ADVERTISEMENT

ಪುಸ್ತಕ ವಿಮರ್ಶೆ: ಮಿಡಿಯುವ ಸಂಬಂಧಗಳ ತಂತು

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2021, 19:30 IST
Last Updated 27 ನವೆಂಬರ್ 2021, 19:30 IST
ಪರವಶ
ಪರವಶ   

ಚಡಗ ಪ್ರಶಸ್ತಿಗೂ ಪಾತ್ರವಾಗಿರುವ ದವನ ಸೊರಬ ಅವರ ‘ಪರವಶ’ ಕಾದಂಬರಿ ಮಲೆನಾಡಿನ ಸಂಸ್ಕೃತಿಯನ್ನು ಕಟ್ಟಿಕೊಡುವ ವಿಶಿಷ್ಟ ಕೃತಿ. ಅಲ್ಲಿನ ಬದುಕಿನ ವಾಸ್ತವಿಕ ಬಿಂಬಗಳೂ ಕಾದಂಬರಿಯಲ್ಲಿ ಒಡಮೂಡಿವೆ. ಈ ಬೃಹತ್‌ ಕಥಾನಕದಲ್ಲಿ ಸುಮಾರು 60 ಪಾತ್ರಗಳು ಬಂದು ಹೋದರೂ ಕೇಂದ್ರ ಪ್ರತಿಮೆ ಮಾತ್ರ ಜುಮಕಿ ಜಲಪಾತವೇ ಆಗಿದೆ. ಮೂರು ಮನೆತನಗಳ ಕಥೆ ಶಿವಮೊಗ್ಗ ಜಿಲ್ಲೆಯ ಸಾಗರ, ತಾಳಗುಪ್ಪ ಮತ್ತು ಜೋಗದ ಸುತ್ತ ಬೆಳೆಯುತ್ತಾ ಥಾಯ್ಲೆಂಡ್‌, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಹಾಗೂ ನಮೀಬಿಯಾವರೆಗೆ ವಿಸ್ತರಿಸುತ್ತದೆ. ಜೇಡವೊಂದು ಬಲೆ ಹೆಣೆಯುವಂತೆ ಈ ಕಥಾನಕದಲ್ಲಿ ಸಂಬಂಧಗಳ ಜಾಲವನ್ನೇ ಸೃಷ್ಟಿಸಿದ್ದಾರೆ ಲೇಖಕಿ. ಪಾತ್ರಗಳ ಸೃಷ್ಟಿಯಲ್ಲಿ ದವನ ಅವರು ವಹಿಸಿದ ಮುತುವರ್ಜಿ ಅನನ್ಯವಾದುದು. ಪ್ರಾದೇಶಿಕ ಭಾಷೆಯನ್ನು ತುಂಬಾ ಸಮರ್ಥವಾಗಿ ದುಡಿಸಿಕೊಂಡಿದ್ದಾರೆ.

ಕಾದಂಬರಿಯ ವಸ್ತುವಿನ ಕುರಿತು ಮುನ್ನುಡಿಯಲ್ಲಿ ಚರ್ಚಿಸಿರುವ ಓ.ಎಲ್‌. ನಾಗಭೂಷಣಸ್ವಾಮಿ ಅವರು, ‘ಇಲ್ಲಿ ಎಲ್ಲರೂ ಪರವಶರೇ. ಬೇರೆಯವರ ಇಚ್ಛೆಗೋ ಆಜ್ಞೆಗೋ ವಶವಾದವರು. ಇಲ್ಲವೆ ತಮ್ಮದೇ ಆದರ್ಶಕ್ಕೆ ವಶವಾದವರು. ಇಡೀ ಬದುಕಿನ ಸಮತೋಲನವನ್ನು ಕಾಪಾಡುತ್ತಿರುವ ಉಡಿದಾರದಷ್ಟು ಸೂಕ್ಷ್ಮ ತಂತು ಎಲ್ಲರನ್ನೂ ಕಟ್ಟಿ, ತೂಗಿ, ಕಳಚಿ ಆಡಿಸುತ್ತಿದೆ’ ಎಂದಿದ್ದಾರೆ. ವಿಷಯಗಳ ಆಳಕ್ಕೆ ಇಳಿದು ವಿವರ ಸಂಗ್ರಹಿಸುವ ತಾಳ್ಮೆಯಿರುವ ದವನ ಅವರಿಂದ ಇಂತಹ ಇನ್ನಷ್ಟು ಹೊಸತನದ ಕಾದಂಬರಿಗಳನ್ನು ನಿರೀಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT