ADVERTISEMENT

ಕಾವ್ಯ-ಮದ್ದಿನ ನಾಟಕ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 19:30 IST
Last Updated 25 ಫೆಬ್ರುವರಿ 2012, 19:30 IST
ಕಾವ್ಯ-ಮದ್ದಿನ ನಾಟಕ
ಕಾವ್ಯ-ಮದ್ದಿನ ನಾಟಕ   

ದೊಡ್ಡಮ್ಮ ದೇವತೆಗೆ ಕಣ್ಣು ಧರಿಸಿದ ಹೊತ್ತು
ಲೇ: ಕೆ.ಪಿ.ಮೃತ್ಯುಂಜಯಪು:168; ಬೆ: ರೂ.100
ಪ್ರ: ಅಪರಂಜಿ ಪ್ರಕಾಶನ, ಅಪರಂಜಿ ನಿಲಯ, ನರಿಗುಡ್ಡೇನಹಳ್ಳಿ, ಕಲ್ಯಾಣನಗರ, ಜ್ಯೋತಿನಗರ ಅಂಚೆ, ಚಿಕ್ಕಮಗಳೂರು- 577 102

ಕಾವ್ಯದ ಸತತೋದ್ಯೋಗದಲ್ಲಿ ತೊಡಗಿಕೊಳ್ಳುವವರ ಸಂಖ್ಯೆಯೇ ಕ್ಷೀಣಿಸುತ್ತಿರುವ ಈ ದಿನಗಳಲ್ಲಿ ಕೆ.ಪಿ. ಮೃತ್ಯುಂಜಯ ಅವರ ಐದನೆಯ ಸಂಕಲನ `ದೊಡ್ಡಮ್ಮ ದೇವತೆಗೆ ಕಣ್ಣು ಧರಿಸಿದ ಹೊತ್ತು~ ಭರವಸೆಯನ್ನೂ, ಕುತೂಹಲವನ್ನೂ ಸಹಜವಾಗಿಯೇ ಹುಟ್ಟಿಸುತ್ತದೆ .

`ಹುಡುಕುತ್ತೇನೆ ಎಲ್ಲದಕ್ಕೂ ಮದ್ದನ್ನು ನಿನ್ನ ಸಹವಾಸದಲ್ಲಿ~ ಎನ್ನುವ ಸೂಫಿ ಕವಿಯೊಬ್ಬನ ಮಾತುಗಳು ನೆನಪಾಗುತ್ತಿವೆ. ಕಾವ್ಯವನ್ನು ಕುರಿತ ಮೃತ್ಯುಂಜಯರ ಆಸ್ಥೆ ಇದಕ್ಕೆ ಹತ್ತಿರವಾದದ್ದು ಎಂದೇ ಅನಿಸುತ್ತದೆ. ತನ್ನನ್ನು ಕಾವ್ಯ ಪರಂಪರೆಯ ವಾರಸುದಾರನೆಂದು ಭಾವಿಸದೇ, ಕಾವ್ಯಲೋಕದ ಅಭಿನ್ನ ಭಾಗವೆಂದು ಗ್ರಹಿಸುವುದರಲ್ಲಿಯೇ ಈ ಅಂಶ ಸ್ಪಷ್ಟವಾಗುತ್ತದೆ.
 

ಪೂರ್ತಿ ಬರೆದು ಹೋದವರಿಲ್ಲ
ಇಲ್ಲದಿದ್ದರೆ ಇಷ್ಟೊಂದು ಕವಿಗಳು
ಜಗತ್ತಲ್ಲಿ ಯಾಕೆ ಉದಿಸಿ ಬರೆದು
ತಂತಮ್ಮ ಸೊಲ್ಲನ್ನು ಬರೆದು
ಯಾರೋ ಶುರು ಮಾಡಿದ್ದನ್ನು
ಪೂರ್ತಿಗೊಳಿಸಲು ಕೈ ಹಾಕುತ್ತಿದ್ದರು?
 

ಕಾವ್ಯವೆನ್ನುವುದು ಪ್ರಜ್ಞಾಪೂರ್ವಕವಾದ ಆಯ್ಕೆಯ ಮಾಧ್ಯಮ ಎನ್ನುವ ಸಂಗತಿಯನ್ನೇ ಮೀರುವ ಹಂಬಲವೊಂದು ಈ ಸಂಕಲನದಲ್ಲಿ ಉತ್ಕಟವಾಗಿ ಕಾಣಿಸುತ್ತದೆ. ಅನುಭವಗಳ ತತ್ಕಾಲೀನತೆಯನ್ನು ದಾಟಿ ಅತೀತವಾದುದನ್ನು ಹಿಡಿಯಲು ಪ್ರಯತ್ನಿಸುವ ಈ ಕವಿತೆಗಳು ಇದಕ್ಕಾಗಿ ಕೆಲವು ಮೂಲ ಕ್ಷೇತ್ರಗಳನ್ನೂ ಸೃಷ್ಟಿಸಿಕೊಂಡಿವೆ.

ಸಾವು ಮತ್ತು ಪ್ರೀತಿ ಈ ಸಂಕಲನದ ಮೂಲ ಕ್ಷೇತ್ರಗಳೆಂದು ತೋರುತ್ತದೆ. ಹಾಗೆ ನೋಡಿದರೆ, ಸಾವು ಆರಂಭದಿಂದಲೂ ಮೃತ್ಯುಂಜಯರ ಪ್ರಧಾನ ಶೋಧಗಳಲ್ಲೊಂದಾಗಿ ಉಳಿದು, ಬೆಳೆಯುತ್ತಾ ಬಂದಿದೆ. ಆಪ್ತರ ಸಾವನ್ನು ತೀವ್ರವಾಗಿ ಪರಿಭಾವಿಸುವ ಮೂಲಕವೇ ಅದನ್ನೊಂದು ಅನುಭವವಾಗಿಸಿಕೊಳ್ಳಲು ಇವರು ಪ್ರಯತ್ನಿಸುವಂತೆ ತೋರುತ್ತದೆ. ಅಯ್ಯನ ಸಾವನ್ನು ಕುರಿತಂತೆ `ಎಲೆ ಎಸೆದ ಮರ~ ಸಂಕಲನದಿಂದ ಆರಂಭವಾದ ಶೋಧ ಈ ಸಂಕಲನದಲ್ಲಿಯೂ ಮುಂದುವರೆದಿರುವುದು ಈ ಅಂಶವನ್ನು ಸ್ಪಷ್ಟಪಡಿಸುತ್ತದೆ.

ಆದರೆ ಈ ಸಂಕಲನದಲ್ಲಿ ಸಾವಿನ ಜೊತೆಗಿನ ಸಂಬಂಧದ ಸ್ವರೂಪವೇ ಬದಲಾಗಿರುವಂತೆ ಕಾಣಿಸುತ್ತದೆ. ಸಾವು ಮೀರಲಾಗದ ದುಃಖವಾಗಿ, ಪರ್ಯಾಯವಿಲ್ಲದ ನಷ್ಟವಾಗಿ ಈ ತನಕ ಕಾಣುತ್ತಿದ್ದದ್ದು, ಬದುಕಿನ ಗತಿಯಾಗಿ, ಜೀವ ಚೈತನ್ಯದ ತಾತ್ಕಾಲಿಕ ಕಣ್ಮರೆಯಾಗಿ, ರೂಪಾಂತರವಾಗಿ ಕವಿಗೆ ಕಾಣತೊಡಗಿದೆ. ಅಯ್ಯನ ಸಮಾಧಿ ಕಾಣದೇ ಇರುವುದು ಕವಿಯಲ್ಲಿ ಹುಟ್ಟಿಸುತ್ತಿರುವುದು ಆತಂಕವನ್ನಲ್ಲ, ದುಃಖವನ್ನಲ್ಲ, ಜೀವಜಾಲದ ನಿತ್ಯನೂತನತೆಯಲ್ಲಿ ಬೆರೆತು ಹೋಗಿರುವ ಅಯ್ಯನ ಸಮಾಧಿ ಒಂದು ಬಗೆಯಲ್ಲಿ ನಿರಾಳತೆಯನ್ನೇ ಮನಸ್ಸಿಗೆ ತಂದುಕೊಡುತ್ತಿದೆ.
 

ADVERTISEMENT

ತಲೆ ನೇರ ತುಂಬೆ ನೆಟ್ಟು
ವಕ್ಷದ ಮೇಲೆ ತೆಂಗುವೃಕ್ಷ
ತುಲಸಿಯೂ ಬೆಳೆಯುತ್ತ
ಸಂಜೆ-ಮುಂಜಾನೆ ನಿನ್ನ
ಪದತಲಕ್ಕೆ ಶರಣು

ತುಂಬೆ, ತೆಂಗು, ತುಲಸಿಗಳು ಶರಣಾಗುವ ವ್ಯಕ್ತಿತ್ವ ಎನ್ನುವ ವಾಚ್ಯಾರ್ಥವನ್ನೂ ಮೀರಿ ಸರ್ವಜನ ಉಪಯುಕ್ತವಾದ ತುಂಬೆ, ತೆಂಗು, ತುಲಸಿಯಲ್ಲಿ ಅಯ್ಯ ಮರುಹುಟ್ಟು ಪಡೆದಿರುವ ಧ್ವನಿಯೇ ಹೆಚ್ಚು ಆಪ್ತವಾಗುತ್ತದೆ.

