ADVERTISEMENT

ಮಳೆಯಲಿ... ಮಲೆನಾಡಿನ ಘಾಟಿಯಲಿ...

ವಿಜಯ್ ಜೋಷಿ
Published 21 ಜುಲೈ 2018, 19:30 IST
Last Updated 21 ಜುಲೈ 2018, 19:30 IST
ಘಾಟಿಯ ಮಳೆ
ಘಾಟಿಯ ಮಳೆ   

ಮಳೆಯಲ್ಲಿ ಖುಷಿಪಡುವುದು ಅಂದರೆ ಏನು? ಚಿಕ್ಕವರ ಪಾಲಿಗೆ ಇದು ‘ಮಳೆಯಲ್ಲಿ ನೆನೆಯುವುದು, ಮನೆಯವರ ಬಳಿ ಬೈಸಿಕೊಳ್ಳುತ್ತಲೇ ಖುಷಿ ಅನುಭವಿಸುವುದು’! ಆದರೆ, ಯೌವನಕ್ಕೆ ಕಾಲಿಟ್ಟ ನಂತರವೂ ಮಳೆಯಲ್ಲಿ ನೆನೆಯುವಷ್ಟಕ್ಕೇ ಖುಷಿಯನ್ನು ಸೀಮಿತ ಮಾಡಿಕೊಳ್ಳಬಾರದಲ್ಲ?

ಹದಿನೆಂಟು ತುಂಬಿದ ನಂತರ ಬೈಕು, ಕಾರು ಓಡಿಸುವ ಲೈಸೆನ್ಸ್‌ ಪಡೆದುಕೊಳ್ಳಬೇಕು. ನಂತರ, ಪಶ್ಚಿಮ ಘಟ್ಟ ಸಾಲುಗಳಲ್ಲಿ ಮಹಾವಿಷ್ಣುವಿನಂತೆ ಆರಾಮವಾಗಿ ಮಲಗಿರುವ ಘಟ್ಟಗಳನ್ನು ಹತ್ತಿ ಇಳಿಯಬೇಕು– ಕನ್ನಡದ ಕರಾವಳಿಯನ್ನೂ, ಮಲೆನಾಡನ್ನೂ ಮುತ್ತಿಕ್ಕುತ್ತ ಅಲೆದಾಡಬೇಕು. ಅದೂ ಮಳೆಗಾಲದಲ್ಲಿ. ಆಗ ಗೊತ್ತಾಗುತ್ತದೆ ಮಳೆಗಾಲವನ್ನು ಅನುಭವಿಸುವುದರ ಮಜ ಏನು ಎಂಬುದು. ಮಲೆನಾಡು– ಕರಾವಳಿಯ ಮಳೆಯನ್ನು ಅನುಭವಿಸಲು ಇದೊಂದೇ ದಾರಿ ಎಂದೇನೂ ಇಲ್ಲ.

ನೀವು ಬಯಲುಸೀಮೆಯವರೋ, ಮೈಸೂರು– ಬೆಂಗಳೂರು ಕಡೆಯವರೋ ಆದರೆ ಮೂಡಿಗೆರೆ ಮಾರ್ಗವಾಗಿ ಸೀದಾ ಕೊಟ್ಟಿಗೆಹಾರಕ್ಕೆ ಹೋಗಿ ಅಲ್ಲೊಂದು ನೀರುದೋಸೆಯನ್ನೂ, ಬಿಸಿಬಿಸಿ ಕಾಫಿಯನ್ನೂ ಸವಿಯಿರಿ. ಅಷ್ಟಾದ ನಂತರ ಹಾಗೇ ಮುಂದಕ್ಕೆ ಜೀಕಿದರೆ ಸಿಗುವುದು ಚಾರ್ಮಾಡಿ ಘಾಟಿ. ಒಂದು ಬದಿ ಬೆಟ್ಟ, ಇನ್ನೊಂದು ಬದಿ ಪ್ರಪಾತ ಇರುವ ಈ ಘಾಟಿಯ ಉದ್ದಕ್ಕೂ ಸಿಗುವ ಜಲಪಾತಗಳನ್ನು ಕಾಣುತ್ತ ಸಾಗಬಹುದು. ಅಲ್ಲಲ್ಲಿ ವಾಹನ ನಿಲ್ಲಿಸಿ, ಬೆಟ್ಟದಿಂದಿಳಿದು ಬರುವ ಸಿಹಿನೀರನ್ನು ಬೊಗಸೆಯಲ್ಲಿ ಹಿಡಿದು ಕುಡಿದು, ಮಳೆಯ ಮೋಡಗಳಿಗೆ ಮೈತಾಗಿಸಿಕೊಳ್ಳುತ್ತ ಘಾಟಿ ಇಳಿಯಬೇಕು.

ADVERTISEMENT

ನಂತರ, ಉಜಿರೆ– ಗುರುವಾಯನಕೆರೆ– ಕಾರ್ಕಳ ಮಾರ್ಗವಾಗಿ ಸೋಮೇಶ್ವರ ತಲುಪಿದಿರಾದರೆ ಆಗುಂಬೆ ಘಾಟಿಯ ಬುಡ ತಲುಪುತ್ತೀರಿ. ದಣಿವಾಗಿದ್ದರೆ ಅಲ್ಲೊಂದು ಮಂಗಳೂರು ಬನ್ಸ್‌ ತಿಂದು, ಸೋಮೇಶ್ವರನಿಗೆ ನಮಸ್ಕರಿಸಿ ಘಾಟಿ ಹತ್ತಬೇಕು. ಆಗುಂಬೆ ಸೊಬಗನ್ನು ಡಾ. ರಾಜ್‌ಕುಮಾರ್‌ ಹಾಡಿನಲ್ಲಿ ಪೂರ್ತಿ ವಿವರಿಸಿಯಾಗಿದೆ. ಆಗುಂಬೆ ಪೇಟೆಯಲ್ಲಿ ಒಮ್ಮೆ ನಿಂತು, ‘ಮಾಲ್ಗುಡಿ ಡೇಸ್‌’ ಧಾರಾವಾಹಿಯ ಕಂತುಗಳನ್ನು ನೆನಪಿಗೆ ತಂದುಕೊಳ್ಳಬೇಕು. ಆರ್.ಕೆ. ನಾರಾಯಣ್ ಆಗುಂಬೆಯನ್ನು ನೋಡಿ ‘ಮಾಲ್ಗುಡಿ ಡೇಸ್’ ಬರೆದರೋ, ಅಥವಾ ಶಂಕರ್‌ನಾಗ್ ಅವರಿಗೆ ‘ಮಾಲ್ಗುಡಿ...’ಯನ್ನು ಓದಿದ ತಕ್ಷಣ ಆಗುಂಬೆಯೇ ನೆನಪಾಯಿತೋ ಎನಿಸದಿದ್ದರೆ ಹೇಳಿ.

ಆಗುಂಬೆಯಿಂದ ತೀರ್ಥಹಳ್ಳಿ– ನಗರ ಮಾರ್ಗವಾಗಿ ನಿಟ್ಟೂರು ಸೇರಿಕೊಳ್ಳಬೇಕು. ನಿಟ್ಟೂರಿನಿಂದ ಒಂಚೂರು ಮುಂದೆ ಸಾಗಿದರೆ ಕೊಲ್ಲೂರು ಘಾಟಿ. ಇಲ್ಲಿ ಕೂಡ ಮಳೆಗಾಲದಲ್ಲಿ ಅಲ್ಲಲ್ಲಿ ಸಿಗುವ ಪುಟ್ಟ ಜಲಪಾತಗಳಿಗೆ ಸಿಹಿನೀರಿನ ರುಚಿ. ಘಾಟಿ ಇಳಿದು ಕೊಲ್ಲೂರಿನ ಮೂಕಾಂಬಿಕೆ ದರ್ಶನ ಮಾಡಿ ಹೆಮ್ಮಾಡಿ ಸೇರಿಕೊಳ್ಳಬಹುದು. ಅಲ್ಲಿಂದ ಉತ್ತರ ದಿಕ್ಕಿಗೆ ತಿರುಗಿದರೆ ಮರವಂತೆಯ ‘ಒಂದು ಬದಿ ಕಡಲು, ಇನ್ನೊಂದು ಬದಿ ನದಿ’ಯ ಸೌಂದರ್ಯ ಪ್ರತ್ಯಕ್ಷ.

ಭಟ್ಕಳದಲ್ಲಿ ಪಶ್ಚಿಮ ಘಟ್ಟಗಳ ಸಾಲಿನತ್ತ ತಿರುಗಿ ಕಾರ್ಗಲ್‌ ಘಾಟಿಯ ಮಾರ್ಗವಾಗಿ ಜೋಗ ಜಲಪಾತದ ಕಡೆಗೆ ಸಾಗಬಹುದು. ಜೋಗದ ಮಳೆಗಾಲದ ಸಿರಿವೈಭವ ಖುದ್ದಾಗಿ ಕಾಣಬೇಕು. ಅಲ್ಲಿಂದ ಸಾಗರ ಮಾರ್ಗವಾಗಿ ಶಿವಮೊಗ್ಗಕ್ಕೆ ಬಂದು ನಿಮ್ಮ ತಾವಿನತ್ತ ಹೊರಳಿಕೊಳ್ಳಬಹುದು! ಘಾಟಿಗಳನ್ನು ನೋಡುವಾಗ ಸಾಗರ ಸಮೀಪ ಶರಾವತಿ ಹಿನ್ನೀರು ಪ್ರದೇಶಗಳಿಗೆ ಹೋಗುವುದನ್ನು ಮರೆಯದಿರಿ. ಅಂದಹಾಗೆ, ಇಷ್ಟೆಲ್ಲ ಸುಖ ಅನುಭವಿಸಲು ಒಳ್ಳೆಯ ಒಂದು ಬೈಕ್‌ ಅಥವಾ ಕಾರು ಬೇಕಲ್ಲ? ಅಗತ್ಯಗಳ ಪಟ್ಟಿಯಲ್ಲಿ ನಿಮ್ಮ ಸಖ ಅಥವಾ ಸಖಿ ಇದ್ದರೆ ಇನ್ನೂ ಚೆಂದ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.