ADVERTISEMENT

ಕಾಡೆದ್ದು ಪುಟಗಳಲ್ಲಿ ಕೂತಂತೆ...

ಮೊದಲ ಓದು

ಸಂದೀಪ ನಾಯಕ
Published 23 ಜನವರಿ 2016, 19:56 IST
Last Updated 23 ಜನವರಿ 2016, 19:56 IST
ಕಾಡೆದ್ದು ಪುಟಗಳಲ್ಲಿ ಕೂತಂತೆ...
ಕಾಡೆದ್ದು ಪುಟಗಳಲ್ಲಿ ಕೂತಂತೆ...   

ಅನುರಕ್ತಿ (ಕವಿತೆ–ಚಿತ್ರ)
ಲೇ: ಕುವೆಂಪು, ಸಂ: ಕೆ.ಸಿ. ಶಿವಾರೆಡ್ಡಿ, ಪುಸ್ತಕ ನಿರ್ಮಾಣ: ಪುಸ್ತಕ ಮರ, ಕುಪ್ಪಳಿ, ಪ್ರ: ಎಂ.ಸಿ. ನರೇಂದ್ರ, ಮೆ. ಎಂ. ಮುನಿಸ್ವಾಮಿ ಅಂಡ್‌ ಸನ್ಸ್‌, 
ಪುಟ:368ರೂ.2750, ಸರ್ವೋದಯ, ನಂ. 72, ಪ್ರೊ. ಎ.ಆರ್‌. ಕೃಷ್ಣ ಶಾಸ್ತ್ರಿ ರಸ್ತೆ, (ಸರ್ವೆಯರ್‌ ರಸ್ತೆ), ಬಸವನಗುಡಿ, ಬೆಂಗಳೂರು– 560004


ಕುವೆಂಪು ಅವರ ಕವಿತೆಗಳನ್ನು ಸಂಪಾದಿಸಿ ಕೆ.ಸಿ. ಶಿವಾರೆಡ್ಡಿ ‘ಅನುರಕ್ತಿ’ಯಲ್ಲಿ ಕೊಟ್ಟಿದ್ದಾರೆ. ಕವಿಯೊಬ್ಬನನ್ನು ಈ ಕಾಲದ ಜನರಿಗೆ ಆಕರ್ಷಕವಾಗಿ ಮುಟ್ಟಿಸುವ ಕೆಲಸದ ಭಾಗವಾಗಿ ಈ ಪುಸ್ತಕ ಪ್ರಕಟವಾಗಿದೆ. ಕುವೆಂಪು ಪ್ರೇಮಿಗಳಿಗೆ, ಅಭಿಮಾನಿಗಳಿಗೆ ಪ್ರಿಯವಾಗುವಂತೆ ಇದು ರೂಪುಗೊಂಡಿದೆ. ಪುಟ ಪುಟವೂ ಮನಮೋಹಕ, ಆಹ್ಲಾದದ ಅನುಭವ ಕೊಡುತ್ತದೆ.

ಸರಳ ಮಾತಿನಲ್ಲಿ ಹೇಳುವುದಾದರೆ ಮಲೆನಾಡಿನ ಬೆಡಗು, ಸುರಮ್ಯ ಚೆಲುವು ಇದಕ್ಕಿದೆ. ಕಾಡು, ಅದರ ಹಲಬಗೆಯ ನೋಟಗಳು ಇಲ್ಲಿನ ಪುಟಗಳಲ್ಲಿ ಎದ್ದುಬಂದು ಕೂತಂತೆ ಇದು ಕಾಣುತ್ತದೆ. ಇಲ್ಲಿ ಕವಿತೆಗಳೊಂದಿಗೆ ಅಚ್ಚಾದ ಅನೇಕ ಛಾಯಾಚಿತ್ರಗಳು ಕವಿಗೆ ಪ್ರಿಯವಾದ ಮಲೆನಾಡಿನವು. ಆ ಚಿತ್ತಾಕರ್ಷಕ ಚಿತ್ರಗಳು ಹೊಳಪಿನ ಕಾಗದದಲ್ಲಿ ಮೂಡಿವೆ. ಇದರ ಅಂದ ಕವಿತೆಯ ಪುಸ್ತಕವೊಂದಕ್ಕೆ ತಕ್ಕುದಾಗಿಯೇ ಇದೆ.

