ADVERTISEMENT

ಕಾಗದ ಮತ್ತು ಕ್ಯಾನ್‌ವಾಸ್‌

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2020, 20:00 IST
Last Updated 28 ಮಾರ್ಚ್ 2020, 20:00 IST
ಅಮೃತಾ ಪ್ರೀತಮ್‌
ಅಮೃತಾ ಪ್ರೀತಮ್‌   

ಪಂಜಾಬಿ ಭಾಷೆಯ ಸಾಹಿತ್ಯವನ್ನು ಸುಮಾರು ಏಳು ದಶಕಗಳಿಂದ ತಮ್ಮ ಅಮರ ಕೃತಿಗಳ ಮೂಲಕ ಶ್ರೀಮಂತಗೊಳಿಸಿದವರು ಲೇಖಕಿ ಮತ್ತು ಪತ್ರಕರ್ತೆ ಅಮೃತಾ ಪ್ರೀತಮ್. ಸುಮಾರು 75 ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕೃತಿ ಇದು. ಪಂಜಾಬಿ ಭಾಷೆಗೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಗರಿಮೆಯೂ ಈ ಕೃತಿಗೆ ಸಲ್ಲುತ್ತದೆ. ಇದರ ಮೂಲ ಹೆಸರು ‘ಕಾಗಜ್ ಔರ್‌ ಕ್ಯಾನ್‌ ವಾಸ್‌’. ಕವಿ ಮತ್ತು ಕವಿತೆಯ ಆಶಯ ಹಾಗೂ ಶೈಲಿಗೆ ಒಂದಿನಿತೂ ಧಕ್ಕೆಯಾಗದಂತೆ ಲೇಖಕ ಆರ್‌.ಲಕ್ಷ್ಮಿನಾರಾಯಣ ಅವರು ಈ ಕವನ ಸಂಕಲನವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಅಮೃತಾ ಅವರ ಕವಿತೆಗಳಲ್ಲಿ ಪ್ರೇಮ ಮತ್ತು ಸ್ವಾತಂತ್ರ್ಯ ಎರಡೂ ವಿಚಾರಗಳು ಎದ್ದುಕಾಣುತ್ತವೆ. ಪ್ರೇಮಭಾವನೆ ವ್ಯಕ್ತಿ ಜೀವನದ ಮೂಲಭಾವನೆ ಎಂದು ಭಾವಿಸಿ ಅದನ್ನೇ ಅಮೃತಾ ತಮ್ಮ ಕಾವ್ಯದ ಮುಖ್ಯ ಸಾಧನವಾಗಿ ಪ್ರಯೋಗ ಮಾಡಿದ್ದಾರೆ. ತಮ್ಮ ಪ್ರೇಮಕಾವ್ಯದ ಉದ್ದಕ್ಕೂ ಪಂಜಾಬಿ ಜನಪದ ಕಾವ್ಯ, ಚೇತನ, ಸಹಜತೆ ಹಾಗೂ ಲಯವನ್ನು ಸೆರೆ ಹಿಡಿದಿದ್ದಾರೆ.

ಈ ಕೃತಿಯಲ್ಲಿ 46 ಕವಿತೆಗಳಿವೆ. ಎಲ್ಲವನ್ನೂ ಒಂದೇ ಗುಕ್ಕಿನಲ್ಲಿ ಓದಿ, ಎದೆಗೆ ಇಳಿಸಿಕೊಳ್ಳುವಷ್ಟು ಮೋಹಕತೆ ಈ ಕವಿತೆಗಳಲ್ಲಿದೆ. ಬಹುತೇಕ ಕವಿತೆಗಳಲ್ಲಿ ವರ್ತಮಾನದ ಬೆಳಕಿಂಡಿಗಳು ಇಣುಕು ಹಾಕುತ್ತವೆ.

ADVERTISEMENT

ಇವರ ‘ಒಂದು ಯೋಚನೆ’ ಕವಿತೆಯ ಕೆಲವು ಸಾಲುಗಳು ಹೀಗಿವೆ;

ಭಾರತದ ಬೀದಿಗಳಲ್ಲಿ ಅಲೆದಾಡುವ ಗಾಳಿ

ಒಲೆಯ ಆರುತ್ತಿರುವ ಬೆಂಕಿಯನ್ನು ಕೆದರುತ್ತದೆ

ಸಾಲವಾಗಿ ಕೊಂಡ ಒಂದು ತುತ್ತು ಅನ್ನವನು ಕದಲಿಸುತ್ತದೆ

ಮತ್ತು ಮಂಡಿಯ ಮೇಲೆ ಕೈಯೂರಿ ಮತ್ತೆ ಮೇಲೇಳುತ್ತದೆ....

ಚೀಣಾದ ಕಾಂತೀಹೀನ ಹಳದಿ ತುಟಿಗಳ ಚರ್ಮ

ಬಿಕ್ಕುತ್ತ ಇಂದು ಒಂದು ದನಿಯೆತ್ತುತ್ತದೆ

ಅದು ಹೋಗಿ ಪ್ರತಿಯೊಂದು ಕಂಠದಲ್ಲಿ ಒಣಗುತ್ತದೆ

ಮತ್ತು ಚೀರಾಡುತ್ತಾ ವಿಯತ್‌ನಾಮ್‌ನಲ್ಲಿ ಬೀಳುತ್ತದೆ....

ಈ ಸಾಲುಗಳನ್ನು ಇಂದು ಜನ ಅನುಭವಿಸುತ್ತಿರುವ ಸಂಕಷ್ಟಕ್ಕೂ ಅನ್ವಯಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.