೆ ನಿಟ್ಟುಸಿರಿನ ಸದ್ದುಗಳು, ದೇವ್ರೆ ಯಾಕೆ ಇದು ಈ ಅನ್ಯಾಯ? ಒಬ್ಬರಿಗೆ ಬೇಡ ಬೇಡವೆನ್ನುವಷ್ಟು ಮಳೆ ಇನ್ನೊಂದು ಊರಿಗೆ ಕುಡಿಯುವ ನೀರಿಲ್ಲ. ಕೆಲವರಿಗೆ ತಲೆಮಾರು ತನಕ ಕುಳಿತು ತಿಂದರೂ ಕರಗದ ಸಂಪತ್ತು. ಇನ್ನು ಇಲ್ಲಿ ಬಡ ಹುಡುಗರಿಗೆ ತಿಂಗಳು ದುಡ್ಡು ಬರದಿದ್ದರೆ ಖಾನಾವಳಿಗಳಲ್ಲಿ ಸಾಲ ಬರೆದು ಊಟ ಮಾಡಿ ಕೆಲವು ಸಲ ಉಪವಾಸ ಬೀಳುವ ಸಂಕಟ.

ಒಂದೊಂದು ಊರಿನ ಮಳೆಗೂ ಒಂದೊಂದು ಲಯವಿರುತ್ತದೆ ಬೇಕಾದರೆ ಗಮನಿಸಿ. ಬಯಲು ಸೀಮೆಯ ಬಿರುಸು, ಮಲೆನಾಡಿನ ಅಕ್ಕಿ ಕೇರುವ ಮೊರದಂತೆ ಸುರಿಯುವ ಸೊಗಸು, ಚಿಕ್ಕ ಮಕ್ಕಳು ಅತ್ತಂತೆ ಧಾರವಾಡದ ಶ್ರಾವಣದ ಮಳೆ ಮುನಿಸು, ಕಲ್ಲು ಬಂಡೆಗಳ ಮೇಲೆ ನಿರ್ದಯವಾಗಿ ಕಟಿಯುವ ಕನಕಪುರದ ನಿರ್ದಯಿ ಮಳೆ. ಊರಿಗೊಂದು ಲಯ ಅದರದ್ದೇ ಆದ ಲಜ್ಜೆ. ಹೀಗಾಗಿ ಮಳೆ ಕವಿತೆಯಂತೆ ನಮ್ಮಂತವರಿಗೆ ನೆಂಟನಂತೆ, ಹದಿ ಹರೆಯದ ಹುಸಿ ಪ್ರೇಮದಂತೆ ನಡು ವಯಸಿನ ತಲ್ಲಣಗಳಂತೆ, ವೃದ್ಧಾಪ್ಯದ ಭಯದಂತೆ ಒಂದೊಂದು ವಯಸಿಗೂ ಒಂದೊಂದು ತರಹ.

ಈ ಸಲದ ಕೊರೋನಾ ಲಾಕ್ಡೌನಿನ ಪರಿಣಾಮವಾಗಿ ಮಕ್ಕಳ ಶಾಲೆ ಶುರುವಾಗುವುದು ತಡವಾಗಲಿದೆ. ಮಳೆಗಾಲದೊಂದಿಗೆ ಮಾವು ಹಲಸಿನ ಸೀಸನ್ನು ಸದ್ದಿಲ್ಲದೆ ಸರಿದು ಹೋಗಿದೆ. ಬಸ್ಸು ಟ್ರೇನು ವಿಮಾನಗಳೂ ಸ್ಟಿಲ್ ಆದವು. ತಿಂಗಳ ಹಿಂದೆ ನಡೆಯುತ್ತಲೇ ಹೊರಟ ವಲಸೆ ಕಾರ್ಮಿಕರಿನ್ನೂ ಮನೆ ತಲುಪಿದ ಸುದ್ದಿಯಿಲ್ಲ. ಅವರ ಕೆಂಡ ತುಳಿದ ಹಾದಿಗಳ ಕಾಲುಗಳ ತಂಪಾಗಿಸುವ ಕರುಣೆಯ ಮಳೆ ಸುರಿಯಲಿ. ಬಿರುಮಳೆಗೆ ಕರೋನಾ ಸತ್ತು ಮುಚ್ಚಿದ ಶಾಲೆಗಳ ಕಲರವ ಮತ್ತೆ ಮರಳಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.