ಪುಸ್ತಕದ ಕವಿತೆಗಳು ಕುವೆಂಪು ಕಾವ್ಯದ ರುಚಿಯನ್ನು ಹುಟ್ಟಿಸುವಂತಿವೆ. ಅನೇಕ ಕವಿತೆಗಳು ಅಷ್ಟೇನೂ ದೀರ್ಘವಲ್ಲದವು. ಕೆಲವು ಪುಟ್ಟ ಕವಿತೆಗಳು ಕವಿಯ ಕೈಬರಹದಲ್ಲಿ ಅಚ್ಚಾಗಿವೆ. ರಸಿಕರಿಗೆ ಕಾವ್ಯದ ಬಗ್ಗೆ ಪ್ರೀತಿ, ಆದರ ಹುಟ್ಟಿಸುವಂತೆ ಈ ಪುಸ್ತಕವನ್ನು ಶ್ರಮವಹಿಸಿ ಸಂಪಾದಕರು ಸಂಯೋಜಿಸಿದ್ದಾರೆ. ಹತ್ತು ಭಾಗಗಳಲ್ಲಿ ೩೪೫ ಕವಿತೆಗಳು ವಿಂಗಡಣೆಗೊಂಡಿವೆ. ಇಲ್ಲಿ ಪ್ರಕಟವಾಗಿರುವ ಅನೇಕ ಕವಿತೆಗಳು ಪ್ರಕೃತಿಗೆ ಸಂಬಂಧಿಸಿದವು. ಜೊತೆಗೆ ಕೆಲವು ವ್ಯಕ್ತಿಚಿತ್ರಗಳೂ ಇವೆ. ಕುವೆಂಪು ಅವರ ಪ್ರಮುಖ ಕವಿತೆಗಳನ್ನು ಒಳಗೊಳ್ಳುವಂತೆ ಇದನ್ನು ರೂಪಿಸಲಾಗಿದೆ.

ಇಲ್ಲಿನ ಕವಿತೆಗಳಿಗೆ ಕೆ.ಪಿ. ಪೂರ್ಣಚಂದ್ರ ತೇಜಸ್ವಿ, ಆರ್‌.ಎಸ್‌. ನಾಯ್ಡು, ಪಿ.ಆರ್‌. ತಿಪ್ಪೇಸ್ವಾಮಿ ಅವರು ತೆಗೆದ ಚಿತ್ರಗಳೊಂದಿಗೆ ಎ.ಜಿ. ಗಂಗಾಧರ್‌, ಆನಂದಕುಮಾರ್‌, ಗೋಪಿ ಪೀಣ್ಯ, ಪುಸ್ತಕದ ಸಂಪಾದಕ ಕೆ.ಸಿ. ಶಿವಾರೆಡ್ಡಿ ಅವರ ಛಾಯಾಚಿತ್ರಗಳಿವೆ. ಕವಿತೆಗಳ ಭಾವಲೋಕವನ್ನು ವಿಸ್ತರಿಸುವುದರಲ್ಲಿ ಅವು ನೆರವಾಗಬಹುದು. ಕವಿತೆ ಎನ್ನುವುದು ಒಂದು ರೀತಿಯಲ್ಲಿ ಮೂರ್ತವೂ ಹೌದು, ಇನ್ನೊಂದು ರೀತಿಯಲ್ಲಿ ಅಮೂರ್ತ ಕೂಡ. ಇಲ್ಲಿ ಚಿತ್ರಗಳನ್ನು ಕೊಡುವುದರ ಮೂಲಕ ಓದುಗರ ಕಲ್ಪನೆಯನ್ನು ಒಂದು ಮೂರ್ತಚಿತ್ರಕ್ಕೆ ಬಿಡಿಸಲಾಗದಂತೆ ಕಟ್ಟಿಹಾಕಿದಂತಿದೆ.

