ADVERTISEMENT

‘ಕೊಂದ ಕನಸುಗಳ ಕೇಸು’: ಅಂತಃಕರಣದ ಕನವರಿಕೆಗಳು

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2022, 19:30 IST
Last Updated 9 ಏಪ್ರಿಲ್ 2022, 19:30 IST
‘ಕೊಂದ ಕನಸುಗಳ ಕೇಸು’
‘ಕೊಂದ ಕನಸುಗಳ ಕೇಸು’   

ಮುಮ್ತಾಜ್ ಬೇಗಂ ಗಂಗಾವತಿಯವರು. ವೃತ್ತಿಯಿಂದ ಸಹಾಯಕ ಪ್ರಾಧ್ಯಾಪಕಿ. 2016ರಲ್ಲಿ ‘ಕಬಂಧ ಬಾಹುಗಳು ಬೇಕಿಲ್ಲ’ ಕವನ ಸಂಕಲನ ಪ್ರಕಟಿಸಿದ್ದ ಅವರು, ಆರು ವರ್ಷಗಳ ನಂತರ ತಮ್ಮ ಎರಡನೇ ಸಂಕಲನ ‘ಕೊಂದ ಕನಸುಗಳ ಕೇಸು’ ಹೊರತಂದಿದ್ದಾರೆ. ಸಮಕಾಲೀನ ವಿದ್ಯಮಾನಗಳಿಗೆ ಸೂಕ್ಷ್ಮ ಮನಸ್ಸೊಂದರ ಪ್ರತಿಕ್ರಿಯೆಯ ರೂಪದಲ್ಲಿ ಈ ಸಂಕಲನದ ಕವಿತೆಗಳು ಮುಖ್ಯವೆನ್ನಿಸುತ್ತವೆ.

ಮಾತಿನ ಧ್ವನಿಶಕ್ತಿಯ ಮೇಲೆ ಅಬ್ಬರ ಮೇಲುಗೈ ಸಾಧಿಸಿರುವ ಸಂದರ್ಭದಲ್ಲಿ, ಕವಿ ಕೊಂಚ ಮಾತಾಳಿಯಾಗುವುದು ಅನಿವಾರ್ಯ ಎನ್ನಿಸುವಂತೆ ಮುಮ್ತಾಜ್‌ರ ಕವಿತೆಗಳಿವೆ. ಕಾವ್ಯದ ಧ್ವನಿ–ಲಯದ ಬಗ್ಗೆ ಅರಿವಿದ್ದೂ, ಪರಿಣಾಮದ ಬಗ್ಗೆಯೇ ಕವಯಿತ್ರಿ ಹೆಚ್ಚು ಆಸಕ್ತರು. ಅದರ ಫಲವಾಗಿಯೇ ಇಲ್ಲಿನ ಬಹುತೇಕ ರಚನೆಗಳು ಮುಕ್ತತೆಯನ್ನು ಹೆಚ್ಚು ನಂಬಿಕೊಂಡಿವೆ, ಆಶಯಪ್ರಧಾನವಾಗಿವೆ.

ಸಂಕಲನದ ಮೊದಲ ಕವಿತೆ, ‘ನಾ ಬುರ್ಖಾ ತೆಗೆದು ಬರುವೆ’ ಗಮನಿಸಿ. ಬುರ್ಖಾ ಮತ್ತು ಮುಸುಕು ತೆಗೆದು ಹೊರಗೆ ಬಂದಾಗ – ಗುಡಿಯ ಗಂಟೆ, ಚರ್ಚಿನ ಪ್ರಾರ್ಥನೆ ಹಾಗೂ ಮಸೀದಿಯ ಆಜಾನ್‌ಗಳು ಧ್ವನಿಸಿ, ಹೊಸದೊಂದು ರಾಗ ಹೊರಹೊಮ್ಮಲಿ ಎನ್ನುತ್ತದೆ ಕವಿತೆ. ‘ಮಂದಿರದ ಮೇಲೆ ನಲಿವ / ಹಕ್ಕಿಗಳು ಮಸೀದಿಯ ಮಿನಾರಿನಲಿ / ಗೂಡು ಕಟ್ಟಲಿ / ಹಕ್ಕಿಗಳಿಗೆ ಮಕ್ಕಳು ಹುಟ್ಟಿ / ಮಂದಿರ ಮಸೀದಿ ಒಡೆವ / ಜನಕೆ ಶಾಂತಿ ಸಾರಲಿ’ – ವಿಶ್ಲೇಷಣೆಯ ಹಂಗಿಲ್ಲದ, ಮನಸ್ಸನ್ನು ಆರ್ದ್ರಗೊಳಿಸುವ ಇಂಥ ಸಾಲುಗಳು ಸಂಕಲನದಲ್ಲಿ ಸಾಕಷ್ಟಿವೆ. ಇದೇ ಪದ್ಯದ ಜೊತೆಗೆ ಓದಿಕೊಳ್ಳಬಹುದಾದ ‘ಎಲ್ಲಿದ್ದಾನೆ...!’ ಕವಿತೆಯ – ‘ಆಸ್ಪತ್ರೆಯ ಗೋಡೆಗಳು / ಆಲಿಸಿದಷ್ಟು ಪ್ರಾರ್ಥನೆಯನು / ಚರ್ಚಿನಲಿ ಕುಳಿತ ಯೇಸು ಕ್ರಿಸ್ತ / ಆಲಿಸಿರಲಾರ’ ಎನ್ನುವ ಸಾಲು, ಈ ಜಗತ್ತಿಗೆ ಬೇಕಾದುದೇನು ಎನ್ನುವುದನ್ನು ಸೂಚಿಸುವಂತಿದೆ. ಆ ದೇವರು ನಮಗೆ ಬರುವುದಾದರೆ ಮನುಷ್ಯನಾಗಿಯೇ ಬರಲಿ, ಮನುಷ್ಯತ್ವ ಸಾಯದಂತೆ ಜೀವಂತವಾಗಿಡಲಿ ಎನ್ನುವ ಸಾಲುಗಳು ಸಂಕಲನದ ಒಟ್ಟಾರೆ ಆಶಯವೂ ಹೌದು.

ADVERTISEMENT

‘ನಿನ್ನ ಸುತ್ತಲಿನವರು’ ಕವಿತೆ, ಸಮಾಜದ ರಾಡಿಯಲ್ಲಿ ಮನುಷ್ಯತ್ವ ಉಸಿರುಗಟ್ಟುತ್ತಿರುವುದನ್ನು ಸೂಚಿಸುತ್ತದೆ. ‘ನಮ್ಮನ್ನು ಬೆಂಕಿಯ ಮುಂದೆ ನಿಲ್ಲಿಸಿ / ಒಮ್ಮೊಮ್ಮೆ ಬೆಂಕಿಯಲಿ / ಮಲಗಿಸಿ ಸಾರ್ಥಕತೆ ಪಡೆದವರು’ ಎನ್ನುವ ಸಾಲು, ಹೆಣ್ಣನ್ನು ಸಮಾಜ ನಡೆಸಿಕೊಂಡು ಬಂದಿರುವ ಕಥನವಾಗಿರುವಂತೆಯೇ ವರ್ತಮಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಅನುಭವಿಸುತ್ತಿರುವ ತಲ್ಲಣವೂ ಆಗಿದೆ. ‘ಸುರಯ್ಯ, ಕೌಸರ್‌, ಹಸೀನಾ, ಮಲಾಲ, ಸುಹಾನರನು ತಾಗಿದ ಕಲ್ಲು, ಭರ್ಚಿ, ಆಸಿಡ್‌, ಬಾಂಬುಗಳ ವಿರುದ್ಧ ಸಾರಬೇಕಿದೆ ಸಮರ’ ಎನ್ನುವ ‘ಗೋರಿಯೊಳಗಿನ ಮಾತು’, ಎಲ್ಲ ವ್ಯಾಧಿಗಳಿಗೆ ಸಂವಿಧಾನವೇ ಮದ್ದೆನ್ನುವ ‘ಕೋಮು ವ್ಯಾಧಿ’, ಮತ್ತೆ ಮತ್ತೆ ಅಸ್ತಿತ್ವಕ್ಕೆ ಎದುರಾಗುವ ಪ್ರಶ್ನೆಗಳು ಉಂಟುಮಾಡುವ ತಳಮಳಗಳ ಕುರಿತಾದ ‘ಪೌರತ್ವ’ – ಇವೆಲ್ಲವೂ ಸಮಕಾಲೀನ ಬಿಕ್ಕಟ್ಟುಗಳ ಹಾಡುಪಾಡುಗಳಾಗಿವೆ.

ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಪ್ರಯತ್ನಗಳು ಬಿರುಸಿನಿಂದ ನಡೆಯುತ್ತಿರುವ ವರ್ತಮಾನದಲ್ಲಿ, ಅಂತಃಕರಣಕ್ಕೂ ಮಿಗಿಲಾದ ಧರ್ಮ ಮತ್ತೊಂದಿಲ್ಲ ಎನ್ನುವುದನ್ನು ಇಲ್ಲಿನ ಕವಿತೆಗಳು ಹೇಳುತ್ತಿರುವಂತಿದೆ.

ಸಾಮಾಜಿಕ ಅಭಿವ್ಯಕ್ತಿಯಂತೆಯೇ ಖಾಸಗಿ ತವಕತಲ್ಲಣಗಳನ್ನೂ ಇಲ್ಲಿನ ಕವಿತೆಗಳಲ್ಲಿ ಗುರ್ತಿಸಬಹುದು. ನೆರಿಗೆ ಲಂಗದ ಹುಡುಗಿ, ನಂತರದ ವರ್ಷಗಳಲ್ಲಿ ನಡೆಸಿದ ಪ್ರೀತಿ ಮತ್ತು ಮಾನವೀಯತೆಯ ಹುಡುಕಾಟದ ಕವಿತೆಗಳು ಆಪ್ತವಾಗಿವೆ. ‘ಬಾಹುಬಂಧನವು ಸಾವಿರ ಬಿಡುಗಡೆಯ ಆರಂಭವು’ ಎನ್ನುವ ಮಾತು, ಪ್ರೀತಿಯ ಮಾಂತ್ರಿಕತೆಯನ್ನು ಸೂಚಿಸುವಂತೆಯೇ ಕಾವ್ಯದ ಕುರಿತ ನೆಚ್ಚುಗೆಯೂ ಆಗಿದೆ. ಬಿಡುಗಡೆಯ ಹಲವು ಸಾಧ್ಯತೆಗಳನ್ನು ಒಳಗೊಂಡಿರುವ ಕಾರಣದಿಂದಾಗಿ ಈ ಕವನ ಸಂಕಲನ ಮುಖ್ಯವೆನ್ನಿಸುತ್ತದೆ.

ಕರಡು ತಿದ್ದುವುದರ ಬಗ್ಗೆ ಕನ್ನಡ ಪುಸ್ತಕೋದ್ಯಮಕ್ಕಿರುವ ಉದಾಸೀನ ‘ಕೊಂದ ಕನಸುಗಳ ಕೇಸು’ ಸಂಕಲನದಲ್ಲೂ ಇಣುಕಿದೆ. ಸಂಕಲನದುದ್ದಕ್ಕೂ ಉಳಿದುಕೊಂಡಿರುವ ಕಾಗುಣಿತ ದೋಷಗಳು ಓದಿನ ರುಚಿ ಕೆಡಿಸುವಂತಿವೆ.

ಕೃತಿ: ಕೊಂದ ಕನಸುಗಳ ಕೇಸು
ಲೇ: ಡಾ. ಮುಮ್ತಾಜ್ ಬೇಗಂ
ಪು: 104; ಬೆ: ರೂ. 100
ಪ್ರ: ಜೀವನ ಪ್ರಕಾಶನ, ಗಂಗಾವತಿ

ಸಂ: 9986666075

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.