ADVERTISEMENT

ನುಡಿಚಿತ್ರ: ಬರುತಲಿದೆ ಚಳಿ ಥಕಧಿಮಿತ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2023, 23:30 IST
Last Updated 2 ಡಿಸೆಂಬರ್ 2023, 23:30 IST
<div class="paragraphs"><p>ನಂದಿಬೆಟ್ಟದಲ್ಲಿ ಮಂಜಿನ ಜೊತೆ ಸೂರ್ಯ ರಶ್ಮಿಯ ಸರಸ</p></div>

ನಂದಿಬೆಟ್ಟದಲ್ಲಿ ಮಂಜಿನ ಜೊತೆ ಸೂರ್ಯ ರಶ್ಮಿಯ ಸರಸ

   
ಮಂಜು ಮೆತ್ತಿದ ಗರಿಕೆಯ ಮಾತು, ಸೌದೆಗಳ ಜೋಡಿಸಿಟ್ಟು ಹಬ್ಬಿಸಿದ ಜ್ವಾಲೆ ಮೇಲಿನ ಅಂಗೈಗಳ ಬೆಚ್ಚನೆಯ ಚಿತ್ರಗಳು, ಪುಟಾಣಿಯನ್ನು ಎದೆಗಾನಿಸಿ ಹೊದ್ದ ಶಾಲು ಕೊಡುವ ಬೆಚ್ಚಗಿನ ಅನುಭವ– ಚಳಿಯ ಆಗಮನದಲ್ಲಿ ಹಲವು ಚಿತ್ರಗಳು ಇದೋ...

ಹಸುಗೂಸಿಗೆ ಕಾಲು ಬಂದು ನಿಂತಲ್ಲಿ ನಿಲ್ಲದೆ ಮನೆಯೆಲ್ಲ ತೊದಲುಗಾಲು ಹಾಕುವಂತೆ ಚಳಿಗಾಲ ಅಂಬೆಗಾಲಿಡತೊಡಗಿದೆ. ಹೂವಿಗೆ ಹೆಜ್ಜೆ ಬಂದು ಸರಿದಾಡುವಂತೆ, ಸರಿದಾಡಿದಲ್ಲೆಲ್ಲ ಪರಿಮಳ ಚೆಲ್ಲಿದಂತೆ ಮಗುವಿನ ನಡೆದಾಟ. ಅದು ಹೆಜ್ಜೆಯಿಟ್ಟಲ್ಲೆಲ್ಲ ಪುಳಕ. ಚಳಿಯೂ ಅಷ್ಟೇ: ಸುಖದ ನವಿಲುಗರಿ ತಾಕಿದಂತೆ ಅದರ ನವಿರು ಸೋಕು. ಚಳಿಯ ತೆಕ್ಕೆಗೆ ಸಿಕ್ಕವರಿಗೆಲ್ಲ ಕಚಗುಳಿಯ ಪುಳಕದ ಉಡುಗೊರೆ.

ಚಳಿಯ ತೆಕ್ಕೆಯಿಂದ ಯಾರು ತಾನೆ ಪಾರಾಗುವರು? ಅರಳಿದ ಹೂ ಪಕಳೆಗಳ ತುಂಬ ಚಳಿಯೊಲವಿನ ಒಲವಿನ ಓಲೆ. ಎಲೆ ಎಲೆಗಳ ಮೇಲೆ ಚಳಿಯ ನೇವರಿಕೆಯಿಂದ ಮೂಡಿದ ಇಬ್ಬನಿ ಮುತ್ತುಗಳ ಸಾಲು. ಇಬ್ಬನಿಗೂ ಬಾಯಾರಿಕೆ, ಶೀತಲಹನಿಗಳ ಬಯಕೆ. ಮರಗಿಡಗಳು, ಹೂಬಳ್ಳಿಗಳಷ್ಟೇ ಅಲ್ಲ, ಬಯಲಿನ ತುಂಬಾ ಚಳಿಯದೇ ಹಾಜರಿ, ಜಂಬೂಸವಾರಿ. ನಸುಕಿನಲ್ಲೆದ್ದು ನೋಡಿ: ಅದು, ನೆಲಮುಗಿಲುಗಳನು ಚಳಿಮಾಯಿ ಮೀಯಿಸುವ ಅಮೃತಕ್ಷಣ. ದಿಟ್ಟಿ ಹರಿದಷ್ಟೂ ದೂರ ಹಿಮದ ಹೊದಿಕೆ, ಪ್ರಕೃತಿಯ ತುಂಬ ಸುಖದ ನರಳಿಕೆ. ‌

ADVERTISEMENT

ನಗರದಲ್ಲಿ ದಿನೇದಿನೆ ಚಳಿ ಹೆಚ್ಚುತ್ತಿದ್ದು ಕುಕ್ಕರಹಳ್ಳಿಕೆರೆ ನಲ್ಲಿ ಬೆಂಕಿ ಕಾಯಿಸಿಕೊಳ್ಳುತ್ತಿರುವ ನಾಗರಿಕರು. ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.

