ADVERTISEMENT

ಪುಸ್ತಕ ವಿಮರ್ಶೆ: ಹೊಗೆಯ ಹೊಳೆಯ ಒಳಹೊರಗಿನ ತಳಮಳಗಳು

ಪದ್ಮನಾಭ ಭಟ್ಟ‌
Published 26 ಮಾರ್ಚ್ 2022, 19:30 IST
Last Updated 26 ಮಾರ್ಚ್ 2022, 19:30 IST
ಹೊಗೆಯ ಹೊಳೆಯಿದು ತಿಳಿಯದು
ಹೊಗೆಯ ಹೊಳೆಯಿದು ತಿಳಿಯದು   

ಕವಿತೆ, ಗಜಲ್‌, ವಿಮರ್ಶೆ, ಸಂಶೋಧನೆ, ಕಾದಂಬರಿ, ಅನುವಾದ – ಹೀಗೆ ಸಾಹಿತ್ಯದ ಬಹುತೇಕ ಪ್ರಕಾರಗಳಲ್ಲಿ ಅಡ್ಡಾಡಿರುವ ಚಿದಾನಂದ ಸಾಲಿ ಅವರ ಎರಡನೇ ಕಥಾಸಂಕಲನ ‘ಹೊಗೆಯ ಹೊಳೆಯಿದು ತಿಳಿಯದು’. ಮೊದಲ ಕಥಾಸಂಕಲನ ‘ಧರೆಗೆ ನಿದ್ರೆಯು ಇಲ್ಲ’ (2008) ಬಂದ ಹದಿನಾಲ್ಕು ವರ್ಷಗಳ ನಂತರ ಎರಡನೇ ಕಥಾಸಂಕಲನ ಪ್ರಕಟಗೊಂಡಿದೆ. ಈ ಸಂಕಲನದಲ್ಲಿ ಇರುವುದೂ ಆರೇ ಕಥೆಗಳು. ಈ ಸುದೀರ್ಘ ಅವಧಿ ಮತ್ತು ಕಥೆಗಳ ಸಂಖ್ಯೆ, ಸಣ್ಣಕಥೆಗಳ ಕುರಿತು ಲೇಖಕರಿಗೆ ಇರುವ ಸಂಯಮ ಮತ್ತು ಶ್ರದ್ಧೆಯನ್ನೂ ಸೂಚಿಸುತ್ತದೆ.

ಸಂಯಮ ಮತ್ತು ಶ್ರದ್ಧೆ ಇಲ್ಲಿನ ಬಹುತೇಕ ಕಥೆಗಳಲ್ಲಿ ಕಾಣಿಸುವ ಗುಣವೂ ಹೌದು. ಬದುಕಿನಲ್ಲಿ ನಮ್ಮ ಊಹೆಗೂ ಮೀರಿ ಘಟಿಸುವ ಸಂಗತಿಗಳು ಮತ್ತು ಅದರಿಂದ ಹುಟ್ಟುವ ಕಾಣ್ಕೆಗಳನ್ನು ಹಿಡಿದಿಡುವ ಪ್ರಯತ್ನವನ್ನು ಈ ಕಥೆಗಳು ಮಾಡುತ್ತವೆ. ಚಿಟ್ಟೆಯಂಥ ಕಥೆಗಳು, ಕೆಲವೊಮ್ಮೆ ಕಥೆಗಾರರಿಗೆ ಸಿಕ್ಕೇಬಿಟ್ಟಿತು ಎಂಬ ಭಾವ ಹುಟ್ಟಿಸಿ ಬೆರಳತುದಿಯಿಂದ ಸರಕ್ಕನೆ ತಪ್ಪಿಸಿಕೊಂಡು ಹಾರಿಹೋಗಿವೆ; ಇನ್ನು ಸಿಗಲಾರದು ಎಂದು ಸುಮ್ಮನಾದಾಗ, ಹೆಗಲ ಮೇಲೆಯೇ ಬಂದು ಕೂತು ರೆಕ್ಕೆಯರಳಿಸಿ ಪುಳಕ ಹುಟ್ಟಿಸಿದ್ದೂ ಇದೆ. ಹಾಗಾಗಿಯೇ ಇಲ್ಲಿನ ಹಲವು ಕಥೆಗಳ ಕುರಿತು ಯಶಸ್ವಿ ಎಂದಾಗಲಿ, ವಿಫಲ ಎಂದಾಗಲಿ ಒಂದು ಸಾಲಿನ ನಿರ್ಣಯ ಕೊಡುವುದು ಸಾಧ್ಯವಿಲ್ಲ.

