ADVERTISEMENT

ಸಿಗಂದೂರು ಬಳಿಯ ತೂಗು ಸೇತುವೆ ಸಿದ್ಧ: ‘ಸಾಗರ’ ಸೇರಿದ ನನ್ನೂರು ಈಗ ದ್ವೀಪವಲ್ಲ!

ಸುಕೃತ ಎಸ್.
Published 12 ಜುಲೈ 2025, 21:48 IST
Last Updated 12 ಜುಲೈ 2025, 21:48 IST
ಲಾಂಚ್‌ನಲ್ಲಿ ನಿಂತು ಸೇತುವೆ ನಿರ್ಮಾಣ ನೋಡುತ್ತಿರುವ ಅಪ್ಪ  ಚಿತ್ರ: ಸುಕೃತ ಎಸ್‌.
ಲಾಂಚ್‌ನಲ್ಲಿ ನಿಂತು ಸೇತುವೆ ನಿರ್ಮಾಣ ನೋಡುತ್ತಿರುವ ಅಪ್ಪ  ಚಿತ್ರ: ಸುಕೃತ ಎಸ್‌.   

ಭಾರತದ ಖ್ಯಾತ ನಿರ್ದೇಶಕ ಸತ್ಯಜಿತ್ ರೇ ಅವರ ‘ಪಥೇರ್ ಪಾಂಚಾಲಿ’ ಸಿನಿಮಾ ಇಲ್ಲಿ ನನಗೆ ನೆನಪಿಗೆ ಬರುತ್ತಿದೆ. ಹೊಗೆಯುಗುಳುತ್ತಾ ಆ ಊರಿಗೆ ರೈಲು ಬರುವ ದೃಶ್ಯವನ್ನು ಜಗತ್ತಿನ ಸಿನಿಮಾ ಲೋಕದಲ್ಲಿ ಕ್ಲಾಸಿಕ್ ದೃಶ್ಯಗಳ ಸಾಲಿಗೆ ಸೇರಿಸಲಾಗಿದೆ. ದೂರದಲ್ಲಿ ಕೇಳಿಸುವ ರೈಲಿನ ಶಬ್ದ. ಆ ಶಬ್ದವನ್ನು ಆಲಿಸುವ ಅಕ್ಕ ಮತ್ತು ತಮ್ಮ. ಶಬ್ದ ಹತ್ತಿರವಾಗುವುದು, ಹೊಗೆ ಕಾಣುವುದು, ಇಬ್ಬರೂ ಶಬ್ದ ಅರಸಿ ಓಡುವುದು, ಕೊನೆಗೆ ರೈಲು ಹಾದು ಹೋಗುವುದು... 70 ವರ್ಷಗಳ ಹಿಂದೆ ರೇ ಅವರು ಈ ದೃಶ್ಯಗಳಲ್ಲಿ ಕಟ್ಟಿಕೊಟ್ಟ ಆಧುನಿಕತೆಯು 2025ರಲ್ಲಿ ನನ್ನೂರನ್ನು ಸೇತುವೆಯ ಮೂಲಕ ಪ್ರವೇಶಿಸುತ್ತಿದೆ!

ನನ್ನಪ್ಪ, ದೊಡ್ಡಪ್ಪ ಅವರನ್ನು ನೋಡಿದಾಗ ನನಗೆ ಸತ್ಯಜಿತ್‌ ರೇ ಅವರ ಸಿನಿಮಾದ ಅಕ್ಕ-ತಮ್ಮನ ಜೋಡಿ ನೆನಪಾಗುತ್ತದೆ. ತಮ್ಮ ಜೀವಮಾನದಲ್ಲಿ ಇಂಥದ್ದೊಂದು ಸೇತುವೆ ನಿರ್ಮಾಣವಾಗುತ್ತದೆ, ತಾವು ಆ ಸೇತುವೆಯ ಮೇಲೆ ಹುಟ್ಟಿದ ಊರಿಗೆ ತಮ್ಮ ವಾಹನಗಳಲ್ಲಿ ಹೋಗುತ್ತೇವೆ ಎಂದು ನನ್ನಪ್ಪನಾಗಲಿ, ದೊಡ್ಡಪ್ಪನಾಗಲಿ ಅಂದುಕೊಂಡೇ ಇರಲಿಲ್ಲ. ತಮ್ಮ ಜೀವಮಾನದಲ್ಲಿ ಇಂಥ ದಿನ ಬರುತ್ತದೆ ಎಂದು ನನ್ನೂರಿನ ಹಿರಿಯರು ಯಾರೂ ಅಂದುಕೊಂಡಿರಲಿಲ್ಲ. ಮುಳುಗಡೆ ಪೂರ್ವದಲ್ಲಿ ಹಿರೇಭಾಸ್ಕರ ಅಣೆಕಟ್ಟಿನ ಮೇಲಿನ ರಸ್ತೆಯಲ್ಲಿ ಎತ್ತಿನಗಾಡಿಯಲ್ಲಿ ಓಡಾಡಿದ ಜೀವಗಳಿವು. ಓದಲು ಶಾಲೆಯೂ ಇಲ್ಲದೆ, ಸಾಗರದಲ್ಲಿ ವಾರಾನ್ನ ಮಾಡಿಕೊಂಡು, ಸಂಬಂಧಿಕರ ಮನೆಗಳಲ್ಲಿ ಉಳಿದುಕೊಂಡು ಓದಿ, ಬದುಕು ಕಟ್ಟಿಕೊಂಡವರು.

