ಒಂದೆರೆಡು ನೆಗೆತಕ್ಕೆ ಅಳೆದುಬಿಡಬಹುದಾದಷ್ಟು ಪುಟ್ಟದು ಈ ಮಾರುಕಟ್ಟೆ. ಆದರೆ, ಇಲ್ಲಿ ಸಿಗುವಷ್ಟು ಬಗೆಬಗೆಯ ಕಾಯಿಪಲ್ಲೆಗಳು ರಾಜ್ಯದ ಬೇರೆ ಯಾವ ಮಾರುಕಟ್ಟೆಯಲ್ಲೂ ಸಿಗುವುದಿಲ್ಲ.
ಇದು ಹೇಳಿಕೇಳಿ ಕಾಯಿಪಲ್ಲೆ ಮಾರುಕಟ್ಟೆ. ಮನಸು ಮಾಡಿದರೆ ಒಂದೇ ಉಸಿರಿಗೆ ದಾಟಿ ಸಾಗಬಹುದಾದ ಮಾರುಕಟ್ಟೆ. ಹೆಚ್ಚೆಂದರೆ ಐವತ್ತು ಮೀಟರ್ ಉದ್ದದ ಒಳಗೆ! ಆದರೆ ಈ ಮಾರುಕಟ್ಟೆಯಲ್ಲಿ ಏನೇನು ವಿಶೇಷವಿದೆ ಗೊತ್ತೆ?. ಅದಕ್ಕಂತಲೇ ಪರ ಜಿಲ್ಲೆಗೆ ಯಾವುದೋ ಊರಿಂದ ಹೊರಟವರು ಯಲ್ಲಾಪುರ ತನಕ ಬಸ್ ಟಿಕೆಟ್ ಪಡೆದು, ಒಮ್ಮೆ ಈ ಮಾರುಕಟ್ಟೆ ಹೊಕ್ಕು ಹೊರ ಬೀಳುವುದುಂಟು. ಇದು ಕಾಯಿಪಲ್ಲೆ ಮಾರುಕಟ್ಟೆಯಾದರೂ, ನಾಟಿಕೋಳಿ ಹಾಗೂ ನಾಟಿ ಕೋಳಿಮೊಟ್ಟೆ ಮಾರಾಟಕ್ಕೂ ಅವಕಾಶವಿದೆ. ಇದು ಯಲ್ಲಾಪುರ ಪಟ್ಟಣದ ಹೃದಯ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಬಸ್‌ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿರುವ ಪುಟ್ಟ ಕಾಯಿಪಲ್ಲೆ ಮಾರುಕಟ್ಟೆ. ಅಂಗಡಿ ಮುಂಗಟ್ಟುಗಳ ಮುಂಭಾಗ, ಅಂಗಡಿಗಳ ಮೆಟ್ಟಿಲುಗಳೇ ಇವರ ವ್ಯಾಪಾರ ಸ್ಥಳ.
ಇಲ್ಲಿ ಸಿಗುವ ಕಾಯಿಪಲ್ಲೆಗಳು ಮಾಮೂಲಿ ಕಾಯಿಪಲ್ಲೆ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. ವರುಷದ ಹನ್ನೆರಡು ತಿಂಗಳು ಹಸಿರಾಗಿರುವ ಈ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಕಾಯಿಪಲ್ಲೆಗಳು ಸಾವಯವ ಗೊಬ್ಬರ ಹಾಕಿ ಬೆಳೆಸಿದ್ದು. ಮರಗೆಸು, ಕಾಡುಗೊಣ್ಣೆ, ಮಹಾಗೆಸು, ಜಾಂಬಲಗೆಡ್ಡೆ, ಅಣಬೆ, ಕಳಲೆ, ಗುರಗಿ ಜೇನು, ಬರಗಾಲಗೆಡ್ಡೆ, ಬಳ್ಳಿಗೆಸು, ನೆಲ್ಲಿ, ಜುಮ್ಮನಕಾಯಿ, ಕಲ್ಲುಬಾಳೆ ಮುಂತಾದ ಕಾಡಿನಿಂದ ನಾಡಿಗೆ ಬಂದ ಕಾಯಿಪಲ್ಲೆಗಳು ಇಲ್ಲಿಯ ವಿಶೇಷ. ಕೆರೆಯ ಕಮಲದ ಹೂವು, ಗೆಡ್ಡೆಗಳು ಕೂಡ ಈ ಮಾರುಕಟ್ಟೆಯಲ್ಲಿ ಲಭ್ಯ. ಮನೆಯ ಕೋಳಿಗೂಡಿಗೋ, ಕೊಟ್ಟಿಗೆಗೋ, ಮನೆಯ ಚಾವಣಿಗೋ ಹಬ್ಬಿಸಿ ಬೆಳೆಸಿದ ಹಾಗೂ ಮನೆಯ ಕೈತೋಟದಲ್ಲಿ ಕೊಟ್ಟಿಗೆ ಗೊಬ್ಬರ ಉಂಡು ಬೆಳೆದ ಚಿಟ್ಟಾಗಲ, ಬಿಳಿ ಸೌತೆ, ಸಿಹಿಗುಂಬಳ, ಹಾಲುಸೊರೆ, ಸುವರ್ಣಗೆಡ್ಡೆ, ಸಿಹಿ ಅಮಟೆ, ಸಿಹಿ ಮೊಗೆಕಾಯಿ, ವಾಟೆ ಹುಳಿ, ಮುರುಗಲ ಹುಳಿ, ಬಿಳಿ ಮುರುಗಲ ಹುಳಿ, ಕುರುಸುಗಾಯಿ, ಉಪ್ಪಿನಕಾಯಿ ಮಿಡಿ, ಬಾಳೆ ಹೂವು, ಕನಕಾಂಬರ ಹೂವು ಒಳಗೊಂಡು ತರತರದ ಹೂವುಗಳು, ಹುಣಸೆಕಾಯಿ, ಆನೆಬಾಳೆಕಾಯಿ, ಗಿಣ್ಣನಗೆಂಡೆ, ಬಗೆಬಗೆಯ ಸಿಹಿ ಮೊಗೆಕಾಯಿ, ಬೇರಲಸು, ನೀರಲಸು, ಬಗೆಬಗೆಯ ಬದನೆ, ನುಗ್ಗೆಸೊಪ್ಪು, ಹಲವಾರು ತರದ ಗೆಡ್ಡೆಗಳು, ಕಬ್ಬು, ಕೆಸುವಿನಗೆಡ್ಡೆ, ಕೆಸುವಿನ ದಂಟು, ಅಂಬೆಕೊಂಬು, ಅಶೋಕ ಪುಷ್ಪ, ಸೊರೆಕುಡಿ, ಅರಿಸಿನ ಎಲೆ, ಬಾಳೆಲೆ, ಬಗೆ ಬಗೆಯ ಸೌತೆ, ಹಿಂಡ್ಲಿಕಾಯಿ ಒಂದೇ ಎರಡೇ ನೂರಾರು...
ಚೌತಿ, ದೀಪಾವಳಿ, ತುಳಸಿ ಹಬ್ಬ, ದನದ ಹುಣ್ಣಿಮೆ ಮುಂತಾದ ಹಬ್ಬಗಳು ಬಂತೆಂದರೆ ಈ ಮಾರುಕಟ್ಟೆ ಬಣ್ಣ ಬದಲಾಯಿಸಿಕೊಂಡು ಆ ಹಬ್ಬಗಳಿಗೆ ಅಗತ್ಯ ಇರುವ ವಸ್ತುಗಳ ತಾಣವಾಗುತ್ತದೆ. ಆ ಹಬ್ಬಗಳ ಅಗತ್ಯ ವಸ್ತುಗಳು ಹಬ್ಬದ ಮೂರು ನಾಲ್ಕು ದಿನದ ಮೊದಲೇ ಮಾರುಕಟ್ಟೆಗೆ ಬಂದಿರುತ್ತವೆ. ನೂರಕ್ಕೆ ನೂರು ಹಳ್ಳಿಯ ಕೃಷಿ ಮಹಿಳೆಯರೇ ಈ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿರುವುದು ಮಾರುಕಟ್ಟೆಯ ಮತ್ತೊಂದು ವಿಶೇಷ. ಇಲ್ಲಿ ಪುರುಷ ವ್ಯಾಪಾರಸ್ಥರಿಗೆ ಪ್ರವೇಶ ನಿಷಿದ್ಧ ಎನ್ನುವುದು ಈ ಮಾರುಕಟ್ಟೆಯ ರೂಢಿ ಸಂಪ್ರದಾಯ. ವಸ್ತುಗಳ ದರ ಮಾತ್ರ ಫಿಕ್ಸ್. ಇಲ್ಲಿ ಚೌಕಾಶಿಗೆ ಅವಕಾಶವೇ ಇಲ್ಲ.
ಏನಾದರೂ ಸಾಂಕ್ರಾಮಿಕ ರೋಗ ಈ ಭಾಗದಲ್ಲಿ ಕಾಣಿಸಿಕೊಂಡರೆ, ಅದರ ಪರಿಹಾರಕ್ಕೆ ಪೂರಕವಾದ ಕಾಯಿಪಲ್ಲೆ, ವನಸ್ಪತಿಗಳು ಇಲ್ಲಿ ಕೂಡಲೇ ಲಭ್ಯ.
