ದುಬೈನ ಶ್ರೀಮಂತಿಕೆ, ಬಾಲಿಯ ದೇವಾಲಯಗಳು, ಸಿಂಗಪುರದ ಗಗನಚುಂಬಿ ಕಟ್ಟಡಗಳು ಹಾಗೂ ಕೃತಕ ಅರಣ್ಯದಲ್ಲಿನ ಪ್ರಾಣಿಗಳ ದರ್ಶನ, ಥಾಯ್ಲೆಂಡ್‌ನ ದ್ವೀಪಗಳು, ಕಡಲ ತೀರ ಹಾಗೂ ಪಟಾಯದ ವೇಶ್ಯಾವಾಟಿಕೆ... ವಿದೇಶ ಪ್ರವಾಸದ ಹಾದಿಯಲ್ಲಿ ಕಂಡ ಹಲವು ಸಂಗತಿಗಳನ್ನು ದಾಖಲಿಸುವ ಪ್ರಯತ್ನವನ್ನು ತೀರ್ಥಹಳ್ಳಿಯ ಕನ್ನಡ ಪ್ರಾಧ್ಯಾಪಕ ಜೆ.ಕೆ. ರಮೇಶ್ ಮಾಡಿದ್ದಾರೆ.
‘ಇಂಡಿಯಾದ ಹೊರಗೊಂದು ಹಣುಕು’ ಎಂಬ ಪ್ರವಾಸ ಕಥನದಲ್ಲಿ ತಾವು ಕಂಡಂತೆ ಹಲವು ದೇಶಗಳ ಸಾಂಸ್ಕೃತಿಕ, ಆಚಾರ, ವಿಚಾರ, ಆರ್ಥಿಕತೆ ಮತ್ತು ಸಾಮಾಜಿಕ ಪರಿಸ್ಥಿತಿಯನ್ನು ಕೃತಿಯಲ್ಲಿ ವಿವರಿಸಿದ್ದಾರೆ. ಪ್ಯಾಕೇಜ್ ಪ್ರವಾಸ ಯೋಜನೆಯಲ್ಲಿ ತೀರ್ಥಹಳ್ಳಿಯಿಂದ ಹೊರಟು ನಾಲ್ಕಾರು ದೇಶಗಳನ್ನು ಸುತ್ತಿದ ಇವರು, ಹೋಗಿ ಬರುವವರೆಗೂ ಇಂಚಿಂಚೂ ಸಂಗತಿಗಳನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ.
ಅಧ್ಯಾತ್ಮದ ಶಿಲ್ಪಕಲೆ, ವಿವಿಧ ದೇಶಗಳಲ್ಲಿರುವ ನೃತ್ಯ ಹಾಗೂ ಇತರ ಸಾಂಸ್ಕೃತಿಕ ಪರಂಪರೆಗಳ ವಿವರಣೆ, ಗಗನಚುಂಬಿ ಕಟ್ಟಡಗಳ ನಿರ್ಮಾಣದಂತಹ ವಿಸ್ಮಯಕಾರಿ ವಿಷಯಗಳ ಜತೆಗೆ, ಬಾಲಿಯ ಬಡ ರೈತನ ಮನೆಗೆ ನೀಡಿದ ಭೇಟಿಯವರೆಗೂ ತಾವು ಕಂಡ ಹೊಸ ದೃಷ್ಟಿಕೋನವನ್ನು ಲೇಖಕ ಈ ಕೃತಿಯಲ್ಲಿ ಹೇಳಿದ್ದಾರೆ. ಕಂಡಿದ್ದನ್ನು ಕಂಡಂತೆ ದಾಖಲಿಸದೇ, ಅದನ್ನು ಸಮಗ್ರ ದೃಷ್ಟಿಕೋನದಿಂದ ನೋಡಿ ಅದಕ್ಕೆ ಅಕ್ಷರ ರೂಪ ನೀಡಿದ್ದಾರೆ. ಹೀಗೆ ನೇಪಾಳ, ಶ್ರೀಲಂಕಾ, ಭೂತಾನ್ ರಾಷ್ಟ್ರಗಳ ಭಾಷೆ, ಭಾರತದೊಂದಿಗಿನ ನಂಟು ಇವರ ಈ ಕೃತಿಯಲ್ಲಿದೆ.
ಇಷ್ಟೇ ಏಕೆ, ವಿಮಾನದಲ್ಲಿ ಗಗನಸಖಿಯರು ನೀಡುವ ಸುರಕ್ಷತೆಯ ಮಾಹಿತಿಯನ್ನು ಪ್ರಾದೇಶಿಕ ಭಾಷೆಯಲ್ಲಿ ನೀಡಬೇಕೆಂಬ ಸರ್ಕಾರದ ಆದೇಶವಿದ್ದರೂ, ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ನೀಡಲಾಗುತ್ತಿದೆ. ಈ ಕುರಿತು ಆಕ್ಷೇಪಣೆ ಸಲ್ಲಿಸಲಾರದ ಕನ್ನಡಿಗರ ನಿರಭಿಮಾನದ ಕುರಿತೂ ಉಲ್ಲೇಖಿಸಿ, ಚುಚ್ಚಿದ್ದಾರೆ.
ಇಂಡಿಯಾದ ಹೊರಗೊಂದು ಹಣುಕು
ಲೇ: ಜಿ.ಕೆ. ರಮೇಶ
ಪ್ರ: ಗೀತಾಂಜಲಿ ಪುಸ್ತಕ ಪ್ರಕಾಶನ
ಸಂ: 94498 86390
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.