ADVERTISEMENT

‘ಜಾಜಿಮಲ್ಲಿಗೆ’ಯಲ್ಲಿ ನೆನಪುಗಳ ಘಮಲು...

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2024, 23:56 IST
Last Updated 17 ಫೆಬ್ರುವರಿ 2024, 23:56 IST
ಕೃತಿಯ ಮುಖಪುಟ
ಕೃತಿಯ ಮುಖಪುಟ   

ನಾನು ಶಾಲೆಗೆ ಹೋಗಿ ಬರುವ ರಸ್ತೆಯ ಪಕ್ಕದಲ್ಲಿ ಆಕಾಶ ಮಲ್ಲಿಗೆಯ ಗಿಡಗಳ ಸಾಲು. ಅವು ಆಕಾಶಕ್ಕೆ ಮುಖ ಮಾಡಿ ನಗೆ ಚೆಲ್ಲಿರುತ್ತಿದ್ದವು. ಮಳೆಗೆ ಇಲ್ಲ ಗಾಳಿಗೆ ಆ ಹೂಗಳು ರಸ್ತೆ ತುಂಬ ಉದುರಿ ಹೂ ಹಾಸಿಗೆಯಂತೆ ಕಣ್ಣಿಗೆ ಕುಕ್ಕುತ್ತಿತ್ತು. ಹೂವಿನ ಕೆಳಗಿನ ಭಾಗದಿಂದ ಫಿಫೀ ಮಾಡಿ ಊದುವುದೇ ಮಜಾವಾಗಿರುತ್ತಿತ್ತು. ಹೂವಿನ ಗಿಡಗಳ ಪಕ್ಕದಲ್ಲಿಯೇ ಬಟಾಬಯಲು, ಆ ಬಯಲಿನಲಿ ಆಕಾಶದಷ್ಟು ಎತ್ತರ, ಭೂಮಿಯಷ್ಟು ಅಗಲ ಹುಣಸೆಮರವೊಂದು ಬೆಳೆದು ನಿಂತಿತ್ತು. ಭೀಕರ ಮಳೆ, ಗಾಳಿ ಬಂದರೂ; ಅದು ಕೂದಲೆಳೆಯಷ್ಟು ಅಲಗಾಡುತ್ತಿರಲಿಲ್ಲ. ಬೇರು ಸಡಿಲಗೊಂಡದ್ದನ್ನು ನಾನು ಒಮ್ಮೆಯೂ ನೋಡಿರಲಿಲ್ಲ. ಮೈತುಂಬಿಕೊಂಡ ಆ ಮರದ ತುಂಬ ಎಲೆ, ಹೂ, ಕಾಯಿ ಸಮೃದ್ಧಿಯಿಂದ ಬೀಗುತ್ತಿದ್ದವು.

ಡ್ವಾರಿಗೆ ಬಂದ ಹುಣಸೆಕಾಯಿಗಳನ್ನು ಕಲ್ಲಿಂದ ಹೊಡೆದು ಆಡ್ಕೊಂಡು ಚೀಪಿದ್ದುಂಟು. ಎಳೆ ಕಾಯಿಗಳೊಂದಿಗೆ ಉಪ್ಪು ಸೇರಿಸಿ ಕಚಪಚನೇ ತಿಂದು ಬಾಯಲ್ಲಿ ನೀರು ತರಿಸಿಕೊಂಡು ಚಪ್ಪರಿಸುತ್ತಿದ್ದರೆ, ಪಕ್ಕದವರ ಬಾಯಿಯೂ ನೀರಾಗಿ ಜೊಲ್ಲು ಸುರಿಸಿದ್ದುಂಟು. ಕಾಯಿ ಹಣ್ಣಾದಾಗ ಗಾಳಿಗೆ ಉದುರುತ್ತಿದ್ದವು. ಅದನ್ನು ನೋಡಿದ ನಾನು ನಸುಕಿನಲ್ಲಿ ತಮ್ಮಂದಿರನ್ನು ಕರೆದುಕೊಂಡು ಬೆಳೆದಿಂಗಳಿನಲ್ಲಿ ಆರಿಸಿ ಗುಂಪಿ ಮಾಡಿ ಬುಟ್ಟಿ ತುಂಬಿಕೊಂಡು ಬರುತ್ತಿದ್ದೆ. ಸಿಪ್ಪಿ ಸುಲಿದ ಹಣ್ಣೆಂದು ಕಡೆ, ಬೀಜ ಒಂದು ಕಡೆ ಮಾಡುತ್ತಿದ್ದೆ. ಅವ್ವ ಆ ಹುಣಸೆ ಬೀಜಗಳನ್ನು ಕುದಿಸಿಕೊಡುತ್ತಿದ್ದಳು. ಕಿಸೆ ತುಂಬಾ ಕುದಿಸಿದ ಆ ಬೀಜಗಳನ್ನು ತುಂಬಿಕೊಂಡು ತಿಂಡಿಯಂತೆ ಚಪ್ಪರಿಸುತ್ತಿದ್ದೆ. ಬೀಜ ತೆಗೆದ ಹಣ್ಣನ್ನು ಕಿರಾಣಿ ಅಂಗಡಿಗೆ ಮಾರಿ ಅವ್ವ ಉಪ್ಪು, ಮೆಣಸಿನಕಾಯಿ ಕೊಂಡು ತರುತ್ತಿದ್ದಳು.

ಈ ಮರದ ತಂಪಿನ ನೆರಳಿಗೆ ಊರಿನ ಜನ ಬಂದು ಕೂಡುತ್ತಿದ್ದರು. ದಣಿದವರು ಟವೆಲ್ಲು ಹರವಿ ಒಂದು ಜಂಪು ನಿದ್ದೆ ಮಾಡುತ್ತಿದ್ದರು. ರಣ ರಣ ಹೊಡೆಯುತ್ತಿದ್ದ ಬಿಸಿಲಿಗೆ ಅಂಜಿದ ಎಮ್ಮೆ, ಆಕಳು, ಊರ ಗೂಳಿ ಬಂದು ನೆರಳಿನಾಶ್ರಯಕ್ಕೆ ಒಗ್ಗೂಡುತ್ತಿದ್ದವು. ಗಿಡದ ಪೊದರಲಿ, ಇಲ್ಲ ಗಿಡದ ಟೊಂಗೆಗಳ ಮೇಲೆ ಇಣಚಿ, ಕಾಗೆ, ಗುಬ್ಬಿ, ಗೂಗಿ, ಗಿಳಿ, ತೊದಲಬಾವಲಿ ಆಟ ಆಡುತ್ತಲೇ ಆಶ್ರಯ ಪಡೆಯುತ್ತಿದ್ದವು. ಆ ಗಿಡದ ಎದುರಿನಲಿ ಖುಲ್ಲಾ ಜಾಗ ಇದ್ದುದರಿಂದ ಬೇರೆ ಕಡೆಯಿಂದ ಹೊಟ್ಟೆಗಾಗಿ ಬರುತ್ತಿದ್ದ ಡೊಂಬರಾಟದವರು, ಸರ್ಕಸ್ಸಿನವರು ಅಲ್ಲಿಯೇ ತಮ್ಮ ಠಿಕಾಣಿ ಹೂಡುತ್ತಿದ್ದರು. ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಸರ್ಕಸ್ಸಿನವರಂತೂ ತಿಂಗಳುಗಟ್ಟಲೇ ತಮ್ಮ ಸಂಸಾರವನ್ನು ಅಲ್ಲಿಯೇ ಕಳೆಯುತ್ತಿದ್ದರು. ರಾತ್ರಿ ಹೊತ್ತಿನಲ್ಲಿ ಸರ್ಕಸ್ ನೋಡುವುದೆಂದರೆ ಹಬ್ಬವೇ ಸರಿ. ತಂತಿ ಮೇಲಿನ ನಡುಗೆ, ಬೆಂಕಿ ನುಂಗಿ ಹೊರಗೆ ಉಗಳುವುದು, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಎದುರಿಗಿದ್ದ ಬಾಲಕನ ಮೇಲೆ ಮೊಣಚು ಆಯುಧಗಳನ್ನು ಬಾಣಗಳನ್ನು ಎಸೆಯುತ್ತಿದ್ದರೆ, ಬಾಲಕ ಬಾಣಗಳಿಂದ ಬಚಾವಾಗುವುದನ್ನು ನೋಡುತ್ತಿದ್ದರೆ ಎದೆ ಝಲ್ಲೆನ್ನುತ್ತಿತ್ತು. ಆನೆಗಳ ಗೀಳಿಡುವಿಕೆ, ಸಿಂಹಗಳ ಘರ್ಜನೆ ಈಗಲೂ ಕಣ್ಮುಂದೆ ಕಟ್ಟಿದಂತಿವೆ. ಆಟದ ಮಧ್ಯ ಮಧ್ಯ, ಜೋಕರನ ಪ್ರವೇಶವಾಗುತ್ತಿತ್ತು. ಆತನ ಮಾತು ಕೇಳಿ ನೆರೆದವರೆಲ್ಲ ನಗೆಗಡಲಲ್ಲಿ ತೇಲುತ್ತಿದ್ದರು. ಹಾಸ್ಯದ ಜೊತೆ ಕೈಯಲ್ಲಿ ಖಾಲಿ ಶರೆಯ ಬಾಟಲಿ ಹಿಡಿದು ಕುಡಿದ ಅಮಲಿನಲ್ಲಿದ್ದಂತೆ ನಟಿಸುತ್ತಾ