ಮೊದಲ ಕಥೆ ‘ಯಾನ’ವನ್ನೇ ಈ ಮಾತಿಗೆ ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಈ ಕಥೆಯ ನಾಯಕ, ಒಬ್ಬ ವೃದ್ಧರೊಂದಿಗೆ ದೆಹಲಿಯಿಂದ ಹುಬ್ಬಳ್ಳಿಗೆ ಹೊರಟಿದ್ದಾನೆ. ಆ ನಾಯಕನ ಹಿನ್ನೆಲೆಯಾಗಲಿ, ವೃದ್ಧರ ಹಿನ್ನೆಲೆಯಾಗಲಿ ಇಡೀ ಕಥೆಯಲ್ಲಿ ಎಲ್ಲಿಯೂ ಬರುವುದಿಲ್ಲ.ಒಂದು ಮದುವೆಗೆ, ಟಿಕೆಟ್‌ ಕನ್ಫರ್ಮ್ ಆಗದೆ ರೈಲು ಹತ್ತಿ ಹೊರಟಿದ್ದಾರೆ. ರೈಲಿನಲ್ಲಿ ಅವರ ಹಾಗೆಯೇ ‘ಹಿನ್ನೆಲೆಯಿಂದ ಕತ್ತರಿಸಿಕೊಂಡು’ ಟ್ರೇನು ಹತ್ತಿದ ಅಸಂಖ್ಯಾತ ಜನರಿದ್ದಾರೆ. ಅಲ್ಲಿ ನಾಯಕನಿಗೆ ಒಬ್ಬಳು ಮಾದಕ ಸುಂದರಿಯ ಪರಿಚಯವವೂ ಆಗುತ್ತದೆ. ಇಕ್ಕಟ್ಟಿನ ಪರಿಸ್ಥಿತಿಗಳು, ಅಲ್ಲಿಯೇ ಹೊಸದಾಗಿ ಹುಟ್ಟಿಕೊಳ್ಳುವ ಸಂಬಂಧಗಳು, ಸಣ್ಣತನಗಳು, ಔದಾರ್ಯಗಳ ಹಲವು ಬಿಡಿ ಸಂಗತಿಗಳ ಮೂಲಕ ಒಂದು ಅಖಂಡ ಚಿತ್ರವನ್ನು ಕೆತ್ತುತ್ತ ಹೋಗುವ ಕಥೆ ಕೊನೆಯಲ್ಲಿ ಒಂದು ಕ್ಷುಲ್ಲಕ ಅನಿಸಬಹುದಾದ ಅಂತ್ಯದಿಂದ ಕುಸಿದುಹೋಗುತ್ತದೆ. ಸುಂದರ ಹುಡುಗಿಯೊಬ್ಬಳು ಮಾದಕತೆಯಿಂದ ಮೋಡಿ ಮಾಡಿ ವಂಚಿಸುವ ಘಟನೆಯೇ ಅದುವರೆಗೆ ಘನವಾಗಿ ಬೆಳೆದಿದ್ದ ಕಥೆಯ ಶಿಲ್ಪವನ್ನು ಭಗ್ನಗೊಳಿಸುತ್ತದೆ.