ರಾಜ್ಯಕ್ಕೆ ಬೆಳಕು ನೀಡಲು ತಮ್ಮವರ ಮನೆಗಳನ್ನೂ, ಬದುಕನ್ನೂ ಮುಳುಗಿಸಿಕೊಂಡ ನಂತರ ಅಲ್ಲೇ ಇತರೆ ಭಾಗದಲ್ಲಿ ನೆಲೆಸಿರುವ, ಸೌಲಭ್ಯ ವಂಚಿತ ನನ್ನೂರಿನ ಜನರು, ಇಷ್ಟು ವರ್ಷಗಳಿಂದ ಈ ‘ದ್ವೀಪ’ದಲ್ಲಿ ಬದುಕುತ್ತಿದ್ದರು. ವಿದ್ಯುತ್ ಉತ್ಪಾದನೆಗಾಗಿ ಮನೆಮಾರುಗಳನ್ನೂ, ರಸ್ತೆ ಸಂಪರ್ಕವನ್ನೂ ಮುಳುಗಿಸಿದ ಮೇಲೆ ಸೇತುವೆ ನೀಡುವುದನ್ನು ಸರ್ಕಾರ ಮರೆತೇ ಬಿಟ್ಟಿತು. ಈಗ ಅದು ಸಾಕಾರಗೊಂಡಿದೆ. ಹಾಗಾದರೆ, ನನ್ನೂರಿಗೆ ಈ ಸೇತುವೆ ಏನು ಎಂದು ಪ್ರಶ್ನಿಸಿಕೊಂಡರೆ, ಅದು ನಮ್ಮ ಹಕ್ಕು ಎಂದೇ ಹೇಳಬೇಕು. ಅದು ನಮಗೆ ಬಿಡುಗಡೆಯ ಅವಕಾಶಗಳ ಮಹಾದ್ವಾರ ಎಂದೇ ಹೇಳಬೇಕು. ನಮ್ಮ ಹೋರಾಟದ ಫಲ ಎಂದೇ ಹೇಳಬೇಕು.

ADVERTISEMENT

ಶರಾವತಿ ದಾಟುವುದಿಲ್ಲ!

ನನ್ನಜ್ಜಿ ಸರಸ್ವತಿ, 99 ವರ್ಷ ಬದುಕಿದ್ದಳು. ಇನ್ನೆರಡು ತಿಂಗಳಾಗಿದ್ದರೆ ಆಕೆಗೆ 100 ವರ್ಷ ತುಂಬುತ್ತಿತ್ತು. ನನ್ನ ದೊಡ್ಡಪ್ಪನ ಮನೆ ಈಗಲೂ ತುಮರಿಯಲ್ಲಿದೆ. ನಮ್ಮ ಮೂಲ ಊರು ನಿಟ್ಟೂರಿನ ಗೆಂಟಿಗೆಮನೆ. ಆದರೆ, ನನ್ನಜ್ಜ ಅರಬಳ್ಳಿಯಲ್ಲಿ ನೆಲೆಸಿದ್ದ. ಲಿಂಗನಮಕ್ಕಿ ಅಣೆಕಟ್ಟು ಕಾರಣ ಅರಬಳ್ಳಿಯ ನಮ್ಮ ಮನೆ ಮುಳುಗಡೆಯಾಯಿತು. ಬಳಿಕ ನನ್ನಜ್ಜ ತುಮರಿಗೆ ಬಂದು ನೆಲಸಿದ. ನನ್ನಜ್ಜಿಯೂ ನನ್ನ ಈ ದೊಡ್ಡಪ್ಪನ ಮನೆಯಲ್ಲಿಯೇ ಇದ್ದಳು.

ಆಕೆಗೆ ಸುಮಾರು 80 ವರ್ಷ ಆಗುವವರೆಗೂ ಸಾಗರದಲ್ಲಿರುವ ಮಕ್ಕಳ ಮನೆಗೆ ಬಂದು ಹೋಗುತ್ತಿದ್ದಳು. ‘ನಾನು ಇನ್ನು ಶರಾವತಿ ದಾಟುವುದಿಲ್ಲ. ನನ್ನ ಸಾವು ಶರಾವತಿಯ ಈ ಬದಿಯಲ್ಲಿಯೇ ಆಗಬೇಕು’ ಎಂದು ಒಂದು ದಿನ ಘೋಷಿಸಿಯೇ ಬಿಟ್ಟಳು. ಇಂದು ನಮ್ಮೊಂದಿಗಿಲ್ಲದ ನನ್ನೂರಿನ ಹಲವು ಹಿರಿಯ ಜೀವಗಳು ಇಂಥ ಶಪಥವನ್ನು ಮಾಡಿದ್ದವು.

ಪ್ರವಾಸಿಗರಿಗೆ ಲಾಂಚ್ ಪ್ರಯಾಣವು ಸೋಜಿಗ, ಉಲ್ಲಾಸ ಮತ್ತು ಉತ್ಸಾಹದಿಂದ ಕೂಡಿದ ಅನುಭವ. ನನ್ನೂರು ಸಾಗರ ತಾಲ್ಲೂಕು ವ್ಯಾಪ್ತಿಗೆ ಬರುತ್ತದೆ. ನಮ್ಮ ಎಲ್ಲ ಕೆಲಸ ಕಾರ್ಯಗಳೂ, ವ್ಯವಹಾರಗಳೂ ಸಾಗರದಲ್ಲಿಯೇ ಆಗಬೇಕು. ಲಾಂಚ್ ಸೇವೆ ನಮ್ಮ ಅಗತ್ಯವಾಗಿತ್ತು. ಆದರೆ, ಪ್ರವಾಸಿಗರಿಗೆ ಇದು ಮೋಜಾಗಿತ್ತು.

ಸೇತುವೆ ನಿರ್ಮಾಣವಾಗುತ್ತಿದ್ದ ಸಂದರ್ಭದಲ್ಲಿ ಮತ್ತು ಸೇತುವೆ ನಿರ್ಮಾಣ ಕಾರ್ಯ ಮುಗಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ನೂರಾರು ಪೋಸ್ಟ್‌ಗಳು, ಮೀಮ್‌ಗಳು ಹರಿದಾಡುತ್ತಿವೆ. ಸಿನಿಮಾ ನಟರೂ ಸೇರಿದಂತೆ ಜನರು ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ. ಕೆಲವರು ಸೇತುವೆ ನಿರ್ಮಾಣವನ್ನು ಸಂಭ್ರಮಿಸಿದರೆ, ಕೆಲವರು ಬೇಸರವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಲಾಂಚ್ ಪ್ರಯಾಣದ ಮಜವೇ ಬೇರೆ ಎನ್ನುತ್ತಿದ್ದಾರೆ. ಇದೆಂಥ ಮನಸ್ಥಿತಿ?

ಇದು ಬಹಳ ವರ್ಷಗಳ ಹಿಂದಿನ ಮಾತು. ತುಮರಿ ಸರ್ಕಾರಿ ಶಾಲೆಯಲ್ಲಿ ಎನ್ಎಸ್ಎಸ್ ಶಿಬಿರ ಆಯೋಜಿಸಲಾಗಿತ್ತು. ಅಪ್ಪನನ್ನು ಭಾಷಣಕ್ಕೆ ಕರೆದಿದ್ದರು. ಅಪ್ಪನೊಂದಿಗೆ ನಾನೂ ಹೋಗಿದ್ದೆ. ವೇದಿಕೆಯಲ್ಲಿದ್ದ ಮತ್ತೊಬ್ಬ ಭಾಷಣಕಾರರು ಸೇತುವೆ ಕುರಿತು ಮಾತನಾಡಿದ್ದರು. ‘ಸೇತುವೆ ನಿರ್ಮಾಣವಾದರೆ ಇಷ್ಟೊಂದು ಭರಪೂರವಾಗಿರುವ ಪ್ರಕೃತಿ ಸಂಪತ್ತು ನಾಶವಾಗಿಬಿಡುತ್ತದೆ’ ಎಂದಿದ್ದರು!

ಸೇತುವೆ ನಿರ್ಮಾಣವಾಗಿರುವುದು ನನ್ನೂರಿನ ಜನರಿಗಾಗಿ. ಸೇತುವೆ ನಮ್ಮ ಹಕ್ಕು. ಮೂಲಸೌಕರ್ಯಗಳಿಂದ ನಮ್ಮನ್ನು ವಂಚಿಸಿದ್ದ ಸರ್ಕಾರ ಈಗಲಾದರೂ ನನ್ನೂರಿಗೆ ಸೇತುವೆ ನಿರ್ಮಿಸಿ, ಸೌಕರ್ಯಗಳು ಒದಗುವಂತೆ ಮಾಡುತ್ತಿದೆ. ಈಗ ನನ್ನೂರು ದ್ವೀಪವಲ್ಲ, ಮತ್ತೆ ‘ಸಾಗರ’ವನ್ನು ಸೇರಿಕೊಂಡಿದೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.