ADVERTISEMENT

ಮೊದಲ ಓದು: ಗಿರಗಿಟ್ಲೆ– ನೆಲಮೂಲದೊಂದಿಗೆ ವಿದೇಶಿ ಪ್ರವಾಸ ಮುಖಾಮುಖಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 15:16 IST
Last Updated 6 ಸೆಪ್ಟೆಂಬರ್ 2025, 15:16 IST
ಗಿರಗಿಟ್ಲೆ
ಗಿರಗಿಟ್ಲೆ   

ಪ್ರವಾಸ ಕಥೆಗಳಲ್ಲಿ ಪ್ರೇಕ್ಷಣೀಯ ತಾಣಗಳ ಇತಿಹಾಸ, ವೈಶಿಷ್ಟ್ಯ, ಭೂತ ಹಾಗೂ ವರ್ತಮಾನದ ಪರಿಸ್ಥಿತಿಯ ವಿವರಗಳ ಜತೆಗೆ ಅದನ್ನು ತಮ್ಮ ನೆಲಮೂಲದ ಸಂಸ್ಕೃತಿ ಮತ್ತು ವೈಯಕ್ತಿಕ ಬದುಕಿನೊಂದಿಗೆ ಮುಖಾಮುಖಿಯಾಗಿಸುವ ಪ್ರಯತ್ನವನ್ನು ಲೇಖಕ ಶಿವಾನಂದ ಕರ್ಕಿ ಅವರು ತಮ್ಮ ಕೃತಿ ‘ಗಿರಗಿಟ್ಲೆ’ಯಲ್ಲಿ ಮಾಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನವರಾದ ಲೇಖಕರು ತಮ್ಮ ಪತ್ನಿಯೊಂದಿಗೆ ಸಿಂಗಪುರ, ಮಲೇಷಿಯಾ ಮತ್ತು ಥಾಯ್ಲೆಂಡ್‌ ಪ್ರವಾಸ ನಡೆಸಿದ ಸಂದರ್ಭದ ಹಲವು ಸಂಗತಿಗಳನ್ನು ದಾಖಲಿಸಿದ್ದಾರೆ. ಕೃತಿಯ ಅಡಿಬರಹ ‘ವಿದೇಶದಲ್ಲೂ ನಾವು ಹೀಗೆ‘ ಎಂಬಂತೆ ಲೇಖಕರು ಅಲ್ಲಿಯೂ ತಮ್ಮ ಸ್ವಂತಿಕೆ ಮತ್ತು ಅಸ್ತಿತ್ವದ ಮೂಲದೊಂದಿಗೆ ವಿದೇಶಿ ನೆಲವನ್ನು ಹೋಲಿಕೆ ಮಾಡಿ ನೋಡುವ ಪ್ರಯತ್ನ ಮಾಡಿದ್ದಾರೆ. ಪ್ರವಾಸದಲ್ಲಿ ಜತೆಗೂಡಿದವರೊಂದಿಗಿನ ಮೋಜು, ಮಸ್ತಿಯ ಜತೆಗೆ ಅಲ್ಲಿನ ಜನಜೀವನ, ರಾಜಕೀಯ, ಸಾಮಾಜಿಕ, ಜನರ ಸ್ಥಿತಿಗತಿಗಳ ಕುರಿತೂ ಹಲವು ಕುತೂಹಲಕರ ಅಂಶಗಳನ್ನು ಇಲ್ಲಿ ದಾಖಲಿಸಿದ್ದಾರೆ.

ಇಲ್ಲಿ ಮಾಹಿತಿ ದಾಖಲಿಸುವುದಕ್ಕಿಂತಲೂ ಅದನ್ನು ತನ್ನ ನೆಲದ ಹಲವು ಸಂಗತಿಗಳಿಗೆ ಹೋಲಿಸಿ ನೋಡುವ ಪ್ರಯತ್ನದಲ್ಲಿ ಓದುಗರಿಗೆ ಕಚಗುಳಿ ಇಡುತ್ತಾ, ನಗೆಗಡಲಿನಲ್ಲಿ ತೇಲಿಸುತ್ತಾ ಕೃತಿ ಸಾಗುತ್ತದೆ. ಅಲ್ಲಲ್ಲಿ ಬದುಕಿನ ಅನಿರೀಕ್ಷಿತ ಪರಿಸ್ಥಿತಿಗೆ ಮುಖಾಮುಖಿಯಾಗುವ ಈ ಕೃತಿಯಲ್ಲಿ ಹಾಸ್ಯ, ವಿಡಂಬನೆ, ನೋವು, ನಲಿವು, ಆಹಾರ, ವಿಹಾರ ಸೇರಿದಂತೆ ಹಲವು ಆಯಾಮಗಳು ದಾಖಲಾಗಿವೆ. 

ADVERTISEMENT

ಈ ಪುಟ್ಟ ಕೃತಿಯಲ್ಲಿ ಲೇಖಕರು ಬಹಳಷ್ಟು ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಜತೆಗೆ ತಮ್ಮೂರು ಮಲೆನಾಡಿನ ಆಚಾರ, ವಿಚಾರ ಹಾಗೂ ಆಹಾರಗಳನ್ನೂ ಸೊಗಸಾಗಿ ಉಣಬಡಿಸಿದ್ದಾರೆ. ಈ ಪುಟ್ಟ ಕೃತಿಯಲ್ಲಿ 14 ಅಧ್ಯಾಯಗಳಿವೆ. ಅವುಗಳಲ್ಲಿ ತಾವು ಭೇಟಿ ನೀಡಿದ ದೇಶಗಳ ಇತಿಹಾಸದ ಜತೆಗೆ ಇಂದಿನ ರಾಜಕೀಯ ಪರಿಸ್ಥಿತಿಯನ್ನೂ ದಾಖಲಿಸಿದ್ದಾರೆ.

ಗಿರಗಿಟ್ಲೆ– ವಿದೇಶದಲ್ಲೂ ನಾವು ಹೀಗೆ ಲೇ: ಶಿವಾನಂದ ಕರ್ಕಿ ಪ್ರ: ಧ್ವನಿ ಪ್ರಕಾಶನ ಸಂ: 99453 06617 ಪು: 108 ಬೆ: ₹150

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.