ಮೊದಲ ಓದು: ಹಳ್ಳಿ ಸೊಗಡಿನ ಕಥೆಗಳು
ಓದು ಮುಗಿದ ಬಳಿಕ ಅದರ ಗುಂಗಿನಿಂದ ಹೊರಬರಲು ಸಮಯ ಹಿಡಿದರೆ ಅದು ನಿಮ್ಮನ್ನು ಆವಾಹಿಸಿಕೊಂಡಿದೆ ಎಂದರ್ಥ. ಗುರುಪ್ರಸಾದ್ ಕಂಟಲಗೆರೆಯವರ ‘ನಾಟಿ ಹುಂಜ’ದಲ್ಲಿರುವ ಕಥೆಗಳಿಗೆ ಆ ಶಕ್ತಿ ಇದೆ. ಇಲ್ಲಿರುವ ಹತ್ತು ಕಥೆಗಳು ಭಿನ್ನ ಮಾದರಿಯವು. ಪ್ರತಿಯೊಂದರಲ್ಲೂ ಹಳ್ಳಿ ಜೀವನದ ಸೊಗಡು ಇದೆ. ಹಳ್ಳಿಯ ಜೀವನದಲ್ಲಿ ಸಾಮಾನ್ಯವಾಗಿ ನಡೆಯುವ ಸಂಗತಿಗಳನ್ನೇ ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ. ಸರಳ ವಿಷಯವನ್ನೂ ಓದುಗನ ಎದೆಗೆ ನಾಟುವಂತೆ, ಭಾವ ತೀವ್ರತೆಯಿಂದ ಬರೆಯುವ ಶೈಲಿ, ಎಲ್ಲೂ ಮುಕ್ಕಾಗದಂತೆ ಇರುವ ನಿರೂಪಣಾ ಸಾಮರ್ಥ್ಯ ಕಥೆಗಾರನ ಕಲಾತ್ಮಕತೆಗೆ ಸಾಕ್ಷಿ.
‘ಉಜ್ಗಲ್ಲು’ ಕಥೆಯಲ್ಲಿನ ಬಜ್ಗಲ್ಲೂರಿನ ಪರಿಸರ, ಅಲ್ಲಿನ ಜನರ ಕಾಯಕವನ್ನು ವರ್ಣಿಸುವುದರ ಜೊತೆಗೆ ಕಲ್ಲೊಂದು ಕುಟುಂಬದ ಏಳಿಗೆ ಹಾಗೂ ತಲ್ಲಣಕ್ಕೆ ಕಾರಣವಾದ ಬಗೆಯನ್ನು ಸೊಗಸಾಗಿ ವರ್ಣಿಸಿದ್ದಾರೆ. ಪರಂಪರಾಗತವಾಗಿ ಮಾಡಿಕೊಂಡು ಬಂದ ಕಸುಬನ್ನು ಬಂಡವಾಳಶಾಹಿಗಗಳು ಆಕ್ರಮಿಸಿಕೊಂಡ ಬಗೆಯನ್ನೂ ಕಥೆಗಾರ ಪರೋಕ್ಷವಾಗಿ ಕೆಲವೇ ಪದಗಳಲ್ಲಿ ಹೇಳಿದ್ದಾರೆ. ಅವರ ಮನದೊಳಗೆ ಹುದುಗಿರುವ ಇಂತಹ ಹಲವು ಬಗೆಯ ಸಮಾಜಪರ ಕಾಳಜಿಯನ್ನು ಕಾಣಬಹುದು.
ಪಾತ್ರ, ಹೆಸರುಗಳ ಆಯ್ಕೆಯೂ ನೈಜ ಎನಿಸುವಂತಿದೆ. ಕಥೆ ಹೆಣೆಯುವಾಗ ಸಣ್ಣ ವಿಚಾರಗಳಿಗೆ ಹೊಸ ಆಯಾಮ ನೀಡಿ ಕಥೆಯನ್ನು ವಿಸ್ತರಿಸುವ, ಎಲ್ಲಿಯೂ ಅತಿಯೆನಿಸದಂತೆ ನಿರೂಪಿಸುವ ಕಥೆಗಾರನಿಗೆ ಇರಬೇಕಾದ ಕಲೆ ಗುರುಪ್ರಸಾಸ್ ಅವರಿಗೆ ಸಿದ್ಧಿಸಿದೆ. ಓದುವ ವೇಳೆ ಬದಲಾಗುವ ಭಾವಗಳು ಇಲ್ಲಿನ ಕಥೆಗಳ ಸ್ಥಾಯಿಗುಣ. ಹೊಸ ತಲೆಮಾರಿನ ಓದುಗರಿಗೆ ಆಪ್ತ ಎನಿಸುವ ಭಾಷೆ, ಪ್ರಾದೇಶಿಕತೆ ಕಥೆಯನ್ನು ಪಕ್ವಗೊಳಿಸಿದೆ.
ಕಥೆಗಳಲ್ಲಿ ಅಲ್ಲಲ್ಲಿ ಬಳಕೆಯಾಗಿರುವ ಸ್ಥಳೀಯ ಭಾಷೆ, ಪದಗಳು ಬೇರೆ ಭಾಗದ ಓದುಗರಿಗೆ ಆಪ್ತವೆನಿಸದೇ ಇರಬಹುದು. ಬಳಸಲಾಗಿರುವ ಹಳ್ಳಿ ಸೊಗಡಿನ ಭಾಷೆ, ಪದಗಳ ಬಳಕೆಯೂ ಕೆಲ ಓದುಗರಿಗೆ ಪಥ್ಯವಾಗದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.