ADVERTISEMENT

ಸರಳ ಸುಂದರ ಜೀವನವೇ ಅಧ್ಯಾತ್ಮ

ಎಸ್.ಸೂರ್ಯಪ್ರಕಾಶ ಪಂಡಿತ್
Published 26 ಜನವರಿ 2019, 9:38 IST
Last Updated 26 ಜನವರಿ 2019, 9:38 IST
ಲಕ್ಷ್ಮಿ
ಲಕ್ಷ್ಮಿ   

ಅಧ್ಯಾತ್ಮ ಎನ್ನುವುದು ನನ್ನ ಪ್ರಕಾರ ಉನ್ನತವಾದ ಭಾವ. ಯಾವ ಭಾವನಮ್ಮನ್ನು ಎತ್ತರದ ನೆಲೆಗೆ ಏರಿಸುತ್ತದೆಯೋ, ನಮ್ಮ ಅಂತರಂಗವನ್ನು ಶುದ್ಧಿಗೊಳಿಸುತ್ತದೆಯೋ ಅದು ಅಧ್ಯಾತ್ಮ. ಸ್ವಚ್ಛವಾದ ಅನುಭೂತಿ, ಕಪಟವಿಲ್ಲದ ಮುಗ್ಧತೆಯೇ ಅಧ್ಯಾತ್ಮ. ಸರಳವಾದ, ಆದರೆ ವಿಚಾರಪೂರ್ಣ ಜೀವನವಿಧಾನವೇ ಅಧ್ಯಾತ್ಮ.

ನಾನು ಜೆ. ಕೃಷ್ಣಮೂರ್ತಿ ಅವರ ಶಾಲೆಯಲ್ಲಿ ಓದಿದ್ದು. ಹೀಗಾಗಿ ಸಹಜವಾಗಿಯೇ ಆ ಪರಿಸರದಲ್ಲಿ ಆಧ್ಯಾತ್ಮಿಕತೆಯ ವಿವರಗಳು ಕಾಣುತ್ತಿದ್ದವು. ಆದರೆ ಜೆ. ಕೃಷ್ಣಮೂರ್ತಿಯವರು ಎಂದೂ ತಮ್ಮನ್ನು ಗುರು ಎಂದೋ ಅಧ್ಯಾತ್ಮಪುರುಷ ಎಂದೋ ಕರೆದುಕೊಳ್ಳಲಿಲ್ಲ. ಅವರ ತಮ್ಮನ್ನು ಒಬ್ಬ ಚಿಂತಕ, ಚಿಂತನಶೀಲ ಎಂದೇ ಭಾವಿಸಿಕೊಂಡಿದ್ದವರು. ‘ಅವೇರ್‌ನೆಸ್‌’ – ಜಾಗೃತಿ – ಇದರ ಬಗ್ಗೆ ಅವರು ಹೆಚ್ಚು ಒತ್ತುಕೊಟ್ಟವರು. ಪ್ರಶ್ನಿಸುವ ಮನೋಧರ್ಮ ತುಂಬ ಮುಖ್ಯ ಎಂದು ಅವರು ಪ್ರತಿಪಾದಿಸಿದರು. ಸಂವೇದಶೀಲತೆಯನ್ನು ಬೆಳಸಿಕೊಳ್ಳಬೇಕು ಎಂದು ಉಪದೇಶಿಸಿದರು. ಪ್ರಕೃತಿಯೊಂದಿಗೆ ಸಹಬಾಳ್ವೆಯನ್ನು ನಡೆಸುವುದನ್ನೇ ಅಧ್ಯಾತ್ಮ ಎಂದು ಕರೆದರು.

