ADVERTISEMENT

ಉಧೋ... ಉಧೋ...ಯಲ್ಲಮ್ಮ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 25 ಫೆಬ್ರುವರಿ 2019, 19:30 IST
Last Updated 25 ಫೆಬ್ರುವರಿ 2019, 19:30 IST
ಚಿತ್ರಗಳು: ತಾಜುದ್ದೀನ್‌ ಆಜಾದ್‌
ಚಿತ್ರಗಳು: ತಾಜುದ್ದೀನ್‌ ಆಜಾದ್‌   

ಬೆಳಗಾವಿ ಜಿಲ್ಲೆಯ ಸವದತ್ತಿಯ ಪ್ರಸಿದ್ಧ ಶಕ್ತಿಪೀಠ ಯಲ್ಲಮ್ಮನ ಗುಡ್ಡದಲ್ಲಿ ಭಾರತ ಹುಣ್ಣಿಮೆ ಜಾತ್ರೆಯ ಸಂಭ್ರಮ ಮನೆಮಾಡಿದೆ. ರಾಜ್ಯವಲ್ಲದೇ, ನೆರೆಯ ಮಹಾರಾಷ್ಟ್ರ, ಗೋವಾ, ಆಂಧ್ರ ಹಾಗೂ ತೆಲಂಗಾಣಗಳಿಂದ ಲಕ್ಷಾಂತರ ಭಕ್ತರು ತಾಯಿ ದರ್ಶನಕ್ಕೆ ದಿನವೂ ಬರುತ್ತಿದ್ದಾರೆ. ಐದು ಹುಣ್ಣಿಮೆಗಳ ಪೈಕಿ ಕೊನೆಯದಾದ ಭಾರತ ಹುಣ್ಣಿಮೆಯ ಜಾತ್ರೆ ಅದ್ಧೂರಿಯಾಗಿರುತ್ತದೆ.

ಭರತ ಹುಣ್ಣಿಮೆಗಿಂತ ಒಂದು ವಾರ ಮನ್ನವೇ ಭಕ್ತರು ಗುಡ್ಡಕ್ಕೆ ಚಕ್ಕಡಿ ಯಲ್ಲೇ ಬರಲು ಆರಂಭಿಸುತ್ತಾರೆ. ಹೀಗಾಗಿ ಇದು ‘ಚಕ್ಕಡಿ ಜಾತ್ರೆ’ ಎಂದೇ ಪ್ರಸಿದ್ಧಿ. ಸಿಂಗರಿಸಿದ ಚಕ್ಕಡಿಗಳು, ಚೌಡಕಿ ಪದಗಳು, ಭಂಡಾರದಲ್ಲಿ ಮಿಂದೇಳುವ ಭಕ್ತರನ್ನು ನೋಡಲು ನೀವು ಗುಡ್ಡಕ್ಕೆ ಬರಲೇಬೇಕು.

ಹೀಗೆ ಬರುವ ಭಕ್ತರು ತಮಗೆ ಜಾಗ ಸಿಕ್ಕಲ್ಲಿ ತಾತ್ಕಾಲಿಕ ಶೆಡ್‌ ಹಾಕಿಕೊಂಡು ‘ಎಣ್ಣೆಹೊಂಡ’ದಲ್ಲಿ ಸ್ನಾನ ಮಾಡಿ ದೇವಿಯ ಹಡ್ಡಲಿಗೆ ತುಂಬುತ್ತಾರೆ. ‘ಹಡ್ಡಲಿಗೆ’ ಎಂಬುದು ಬಿದಿರಿನ ಬುಟ್ಟಿಯಾಗಿದ್ದು ಯಲ್ಲಮ್ಮನನ್ನು ಪ್ರತಿನಿಧಿಸುವ ‘ಜಗ’ (ದೇವಿ ಮುಖ) ಹೊಂದಿರುತ್ತದೆ. ಭಕ್ತರು ಕರಿಗಡಬು, ವಡೆ, ನೆನೆಸಿದ ಕಡಲೆ, ಬೆಲ್ಲ, ಅಕ್ಕಿ, ಅರಿಸಿನ ಬೇರು, ಬುತ್ತಿಯನ್ನು ‘ಹಡ್ಡಲಿಗೆ’ ಮೂಲಕ ದೇವಿಗೆ ಅರ್ಪಿಸುತ್ತಾರೆ. ಭರತ ಹುಣ್ಣಿಮೆಯಂದು ಜೋಗಪ್ಪ ಹಾಗೂ ಜೋಗತಿಯರು ತಮ್ಮ ಪಡ್ಡಲಿಗೆ ಬದಲಿಸುತ್ತಾರೆ. ಅದನ್ನು ಮುಂದಿನ ವರ್ಷದವರೆಗೆ ಜೋಗಾಡಲು ಬಳಸುತ್ತಾರೆ.

ADVERTISEMENT

‘ಯಲ್ಲಮ್ಮ ನಿನ್ನ ಪಾದಕ ಉಧೋ...’ ಎಂದು ದೇವಿಯನ್ನು ಸ್ತುತಿಸುತ್ತಾ ಭಂಡಾರ ತೂರುತ್ತಾರೆ. ಜೋಗಮ್ಮ, ಜೋಗಪ್ಪಗಳು ಚೌಡಕಿ ಬಾರಿಸುತ್ತ ದೇವಸ್ಥಾನದ ಸುತ್ತ ದೇವಿಯನ್ನು ಸ್ತುತಿಸುತ್ತಾ, ಕುಣಿಯುತ್ತಾ ಭಂಡಾರದ ಓಕುಳಿ ಆಡುತ್ತಾರೆ. ಇದರಿಂದ ದೇಗುಲದ ಪ್ರಾಂಗಣ ಭಂಡಾರದ ಬಣ್ಣಕ್ಕೆ ತಿರುಗಿ ಬಂಗಾರದ ಬಣ್ಣದಿಂದ ಕಂಗೊಳಿಸುತ್ತಿದೆ.

ಇದು ‘ಜನರ ಜಾತ್ರೆ’. ಈ ಬಾರಿ ಭರತ ಹುಣ್ಣಿಮೆಯ ಆಸುಪಾಸಿನ ಎರಡು ವಾರದಲ್ಲಿ ಅಂದಾಜು 15 ಲಕ್ಷಕ್ಕೂ ಹೆಚ್ಚು ಜನ ಗುಡ್ಡಕ್ಕೆ ಭೇಟಿ ನೀಡಿದ್ದಾರೆ. ಜಾತ್ರೆಯಲ್ಲಿ ಟೆಂಟ್ ಹೋಟೆಲ್, ಮಿಠಾಯಿ ಅಂಗಡಿ, ಸ್ಟೇಶನರಿ, ಆಟಿಕೆ, ಕಿರಾಣಿ, ಭಾಂಡೆ, ಸೋಡಾ, ಬಳೆ, ಎತ್ತುಗಳ ಸಿಂಗಾರ ಸಾಧನಗಳ ಅಂಗಡಿಗಳಲ್ಲಿ ವ್ಯಾಪಾರವೂ ಭರ್ಜರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.