ಯಾವುದೇ ನರಳಿಕೆಯ ಹಿಂದೆ ನೋವಿರುವುದು ಸಹಜವಷ್ಟೇ. ಆದರೆ, ಚಳಿಯಿಂದ ಉಂಟಾಗುವ ನರಳಿಕೆಯಲ್ಲಿರುವುದು ನಿರಾಳದ ಅನುಭವ, ಬಿಡುಗಡೆಯ ಭಾವ. ಬಿಸಿಲ ದಿನಗಳಲ್ಲಿ ಮೈಮನಸುಗಳ ಆರ್ದ್ರತೆಯೆಲ್ಲ ಕಣಕಣವೂ ಕ್ಷಣಕ್ಷಣವೂ ಸೋರಿ ಹೋಗಿ ಉಂಟಾದ ಬಳಲಿಕೆ, ಚಳಿಯ ಸಂಗದಲ್ಲಿ ನೀಗುವುದು; ದಣಿವು ಮಾಗಿ ಒಲವಾಗುವುದು, ಗೆಲುವಾಗುವುದು. ಚಳಿ ಬರಿ ಮಾಯಿಯಷ್ಟೇ ಅಲ್ಲ, ದಣಿವನ್ನು ಕಸುವಾಗಿ ಮಾಗಿಸುವ ಅಮೃತಮಯಿಯೂ ಹೌದು.

ಬೇಸಗೆ, ಬಯಕೆಗಳ ಕಾಲವೆನ್ನುವುದು ದಿಟ. ಆದರೆ, ಆ ಬಯಕೆಗಳ ಬಸಿರಲ್ಲಿ ನಂದದ ಧಗೆಯಿರುವುದು, ಆ ಧಗೆಯೇ ಬಯಕೆಯನ್ನು ಮತ್ತು ನಿಗಿನಿಗಿಯೆನಿಸುವುದು. ಚಳಿಯ ಶೀತಲತೆಯೂ ಬಯಕೆಗಳ ಜ್ವಾಲೆಗಳನು ಜಾಗೃತಗೊಳಿಸುವುದು. ಆದರೆ, ಆ ಜ್ವಾಲೆಗಳು ಕಾವಾಗಿ ಹಿತವಾಗಿ ಪರಿಣಮಿಸುತ್ತವೆಯೇ ಹೊರತು, ಜ್ವಾಲೆಗಳಾಗಿ ಸುಡುವುದಿಲ್ಲ. ಆಹಾ, ಚಳಿ ದಿನಗಳ ರಮಣೀಯತೆಯೇ... ಪ್ರೇಮವೂ ಕಾಮವೂ ಜೊತೆಜೊತೆಯಾಗಿ ನಡೆಯುವ ಮಾಯೆಯೇ...

ಅಜ್ಜಿಯ ಬೆಚ್ಚನೆಯ ಅಪ್ಪುಗೆಯಲ್ಲಿ ಮಗು

ಚಳಿಯ ಕಾವನ್ನು ಹಿತವೆಂದು ಹೇಳುತ್ತಲೇ, ಚಳಿಯಷ್ಟು ತೀವ್ರವಾಗಿ ಬೇರಾವುದೂ ಸುಡುವುದಿಲ್ಲ ಎನ್ನುವ ಮಾತೊಂದಿರುವುದನ್ನೂ ನೆನಪಿಸಿಕೊಳ್ಳಬೇಕು. ಹಾಗೆ ನೋಡಿದರೆ, ಸುಡುವುದು ಚಳಿಯ ಗುಣವಲ್ಲ – ಬೇಸಗೆಯ ಲಕ್ಷಣ. ಸೂರ್ಯ ಪರಮಾತ್ಮ ಕುಂಟುನಡಿಗೆಯಲ್ಲಿ ಸಂಚರಿಸುವ ಬೇಸಗೆಗೆ ಮೈಯೆಲ್ಲ ಜ್ವಾಲೆಯ ಕಣ್ಣುಗಳು. ಆದರೆ, ಚಳಿಯ ಸುಡುವಿಕೆಯಿಂದ ಬೆಂದವರಿಗೆ ಬೇಸಗೆ ಬೆಳುದಿಂಗಳಿನಂತೆ ಭಾಸವಾದರೆ ಆಶ್ಚರ್ಯವೇನೂ ಇಲ್ಲ. ಇದೆಂಥದಿದು ಘೋರ ಸುಡುವಿಕೆ? ಅದರ ಸ್ವರೂಪವಾದರೂ ಯಾವುದು? ಆ ತಾಪವನ್ನು, ಅದರ ವಿರಾಟ ಸ್ವರೂಪವನ್ನು ಹೇಗೆ ಹೇಳುವುದು? ಅದನ್ನು ವಿರಹಿಗಳಷ್ಟೇ ಬಲ್ಲರು. ವಿರಹಿಗಳಿಗೆ ಚಳಿಯ ಶೀತಲತೆ ಕುಠಾರಪ್ರಾಯ; ಪ್ರೇಮಿಗಳ ಪಾಲಿಗೆ ಚಳಿಯನ್ನುವುದು ಬಯಕೆಯಮೃತದ ಅಕ್ಷಯಪಾತ್ರೆ. ಎದೆಯೊಳಗೊಂದು ಅಗ್ಗಿಷ್ಟಿಕೆಯಿರಿಸಿಕೊಂಡು, ಬೆಳುದಿಂಗಳ ಇರುಳಿನಲ್ಲಿ ಬಟ್ಟ ಬಯಲಿನ ನಡುವೆ ಬೆಂಕಿ ಮಾಡಿಕೊಂಡು ಎದುರಿಗೆ ಕೂರುವುದು... ಒಳಗೂ ಕಾವು, ಹೊರಗೂ ಕಾವು...