ನಾನು ಕಲಾವಿದೆ. ಅಧ್ಯಾತ್ಮ ಎನ್ನುವುದು ಕಲಾವಿದರಿಗೆ ತುಂಬ ಅಗತ್ಯವಾದ ಸಂಗತಿ. ಹಲವರು ಕಲಾವಿದರಿಂದಲೂ ನಾನು ಅಧ್ಯಾತ್ಮ ಎಂದರೇನು ಎನ್ನುವುದನ್ನು ತಿಳಿದುಕೊಂಡಿರುವೆ. ಖ್ಯಾತ ನೃತ್ಯಕಲಾವಿದೆ ರುಕ್ಮಿಣೀದೇವಿ ಅರುಂಡೇಳ್‌ ಅಂಥವರಲ್ಲಿ ಒಬ್ಬರು. ಅವರದ್ದು ಗಾಢವಾದ ಆಧ್ಯಾತ್ಮಿಕತೆಯ ವ್ಯಕ್ತಿತ್ವ. ಸಹಾನುಭೂತಿ, ಕರುಣೆ ಇಂಥ ಗುಣಗಳು ಅವರಲ್ಲಿ ಎದ್ದುಕಾಣುತ್ತಿದ್ದವು. ಬಹಳ ಹಿಂದೆಯೇ ಅವರು ಪ್ರಾಣಿಗಳ ಮೇಲೆ ನಡೆಯುವ ಕ್ರೌರ್ಯದ ವಿರುದ್ಧ ದನಿ ಎತ್ತಿದ್ದವರು. ಕಲೆಯೊಂದಿಗೆ ಅಧ್ಯಾತ್ಮ ಸುಲಭವಾಗಿ ಬೆರೆಯುತ್ತದೆ.

ADVERTISEMENT

ನಮ್ಮ ಮೈಥಾಲಜಿ – ಪುರಾಣಗಳು – ಕೂಡ ನನ್ನನ್ನು ತುಂಬ ಪ್ರಭಾವಿಸಿವೆ. ಪುರಾಣಕಥೆಗಳಲ್ಲಿರುವ ಸಾಂಕೇತಿಕತೆ ತುಂಬ ಆಳವಾದದ್ದು. ವೇದ, ಉಪನಿಷತ್ತುಗಳ ಚಿಂತನೆಗಳು ಕೂಡ ನನ್ನನ್ನು ಪ್ರಭಾವಿಸುತ್ತಲೇ ಇರುತ್ತವೆ. ಉದಾಹರಣೆಗೆ ‘ಪೂರ್ಣಮದಃ ಪೂರ್ಣಮಿದಂ’ ಎಂಬ ಮಂತ್ರವಾಗಲೀ, ‘ಅಸತೋಮ ಸದ್ಗಮಯ’ ಎಂಬ ಮಂತ್ರವಾಗಲೀ ಚಿಕ್ಕ ವಯಸ್ಸಿನಲ್ಲೇ ಪರಿಚಯವಾಗಿತ್ತು. ಆದರೆ ಅವುಗಳಲ್ಲಿ ಗಹನವಾದ ಅರ್ಥ ಕ್ರಮೇಣ ಪ್ರಕಟವಾಗುತ್ತಲೇ ಇದೆ. ಈ ಕ್ಷಣವೂ ಅವುಗಳ ಅರ್ಥ ನನ್ನಲ್ಲಿ ಭಾವವಿಸ್ತಾರವನ್ನು ಉಂಟುಮಾಡುತ್ತಲೇ ಇರುತ್ತದೆ. ವೇದ–ಉಪನಿಷತ್ತುಗಳು ಸಾವಿರಾರು ವರ್ಷಗಳ ಹಿಂದೆಯೇ ಪ್ರತಿಪಾದಿಸಿರುವ ವಿಶ್ವಭ್ರಾತೃತ್ವ ತುಂಬ ದೊಡ್ಡ ಮೌಲ್ಯ. ಅದು ಈಗಿನ ಸಂದರ್ಭಕ್ಕಂತೂ ತುಂಬ ಅಗತ್ಯವಾದ ಸಂಗತಿ ಎಂದು ನಮಗೆ ಅರಿವಾಗುತ್ತಿದೆ. ಬೌದ್ಧದರ್ಶನವೂ ನನಗೆ ತುಂಬ ಪ್ರಿಯವಾದುದು. ನಮ್ಮ ಸಂಸ್ಕೃತಿಯ ದೊಡ್ಡ ರೂಪಕವಾದ ಶ್ರೀಕೃಷ್ಣನ ಕಲ್ಪನೆಯೇ ವಿಶೇಷವಾದುದು. ಕೃಷ್ಣ ಎನ್ನುವುದೇ ಸಂಭ್ರಮಕ್ಕೆ ಸಂಕೇತ. ನಮ್ಮ ಎಲ್ಲ ರೀತಿಯ ಬಂಧನಗಳಿಂದಲೂ ಮುಕ್ತಗೊಳಿಸಬಲ್ಲ ಅಪರಿಮಿತ ಸ್ವಾತಂತ್ರ್ಯವೇ ಕೃಷ್ಣ. ಪತಂಜಲಿಮಹರ್ಷಿಯ ‘ಯೋಗಸೂತ್ರ’ ಕೂಡ ನನ್ನ ಮೇಲೆ ಪ್ರಭಾವ ಬೀರಿದೆ.

