ADVERTISEMENT

ಅಧ್ಯಾತ್ಮರಹಿತ ‘ಅನುಭಾವ’ದೆಡೆಗಿನ ಕಾವ್ಯಯಾನ

ದೇವು ಪತ್ತಾರ
Published 1 ಆಗಸ್ಟ್ 2020, 19:30 IST
Last Updated 1 ಆಗಸ್ಟ್ 2020, 19:30 IST
ಪುಸ್ತಕ ಮುಖಪುಟ
ಪುಸ್ತಕ ಮುಖಪುಟ   

ಇಹ-ಪರಗಳ ಬೈನರಿಗಳಲ್ಲಿ ಕಳೆದುಹೋದಂತೆ ಭಾಸವಾಗಿರುವ/ಆಗುತ್ತಿರುವ ಲೋಕಕ್ಕೆ ವಿಭಿನ್ನ ರೀತಿಯಲ್ಲಿ ಮುಖಾಮುಖಿಯಾಗಿ ಅದನ್ನು ಕವಿತೆಯಲ್ಲಿ ವಿಶಿಷ್ಟ ರೀತಿಯಲ್ಲಿ ಕಟ್ಟಿ ಕೊಟ್ಟವನು ಕವಿ ರಿಲ್ಕ್‌. ಅವನ ‘ಕಾವ್ಯ ಯಾನ’ದ ಆಯ್ದ ಕವಿತೆಗಳನ್ನು ಹಿರಿಯ ವಿಮರ್ಶಕ ಎಚ್‌.ಎಸ್‌. ರಾಘವೇಂದ್ರರಾವ್‌ ಕನ್ನಡೀಕರಿಸಿದ್ದಾರೆ. ಅದಕ್ಕೆ ಅವರಿಟ್ಟ ಶೀರ್ಷಿಕೆ ‘ಮಂಜಿನ ಶಿವಾಲಯಕ್ಕೆ…’. ಎಚ್‌ಎಸ್‌ಆರ್‌ ಅವರು ಪರಿಭಾವಿಸಿದಂತೆ ರಿಲ್ಕ್‌ನ ಕಾವ್ಯದ ‘ಯಾನ’ ಹೊರಟಿರುವುದು ‘ಶಿವಾಲಯ’ಕ್ಕೆ ಹೌದು. ಆದರೆ, ಆ ಶಿವಾಲಯವು ಮಂಜಿನದು. ಇದು ‘ದೈವಭಕ್ತಿಯ ನೆರವು ಬೇಡದ ‘ಅಧ್ಯಾತ್ಮ’ಕ್ಕಾಗಿ ಮನಸ್ಸು ಹಾತೊರೆದ’ ಪರಿಣಾಮವಾಗಿ ಕಾಣಿಸಿದ-ಕಂಡುಕೊಂಡ ಅನುವಾದ.

ಜರ್ಮನಿಯ ಕವಿ ರೈನರ್‌ ಮರಿಯಾ ರಿಲ್ಕ್‌ (1875 – 1926) ಕನ್ನಡಕ್ಕೆ‘ಅಪರಿಚಿತ’ನೇನಲ್ಲ. ಕನ್ನಡದ ಸೃಜನಶೀಲ ಮನಸ್ಸುಗಳು ರಿಲ್ಕ್‌ನನ್ನು ಕನ್ನಡ ವಾಙ್ಮಯಲೋಕಕ್ಕೆ ಕರೆತಂದಿವೆ. ಯು.ಆರ್‌. ಅನಂತಮೂರ್ತಿ, ಓ.ಎಲ್‌. ನಾಗಭೂಷಣಸ್ವಾಮಿ ಅವರು ಆತನ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಹಾಗೆಯೇ ಕೆ.ವಿ. ತಿರುಮಲೇಶ್‌ ಅವರು ರಿಲ್ಕ್‌ನ ಕಾದಂಬರಿಯನ್ನು ಭಾಷಾಂತರಿಸಿದರೆ, ಓಎಲ್‌ಎನ್‌ ಅವರು ರಿಲ್ಕ್‌ನ 'ಯುವಕವಿಗೆ ಪತ್ರ’ ಅನುವಾದಿಸಿ ಪ್ರಕಟಿಸಿದ್ದಾರೆ. ಮೇಲ್ನೋಟ ಹಾಗೂ ತಕ್ಷಣಕ್ಕೆ ಎಚ್‌ಎಸ್‌ಆರ್‌ ಅವರ ಅನುವಾದವು ರಿಲ್ಕ್‌ನನ್ನು ಕನ್ನಡಕ್ಕೆ ತರುವ-ಒಳಗೊಳ್ಳುವ ಮುಂದುವರಿಕೆಯಂತೆ ಕಾಣಿಸುತ್ತದೆ. ಆದರೆ, ‘ಮಂಜಿನ ಶಿವಾಲಯಕ್ಕೆ…’ ಹೊರಟ ಈ ಪಯಣ ಹಳೆಯ ಹೆಜ್ಜೆಜಾಡಿನಲ್ಲಿ ನಡೆದಿರುವಂತಹದ್ದಲ್ಲ. ರಿಲ್ಕ್‌ನ ಕವಿತೆಯ ನೆರವಿನೊಂದಿಗೆ ನಡೆಸಿರುವ ‘ಹುಡುಕಾಟ’ ಹೊಸ- ವಿಶಿಷ್ಟ ಹೊಳಹುಗಳನ್ನು ನೀಡುತ್ತದೆ. ಅದು ‘ಅಧ್ಯಾತ್ಮದ ಊರುಗೋಲುಗಳ ಆಸರೆ’ಯಿಲ್ಲದೆ ನಡೆಯುವಂತಹದ್ದು. ರಿಲ್ಕ್‌ ನಡೆಸಿದ ಹಾಗೂ ನಿಂತ ಕಡೆಯಿಂದ ಅವನನ್ನು ಒಳಗೊಂಡಂತೆ ಚಲಿಸುವ ಹಾಗೂ ಮುಂದುವರಿಸುವ- ಭರವಸೆಯ ಬೆಳಕಿನತ್ತ ಕರೆದೊಯ್ಯುವ ಯತ್ನವನ್ನು ಎಚ್‌ಎಸ್‌ಆರ್‌ ಮಾಡಿದ್ದಾರೆ.

‘ಹಿಮತುಂಬಿದ ಏಕಾಂತಗಳಲ್ಲಿ’ ದೇವರೊಡನೆ ಸಂವಾದ ನಡೆಸಿದ ತರುಣ ಹಾಗೂ ಜಿಜ್ಞಾಸೆ ನಡೆಸುವ ದ್ಯೂನೋ ಎಲಿಜಿ ಬರೆದ ನಡು ವಯಸ್ಸಿನ ರಿಲ್ಕ್‌ ನಡುವಿನ ಪಯಣದ ಕವಿತೆಗಳು ಹಾಗೂ ವಿಭಿನ್ನ ತಾತ್ವಿಕತೆಯನ್ನೊಳಗೊಂಡ ‘ಆರ್ಫಿಯಸ್ ಸಾನೆಟ್’ಗಳು ಅನುವಾದದಲ್ಲಿ ಸೇರಿಕೊಂಡಿವೆ.