ಕವಿಯ ಇಂತಹ ನಿಲುವುಗಳ ಹಿಂದೆ ಅನುಭಾವದ ಸೆಳೆತವೂ ಇ್ದ್ದದೀತು ಎನ್ನುವುದಕ್ಕೂ ಈ ಸಂಕಲನದಲ್ಲಿ ಆಧಾರಗಳಿವೆ. ಅಪ್ರಮೇಯನೂ ಸೇರಿದಂತೆ ಅನುಭಾವ ಪರಂಪರೆಯ ಹಲವರು ಇಲ್ಲಿ ಕಾಣಿಸಿಕೊಳ್ಳುತ್ತಾರೆ. ಸಾವಿನ ಘನತೆಯನ್ನು ಸಾಕ್ಷಾತ್ಕರಿಸಿಕೊಳ್ಳುವಲ್ಲಿ ಈ ಕವಿತೆಗಳು ಯಶಸ್ವಿಯಾಗಿವೆ.

ಸಾವಿನ ಘನತೆ ಮತ್ತು ಅನಿವಾರ್ಯತೆಯೇ ಮೂಲವಾಗಿ ಬದುಕನ್ನು ಕುರಿತ ಶ್ರದ್ಧೆ ಮತ್ತು ಪ್ರೀತಿಯೂ ಇನ್ನೂ ಆಳವಾಗುತ್ತಾ ಹೋಗಿದೆ. `ನಗು~ ಅನೇಕ ಕವನಗಳಲ್ಲಿ ಆಶಯವಾಗಿ, ಕವಿಯ ಪ್ರಾರ್ಥನೆಯಾಗಿ, ಭರವಸೆಯ ಬೆಳಕಾಗಿ, ಅನಿವಾರ್ಯ ದಾರಿಯಾಗಿ ಕಾಣಿಸಿಕೊಳ್ಳುತ್ತದೆ.

 ಲೋಕ ಅಪೇಕ್ಷಿಸಿದಂತೆ ಒಂದು ಮಂದಹಾಸ, ಹಳೆಯ ನಗೆಗೆ ಮನ ಜಾರಿ, ಅಂದು ನಗೆ ಕಾಣದಿದ್ದರೆ, ಜೋಪಾನ ಮಾಡುವ ನಿನ್ನ ನಗು... ಹೀಗೆ ನಗುವಿನ ವಿವಿಧ ಸಾಧ್ಯತೆಗಳನ್ನು ಕವಿ ಹುಡುಕುತ್ತಲೇ ಹೋಗುತ್ತಾರೆ. ತಾನು ಅನಿವಾರ್ಯವಾಗಿ ಸಾಗಬೇಕಾದ, ಲೋಕದ ಸಲುವಾಗಿ ನಗಲೇಬೇಕಾದದ್ದಕ್ಕಿಂತ ಬೇರೆಯದರಲ್ಲಿ ನಗು ಅರಳಿಸುವ ಮಾಂತ್ರಿಕತೆಗೆ ಹಂಬಲಿಸುವ ಪರಿಯೇ ಅದಮ್ಯ ಜೀವನ ಪ್ರೀತಿಯನ್ನು ಧ್ವನಿಸುತ್ತದೆ.

ಸಂಕಲನದ ಅತ್ಯುತ್ತಮ ಕವನವೆಂದರೆ, `ದೊಡ್ಡಮ್ಮ ದೇವತೆಗೆ ಕಣ್ಣು ಧರಿಸುವ ಹೊತ್ತು~. ಇತ್ತೀಚಿನ ಕನ್ನಡ ಕಾವ್ಯದ ಅತ್ಯುತ್ತಮ ಪದ್ಯಗಳಲ್ಲೊಂದು ಇದು.
ಸಮಕಾಲೀನ ಬದುಕಿನ ಸಂಕೀರ್ಣಗಳನ್ನು, ವಿರೋಧಾಭಾಸಗಳನ್ನು ಈ ಕವಿತೆ ಅಪೂರ್ವವಾಗಿ ಹಿಡಿಯುತ್ತದೆ. ದೇವತೆಗೆ ಕಣ್ಣು ಧರಿಸುವುದು ಎನ್ನುವ ಶೀರ್ಷಿಕೆಯೇ ಹಲವು ಅರ್ಥಪರಂಪರೆಗಳನ್ನು ಧ್ವನಿಸುತ್ತದೆ. ಹೊರಗಣ್ಣು ಒಳಗಣ್ಣು ಎರಡನ್ನೂ ಪಡೆದ, ಆ ಕಣ್ಣುಗಳಿಂದ ಲೋಕವನ್ನೇ ಕಾಡುವ, ಕಾಪಾಡುವ ಆ ದೇವತೆಗೆ ಭಕ್ತ ಧರಿಸುವ ಕಣ್ಣುಗಳು ಯಾವುವು? ನಂಬಿಕೆಯ ಕಣ್ಣುಗಳೆ?

ಭರವಸೆಯ ಕಣ್ಣುಗಳೆ? ಮುಖವಾಡದ ಕಣ್ಣುಗಳೆ? ಕಂಡು-ಕಾಣದ ಕಣ್ಣುಗಳೆ? ನಗುಮುಖದ ದೇವತೆಗೆ ಕಣ್ಣು ಧರಿಸಿದ ಮೇಲಾದರೂ ಕಷ್ಟ ಪರಂಪರೆಗಳು ತಪ್ಪಿಯಾವೆ ಎಂದರೆ, ದೇವಿಯ ನಗುಮುಖದ ಎದುರಿಗೇ-

`ಕೇಕೆಯಬ್ಬರದ ನಡುವೆ ಸಣ್ಣಗೆ
ಚೀತ್ಕರಿಸಿದ ಗೊಣ್ಣೆಕುರಿ ಮಚ್ಚಿನೊಂದೇ
ಹೊಡೆತಕ್ಕೆ ಫನಾ~
ದೈವದ ಕಲ್ಪನೆಯೇ, ಆಶಯವೇ ನುಚ್ಚು ನೂರಾಗುವಂತೆ, ಕಾಯುವ, ಕಾಯಬೇಕಾದ ದೈವದ ಸಾಕ್ಷಿಯಲ್ಲೇ ನಡೆಯುವ ನಿಷ್ಪಾಪ ಜೀವಹತ್ಯೆಯನ್ನು ಅರ್ಥೈಸಿಕೊಳ್ಳುವುದು ಹೇಗೆಂದು ತಿಳಿಯದ ಮುಗ್ಧ ಬಾಲಕನ ಸ್ಥಿತಿ ಎಲ್ಲರದೂ ಹೌದೆನ್ನುವುದಕ್ಕೆ `ನಡುಮನೆಯಲ್ಲಿ ವಿರಾಮ ಕುಳಿತ ಅಯ್ಯನ ಕಣ್ಣಲ್ಲಿ~ ತುಂಬಿದ ವಿಷಾದವೇ ಸಾಕ್ಷಿ. ಬಾಲ್ಯದ ಮುಗ್ಧತೆ, ವಯಸ್ಕರ ಅಸಹಾಯಕತೆಯ ನಡುವೆ ಸಮಾನವಾಗಿರುವ ಸತ್ಯವನ್ನು ಕವಿತೆ ಸ್ಪಷ್ಟವಾಗಿ, ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ.
 
ನಗುಮುಖದಿಂದಲೇ ದೊಡ್ಡಮ್ಮ ದೇವತೆ, ಹೊಸ ಕಣ್ಣುಗಳನ್ನು ಧರಿಸಿದ ಮೇಲೂ ವ್ಯವಸ್ಥೆಯ ದೌರ್ಬಲ್ಯಗಳನ್ನು, ಕ್ರೌರ್ಯವನ್ನು ನಿಭಾಯಿಸಲಾರಳು ಎನ್ನುವುದಕ್ಕಿಂತ ಹೆಚ್ಚಾಗಿ, ಅವಳೂ ಈ ವ್ಯವಸ್ಥೆಯ ಒಂದು ಭಾಗವೇ ಆಗುವುದನ್ನೇ, ಆ ವ್ಯವಸ್ಥೆಯ ತಳಹದಿಯಲ್ಲಿ ಇವಳೂ ಸೇರಿಬಿಟ್ಟಿರುವ ವಿಪರ್ಯಾಸವನ್ನೇ. ಹೀಗೆ ಕವಿತೆ ಅರ್ಥ ಪರಂಪರೆಗಳನ್ನೇ ತನ್ನೊಳಗೆ ಇಟ್ಟುಕೊಂಡಿದೆ.ಕಾವ್ಯವನ್ನು ಭರವಸೆಯ ವ್ಯವಸಾಯದ ಉತ್ಕಟತೆಯಲ್ಲಿ ಸೇವಿಸುತ್ತಿರುವ ಮೃತ್ಯುಂಜಯರ ಈ ಸಂಕಲನದಲ್ಲಿ ಕಾವ್ಯಾಸಕ್ತರು ಅಗತ್ಯವಾಗಿ ಓದಬೇಕಾದ ಹಲವು ಕವನಗಳಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.