ನಮ್ಮ ಕಾಲದವರಲ್ಲಿ ನನಗೆ ಜೆ. ಕೃಷ್ಣಮೂರ್ತಿಯವರ ಚಿಂತನೆಗಳು ತುಂಬ ಇಷ್ಟ. ಜೊತೆಗೆ ಓಶೋ, ದಲೈಲಾಮ, ಎಕ್ಹಾರ್ಟ್‌ ಟೋಲಿ, ಎಮರ್‌ಸನ್‌ – ಹೀಗೆ ಹಲವರ ಚಿಂತನೆಗಳು ನನಗೆ ಇಷ್ಟ. ಸ್ವಾಮಿ ಚಿನ್ಮಯಾನಂದರ ಬರಹಗಳನ್ನೂ ಸಾಕಷ್ಟು ಓದಿರುವೆ. ರಾಮಕೃಷ್ಣ ಮಿಷನ್‌ನ ಚಟುವಟಿಕೆಗಳೂ ನನಗೆ ಪ್ರಿಯ; ಸ್ವಾಮಿ ಪುರುಷೋತ್ತಮಾನಂದಜೀ ಅವರ ಬರಹಗಳನ್ನು ಓದಿ, ಇಷ್ಟಪಟ್ಟಿರುವೆ. ಬ್ರಹ್ಮಕುಮಾರಿ ಸಂಸ್ಥೆಯ ಚಿಂತನೆಯೂ ಇಷ್ಟವಾಗುತ್ತದೆ. ಅಧ್ಯಾತ್ಮವನ್ನು ಕುರಿತ ಪುಸ್ತಕಗಳನ್ನೂ ಓದುವ ಅಭ್ಯಾಸವಿದೆ. ಇತ್ತೀಚೆಗೆ ಓದಿರುವುದರಲ್ಲಿ ‘ಟ್ಯೂಸ್‌ಡೇಸ್‌ ವಿಥ್‌ ಮಾರೀಸ್‌’ ಅನ್ನು ತುಂಬ ಇಷ್ಟಪಟ್ಟಿರುವೆ. ಬದುಕಿನ ಬಗ್ಗೆ ಆ ಕೃತಿ ನೀಡುವ ಒಳನೋಟಗಳು ತುಂಬ ಅಪೂರ್ವವಾಗಿವೆ. ಹೀಗೆಯೇ ಓಶೋ ಅವರ ‘ಕ್ರಿಯೇಟಿವಿಟಿ’ ಪುಸ್ತಕ ತುಂಬ ಹಿಡಿಸಿದೆ. ಈಗ ನಿಸರ್ಗದತ್ತ ಮಹಾರಾಜ್‌ ಅವರ ‘ಐಯಾಮ್‌ ದಟ್‌’ ಪುಸ್ತಕವನ್ನು ಓದುತ್ತಿರುವೆ.

ಕಲಾಭಿವ್ಯಕ್ತಿಗೆ ಆಳವಾದ ಧ್ಯಾನಸ್ಥಿತಿ ಬೇಕಾಗುತ್ತದೆ. ಈ ಸ್ಥಿತಿಯೇ ಅಧ್ಯಾತ್ಮವಲ್ಲವೆ? ಹೀಗಾಗಿ ಅಧ್ಯಾತ್ಮಕ್ಕೂ ಕಲೆಗೂ ನೇರ ಸಂಬಂಧವಿದೆ. ನಾನು ನೃತ್ಯ ಮಾಡುತ್ತಿರುವಾಗ ಆ ಕ್ಷಣದಲ್ಲಿ ಹಲವು ಮನೋಧರ್ಮಗಳು ಹುಟ್ಟುತ್ತಿರುತ್ತವೆ; ಇವೇನೂ ಪೂರ್ವಯೋಜಿತವಾಗಿರುವುದಿಲ್ಲ. ಹಾಗಾದರೆ ಈ ಹರಿವು – ಫ್ಲೋ – ಬಂದಿದ್ದಾದರೂ ಎಲ್ಲಿಂದ? ಭೌತಿಕ ಆಯಾಮಗಳನ್ನು ಮೀರಿ ಮನಸ್ಸು ಕೆಲಸ ಮಾಡುತ್ತಿರುತ್ತದೆ. ಇದೇ ಧ್ಯಾನ. ಈ ಧ್ಯಾನದ ಕ್ರಿಯಾಶೀಲ ಅಭಿವ್ಯಕ್ತಿಯೇ ಕಲೆ. ಇಲ್ಲಿ ನಾನು ಕಲೆ ಎಂದು ಹೇಳುತ್ತಿರುವುದು ಅಭಿಜಾತಕಲೆ – ಕ್ಲಾಸಿಕಲ್‌ ಅರ್ಟ್‌. ಕಲೆ ಎಂದರೆ ಪರಿಪೂರ್ಣತೆ. ಆ ಪರಿಪೂರ್ಣತೆಯ ದಾರಿಯಲ್ಲಿ ಒದಗುವ ಸಾಧನೆಯೇ ಅಧ್ಯಾತ್ಮ.