ಬಿರುಬಿಸಿಲಿನ ಕಲಬುರಗಿಗೂ ಕಾಲಿಟ್ಟಿದ್ದಾನೆ ಚಳಿರಾಯ... ಚಿತ್ರ: ತಾಜುದ್ದೀನ್‌ ಆಜಾದ್‌

ಪ್ರಕೃತಿಯ ಲೀಲೆಯಲ್ಲಿ ಯಾವುದೂ ವಿಫಲವಲ್ಲ. ‘ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ’ ಎನ್ನುವ ಕುವೆಂಪು ಅವರ ಮಾತು ಕಾಲಗಳಿಗೂ ಅನ್ವಯಿಸುವಂತಹದ್ದು. ಆದರೆ, ಭಾವಕೋಶಕ್ಕೆ, ಸುಖದ ಅಭೀಪ್ಸೆಗೆ, ಮೈಮನಸ್ಸಿಗೆ, ಚಳಿಗಾಲ ಹಿತವೆನ್ನಿಸಿದಷ್ಟು ಬೇಸಗೆಯೂ ಮಳೆಯೂ ಕೂಡಿಬರುವುದಿಲ್ಲ. ಪ್ರಕೃತಿಯಲ್ಲಿ ಅದೆಷ್ಟೇ ಬಣ್ಣಗಳಿದ್ದರೂ ಆ ಚೆಲುವನ್ನು ಮರೆಸುವಷ್ಟು ರೇಜಿಗೆ ಬೇಸಗೆಯ ಒಡಲಿನಲ್ಲಿರುತ್ತದೆ. ಮಳೆದಿನಗಳೂ ಅಷ್ಟೇ – ಚಲನಶೀಲತೆಗೆ ಕ್ರಿಯಾಶೀಲತೆಗೆ ಅಷ್ಟೇನೂ ಪೂರಕವಲ್ಲ. ಮಳೆ ಹಾಗೂ ಬಿಸಿಲು ಕಣ್ಣಾಮುಚ್ಚಾಲೆಯಾಡುವ ಚಳಿಗಾಲ, ಸೃಜನಶೀಲತೆಯ ಮೊಗ್ಗು ಹಿಗ್ಗಿನಿಂದ ಅರಳುವ ಸಮಯ. ಮಳೆದಿನಗಳಲ್ಲಿ ಒದ್ದೆಯಾದ ಮಣ್ಣು, ಚಳಿದಿನಗಳಲ್ಲಿ ಹದಗೊಂಡು ಜೀವಕಳೆ ಮುಕ್ಕಳಿಸುವುದು ಚಳಿಯ ಸ್ಪರ್ಶದಲ್ಲೇ.

ಈ ಬಾರಿ, ಮಳೆಗಾಲ ಸೊರಗಿತು. ಆ ಕೊರತೆಯನ್ನು ಚಳಿ ನೀಗಿಸಲಾರದು. ಆದರೆ, ಹಿಂಗಾರಿನ ಭರವಸೆ ಉಳಿಸಿಕೊಳ್ಳಲಿಕ್ಕೆ ಅಗತ್ಯವಾದ ಹುಮ್ಮಸ್ಸನ್ನು ಚಳಿ ಕರುಣಿಸಬಲ್ಲದು. 

ಕಾವೇರಿ ನಿಸರ್ಗಧಾಮ ಚಳಿಯ ಓ ನಾಮ

ಚಿತ್ರ: ಡಿ.ಜಿ. ಮಲ್ಲಿಕಾರ್ಜುನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.