ADVERTISEMENT

ಮಾಯಾವಾಸ್ತವ ಎಂದು ಹೇಳಬಹುದಾದ ವಾತಾವರಣದಲ್ಲಿ ಬಿಚ್ಚಿಕೊಳ್ಳುವ ‘ನೆರಳು’ ಕಥೆ, ಒಂದರ ನಂತರ ಇನ್ನೊಂದು ಪಾತ್ರವನ್ನು ಓದುಗರ ಎದುರಿಗೆ ತಂದು ಪರಿಚಯಿಸುತ್ತದೆ. ಕಥೆಯ ನಿರೂಪಕ ಪರಿಚಯಿಸಿಕೊಳ್ಳುವುದೇ ಅರ್ಧದಲ್ಲಿ. ಚದುರಿದ ಚಿತ್ರದ ಹಾಗೆಯೇ ಬೆಳೆಯುತ್ತ ಹೋಗುವ ಈ ನಿರೂಪಣಾ ತಂತ್ರವೇ ಕಥೆಯ ಶಿಲ್ಪವನ್ನು ಸಡಿಲಗೊಳಿಸಿದೆ. ಹಲವು ಪಾತ್ರಗಳ ಬಿಡಿ ಚಿತ್ರಗಳು ಹುಟ್ಟಿಸುವ ಗೊಂದಲವೇ ಆ ಪ್ರಪಂಚದೊಳಗೆ ಪೂರ್ಣವಾಗಿ ಇಳಿಯಲು ತೊಡಕಾಗುತ್ತದೆ. ಶಾರದೆಯನ್ನು ತನಿಖಾ ಅಧಿಕಾರಿಯಾಗಿಸಿರುವುದು ಕೊನೇ ಕ್ಷಣದ ರೋಚಕತೆಯ ಹೊರತಾಗಿ ಮಹತ್ವದ್ದೇನನ್ನೂ ಕಥೆಗೆ ಸೇರಿಸುವುದಿಲ್ಲ. ಅಷ್ಟು ಸಂಯಮದಿಂದ, ಶ್ರದ್ಧೆಯಿಂದ ಕಥೆಯನ್ನು ಬೆಳೆಸುವ ಕಥೆಗಾರರು ಕೊನೆಗೆ ಒಮ್ಮೆಲೇ ಸುಸ್ತಾಗಿ, ಅವಸರದ ಮುಕ್ತಾಯಕ್ಕೆ ಬಲಿಯಾಗುವುದು ಅಚ್ಚರಿ ಹುಟ್ಟಿಸುತ್ತದೆ.

ಒಂದು ಕಲಾಕೃತಿಯ ಮೂಲಕ ಹೆಣ್ಣೊಬ್ಬಳ ಬದುಕಿನ ಗ್ರಾಫ್‌ ಅನ್ನು ಚಿತ್ರಿಸಲು ಹೊರಡುವ ಕಥೆ ‘ಹೊಗೆ’. ನಿರೂಪಣೆ, ವಸ್ತು, ಭಾಷೆ ಎಲ್ಲದರಲ್ಲಿಯೂ ಈ ಸಂಕಲನದ ಉಳಿದ ಕಥೆಗಳಿಗಿಂತ ಭಿನ್ನವಾದದ್ದು. ಆದರೆ ಆ ಭಿನ್ನತೆ ಕಥೆಯನ್ನು ಯಶಸ್ವಿಗೊಳಿಸಿಲ್ಲ. ನಾಯಕಿಯ ಆರೋಪಪಟ್ಟಿಯನ್ನು ಪೇರಿಸುತ್ತ ಹೋಗುವ ಕಥೆ, ಅದಕ್ಕೆ ಇರಬಹುದಾದ ಇನ್ನೊಂದು ಆಯಾಮಕ್ಕೆ ಸಂಪೂರ್ಣ ವಿಮುಖವಾಗಿದೆ. ಹಾಗಾಗಿಯೇ ಕೃತಕವೂ ಆಗಿದೆ.

‘ಜಡ್ಡು’ ಈ ಸಂಕಲನದ ಯಶಸ್ವಿ ಕಥೆ. ಸಾವಿನಿಂದ ಇನಿತೇ ದೂರದಲ್ಲಿ ಸಂಜೆಗತ್ತಲಂತೆ ಬೆಳೆಯುತ್ತ ಹೋಗುವ ಈ ಕಥೆ, ಮನುಷ್ಯ ಸಂಬಂಧಗಳನ್ನು, ಅದರದ್ದೇ ವಿಸ್ತರಣೆಯಾದ ಸಾಮಾಜಿಕ ವ್ಯವಸ್ಥೆಯನ್ನು, ಆ ವ್ಯವಸ್ಥೆಯನ್ನು ಹೊತ್ತಿರುವ ಮತ್ತು ಶಿಥಿಲಗೊಳಿಸುತ್ತಿರುವ ನಂಬಿಕೆಗಳನ್ನು ಗಾಢವಾಗಿ ಶೋಧಿಸುತ್ತ ಹೋಗುತ್ತದೆ. ಈ ಸಂಕಲನದ ಇನ್ನೊಂದು ಕುತೂಹಲಕಾರಿ ಕಥೆ ‘ಹುಗ್ಗಿ’ಗೂ ಈ ಕಥೆಗೂ ವಿಚಿತ್ರ ಸಂಬಂಧವಿದೆ.

ಆಧುನಿಕ ಕನ್ನಡಕದ ಕಣ್ಣಿನಲ್ಲಿ ಮೌಢ್ಯವಾಗಿ, ಪೊಳ್ಳಾಗಿ ಕಾಣಿಸುತ್ತಿರುವ ಗ್ರಾಮೀಣರ ಜಗತ್ತಿನಲ್ಲಿ ನಮಗೆ ಕಾಣದಿರುವ ಸತ್ಯಗಳೂ ಅಡಗಿರಬಹುದೇ ಎಂಬ ಅನುಮಾನ ಈ ಸಂಕಲನದ ‘ನೆರಳು’ ಕಥೆಯಲ್ಲಿಯೂ ಸುಳಿದು ಹೋಗುತ್ತದೆ. ‘ಹುಗ್ಗಿ’ ಕಥೆಯಲ್ಲಿ, ವೈಜ್ಞಾನಿಕ ಮನೋಭಾವ ಮತ್ತು ನಾವು ಮೌಢ್ಯ ಎಂದು ಕರೆಯುವ ನಂಬುಗೆಗಳ ಮನಸ್ಥಿತಿಗಳ ಮುಖಾಮುಖಿ ತುಸು ವಾಚ್ಯವಾಗಿಯೇ ಆಗುತ್ತದೆ. ‘ಇಂದು ರಾತ್ರಿ ನೀನು ಹುಗ್ಗಿ ಉಣ್ಣುವೆ’ ಎಂದು ಭವಿಷ್ಯ ನುಡಿಯುವ ಸೈಕಲ್ ತಾತನ ಮಾತನ್ನು ಸುಳ್ಳಾಗಿಸಲು ಶತಾಯಗತಾಯ ಪ್ರಯತ್ನಿಸುವ ನಾಯಕ ಕೊನೆಗೂ ಸೋಲುತ್ತಾನೆ. ಜಾನಪದ ಕಥೆಗಳ ಸೊಗಡನ್ನೂ ಮೈದುಂಬಿಕೊಂಡು ಬೆಳೆಯುವ ಈ ಕಥೆ ರಂಜನೀಯವೂ ರೋಚಕವೂ ಆಗಿ ಓದಿಸಿಕೊಂಡು ಹೋಗುತ್ತದೆ. ಆದರೆ ಕೊನೆಗೂ ಅದು ಪಂಥದ ಆಟವಾಗುವುದರ ಆಚೆ, ಘನವಾದ ದರ್ಶನವನ್ನೇನೂ ಹೊಳೆಯಿಸುವುದಿಲ್ಲ.

ಆದರೆ ‘ಜಡ್ಡು’ ಕಥೆಯಲ್ಲಿ ಇದೇ ಸಂಘರ್ಷ ಬದುಕಿನ ಆಳವಾದ ಮತ್ತು ಅಷ್ಟೇ ಆಪ್ತವಾದ ಅನುಭವದೊಂದಿಗೆ ಮುಖಾಮುಖಿಯಾಗಿವೆ. ಹಾಗಾಗಿಯೇ ಈ ಕಥೆ ಎರಡು ಮನಸ್ಥಿತಿಗಳ ಸಂಘರ್ಷವಷ್ಟೇ ಆಗಿ ಉಳಿಯದೆ ಬದುಕಿನ ಸಂಕೀರ್ಣತೆಯನ್ನೂ ನಿಗೂಢತೆಯನ್ನೂ ಕಾಣಿಸುವ ಶಕ್ತಿಯನ್ನು ಪಡೆದುಕೊಂಡಿದೆ. ತನ್ನ ವಾದಕ್ಕೆ ಹೊಂದುವಂಥ ಘಟನೆಗಳನ್ನು ಹೊಂದಿಸುತ್ತ ಲಂಬಿಸಿರುವ ಕೆಲಭಾಗಗಳನ್ನು ಕತ್ತರಿಸಿದ್ದರೆ ಈ ಕಥೆಯ ಶಿಲ್ಪ ಇನ್ನಷ್ಟು ಗಟ್ಟಿಕೊಳ್ಳುತ್ತಿತ್ತು.ಸಾಲಿ ಅವರ ಕಥನಸಂಯಮ ಮತ್ತು ಶ್ರದ್ಧೆಗಳು ‘ಜಡ್ಡು’ ಕಥೆಯಲ್ಲಿ ಒಂದು ಸಾರ್ಥಕಬಿಂದುವನ್ನು ತಲುಪಿವೆ ಮತ್ತು ಆ ಕಾರಣದಿಂದಲೇ ಅವರ ಮುಂದಿನ ಕಥೆಗಳ ಬಗ್ಗೆ ಇನ್ನಷ್ಟು ಕುತೂಹಲವನ್ನೂ ನಿರೀಕ್ಷೆಯನ್ನೂ ಹುಟ್ಟಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.