ADVERTISEMENT

ಅಂತರ್ಮುಖಿ ಕೀಟ್ಸ್‌ನ ಅಂತರಂಗ

​ಪ್ರಜಾವಾಣಿ ವಾರ್ತೆ
Published 1 ಜೂನ್ 2019, 19:30 IST
Last Updated 1 ಜೂನ್ 2019, 19:30 IST
RAGAM
RAGAM   

ಪುಸ್ತಕ: ಜಾನ್ ಕೀಟ್ಸ್ - ನೀರ ಮೇಲೆ ನೆನಪ ಬರೆದು
ಲೇಖಕ: ಡಾ. ರಾಜಶೇಕರ ಮಠಪತಿ (ರಾಗಂ)
ಬೆಲೆ: 145
ಪ್ರಕಾಶಕರು: ಕಣ್ವ ಪ್ರಕಾಶನ
​ಪುಟಗಳು: 208

**

ಇಂಗ್ಲಿಷ್‌ ಸಾಹಿತ್ಯದ ವಿದ್ಯಾರ್ಥಿ ದಿಸೆಯಿಂದಲೂ ಬೈರನ್‌, ಶೆಲ್ಲಿ, ಕೀಟ್ಸ್‌ನಂತಹ ಮಹಾಕವಿಗಳ ಬಗ್ಗೆ ತೀರದ ಕುತೂಹಲ ಬೆಳೆಸಿಕೊಂಡವರು ರಾಜಶೇಖರ ಮಠಪತಿ (ರಾಗಂ). ಕಳೆದ ಎರಡು ದಶಕಗಳ ಉಪನ್ಯಾಸ ವೃತ್ತಿಯಲ್ಲಿ ಕೀಟ್ಸ್‌ ಬಗ್ಗೆ ಓದಿದ್ದು, ಹುಡುಕಿದ್ದು, ತಿಳಿದುಕೊಂಡಿದ್ದು, ಅರ್ಥೈಸಿಕೊಂಡಿದ್ದು, ಪಾಠ ಮಾಡಿದ್ದು ಎಲ್ಲವನ್ನು ಒಂದೆಡೆ ಕಲೆ ಹಾಕಿ ‘ಜಾನ್ ಕೀಟ್ಸ್ - ನೀರ ಮೇಲೆ ನೆನಪ ಬರೆದು’ ಪುಸ್ತಕ ರೂಪಿಸಿದ್ದಾರೆ.

ADVERTISEMENT

ಕೀಟ್ಸ್‌ ಬಗ್ಗೆ ಇತಿಹಾಸದುದ್ದಕ್ಕೂ ಉಳಿದು ಬಂದ ಅನುಮಾನ–ಗೊಂದಲಗಳನ್ನು ಇಲ್ಲಿ ತಿಳಿಗೊಳಿಸುವ ಪ್ರಯತ್ನ ಮಾಡಿದ್ದಾರೆ. ಕೀಟ್ಸ್‌ ತನ್ನ ಗೆಳೆಯರಿಗೆ, ಪ್ರಿಯತಮೆಗೆ, ಸಹೋದರರಿಗೆ ಬರೆದ ಪತ್ರಗಳನ್ನೆಲ್ಲ ಸೇರಿಸಿ ಅದಕ್ಕೊಂದು ರೂಪ ಕೊಟ್ಟಿದ್ದಾರೆ. ಕೀಟ್ಸ್‌ನ ಕಾವ್ಯದ ಹಸಿವು, ಸ್ವಭಾವ, ಕುಟುಂಬದ ವಿವರಗಳನ್ನು ಕೊಡುತ್ತ ಪತ್ರಗಳ ಜಗತ್ತನ್ನು ಬಿಚ್ಚುತ್ತಾರೆ. ಅವನ ಪತ್ರಗಳಲ್ಲಿ ವ್ಯಕ್ತವಾಗುವ ಹತಾಶೆ, ಬೇಸರ, ನೋವು, ಸಂಕಟಗಳು ಓದುಗನನ್ನು ಕಾವ್ಯಕ್ಕಿಂತಲೂ ತೀವ್ರವಾಗಿ ತಟ್ಟುತ್ತವೆ.

ಸಾಂದ್ರ ಬರವಣಿಗೆಯಿಂದ ಹೆಸರಾದ ಕೀಟ್ಸ್‌ನನ್ನು ಕನ್ನಡದಲ್ಲಿ ಕಟ್ಟಿಕೊಡುವುದೆಂದರೆ ಸುಲಭವೇನಲ್ಲ. ಈ ಮಹಾಕವಿಯ ಭಾವಯಾನವನ್ನು ಬಹಳ ನಾಜೂಕಾಗಿ ಕನ್ನಡಕ್ಕೆ ತಂದಿದ್ದಾರೆ ರಾಗಂ.

ಟಿ.ಬಿ.ರೋಗದ ರೂಪದಲ್ಲಿ ಸದಾ ಸಾವನ್ನು ಹೊತ್ತು ತಿರುಗುತ್ತಿದ್ದ ಜಾನ್ ಕೀಟ್ಸ್ ಬರೆದಿದ್ದೆಲ್ಲಾ ಕಾವ್ಯವೇ. ಅಂತೆಯೇ ಅವನ ಪತ್ರಗಳೂ ಬಿಡಿಬಿಡಿ ಕಾವ್ಯದಂತೆ ಭಾಸವಾಗುತ್ತವೆ. ಕೀಟ್ಸ್‌ನ ಬರಹವನ್ನು ಗದ್ಯ-ಪದ್ಯ ಎಂದು ಸೀಳಲಾಗದು. ಹೀಗಾಗಿಯೇ ಕವಿತೆ ಕಾಣದ ಒಂದೇ ಒಂದು ಸಾಲು ಅವನ ಪತ್ರಗಳಲಿಲ್ಲ. ಅಖಂಡವಾದ ಕಾವ್ಯಧರ್ಮಕ್ಕೆ ಒಂದು ಅದ್ಭುತ, ಶಾಶ್ವತ ನಿದರ್ಶನ ಕೀಟ್ಸ್.

ಪ್ರೀತಿ ಮತ್ತು ಕಾವ್ಯ ಆತನ ಬಹುದೊಡ್ಡ ವ್ಯಸನಗಳಾಗಿದ್ದವು. ಸಮಕಾಲೀನ ವಿಮರ್ಶಕರಿಂದ ’ಚಿಲ್ಲರೆ ಕವಿ’ ಎಂದೇ ಪರಿಗಣಿತನಾದ ಕೀಟ್ಸ್‌ನಿಗೆ ಪ್ರೀತಿಯೊಂದೇ ಸ್ಪೂರ್ತಿಯಾಗಿತ್ತು. ಅಂತರ್ಮುಖಿಯಾಗಿ, ಶಾರೀರಿಕವಾಗಿ ಕೃಷವಾಗಿ, ಮಿತಭಾಷಿಯಾಗಿದ್ದ ಕೀಟ್ಸ್‌ನನ್ನು ಸಮಕಾಲೀನ ವಿಮರ್ಶೆಯೇ ಕೊಂದು ಹಾಕಿತೆಂದು ಕೆಲವರ ನಂಬಿಕೆ.

ಈ ಕೃತಿಯಲ್ಲಿ ಅವನ ಪತ್ರಗಳ ನಿರೂಪಣೆಯೊಂದಿಗೆ ಅಲ್ಲಲ್ಲಿ ಅವನ ಕವಿತೆಗಳ ಭಾಷಾಂತರಗಳೂ ದೊರೆಯುತ್ತವೆ. ಇಲ್ಲಿನ 21 ಅಧ್ಯಾಯಗಳಲ್ಲಿ ಬಿಚ್ಚಿಕೊಂಡ ಅವನ ಕೊನೆಯ ದಿನಗಳ ಸಂಕಟ, ತಾಕಲಾಟಗಳು, ಜೀವನವನ್ನು ಗೌರವಿಸುವ, ಪ್ರೀತಿಸುವ ಅವನ ನುಡಿಗಳು ಬೆರಗು ಹುಟ್ಟಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.