ADVERTISEMENT

ಮೊದಲ ಓದು: ಉಳಿವಿಗಾಗಿ ನೀರ ನೆಮ್ಮದಿಯ ಅರಸುತ್ತ...

​ಪ್ರಜಾವಾಣಿ ವಾರ್ತೆ
Published 25 ಮೇ 2025, 0:15 IST
Last Updated 25 ಮೇ 2025, 0:15 IST
ಭೂಮ್ತಾಯಿಯ ಕಕ್ಷೆಯಲಿ ಪಕ್ಷಿಯಾಗಿ
ಭೂಮ್ತಾಯಿಯ ಕಕ್ಷೆಯಲಿ ಪಕ್ಷಿಯಾಗಿ   

ಜೋಗಿಣಿ ಹಕ್ಕಿ ತಾವು ಹುಡುಕುತ್ತಾ... ಎಂಬ ಕವಿತೆಯ ಮೂಲಕ ಈ ಕೃತಿಯೊಳಗಣ ಹಕ್ಕಿ ತನ್ನ ರೆಕ್ಕೆಯನ್ನು ಬಿಚ್ಚಿಕೊಳ್ಳುತ್ತದೆ. ಹಕ್ಕಿಯ ರೆಕ್ಕೆಯಂತೆ ಈ ಕೃತಿಯೂ ಎರಡು ಭಾಗಗಳನ್ನು ಒಳಗೊಂಡಿದೆ. ‘ನಮ್ಮ ಉಳಿವಿನ ದಾರಿಗಳ ಹುಡುಕುತ್ತಾ...’ ಎಂಬ ಮೊದಲ ಭಾಗದಲ್ಲಿ 12 ಲೇಖನಗಳಿವೆ. ಎರಡನೇ ಭಾಗ ‘ನೀರ ನೆಮ್ಮದಿಯ ಹುಡುಕುತ್ತಾ...’ 8 ಲೇಖನಗಳನ್ನು ಒಳಗೊಂಡಿದೆ. ಈ ಭಾಗವೂ ‘ನೀರೆಂಬ ಮಾಯೆ!’ ಎಂಬ ಪದ್ಯದಿಂದ ಆರಂಭವಾಗುತ್ತದೆ. ‘ತನ್ನ ತಾನೇ ಮುಗಿಸಿಕೊಳ್ಳಲು’ ಎಂಬ ಕವಿತೆಯ ಮೂಲಕ ಕೃತಿ ಕೊನೆಗೊಳ್ಳುತ್ತದೆ.

ಕವಯಿತ್ರಿ ರೂಪ ಹಾಸನ ಅವರು ಸಾಂದರ್ಭಿಕವಾಗಿ ಬರೆದ ಲೇಖನಗಳನ್ನು ಇಲ್ಲಿ ಸಂಗ್ರಹಿಸಿ ಕೊಟ್ಟಿದ್ದಾರೆ. ಗದ್ಯ–ಪದ್ಯಗಳಲ್ಲಿ ಅಡಗಿರುವ ಲೇಖಕಿಯ ಸೂಕ್ಷ್ಮ ಸಂವೇದನೆಯ ಸ್ವರೂಪವೂ ಇಲ್ಲಿ ಕಾಣುತ್ತದೆ. ಪರಿಸರದ ಮೇಲೆ ಮನುಷ್ಯನ ಹಸ್ತಕ್ಷೇಪದಿಂದ ಆಗುತ್ತಿರುವ ವಿಕೋಪ ಮತ್ತು ವಿಕೃತಿಯ ಬಗ್ಗೆ ಆತಂಕವನ್ನು ಇಲ್ಲಿನ ಲೇಖನಗಳು ವ್ಯಕ್ತಪಡಿಸುತ್ತವೆ.

‘ಪ್ರಕೃತಿಯನ್ನು ಮರು ಸೃಷ್ಟಿಸುವ ಅಭಿವೃದ್ಧಿಯಾಗಬೇಕಲ್ಲವೇ?’ ಎಂಬ ಪ್ರಥಮ ಲೇಖನದಲ್ಲಿ ಪಶ್ಚಿಮ ಘಟ್ಟದ ಹಸಿರ ಸೆರಗಿನಲ್ಲಿ ‘ಗುಂಡ್ಯ ಜಲ ವಿದ್ಯುತ್‌’ ಯೋಜನೆಯನ್ನು ವಿರೋಧಿಸಿದ ಜನ ಹೋರಾಟ ಮತ್ತು ವ್ಯವಸ್ಥೆಯ ಸಂಘರ್ಷದ ವಿವರವನ್ನು ನೀಡುತ್ತದೆ. ನೇತ್ರಾವತಿಯ ಉಪನದಿ ಗುಂಡ್ಯ ನದಿ ವಿದ್ಯುತ್‌ ಯೋಜನೆಯಿಂದ ಆಗುವ ಅರಣ್ಯನಾಶ, ಶಿರಾಡಿ ಘಾಟ್‌, ಕೆಂಪು ಹೊಳೆ ಪ್ರದೇಶದ ಜೀವ ವೈವಿಧ್ಯ ಹಾನಿಯನ್ನು ಹೇಳುತ್ತದೆ. ಜತೆಗೆ ಎತ್ತಿನ ಹೊಳೆ ತಿರುವು ಯೋಜನೆಯ ಸಾಧಕ ಬಾಧಕಗಳನ್ನೂ ವಿಶ್ಲೇಷಿಸುತ್ತದೆ.

ADVERTISEMENT

‘ಭೂತಾಯಿ ಬೆದರಿ ನಿಂತಾಳೋ...’ ಲೇಖನ ಜಾಗತಿಕ ತಾಪಮಾನ ಮತ್ತು ಹವಾಮಾನ ವೈಪರಿತ್ಯ, ಪ್ರಾಕೃತಿಕ ವಿಕೋಪ ದುರಂತಗಳಿಗೆ ನಾವೇ ಕಾರಣ ಎನ್ನುವ ಆತ್ಮವಿಮರ್ಶೆಯನ್ನು ಮಾಡುವಂತಿದೆ. ಅದುವೇ ಅನೇಕ ಸಾಂಕ್ರಾಮಿಕ ರೋಗ ರುಜಿನಗಳಿಗೂ ಕಾರಣ ಆಗಿರುವ ಸಾಧ್ಯತೆ ಇದೆ ಎನ್ನುವ ಅಂಶವನ್ನು ಕೇಂದ್ರೀಕರಿಸಿ ವಿಸ್ತಾರಗೊಂಡಿದೆ. 

ಭೂಮ್ತಾಯಿಯ ಕಕ್ಷೆಯಲಿ ಪಕ್ಷಿಯಾಗಿ

ಲೇ: ರೂಪ ಹಾಸನ

ಪ್ರ: ಜನ ಪ್ರಕಾಶನ

ಸಂ: 9632329955

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.