ಕೊರೊನಾ ಸಮಯದಲ್ಲಿ ಈ ಮಾರುಕಟ್ಟೆಯ ವಿಶೇಷ ಸೇವೆ ಮರೆಯಲಾಗದು. ಕೊರೊನಾಕ್ಕೆ ರಾಮಬಾಣ ಎಂದೇ ಹೇಳಲಾದ ನೆಲನೆಲ್ಲಿ ಗಿಡ, ಅಮೃತಬಳ್ಳಿ ಇಲ್ಲಿ ಪೂರೈಕೆ ಆಗುತ್ತಿತ್ತು. ಯಕ್ಷಗಾನ ಕಲಾವಿದ ಪ್ರೊ.ಎಂ.ಎನ್.ಹೆಗಡೆ ಹಳವಳ್ಳಿಯವರು ‘ನಾನು ನಮ್ಮ ಮನೆಗೆ ಇಲ್ಲಿಂದಲೇ ನೆಲನೆಲ್ಲಿ ಗಿಡ ಹಾಗೂ ಅಮೃತಬಳ್ಳಿ ಒಯ್ದಿದ್ದೆ’ ಎಂದು ಆ ದಿನವನ್ನು ಮೆಲಕು ಹಾಕುತ್ತಾರೆ.
ಸುಮಾರು ಎಂಬತ್ತು ವರುಷದ ಆಸುಪಾಸಿನ ಹಿರಿಯ ಜೀವಿ ಓಮಿ ಮರಾಠೆಯವರು ‘ನಾನು ಚಿಕ್ಕಂದಿನಿಂದಲೂ ಇಲ್ಲಿ ವ್ಯಾಪಾರ ಮಾಡಿಯೇ ಹೊಟ್ಟೆಗೆ ಹಿಟ್ಟು ಕಂಡು ಕೊಂಡಿದ್ದೇನೆ. ನನ್ನ ಸೊಸೆ, ಮೊಮ್ಮಗಳು ಕೂಡಾ ನಾನು ಬಾರದ ದಿವಸ ಇಲ್ಲಿಗೆ ವ್ಯಾಪಾರಕ್ಕೆ ಬರುತ್ತಾರೆ’ ಎನ್ನುತ್ತಾರೆ ನಗುನಗುತ್ತಾ.
ಈ ಮಾರುಕಟ್ಟೆಯಲ್ಲಿ ಎಲ್ಲಿಯೂ ಗಡಸು ಧ್ವನಿ ಕೇಳಿಸದು. ಮೆಲುಧ್ವನಿಯಲ್ಲಿ ಹಿತಮಿತವಾಗಿ ಮಾತನಾಡುವ ಇವರು, ಬಹುತೇಕ ತಮ್ಮ ವಸ್ತುಗಳನ್ನು ತಾಜಾ ಬಾಳೆಲೆಯಲ್ಲಿ ಸುತ್ತಿ ತರುತ್ತಾರೆ.
ಆದರ್ಶ ಕೃಷಿಕರಾದ ರವಿ ಲಕ್ಷ್ಮಣ ಶಾನಭಾಗರು ‘ಇಂತಹ ಮಾರುಕಟ್ಟೆ ಅಪರೂಪದಲ್ಲಿ ಅಪರೂಪ. ಈ ಕೃಷಿ ಮಹಿಳೆಯರ ಮಾರಾಟದ ವಸ್ತುಗಳಲ್ಲಿ ಸಾಕಷ್ಟು ಔಷಧಿ ಗುಣವಿದ್ದು ಇಂತಹ ವಿಶೇಷ ಕಾಯಿಪಲ್ಲೆಗಳನ್ನು ಗ್ರಾಹಕರಿಗೆ ಒದಗಿಸುವ ಇವರಿಗೆ ಸರ್ಕಾರದಿಂದ ಹೆಚ್ಚಿನ ಸೌಲಭ್ಯ ಸಿಗುವಂತಾಗಬೇಕು’ ಎಂದು ಅಭಿಪ್ರಾಯ ಪಡುತ್ತಾರೆ.
ಒಮ್ಮೆ ಇಲ್ಲಿಗೆ ಭೇಟಿ ಕೊಟ್ಟರೆ ನೀವೇ ಹೇಳುತ್ತೀರಿ, ‘ಯಲ್ಲಾಪುರದ ಕಾಯಿಪಲ್ಲೆ ಮಾರುಕಟ್ಟೆ ಎಲ್ಲಾ ಮಾರುಕಟ್ಟೆಯಂತಲ್ಲ’ ಎಂದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.