ADVERTISEMENT

ಪುಸ್ತಕ ವಿಮರ್ಶೆ: ದಲಿತ ಚಳವಳಿಯ ಹೆಜ್ಜೆ ಗುರುತುಗಳು

ಪ್ರಜಾವಾಣಿ ವಿಶೇಷ
Published 9 ಜನವರಿ 2022, 2:14 IST
Last Updated 9 ಜನವರಿ 2022, 2:14 IST
ದಲಿತ ಚಳವಳಿಯ ಹೆಜ್ಜೆ ಗುರುತುಗಳು
ದಲಿತ ಚಳವಳಿಯ ಹೆಜ್ಜೆ ಗುರುತುಗಳು   

ದಲಿತ ಚಳುವಳಿಯ ಹೆಜ್ಜೆಗಳು
ಲೇ: ಶಿವಾಜಿ ಗಣೇಶನ್‌
ಪ್ರ: ಬೆವರಹನಿ ಪ್ರಕಾಶನ
ಸಂ: 9845606952

‘ದಲಿತ ವರ್ಗದಿಂದ ಚುನಾವಣೆಗಳಲ್ಲಿ ಸ್ಪರ್ಧಿಸಿ ಗೆದ್ದ ಬಹುತೇಕರು ಹೇಡಿಗಳಂತೆ ಬದುಕಿದರು. ಇಂಥವರನ್ನು ಸಮಾಜವಾಗಲಿ ದಲಿತರಾಗಲಿ ನೆನಪಿಸಿಕೊಳ್ಳುವುದಿಲ್ಲ. ಏಕೆಂದರೆ ಇತಿಹಾಸದಲ್ಲಿ ಅವರ ಹೆಜ್ಜೆ ಗುರುತುಗಳೇ ಕಾಣಿಸುತ್ತಿಲ್ಲ...’

ಸಮುದಾಯವೊಂದನ್ನು ಮೆಟ್ಟಿಲಾಗಿಸಿಕೊಂಡು ಮೇಲೇರಿದವರ ಗುಣಧರ್ಮ ವಿವರಿಸುವಾಗ ಲೇಖಕ ಶಿವಾಜಿ ಗಣೇಶನ್‌ ‘ದಲಿತ ಚಳವಳಿಯ ಹೆಜ್ಜೆಗಳು’ ಕೃತಿಯಲ್ಲಿ ಹೀಗೆ ಚಾಟಿ ಬೀಸಿದ್ದಾರೆ. ಹಾಗೆಯೇ ಮುಂಚೂಣಿ ನಾಯಕರ ಗುಣಾವಗುಣಗಳನ್ನೂ ನಿರ್ದಾಕ್ಷಿಣ್ಯವಾಗಿ ತೆರೆದಿಟ್ಟಿದ್ದಾರೆ.

ಬಸವಲಿಂಗಪ್ಪ ಅವರ ‘ಕನ್ನಡ ಸಾಹಿತ್ಯದಲ್ಲಿರುವುದೆಲ್ಲಾ ಬೂಸಾ ಸಾಹಿತ್ಯ’ ಎಂಬ ಹೇಳಿಕೆ ಮುಂದೆ ಸವರ್ಣೀಯ ಮತ್ತು ದಲಿತ ವಿದ್ಯಾರ್ಥಿಗಳ ನಡುವೆ ಕಿಚ್ಚು ಹಬ್ಬಿಸಿ ದಲಿತ ಚಳವಳಿಗೆ ಮುನ್ನುಡಿ ಬರೆದದ್ದು ಕಥನ ರೂಪದಲ್ಲಿದೆ.

ADVERTISEMENT

ಬಸವಲಿಂಗಪ್ಪ ಅವರು ‘ಬೂಸಾ ಸಾಹಿತ್ಯ’ ಎಂದು ಜರೆದದ್ದು ಮಾತ್ರ ಹೆಚ್ಚು ಪ್ರಚಾರ ಪಡೆದಿದೆ.ಕನ್ನಡ ಸಾಹಿತ್ಯದಲ್ಲಿ ನಿಮ್ಮ ದುಃಖ ದುಮ್ಮಾನ, ನಿಮ್ಮ ಬದುಕಿನ ಚಿತ್ರಣ ಇದೆಯಾ ಎಂದು ಬಸವಲಿಂಗಪ್ಪನವರು ಪ್ರಶ್ನಿಸಿದ ಸಂಗತಿ ದಾಖಲಾಗಿರುವುದು ಬಹುಶಃ ಈ ಕೃತಿಯಲ್ಲೇ ಮೊದಲು ಇರಬೇಕು. ಆ ಘಟನೆಗೆ ಲೇಖಕರು ಪ್ರತ್ಯಕ್ಷದರ್ಶಿ ಆಗಿರುವುದೂ ಲೇಖನಕ್ಕೊಂದು ನಿಖರತೆ ಒದಗಿಸಿದೆ.

ಚಳವಳಿಗೆ ದನಿಯಾದ ‘ಪಂಚಮ’, ‘ಶೋಷಿತ’, ‘ಆಂದೋಲನ’ ಪತ್ರಿಕೆಗಳು, ಅವುಗಳ ಪ್ರಕಾಶಕರು ಎದುರಿಸಿದ ಸಂಕಷ್ಟಗಳು, ಹಸಿವು ನಿರೂಪಣೆಗೊಂಡಿವೆ. ಅಂದಿನ ನಾಯಕರು, ಘಟನೆಗಳ ಪ್ರತ್ಯಕ್ಷದರ್ಶಿತ್ವ, ನೆನಪುಗಳ ಭಂಡಾರದಿಂದ ಆಯ್ದು ಸಂಗತಿಗಳಿಂದಾಗಿ ಈ ಕೃತಿ ಒಂದು ಅಧ್ಯಯನಯೋಗ್ಯ ದಾಖಲೆಯಾಗಿ ಮೂಡಿಬಂದಿದೆ. ದಲಿತ ಚಳವಳಿಯು ಹೇಗೆ ಒಂದು ಸ್ವರೂಪ ಪಡೆಯುತ್ತಾ ಬಂತು ಎಂಬುದನ್ನು ಈ ಕೃತಿ ಸೊಗಸಾಗಿ ಕಟ್ಟಿಕೊಟ್ಟಿದೆ. ಆ ನಿಟ್ಟಿನಲ್ಲಿ ಇದೊಂದು ಆಕರ ಗ್ರಂಥವೂ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.