ADVERTISEMENT

ಮೊದಲ ಓದು: ಜಾತಿ ವಿರೋಧಿ ಬುದ್ದಿಜೀವಿಗಳ ದರ್ಶನ

ಪ್ರಜಾವಾಣಿ ವಿಶೇಷ
Published 2 ಮಾರ್ಚ್ 2024, 23:32 IST
Last Updated 2 ಮಾರ್ಚ್ 2024, 23:32 IST
ಮುಖಪುಟ
ಮುಖಪುಟ   

ಭಾರತದ ಬೆಳವಣಿಗೆಯಲ್ಲಿ ದಲಿತರು, ಆದಿವಾಸಿಗಳು ಹಾಗೂ ಮಹಿಳೆಯರ ಕೊಡುಗೆ ಏನು? ಅದನ್ನು ಯಾವ ಕಾರಣಕ್ಕಾಗಿ ನೇಪಥ್ಯಕ್ಕೆ ತಳ್ಳಲಾಯಿತು. ಬ್ರಾಹ್ಮಣೀಯ ಸಂಸ್ಕೃತ ಗ್ರಂಥಗಳ ಆಕರಗಳನ್ನು ಹೊರತುಪಡಿಸಿ ಜನಪದ ಮೌಖಿಕ ಸಾಹಿತ್ಯ ಮೂಲಗಳನ್ನು ಪರಿಶೀಲಿಸಿದರೆ ನಮಗೆ ದೊರೆಯುವ ಸಾಮಗ್ರಿ ಜನಸ್ತರೀಯ ಚಿಂತನೆಗಳನ್ನು ಹೇಗೆ ಒಳಗೊಂಡಿದೆ? ಮುಂತಾದವುಗಳ ಬಗ್ಗೆ ಅರ್ಥಪೂರ್ಣ ಒಳನೋಟಗಳನ್ನು ನೀಡುವ ಕೃತಿಯಲ್ಲಿ ಗೇಲ್‌ ಓಮ್ವೆಟ್‌ ಅವರ ಬೇಗಂಪುರ ಕೂಡಾ ಒಂದು.

ಡಾ.ಬಂಜಗೆರೆ ಜಯಪ್ರಕಾಶ ಅವರು ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ‘ಜಾತಿವಿರೋಧಿ ಬುದ್ಧಿಜೀವಿಗಳ ಸಾಮಾಜಿಕ ದೃಷ್ಟಿಕೋನ’ ಎಂಬ ಕೃತಿಯ ಶೀರ್ಷಿಕೆಯ ಅಡಿಬರಹದಂತೆ ಸಾಮಾಜಿಕ–ರಾಜಕೀಯ ಚಿಂತಕರು ದಮನಿತ ಜನವರ್ಗಗಳ ಬಿಡುಗಡೆಗೆ ನಡೆಸಿದ ಚಿಂತನೆಗಳನ್ನು, ಮುಂದಿಟ್ಟ ಪರ್ಯಾಯ ರಾಜಕೀಯ ನಿಲುವುಗಳನ್ನು ಈ ಕೃತಿ ಕಟ್ಟಿಕೊಟ್ಟಿದೆ.

15ರಿಂದ 17ನೇ ಶತಮಾನದ ಆರಂಭಿಕ ಆಧುನಿಕ ಅವಧಿಯಿಂದ ಹಿಡಿದು ವಸಾಹತು ಆಳ್ವಿಕೆಯ ಕೊನೆಯವರೆಗಿನ ಐದು ಶತಮಾನಗಳ ಅವಧಿಯೊಳಗಿನ ಜಾತಿ ವ್ಯವಸ್ಥೆ ವಿರೋಧಿ ಪ್ರಮುಖ ಬುದ್ಧಿಜೀವಿಗಳ ಸಮಾಜೋ–ಆರ್ಥಿಕ ದೃಷ್ಟಿಕೋನಗಳ ಅಧ್ಯಯನದಂತಿದೆ ಈ ಕೃತಿ. ತೀವ್ರಗಾಮಿ ಸಂತ ರವಿದಾಸರ ‘ಸುಖೀರಾಜ್ಯ’ ಚೌಕಟ್ಟಿನ ಆದರ್ಶ ರಾಜ್ಯದ ಕಲ್ಪನೆ ಇದರಲ್ಲಿದೆ.

ADVERTISEMENT

ಜೋಖಾಮೇಳ, ಜನಾಬಾಯಿ, ಕಬೀರ್, ರವಿದಾಸ್, ತುಕಾರಾಂ, ಕರ್ತಾಭಜ, ಫುಲೆ, ಅಯೋತಿ ದಾಸ್, ಪಂಡಿತಾ ರಮಾಬಾಯಿ, ಪೆರಿಯಾರ್, ಅಂಬೇಡ್ಕರ್ ಅವರ ಮೂಲಕ ದಲಿತ, ಬಹುಜನ ಮತ್ತು ಅನೇಕ ಮಹಿಳಾ ಬುದ್ಧಿಜೀವಿಗಳು ಜಾತಿರಹಿತ, ವರ್ಗರಹಿತ ಸಮಾಜದ ಆದರ್ಶವನ್ನು ಹೇಗೆ ಕಟ್ಟಿದರು ಎಂಬುದನ್ನು ಲೇಖಕರು ಬೇಗಂಪುರದಲ್ಲಿ ದಾಖಲಿಸಿದ್ದಾರೆ. ಜತೆಗೆ ಗಾಂಧೀ ಅವರ ರಾಮರಾಜ್ಯ ಹಾಗೂ ನೆಹರೂ ಅವರ ಆದರ್ಶದ ಪರಿಕಲ್ಪನೆಯನ್ನೂ ಸಮೀಕರಿಸಲಾಗಿದೆ.

ಬೇಗಂಪುರ

ಲೇ: ಗೇಲ್ ಓಮ್ವೆಟ್

ಅನು: ಡಾ. ಬಂಜಗೆರೆ ಜಯಪ್ರಕಾಶ

ಪ್ರ: ಜೀರುಂಡೆ ಪುಸ್ತಕ

ಪು: 240

ಬೆಲೆ: ₹ 345

ಸಂ: 97422 25779

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.