ADVERTISEMENT

ಸಿಂಧೂರದಲ್ಲೊಂದು ವರ್ಣಚಿತ್ರಲೈಟ್ಸ್

ಮೊದಲ ಓದು

​ಪ್ರಜಾವಾಣಿ ವಾರ್ತೆ
Published 30 ಜನವರಿ 2016, 19:30 IST
Last Updated 30 ಜನವರಿ 2016, 19:30 IST
ಸಿಂಧೂರದಲ್ಲೊಂದು ವರ್ಣಚಿತ್ರಲೈಟ್ಸ್
ಸಿಂಧೂರದಲ್ಲೊಂದು ವರ್ಣಚಿತ್ರಲೈಟ್ಸ್   

ಸಿಂಧೂರದಲ್ಲೊಂದು ವರ್ಣಚಿತ್ರಲೈಟ್ಸ್ 
ಮೂಲ: ಅರ್ಥರ್‌ ಕಾನನ್‌ ಡಾಯ್ಲ, ಕನ್ನಡಕ್ಕೆ: ಪವಿತ್ರಾ ಸತೀಶ್‌ಕುಮಾರ್‌, ಪುಟ: 207, ರೂ.150, ಪ್ರ: ಕ್ರಿಟಿಕ್ಸ್‌ ಅಂಡ್‌ ಕನೂಝರ್‍ಸ್‌ ಪಬ್ಲಿಕೇಷನ್‌ ಎಲ್‌.ಎಲ್‌.ಪಿ., ನಂ. 220, 2ನೇ ಮುಖ್ಯ ರಸ್ತೆ, ವಿಜಯಾನಂದ ನಗರ, ನಂದಿನಿ ಬಡಾವಣೆ, ಬೆಂಗಳೂರು– 560096.

ಕನ್ನಡ ಪತ್ತೇದಾರಿ ಸಾಹಿತ್ಯವನ್ನು ಪ್ರಭಾವಿಸಿದವರಲ್ಲಿ ಇಂಗ್ಲಿಷ್‌ ಬರಹಗಾರ ಅರ್ಥರ್‌ ಕಾನನ್‌ ಡಾಯ್ಲ ಕೂಡ ಒಬ್ಬ. ಅವನ ಕತೆ, ಕಾದಂಬರಿಗಳು, ಅವುಗಳ ಪ್ರಮುಖ ಪಾತ್ರಗಳಾದ ಶೆರ್ಲಾಕ್‌ ಹೋಮ್ಸ್‌, ಡಾ. ವಾಟ್ಸನ್‌ ಪಾತ್ರಗಳು ಜಗತ್ತಿನ ಹಲವು ಭಾಷೆಯ ಓದುಗರನ್ನು, ಸಾಹಿತ್ಯವನ್ನು ಪ್ರಭಾವಿಸಿವೆ.

ಡಾಯ್ಲನ ಪತ್ತೇದಾರಿ ಸಾಹಿತ್ಯದ ಪ್ರಭಾವದಿಂದ ಕನ್ನಡದ ಹಲವಾರು ಸಾಹಿತಿಗಳು ಆ ಬಗೆಯ ಕತೆಗಳನ್ನು ಬರೆದರಾದರೂ ಆ ಮಟ್ಟವನ್ನು ಅವರಿಗೆ ಮುಟ್ಟಲು ಸಾಧ್ಯವಾಗಲಿಲ್ಲ. ಅವನ ಕತೆ, ಕಾದಂಬರಿಗಳನ್ನು ಕನ್ನಡಕ್ಕೆ ತರಲಾಗಿದೆ. ಹಾಗೆ ತರುವಾಗ ಶೆರ್ಲಾಕ್‌ ಹೋಮ್ಸ್‌ ಎಂಬ ಅವನ ಪಾತ್ರ ‘ಸರಳಾಕ್ಷ ಹುಲಿಮೀಸೆ’ ಎಂದೂ ರೂಪಾಂತರಗೊಂಡದ್ದುಂಟು. ಉತ್ಸಾಹಿ ಕನ್ನಡತಿ, ಅನಿವಾಸಿ ಭಾರತೀಯೆ ಪವಿತ್ರಾ ಸತೀಶ್‌ಕುಮಾರ್‌, ಕಾನನ್‌ ಡಾಯ್ಲನ ‘ಸ್ಟಡಿ ಇನ್‌ ಸ್ಕಾರ್ಲೆಟ್‌’ ಕಾದಂಬರಿಯನ್ನು ‘ಸಿಂಧೂರದಲ್ಲೊಂದು ವರ್ಣಚಿತ್ರ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ.

ಈ ಕಾದಂಬರಿಯಲ್ಲೂ ಒಂದು ಕೊಲೆಯ ರಹಸ್ಯವನ್ನು ಚತುರ ಪತ್ತೇದಾರ ಶೆರ್ಲಾಕ್‌ ಹೋಮ್ಸ್‌ ಬಿಡಿಸುತ್ತಾನೆ. ಅದರ ವಿವರಗಳಿಗೆ ಹೋದರೆ ಈ ಕಾದಂಬರಿಯ ಮಜಾ ಹೊರಟುಹೋಗುವುದರಿಂದ ಇಲ್ಲಿ ಅದರ ಕತೆ ಹೇಳುವುದು ಒಳ್ಳೆಯದಲ್ಲ. ಕೊಲೆಯಲ್ಲಿನ(ಕತೆಯಲ್ಲಿನ!) ಗೋಜಲುಗಳನ್ನು, ಸಿಕ್ಕುಗಳನ್ನು ಆ ಖಾಸಗಿ ಪತ್ತೇದಾರ ಹೇಗೆ ಬಿಡಿಸುತ್ತಾನೆ; ಅವನ ಬುದ್ಧಿವಂತಿಕೆ, ವೃತ್ತಿಪರತೆ ಇಲ್ಲಿ ಗಮನಿಸಬಹುದಾದ ಪ್ರಮುಖ ಅಂಶಗಳು. ಇಂತಹ ಕಾದಂಬರಿಗಳ ನೇಯ್ಗೆ, ಕಟ್ಟಡ ಹೇಗಿರಬೇಕು ಎಂಬುದಕ್ಕೆ ಡಾಯ್ಲನ ಬರಹಗಳು ಅತ್ಯುತ್ತಮ ಉದಾಹರಣೆಗಳಾಗಿವೆ. ಓದಿನಲ್ಲಿ ರೋಚಕ ಎನ್ನಿಸುವ ಇಂತಹ ಬರಹಗಳ ಮೂಲಕವೇ ಅನೇಕರು ಓದಿನ ರುಚಿಯನ್ನು ಅಂಟಿಸಿಕೊಂಡಿರುವುದುಂಟು. ಬಳಿಕ ಅವನ್ನು ನಿನ್ನೆ ಬಿದ್ದ ಕನಸಿನಂತೆ ಮರೆತೂ ಬಿಟ್ಟಿರುತ್ತಾರೆ.

ಪವಿತ್ರಾ ಸತೀಶ್‌ಕುಮಾರ್‌ ಇಲ್ಲಿ ಡಾಯ್ಲನ ಬರಹವನ್ನು ಅದರ ವಾತಾವರಣದೊಂದಿಗೆ ಕನ್ನಡಕ್ಕೆ ತಂದಿದ್ದಾರೆ. ಮಾತ್ರವಲ್ಲ, ಅವನು ಕನ್ನಡಿಗರಿಗೆ ಹತ್ತಿರವಾಗುವಂತೆ ಆಗಿನ ಇಂಗ್ಲಿಷ್‌ ನುಡಿಗಟ್ಟನ್ನು ಅನುವಾದಿಸಿದ್ದಾರೆ. ಕಾದಂಬರಿಗೆ ಪೂರಕವಾಗಿ ಕೊಟ್ಟಿರುವ ಅರ್ಥವಿವರಣೆಗಳು ಕಾದಂಬರಿಯನ್ನು ಓದಲು ನೆರವಾಗುವಂತಿವೆ. ಡಾಯ್ಲನ ನಾಲ್ಕು ಕಾದಂಬರಿಗಳು, 56 ಸಣ್ಣ ಕತೆಗಳಿರುವ ಐದು ಸಂಗ್ರಹಗಳನ್ನು ಅದೇ ಕ್ರಮದಲ್ಲಿ ಅನುವಾದಿಸುವ ಪ್ರಯತ್ನದ ಭಾಗವಾಗಿ ಅವರ ಈ ಅನುವಾದ ಪ್ರಕಟವಾಗಿದೆ. ಅವನ ಅಷ್ಟೂ ಸಾಹಿತ್ಯ ಕನ್ನಡಕ್ಕೆ ಅನುವಾದಗೊಂಡರೆ ಅದು ಓದುಗರಿಗೆ ಮಹತ್ವದ ಕೊಡುಗೆಯಾಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT