ADVERTISEMENT

ಮೊದಲ ಓದು: ‘ಕುವೆಂಪು ಪ್ರತಿಷ್ಠಾನ’ ಕಟ್ಟಿದ ಹಾದಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2022, 19:30 IST
Last Updated 1 ಅಕ್ಟೋಬರ್ 2022, 19:30 IST
ಕಟ್ಟುವ ಹಾದಿಯಲ್ಲಿ...
ಕಟ್ಟುವ ಹಾದಿಯಲ್ಲಿ...   

ಮನೇ ಮನೇ ಮುದ್ದು ಮನೇ

ಮನೇ ಮನೇ ನನ್ನ ಮನೇ!

ನಾನು ನುಡಿಯ ಕಲಿತ ಮನೆ,

ADVERTISEMENT

ನಾನು ನಡಿಗೆಯರಿತ ಮನೆ:

ಹಕ್ಕಿ ಬಳಗ ಸುತ್ತ ಕೂಡಿ

ಬೈಗು ಬೆಳಗು ಹಾಡಿ ಹಾಡಿ

ಮಲೆಯನಾಡ ಸಗ್ಗ ಮಾಡಿ

ನಲಿಸುತ್ತಿದ್ದ ನನ್ನ ಮನೆ!

–ಕುವೆಂಪು

ಮನೆಯ ಸುತ್ತ ಅದೆಷ್ಟು ನೆನಪುಗಳು. ಕುಪ್ಪಳಿ ಮನೆ ಮತ್ತು ಅದರ ಸುತ್ತಮುತ್ತಲಿನ ಪರಿಸರದ ಕುರಿತು ಸಾಕಷ್ಟು ವಿವರಗಳನ್ನು ತಮ್ಮ ಅನೇಕ ಸಾಹಿತ್ಯದಲ್ಲಿಕುವೆಂಪು ಅವರು ಉಲ್ಲೇಖಿಸಿದ್ದರು. ಈ ಮನೆ ಕವಿಮನೆಯಾಗಿ ಜೊತೆಗೆ ಕುವೆಂಪು ಪ್ರತಿಷ್ಠಾನ ಬೆಳೆದ ಹೆಜ್ಜೆಗಳೇ ‘ಕಟ್ಟುವ ಹಾದಿಯಲ್ಲಿ...’

ಲೇಖಕ ಕಡಿದಾಳ್‌ ಪ್ರಕಾಶ್‌ ಅವರ ಚೊಚ್ಚಲ ಕೃತಿ ಇದು. ಪ್ರಕಾಶ್‌ ಅವರು ಕುವೆಂಪು ಅವರ ಒಡನಾಡಿಯಾಗಿರಲಿಲ್ಲ. ಆದರೆ ಬಾಲ್ಯದಲ್ಲಿ ಕುವೆಂಪು ಅವರನ್ನು ನೋಡಿದ ನೆನಪಿನಿಂದಲೇ ಮೊದಲ ಅಧ್ಯಾಯವನ್ನು ಆರಂಭಿಸುತ್ತಾರೆ ಪ್ರಕಾಶ್‌. ಕುವೆಂಪು ಪ್ರತಿಷ್ಠಾನ ಎನ್ನುವುದು ಒಂದೆರಡು ದಿನಗಳಲ್ಲಿ ಹುಟ್ಟಿ ಚಿಗುರಿದ್ದಲ್ಲ. ಅದರ ಹಿಂದೆ ನೆನಪುಗಳ ಸರಮಾಲೆಯೇ ಇದೆ. ಈ ಘಟನಾವಳಿಗಳನ್ನು 28 ಅಧ್ಯಾಯಗಳಲ್ಲಿ ಕಟ್ಟಿಕೊಟ್ಟಿದ್ದಾರೆ ಲೇಖಕರು. ಪ್ರತಿಯೊಂದು ಅಧ್ಯಾಯಕ್ಕೂ ಒಪ್ಪುವ ಕುವೆಂಪು ಅವರ ಕವಿತೆಯ ಸಾಲು ಓದಿಗೆ ವೇದಿಕೆ.

‘ಕುಪ್ಪಳ್ಳಿಯಲ್ಲಿ ಕವಿಯ ಅಂತ್ಯಸಂಸ್ಕಾರ’ ಎಂಬ ಅಧ್ಯಾಯ ರಾಷ್ಟ್ರಕವಿಯ ಅಂತಿಮಯಾತ್ರೆಯ ಕ್ಷಣಕ್ಷಣದ ವಿವರಣೆ. ಅಂತ್ಯಸಂಸ್ಕಾರಕ್ಕೆ ಶಿವಮೊಗ್ಗದ ಅರಣ್ಯ ಇಲಾಖೆ ಒಂದು ಲಾರಿಯಲ್ಲಿ ಗಂಧದ ತುಂಡುಗಳನ್ನು ತುಂಬಿಸಿ ತಂದ ಘಟನೆ, ಪಾರ್ಥಿವ ಶರೀರ ಕುಪ್ಪಳಿ ಮನೆ ತಲುಪುವ ಐದು ನಿಮಿಷದ ಹಿಂದೆ ದೊಡ್ಡ ಹುಲಿಯೊಂದು ಕವಿಮನೆ ಮುಂಭಾಗದಲ್ಲಿ ರಸ್ತೆ ದಾಟಿದ ಘಟನೆ, ‘ಮನೇ ಮನೇ ನನ್ನ ಮನೇ’ ಎಂಬ ಪದ್ಯ ಕಣ್ಣೀರಾಗಿ ಹರಿದ ವಿವರಣೆ ಮನಸ್ಸು ತಟ್ಟುತ್ತದೆ. ಪ್ರತಿ ಅಧ್ಯಾಯ ಮುಗಿಸುತ್ತಿದ್ದಂತೆಯೇ ಕವಿಮನೆಯ ಸುತ್ತೊಂದು ಪ್ರದಕ್ಷಿಣೆ ಹಾಕಿಬಂದ ಅನುಭವ.

ಓದಿಗೆ ಪೂರಕವಾಗಿ ಛಾಯಾಚಿತ್ರಗಳು ಘಟನಾವಳಿಗಳನ್ನು ಕಣ್ಮುಂದೆ ತಂದು ನಿಲ್ಲಿಸಿವೆ. ಇದಕ್ಕೆ ಉತ್ತಮ ಉದಾಹರಣೆ ಕವಿಶೈಲ ಸ್ಮಾರಕದ ನಿರ್ಮಾಣ. ಅಲ್ಲಿನ ಪ್ರತಿಯೊಂದು ಕಲ್ಲಿನ ದಿಮ್ಮಿಗಳ ಹಿಂದೆ ರೋಚಕ ಕಥೆಯಿದೆ. ಅದೆಲ್ಲವೂ ಈ ಕೃತಿಯಲ್ಲಿ ಅಡಗಿದೆ. ಪ್ರತಿಷ್ಠಾನ ನಡೆದು ಬಂದ ದಾರಿಯ ಸಿಂಹಾವಲೋಕನದ ಈ ಕೃತಿ ತನ್ನ ಅನನ್ಯ ವಿವರಣೆಗಳಿಂದ ಸ್ಮರಣೆಯಲ್ಲಿ ಅಚ್ಚಳಿಯದೆ ಉಳಿಯುತ್ತದೆ.

ಕೃತಿ: ಕಟ್ಟುವ ಹಾದಿಯಲ್ಲಿ...

ಕುವೆಂಪು ಪ್ರತಿಷ್ಠಾನ: ಉಗಮ–ವಿಕಾಸ

ಲೇ: ಕಡಿದಾಳ್‌ ಪ್ರಕಾಶ್‌

ಪ್ರ: ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳಿ

ಸಂ: 9019063692

ಪುಟ: 288

ದರ: 500

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.