ADVERTISEMENT

ಹಾಲು ಕುಡಿದವರು ಹಾದರಗಿತ್ತಿ ಮಕ್ಕಳು

ಶರೆ ಕುಡಿದವರು ಶಿವನ ಮಕ್ಕಳು

ಸಿಂದಿ ಕುಡಿದವರು ದೇವರ ಮಕ್ಕಳು

ಎನ್ನುತ್ತಿದ್ದರೆ ಇಂತಹ ಚಟದ ಭಕ್ತರು ತಾವು ದೇವರ ಮಕ್ಕಳು ಎಂದು ತಮ್ಮನ್ನು ತಾವೇ ಮುಟ್ಟಿ ಮುಟ್ಟಿ ನೋಡಿಕೊಳ್ಳುತ್ತಿದ್ದರು. ಹಾಲು ಕುಡಿಯುವವರ ಮುಖ ಇಂಗು ತಿಂದ ಮಂಗನಂತಾಗುತ್ತಿತ್ತು. ಹಾಲು ಶ್ರೀಮಂತರ ಕುಡಿತವಾದರೆ, ಶೆರೆ ಸಿಂದಿ ಬಡವರ, ಶ್ರಮಿಕರ ಕುಡಿತಗಳಾಗಿದ್ದವು. ಇದನ್ನು ಅರಿತೋ ಅರಿಯದೋ ಇಲ್ಲ ಹಾಸ್ಯಕ್ಕಾಗಿ ಅವನು ಅನ್ನುತ್ತಿದ್ದನೋ ನನಗೂ ಆಗ ತಿಳದಿರಲಿಲ್ಲ. ಈಗ ಅಂದಿನ ಘಟನೆ ನೆನೆದು ಆಗಾಗ ನಗುತ್ತೇನೆ. ಬಹುಶಃ ಈ ರೀತಿಯ ನಂಬಿಕೆಗಳಿಂದಲೋ ಏನೋ ತಳವರ್ಗದ ದುಡಿಯುವ ಜನ ಕುಡಿತದ ಚಟಕ್ಕೆ ಒಳಗಾಗಿರಬೇಕು. ಈಗಲೂ ಅದರ ದಾಸಾನು ದಾಸರಾಗಿ ಮೂರು ಹೊತ್ತುಂಟೆ ಬಲಿಯಾಗುತ್ತಿರುವಂತೆ ಕಾಣಿಸುತ್ತದೆ.

ಅವನ ಈ ಮಾತು ಎಷ್ಟು ನಿಜವೋ, ಎಷ್ಟು ಸುಳ್ಳೋ ಯಾರೊಬ್ಬರು ಆ ಕುರಿತು ಏನನ್ನು ಮಾತಾಡಿದ್ದನ್ನೂ ನಾನಂತೂ ಕೇಳಿಸಿಕೊಂಡಿರಲಿಲ್ಲ. ಆದರೆ ಅಂದಿನ ಇಂತಹ ಮಾತುಗಳಿಗೆ ಸಾಕ್ಷಿಯಾಗಿ ಆ ಹುಣಸೆಮರವೂ ಇಲ್ಲ. ಅದರ ಪಕ್ಕದಲ್ಲಿ ಹರಿಯುತ್ತಿದ್ದ ಹಳ್ಳವೂ ಇಲ್ಲ. ಆಕಾಶ ಮಲ್ಲಿಗೆಯ ಗಿಡಗಳೂ ಇಲ್ಲ. ಮರದ ಪಕ್ಕದ ರಸ್ತೆಯ ಇನ್ನೊಂದು ಬದಿಗೆ ಅಪ್ಪ ಕಟ್ಟಿದ ದೋಬಿ ಘಾಟ್ ಮಾತ್ರ ಇನ್ನೂ ಜೀವಂತ ಇದೆ. ವರ್ಷದಲಿ ಒಂದೆರಡು ಸಲ ಊರಿಗೆ ಹೋದಾಗ ಅದು ನನ್ನನ್ನು ಎದುರುಗೊಳ್ಳುತ್ತದೆ. ನೋಡಿ ಖುಷಿಯಾಗುತ್ತದೆ. ದೋಬಿ ಘಾಟದಲ್ಲಿ ಬಟ್ಟೆ ಒಗೆಯುವ ಊರಿನ ಹೆಂಗಸರ ಕೈ ಬಳೆಗಳೊಂದಿಗೆ ಅಲ್ಲಿರುವ ಕಲ್ಲುಗಳು ಮಾತನಾಡುತ್ತ ಅಪ್ಪನ ಕತೆ ಹೇಳುತ್ತಿರುವಂತೆ ಭಾಸವಾಗುತ್ತದೆ.