ADVERTISEMENT

ರಿಲ್ಕ್‌ನ ಕಾವ್ಯಕ್ಕೆ ಭಾಷ್ಯ ಬರೆದಂತಿರುವ ಅಭ್ಯಾಸಪೂರ್ಣ ಹಾಗೂ ಅಪೂರ್ವ ಮುನ್ನುಡಿಯು ಕೇವಲ ರಿಲ್ಕ್‌ನಿಗೆ ಸೀಮಿತವಾಗಿಲ್ಲ. ಸಮಕಾಲೀನ ಮಹತ್ವದ ಕಲಾವಿದರಾದ ರೋಡಿನ್‌, ಪಿಕಾಸೋ, ಸೆಜಾನ್‌, ಪಾಲ್‌ಕ್ಲೀ ಅವರ ಜೊತೆಗಿನ ಒಡನಾಟದಿಂದ ಪ್ರಭಾವಿತನಾದ ರಿಲ್ಕ್‌ ರಚಿಸಿದ ‘ವಸ್ತು-ಕವಿತೆ’ಗಳ ಮಹತ್ವ ಹಾಗೂ ಅದರ ನಂತರದ ಮುಂಚಲನೆಯು ದ್ಯೂನೋ ಎಲಿಜಿಯತ್ತ ಹೊರಳಿದ್ದನ್ನು ದಾಖಲಿಸುತ್ತಾರೆ. ದ್ಯೂನೋ ಎಲಿಜಿಯಲ್ಲಿ ‘ಕಾಣುವವನು ಮತ್ತು ಕಾಣುವ ಲೋಕ ಎರಡೂ ತೀವ್ರವಾದ ಭಾವಸಂಬಂಧವನ್ನು ಹೊಂದಿವೆ. ಆ ಲೋಕದಲ್ಲಿ ಬರುವ ಎಲ್ಲ ವಸ್ತುಗಳೂ ಮನುಕುಲದ ಅಂತರಂಗದ ಅಳಲುಗಳಿಗೆ ಒಡ್ಡಿದ ರೂಪಕಗಳು’ ಎಂದು ವಿವರಿಸಿದ್ದಾರೆ. ‘ಆರ್ಫಿಯಸ್ ಸಾನೆಟ್’ಗಳ ಸ್ವರೂಪದ ಬಗ್ಗೆ ಚರ್ಚಿಸುವ ಅವರು ‘ಕಾವ್ಯವಸ್ತು, ಕವಿತೆಯ ಆಕೃತಿ ಮತ್ತು ಕವಿಯ ದರ್ಶನಗಳು, ಬಿಡಿಸಿ ನೋಡಲಾಗದಂತೆ ಸೇರಿ ಹೋಗುತ್ತವೆ. ಆಗ ಸಂಕೋಚ, ಆತಂಕ ಮತ್ತು ಹಿಂಜರಿಕೆಗಳಿಂದ ಕೂಡಿದ ಅವನ ವ್ಯಕ್ತಿತ್ವವು ಮರೆಯಾಗುತ್ತದೆ. ಅವನು ತನ್ನನ್ನು ಮೀರಿದ ಯಾವುದೋ ಶಕ್ತಿಗೆ ಎಡೆಮಾಡಿಕೊಟ್ಟು ತಾನು ಕೇವಲ ಕೊಳಲಾಗುತ್ತಾನೆ. ಕೊಳಲು ನುಡಿಸುವವನು ದೇವರಲ್ಲ. ಅವನು ಆರ್ಫಿಯಸ್ ಎಂಬ ಎಲ್ಲ ಕವಿಗಳ ಪ್ರಾಣಶಕ್ತಿ. ಅವನಿಗೆ ಹುಟ್ಟುಸಾವುಗಳಿಲ್ಲ’ ಎಂದು ವಿವರಿಸುತ್ತಾರೆ. ಅದರ ಜೊತೆಯಲ್ಲಿಯೇ ಕನ್ನಡ ಸಾಹಿತ್ಯದ ಕೆಲ ಕೃತಿಗಳಲ್ಲಿ ದೊರೆತ ‘ಸನ್ನಿಧಿ’ಯ ಪ್ರಸ್ತಾಪವೂ ಇದೆ.

‘ಮಂಜಿನ ಶಿವಾಲಯಕ್ಕೆ..’ದಲ್ಲಿ ರಿಲ್ಕ್‌ನ ಕಾವ್ಯಯಾನದ ಮೂರೂ ಮಾದರಿಯ ಕವಿತೆಗಳನ್ನು ಎಚ್‌ಎಸ್‌ಆರ್‌ ಸೇರಿಸಿಕೊಂಡಿದ್ದಾರೆ. ಈ ಸಂಕಲನದಲ್ಲಿ ಒಟ್ಟು 72 ಕವಿತೆಗಳಿವೆ. ಕನ್ನಡದ ಜಾಯಮಾನಕ್ಕೆ ಒಗ್ಗುವ ಹಾಗೆ ಸರಾಗ ಓದಿಸಿಕೊಂಡು ಹೋಗುವ ಕವಿತೆಗಳಾಗಿವೆ. ತಾತ್ವಿಕತೆಯ ಭಾರಕ್ಕೆ ಕುಸಿದು ಹೋಗದ ಭಾವಗೀತೆಯ ಸ್ವರೂಪಕ್ಕಿಂತ ಭಿನ್ನವಾದ ರಿಲ್ಕ್‌ನ ಕಾವ್ಯಾತ್ಮಕ ಹುಡುಕಾಟ ಕನ್ನಡದ-ವರ್ತಮಾನಕ್ಕೆ ತೋರುದೀಪವೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.