ಬಿಡುಗಡೆ ಕೊಡಬೇಕಾದ, ಭಾವಸಂಚಾರಕ್ಕೆ ಅನುವು ಮಾಡಿಕೊಡಬೇಕಾದ, ಕಲ್ಪನೆಯಲ್ಲಿ ವಿಹರಿಸಲು ಬಿಡಬೇಕಾದ ಕವಿತೆಗಳು ಈ ಚಿತ್ರಗಳಿಂದಾಗಿ ಹಲಬಗೆಯ ಮಿತಿಗಳಿಗೆ ಒಳಗಾಗಹುದು. ಅವೇ ಕವಿತೆಗಳ ಓದಿಗೆ ಅಡ್ಡಿಯಾಗಬಹುದು. ಇವುಗಳಿಂದಾಗಿ ಕಣ್ಣು ತಣಿಯಬಹುದೇ ಹೊರತು, ಮನ ಕುಣಿಯದು.

ಕುವೆಂಪು ಅಂತಹ ಜನಮಾನಸಕ್ಕೆ ಸಮೀಪವಾದ ಕವಿಯನ್ನು ಹಲಬಗೆಯಲ್ಲಿ ಮುಟ್ಟಿಸಬೇಕೆನ್ನುವುದು ಸರಿಯೇ. ಇಷ್ಟುಮಾತ್ರದ ಅದ್ದೂರಿತನ ಬೇಕೆ ಎಂಬುದನ್ನು ಓದುಗರು ಇದನ್ನು ನೋಡಿದ ಬಳಿಕ ಚರ್ಚಿಸಬಹುದು. ಏಕೆಂದರೆ ಓದುಗರು ತಮ್ಮ ಮನೆಗಳ ಕಪಾಟುಗಳಲ್ಲಿ ಈ ರೀತಿ ತಮ್ಮ ಕವಿತೆಯ ಪುಸ್ತಕವೊಂದನ್ನು ಇಟ್ಟುಕೊಳ್ಳುವುದನ್ನು ಸ್ವತಃ ಕವಿಯೇ ಒಪ್ಪುತ್ತಿದ್ದರೋ ಇಲ್ಲವೋ? ಸ್ಥಾವರಗೊಳ್ಳದೆ ಜಂಗಮವಾಗುವುದು, ಕೈಯಿಂದ ಕೈಗೆ ದಾಟಬೇಕಾಗಿರುವುದು ಕವಿತೆಗಳ ಮೂಲಭೂತ ಗುಣ. ಅದು ಇಲ್ಲಿ ಹಿಂದಕ್ಕೆ ಸರಿದಂತಿದೆ. ಉಳ್ಳವರು ಮಾತ್ರ ಕೊಳ್ಳಬಹುದಾದ ಬೆಲೆ ಇದಕ್ಕಿರುವುದರಿಂದ ಕನ್ನಡಿಗರ ಪ್ರೀತಿಯ ಕವಿ ಕುವೆಂಪು ಇಷ್ಟು ದುಬಾರಿ ಆಗದಿದ್ದರೆ ಚೆನ್ನಿತ್ತು. ಜನರ ಕೈಗೆ ಸಿಗುವ ಬೆಲೆಯ ಇದೇ ಪುಸ್ತಕದ ಆವೃತ್ತಿಯೊಂದನ್ನು ಇದರೊಂದಿಗೆ ಪ್ರಕಟಿಸಿದ್ದರೆ ಕುವೆಂಪು ಕವಿತೆಗಳು ಹೊಸ ಪೀಳಿಗೆಯನ್ನು ಇನ್ನಷ್ಟು ಮುಟ್ಟುತ್ತಿದ್ದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.