ADVERTISEMENT

ಪುಸ್ತಕ ವಿಮರ್ಶೆ: ಉಪಕರಣಗಳ ವಿಶಿಷ್ಟ ‘ವಿಶ್ವ’ದಲ್ಲೊಂದು ಸುತ್ತು

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2022, 19:30 IST
Last Updated 27 ಆಗಸ್ಟ್ 2022, 19:30 IST
ಉಪಕರಣ ವಿಶ್ವಕೋಶ
ಉಪಕರಣ ವಿಶ್ವಕೋಶ   

ಜಾನಪದ ಜಗತ್ತಿನ ವಿಸ್ತಾರ ನಿಲುಕದ್ದು. ಆ ಜಗತ್ತಿನಲ್ಲಿರುವ ಶಬ್ದಭಂಡಾರವೂ ಅಷ್ಟೇ ವಿಸ್ತಾರ. ಈ ಜಗತ್ತಿನೊಳಗೆ ಇಳಿದು ಮೂವತ್ತು ವರ್ಷ ಕ್ಷೇತ್ರಕಾರ್ಯ ಮಾಡುತ್ತಾ ಲೇಖಕರು ಓದುಗರ ಎದುರಿಗಿಟ್ಟಿರುವ ಕೃತಿ ‘ಉಪಕರಣ ವಿಶ್ವಕೋಶ’.

ಇದು ಜನಪದ ಉಪಕರಣಗಳ ಜಗತ್ತು. ಇದು ರತ್ನಕೋಶವಷ್ಟೇ ಅಲ್ಲ. ಇದರೊಳಗೆ ಇಂದು ಅಪರೂಪವಾಗಿ ಬಳಸುವ ಅಥವಾ ನೆನಪಿಸಿಕೊಳ್ಳುವ ಉಪಕರಣಗಳ ವಿವರಣೆ ಇದೆ. ವಿವರಣೆಯೊಂದಿಗೆ ಅದರ ಹಿನ್ನೆಲೆ, ಎಲ್ಲೆಲ್ಲಿ ಈ ಉಪಕರಣಗಳನ್ನು ಉಲ್ಲೇಖಿಸಲಾಗಿದೆ? ಇವುಗಳ ಬಳಕೆ ಹೇಗೆ? ಯಾರು ಬಳಸುತ್ತಾರೆ ಎನ್ನುವ ಮಾಹಿತಿಯನ್ನೂ ಇದು ಒಳಗೊಂಡಿದೆ. ಉದಾಹರಣೆಗೆ ‘ಅಂಕುಶ’ ಎಂಬ ಆಯುಧದ ವಿವರಣೆಯಲ್ಲಿ ಮಧುಗಿರಿ ತಾಲ್ಲೂಕಿನ ಶ್ರವಣಗುಡಿಯಲ್ಲಿರುವ ಒಂದು ವೀರಗಲ್ಲನ್ನು ಲೇಖಕರು ಇಲ್ಲಿ ಉಲ್ಲೇಖಿಸಿ ವಿವರಿಸುತ್ತಾರೆ. ಅದರಲ್ಲಿ ಕೆತ್ತಲಾಗಿರುವ ಅಂಕುಶವನ್ನು ಸೂಕ್ಷ್ಮವಾಗಿ ಗಮನಿಸಿರುವುದು ಲೇಖಕರ ಕ್ಷೇತ್ರಕಾರ್ಯದ ವ್ಯಾಪ್ತಿಗೆ ಸಾಕ್ಷಿ.

ಉಪಕರಣಗಳು ಗಾದೆ ಮಾತು, ಕೀರ್ತನೆ, ಕಿನ್ನರಿ, ಪೌರಾಣಿಕ ಕಥೆ, ಘಟನೆಗಳಲ್ಲಿ ಉಲ್ಲೇಖಿಸಲ್ಪಟ್ಟ ವಿವರಣೆಯನ್ನೂ ಇಲ್ಲಿ ಲೇಖಕರು ದಾಖಲಿಸಿದ್ದಾರೆ.895 ಉಪಕರಣಗಳನ್ನು ಅಕ್ಷರಮಾಲೆಗನುಗುಣವಾಗಿ ನೀಡಲಾಗಿದೆ. ಉಪಕರಣಗಳ ಛಾಯಾಚಿತ್ರ ಅಥವಾ ರೇಖಾಚಿತ್ರಗಳಿದ್ದರೆ ಓದುಗನಿಗೆ ತಕ್ಷಣದಲ್ಲೇ ಅವುಗಳನ್ನು ಗುರುತಿಸಲು ಸಹಕಾರಿಯಾಗುತ್ತಿತ್ತು. ಇವು ಇಲ್ಲದೇ ಇರುವುದಕ್ಕೆ ಪುಟಮಿತಿ ಮತ್ತು ವೆಚ್ಚಮಿತಿಯ ಕಾರಣವನ್ನು ಲೇಖಕರು ನೀಡಿದ್ದಾರೆ.

ADVERTISEMENT

ಕೃತಿ: ಉಪಕರಣ ವಿಶ್ವಕೋಶ

ಲೇ: ಡಾ.ಎನ್‌.ಎನ್‌.ಚಿಕ್ಕಮಾದು

ಪ್ರ: ಕರ್ನಾಟಕ ಸಾಹಿತ್ಯ ಅಕಾಡೆಮಿ

ಸಂ: 080–22211730

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.