ADVERTISEMENT

ಬನ್ನಿ ದೇಸಿ ಆಟ ಆಡೋಣ...

desi games

ಮಂಜುಶ್ರೀ ಎಂ.ಕಡಕೋಳ
Published 29 ನವೆಂಬರ್ 2018, 19:46 IST
Last Updated 29 ನವೆಂಬರ್ 2018, 19:46 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಬಿಡುವಿನಲ್ಲಿ ನೆರೆಹೊರೆಯ ಮಕ್ಕಳು ಸೇರಿದರೆ ಸಾಕು ‘ಕಣ್ಣಾ ಮುಚ್ಚಾ ಕಾಡೇ ಗೂಡೆ... ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೆ. ಉಪ್ಪಿನ ಮೂಟೆ ಉರುಳೇ ಹೋಯ್ತು’ ಜೋರಾದ ರಾಗವಾದ ದನಿಯೊಂದು ಹೊಮ್ಮುತ್ತಿತ್ತು. ಕಲ್ಲಿನಾಟ, ಕುಂಟಾಬಿಲ್ಲೆ ಆಟಗಳ ಸರಣಿಯೇ ಶುರುವಾಗಿಬಿಡುತ್ತಿತ್ತು...

ಬಾಲ್ಯ ಕರಗಿದರೂ ಆಟದ ನೆನಪು ಮಾತ್ರ ಕರಗಿಲ್ಲ. ಕಾಲಗರ್ಭದಲ್ಲಿ ನೇಪಥ್ಯಕ್ಕೆ ಸೇರಿದ ದೇಸಿ ಆಟಗಳೆಷ್ಟೋ? ಲೆಕ್ಕ ಹಾಕಿದಷ್ಟೂ ನೆನಪಾಗುವ ಚೌಕಾಬಾರ, ಬಳೆಚುಕ್ಕ ಆಟ, ಚನ್ನೇಮಣೆ (ಅಳಗುಳಿ ಮನೆ)ಗೋಲಿಯಾಟ, ಚಿನ್ನಿದಾಂಡು... ಹೀಗೆ ನೇಪಥ್ಯಕ್ಕೆ ಸರಿದ ನೂರಾರು ಆಟಗಳ ನೆನಪಿನ ಮೆರವಣಿಗೆಯೇ ಹೊರಟೀತು.

ಮಧ್ಯಾಹ್ನದ ಬಿಡುವಿನಲ್ಲಿ ಮನೆಯ ಹಿರಿಯ ಹೆಣ್ಣಮಕ್ಕಳೊಂದಿಗೆ ಆಡುತ್ತಿದ್ದ ಚೌಕಾಬಾರದಲ್ಲಿ ಅಜ್ಜಿಯನ್ನೇ ಸೋಲಿಸಿದೆ ಗೆಲುವಿನ ನಗೆ ಬೀರುವ ಮೊಮ್ಮಗಳು, ಮಹಾಭಾರತದ ಶಕುನಿಯಂತೆ ಹೇಗಾದರೂ ಆಗಲಿ ‘ಒಚ್ಚಿ’ (ಒಂದು) ಬೀಳಲಿ ಎಂದು ಕೈಹಿಡಿದು ಅಜ್ಜಿ ಹಾಕುತ್ತಿದ್ದ ಕವಡೆಗಳತ್ತಲೇ ಎಲ್ಲರ ಚಿತ್ತ ನೆಟ್ಟಿರುತ್ತಿದ್ದ ಕ್ಷಣ ಯಾವ ಕ್ರಿಕೆಟ್ ಮ್ಯಾಚಿಗೂ ಕಮ್ಮಿಯಿರಲಿಲ್ಲ. ಅಂದು ಆಡುತ್ತಿದ್ದ ಒಂದೊಂದು ಆಟವೂ ನಮ್ಮೊಂದಿಗೆ ಬೆಸೆಯುತ್ತಿದ್ದ ಭಾವಬಂಧಗಳು ನೂರಾರು. ಇಷ್ಟದ ಬಚ್ಚಾ (ಕಲ್ಲಿನ ತುಣುಕು) ಕೈ ಬಿಡದಿರಲಿ ಎಂದು ಕುಂಟಾಬಿಲ್ಲೆ ಆಡುವಾಗ ಬಚ್ಚಾಕ್ಕೆ ಹೂಮುತ್ತು ಕೊಟ್ಟು ಎಸೆಯುತ್ತಿದ್ದ ಪರಿ... ಚನ್ನೇಮಣೆಯಲ್ಲಿ ತಮ್ಮ ಸರದಿಗಾಗಿ ಕಾತುರದಿಂದ ಕಾಯುತ್ತಿದ್ದ ಕ್ಷಣಗಳು.... ನೆನಪಿನೋಕುಳಿಯಲ್ಲಿ ನೇಪಥ್ಯಕ್ಕೆ ಸರಿದ ದೇಸಿ ಆಟಗಳೆಷ್ಟು?

ADVERTISEMENT

ದೇಸಿ ಆಟಗಳು ಮಕ್ಕಳಷ್ಟೇ ಅಲ್ಲ ದೊಡ್ಡವರಲ್ಲೂ ಸೃಜನಶೀಲತೆ ಮೂಡಿಸುತ್ತಿದ್ದ ಪರಿ ಅನನ್ಯ. ಕಳೆದು ಹೋಗುತ್ತಿರುವ ಕೌಟುಂಬಿಕ ಮೌಲ್ಯವನ್ನು ಪುನರ್ ಪ್ರತಿಷ್ಠಾಪಿಸುವ ಗುಣ ಈ ಆಟಗಳಿಗಿದೆ. ಕುಟುಂಬದ ಒಬ್ಬೊಬ್ಬ ಸದಸ್ಯನೂ ಮೊಬೈಲ್ ಲೋಕದಲ್ಲಿ ಮುಳುಗಿ ಪರಸ್ಪರ ಸಂವಹನ ಮಾಡದಿರುವಷ್ಟು ಲೋಕಾಂತದೊಳಗೆ ಏಕಾಂತ ಸೃಷ್ಟಿಸಿಕೊಂಡಿರುವ ಈ ಕಾಲಘಟ್ಟದಲ್ಲಿ ದೇಸಿ ಆಟಗಳ ಜರೂರತ್ತು ಈ ಹಿಂದಿಗಿಂತ ಹೆಚ್ಚಿದೆ. ‌

ಟಿ.ವಿ.ಯ ಕಾರ್ಟೂನುಗಳು, ಮೊಬೈಲ್‌, ವಿಡಿಯೋ ಗೇಮ್‌ಗಳಲ್ಲಿ ಮುಳುಗಿರುವ ಪುಟ್ಟ ಮಕ್ಕಳು ಪುಟ್ಟ ಪುಟ್ಟ ದ್ವೀಪಗಳಂತೆ ಭಾಸವಾಗುತ್ತಿದೆ. ಅಪ್ಪ–ಅಮ್ಮನ ಹಂಗಿಲ್ಲ, ಅಜ್ಜ–ಅಜ್ಜಿಯ ಪ್ರೀತಿಯ ಸಾಂಗತ್ಯ ಬೇಕಿಲ್ಲ. ಕೈಯಲ್ಲೊಂದು ಮೊಬೈಲ್ ಇದ್ದರೆ ಅದುವೇ ಅವರ ಪಾಲಿಗೆ ದೊಡ್ಡಲೋಕ. ದೇಸಿ ಆಟಗಳ ಜತೆಗೆ ಕೌಟುಂಬಿಕ ಮೌಲ್ಯಗಳನ್ನು ಬೆಸೆಯುತ್ತಿದ್ದ ಚಿಕ್ಕಮ್ಮ, ಚಿಕ್ಕಮ್ಮ, ಅಕ್ಕ–ಅಣ್ಣ, ತಂಗಿ–ತಮ್ಮ ಅವರ ಭಾವಲೋಕದೊಳಗೆ ಪುಟಾಣಿಗಳು ಬೆಸೆದುಕೊಳ್ಳುತ್ತಿದ್ದ ಭಾವನಾತ್ಮಕ ಬೆಸುಗೆ ಇಂದಿನ ಮೊಬೈಲ್‌ನಿಂದಾದೀತೆ?

ಹಾಗಿದ್ದರೆ ದೇಸಿ ಆಟಗಳ ಪರಂಪರೆ ಮುಗಿದೇ ಹೋಯಿತೇ? ಖಂಡಿತಾ ಇಲ್ಲ. ಹಿರಿಯರ ನೆನಪಿನ ತಿಜೋರಿಯಲ್ಲಿ ಭದ್ರವಾಗಿ ಕುಳಿತಿರುವ ಈ ಆಟಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಲು ಹೊರಟಿದೆ ಗ್ರಾಮ ಸೇವಾ ಸಂಘ. ರಾಗಿಕಣದಲ್ಲಿ ದೇಸಿ ಆಟಗಳ ಕಾರ್ಯಾಗಾರವನ್ನು ಆಯೋಜಿಸಲಾಗಿದ್ದು, ಆಸಕ್ತರು ಕಾರ್ಯಾಗಾರದಲ್ಲಿ ಪಾಲ್ಗೊಳ್ಳಬಹುದು.

ಅಪರೂಪದ ದೇಸಿ ಆಟಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸಲು ಹೊರಟಿದೆ ಗ್ರಾಮ ಸೇವಾ ಸಂಘ. ಡಿಸೆಂಬರ್ 2ರಂದು ರಾಗಿಕಣದಲ್ಲಿ ಇಮ್ಮಾ ರಿಕ್ರೇಷನ್ಸ್ ಮಕ್ಕಳು ಕಾರ್ಯಾಗಾರ ನಡೆಸಿಕೊಡಲಿದೆ.

ಸ್ಥಳ: ರಾಗಿಕಣ, ಶ್ರೀರಾಮಕೃಷ್ಣ ಸಮಗ್ರ ಶಿಕ್ಷಣ ಕೇಂದ್ರ, ಐಡಿಬಿಐ ಲೇಔಟ್, ಬನ್ನೇರುಘಟ್ಟ ರಸ್ತೆ, ಗೊಟ್ಟಿಗೆರೆ. ಮಾಹಿತಿಗೆ: 99800 43911

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.