ಮನುಷ್ಯನ ದುರಾಸೆಗೆ ಇದ್ದುದೆಲ್ಲವೂ ಮಾಯ

ಹಾಳು ಮಾಡುವುದೇ ಮನುಷ್ಯನ ಜಾಯಮಾನ

ರಸ್ತೆಯ ಇನ್ನೊಂದು ಅಂಚಿಗೆ ಇದ್ದ, ಅದೇ ಆಕಾಶ ಮಲ್ಲಿಗೆಯ ಗಿಡದ ಬುಡದಲಿ ಕುಳಿತ ಅಪ್ಪ ಕಲ್ಲು ಕಟೆಯುತ್ತಿದ್ದ. ಆ ದಾರಿಯಲಿ ಹಾದು ಹೋಗುವ ಎಲ್ಲರಿಗೂ ಕೈ ಎತ್ತಿ 'ರಂಬರಂಬ್ರಿ ಎಪ್ಪಾ' ಎನುತ್ತಿದ್ದ. ಹೆಚ್ಚಿಗೆ ಕಲಿತ ಯುವಕರನ್ನು ನೋಡಿ, ನಿಲ್ಲಿಸಿ ನನ್ನ ಮಗ ನಿಮ್ಮಂಗ ಎಂದ ಅಕ್ಕಾನೀ, ಎಂದು ಹಲಬುತ್ತಿದ್ದ. ಹೂವಿನ ವಾಸನೆಯಲ್ಲಿ ಅಪ್ಪನ ಮಾತು ಬೇರೊಂದು ರೀತಿಯ ವಾಸನೇ ಗ್ರಹಿಸುತ್ತಿತ್ತೇನೋ. ಬಾಲ್ಯವೆಂದರೆ ಹಾಗೆ ಅಲ್ಲವೇ. ಅದರ ಫಲ ಅಪ್ಪ ಇದ್ದಾಗಲೇ ಅವನ ಕನಸು ನನಸು ಮಾಡಿದ ತೃಪ್ತಿ ನನ್ನದು.

ಚಿನಪನಿ, ಗೋಲಿಗುಂಡು, ಗಜಗು, ಬುಗರೆ ಆಡಿಸುವುದು, ತರತರದ ಬಣ್ಣಗಳ ಗುಂಡಿಗಳ ಆಟಗಳನ್ನು ಆಡುತ್ತ ರಾತ್ರಿ ಬಣ್ಣದ ಗುಂಡಿಗಳ ಕನಸು ಕಾಣುತ್ತಿದ್ದೆ. ರಾತ್ರಿ ನಿದ್ದೆ ಬರುವುತನ ಓದುತ್ತಿದ್ದೆ ಬರೆಯುತ್ತಿದ್ದೆ. ಚಿಮಣಿ, ಲಾಟೀನುಗಳು ಬೆಳಕಾಗುತ್ತಿದ್ದವು. ಕೋಳಿ ಕೂಗಿಗೆ ಸರಿಯಾಗಿ ಏಳುತ್ತಿದ್ದೆ. ದೀಪ ಹೊತ್ತಿಸುತ್ತಿದ್ದೆ. ಮನೆಯಲ್ಲಿ ಎಣ್ಣೆ ಇರದಿದ್ದರೆ ಮನೆಯ ಎದುರು ಪಂಚಾಯತಿಯವರು ಹಚ್ಚುತ್ತಿದ್ದ ರಸ್ತೆ ದೀಪದಲಿ ಪುಸ್ತಕ ತೆರೆಯುತ್ತಿದ್ದೆ. ಪಾನು ಹೊರಳಿಸುತ್ತಿದ್ದೆ. ನೀರು ತರಲೋ, ಹೊಲಕ್ಕೊ ಇಲ್ಲ ಇನ್ನಾವುದಕ್ಕೋ ಹೋಗುವವರು ನನ್ನ ಓದಿನ ಕಾಳಜಿ ನೋಡಿ 'ಒಡ್ಡರ ತಿಮ್ಮಣ್ಣನ ಮಗ ಅದೇಷ್ಟ ಓದತಾನಿ, ಹಗಲರಾತ್ರಿ ಕಣ್ಣಾಗ ಎಣ್ಣೆ ಹಾಕೊಂಡು', ಮಾತಾಡುವದನ್ನು ಅವ್ವ, ಅಪ್ಪನಿಂದ ಕೇಳಿ ಮನಸ್ಸು ಗಾಳಿಯಲಿ ತೇಲುತ್ತಿತ್ತು. ಅವರಿಗೇನು ಗೊತ್ತು ನನ್ನ ಮನೆಯಲಿ ಎಣ್ಣೆ ಇರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.