ನಾಲ್ಕೈದು ತಿಂಗಳುಗಳ ಹಿಂದೆ ಜಪಾನ್‌ಗೆ ಹೋಗಿದ್ದೆ. ಅಲ್ಲಿರುವ ಪ್ರಧಾನ ಧರ್ಮಗಳೆಂದರೆ ಶಿಂಟೋಯಿಸಮ್‌ ಮತ್ತು ಬುದ್ಧಿಸಮ್‌. ಶಿಂಟೋಯಿಸಮ್‌ ಪ್ರಕೃತಿಪೂಜೆಯನ್ನು ಪ್ರತಿಪಾದಿಸುತ್ತದೆ. ಅದರ ಅನುಯಾಯಿಗಳು ವಿಗ್ರಹಾರಾಧನೆಯನ್ನು ಮಾಡುವುದಿಲ್ಲ. ಕಾಡಿನ ನಡುವೆ ಒಂದು ಸಣ್ಣ ಗುಡಿಯನ್ನು ಮಾಡಿರುತ್ತಾರೆ. ಅದು ಕೂಡ ‘ಈ ಕಾಡಿನ ಆತ್ಮ ಇಲ್ಲಿದೆ’ ಎನ್ನವುದನ್ನು ಸೂಚಿಸಲು. ಅವರಲ್ಲಿ ಮೌನಕ್ಕೆ ತುಂಬ ಮಹತ್ವವಿದೆ; ಕಾರುಣ್ಯಕ್ಕೆ ತುಂಬ ಮನ್ನಣೆಯಿದೆ. ಈ ತತ್ತ್ವಗಳ ಮೇಲೆ ನಮ್ಮ ಹಿಂದೂತತ್ತ್ವಗಳೂ ಪ್ರಭಾವ ಬೀರಿದೆ ಎನಿಸುತ್ತದೆ. ಶಿಂಟೋಯಿಸಮ್‌ನ ಆಚಾರ–ವಿಚಾರಗಳು ನನಗೆ ತುಂಬ ಇಷ್ಟವಾಯಿತು.

ದೇವರ ಹೆಸರಿನಲ್ಲಿ ಕೊಲ್ಲುವುದನ್ನು ಕಂಡಾಗ ಖೇದವಾಗುತ್ತದೆ. ಸೌಹಾರ್ದವನ್ನೂ ಕರುಣೆಯನ್ನೂ ಬೋಧಿಸುವುದೇ ನಿಜವಾದ ಧರ್ಮ. ವಿಶ್ವಮೈತ್ರಿಯನ್ನೂ ವಿಶ್ವಕಾರುಣ್ಯವನ್ನೂ ಉಂಟಾಗಿಸುವ ಭಾವವೇ ಅಧ್ಯಾತ್ಮ. ಆಧ್ಯಾತ್ಮಿಕತೆಯಲ್ಲಿ ಆಡಂಬರ ಇರುವುದಿಲ್ಲ; ಜೀವನ ಸರಳವಾಗಿರುತ್ತದೆ. ಆದರೆ ಅದು ಸುಂದರವೂ ಆಗಿರುತ್ತದೆ; ವಿಚಾರಪ್ರದವೂ ಆಗಿರುತ್ತದೆ; ಸಂತೋಷವೂ ಆಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.