ADVERTISEMENT

ಸಾಹಿತ್ಯದ ಅನನ್ಯ, ವೈವಿಧ್ಯಮಯ ಚಿಂತನೆ

​ಪ್ರಜಾವಾಣಿ ವಾರ್ತೆ
Published 25 ಮೇ 2019, 19:30 IST
Last Updated 25 ಮೇ 2019, 19:30 IST
ಕನ್ನಡ ಸಾಹಿತ್ಯ
ಕನ್ನಡ ಸಾಹಿತ್ಯ   

ಬೆಳಗಾವಿ ಜಿಲ್ಲೆ ಅಥಣಿಯ ಶ್ರೀ ಶಿವಯೋಗಿ ಮುರುಘೇಂದ್ರ ಸ್ವಾಮೀಜಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಎಚ್.ಎಂ.ಚನ್ನಪ್ಪಗೋಳಅವರು ಅಧ್ಯಾಪನದೊಂದಿಗೆ ಅಧ್ಯಯನ-ಚಿಂತನೆಯಲ್ಲಿ ತೊಡಗಿಕೊಂಡಿರುವುದಕ್ಕೆ ಸಾಕ್ಷಿ ಈ ಕೃತಿ. ಇಲ್ಲಿರುವ 25 ಲೇಖನಗಳನ್ನು ಚಿಂತನ ಮತ್ತು ಸಾಹಿತ್ಯ ವಿಮರ್ಶೆ ಎಂದು ಎರಡಾಗಿ ವಿಂಗಡಿಸಬಹುದು. ಹೆಚ್ಚಿನ ಪಾಲು ವಿಮರ್ಶೆಗೆ ಮೀಸಲಾಗಿದೆ. ವಿಮರ್ಶಾ ಲೇಖನಗಳು ಹಳಗನ್ನಡ, ವಚನ, ತ್ರಿಪದಿ ಮತ್ತು ಆಧುನಿಕ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದವು.

ತುಂಬ ದೀರ್ಘವಲ್ಲದ ಇಲ್ಲಿನ ಬಿಡಿ ಲೇಖನಗಳನ್ನು ಒಂದೇ ಓದಿಗೆ ಮುಗಿಸಬಹುದಾಗಿದೆ. ವಿಷಯ ವೈವಿಧ್ಯತೆ ಇರುವುದರಿಂದ ಕೃತಿಯುದ್ದಕ್ಕೂ ಏಕತಾನತೆ ಅಡ್ಡಿಯಾಗುವುದಿಲ್ಲ. ಹಳೆಯ ಕನ್ನಡ ಸಾಹಿತ್ಯದಲ್ಲಿ ಬಳಕೆಯಾದ ಕೆಲವು ಪದಗಳು ಮತ್ತು ಅದರಲ್ಲಿ ಪ್ರತಿಪಾದಿಸಲಾದ ಮೌಲ್ಯಗಳು, ಸಾಹಿತ್ಯ ಪಂಥಗಳಲ್ಲಿನ ಪರಿಕಲ್ಪನೆಗಳು, ಬಳಕೆಯಾದ ಭಾಷೆ, ವೈಚಾರಿಕ ಪ್ರಜ್ಞೆ ಮುಂತಾದ ವಿಷಯಗಳು ಇಲ್ಲಿವೆ. ಹೀಗಾಗಿ ಸಾಹಿತ್ಯಾಸಕ್ತರಿಗೆ ಹೃದ್ಯವೂ ಸಾಹಿತ್ಯ ಅಧ್ಯಯನ ಮಾಡುವವರಿಗೆ ವಿಷಯ-ವಸ್ತುವುಳ್ಳದ್ದೂ ಆಗಿದೆ ಈ ಕೃತಿ.

ಪ್ರಾಚೀನ ಕಾಲದಲ್ಲಿ ಹಸುಗಳನ್ನು ಅಪಹರಿಸುವುದಕ್ಕೆ ಬಳಸುತ್ತಿದ್ದ ‘ತುರುಗೋಳ್’ ಎಂಬ ವೀರಮೌಲ್ಯ ಕನ್ನಡದ ಇಬ್ಬರು ಕವಿಗಳಾದ ಪಂಪ ಮತ್ತು ಕರ್ಣಪಾರ್ಯರ ಕಾಲದಲ್ಲಿ ಹೇಗೆ ಪರಿವರ್ತನೆಯಾಗಿದೆ ಎಂಬ ಲೇಖನ ಆಸಕ್ತಿದಾಯಕವಾಗಿದೆ. ಇದೇ ರೀತಿಯ ಮತ್ತೊಂದು ‘ಲಲಿತ’ ಲೇಖನ, ‘ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಚೋರ ವಿದ್ಯೆ’ ಎಂಬುದು. ಗದಾಯುದ್ಧ, ಧರ್ಮಾಮೃತ, ವಡ್ಡಾರಾಧನೆ ಮುಂತಾದ ಕೃತಿಗಳಲ್ಲಿ ಚೋರ ವಿದ್ಯೆಯ ವೈವಿಧ್ಯದ ವರ್ಣನೆ ಮತ್ತು ಕಳ್ಳತನದ ‘ಕಲೆ’ಗೆ ಸಂಬಂಧಿಸಿದ ನೈತಿಕತೆಯನ್ನು ಈ ಲೇಖನದಲ್ಲಿ ವಿಶ್ಲೇಷಿಸಲಾಗಿದೆ.

ADVERTISEMENT

ಅಪರಾಧ ಘಟನೆಗಳ ತನಿಖೆಯ ಸಂದರ್ಭದಲ್ಲಿ ಸಾಕ್ಷಿಗಳು ಸಿಗದಿದ್ದರೆ ‘ಭಗವಂತನ ತೀರ್ಪು’ ಎಂದು ಕರೆಯಲಾಗುವ ‘ದಿವ್ಯ’ವನ್ನು ಬಳಸುತ್ತಿದ್ದುದರ ಕುರಿತ ಲೇಖನ ಮಾಹಿತಿಯುಕ್ತವಾಗಿದೆ. ಆಫ್ರಿಕನ್ ಜನಾಂಗದವರು ಕೂಡ ಈ ಪದ್ಧತಿಯನ್ನು ಅನುಸರಿಸುತ್ತಿದ್ದರು ಎಂದು ಲೇಖಕರು ಉಲ್ಲೇಖಿಸುತ್ತಾರೆ. ಪುರಾಣ, ಕನ್ನಡ ಸಾಹಿತ್ಯ-ಸಂಶೋಧನೆಗಳಲ್ಲಿ ಬಳಕೆಯಾಗಿರುವ ವಿವಿಧ ‘ದಿವ್ಯ’ಗಳ ಮೇಲೆಯೂ ಲೇಖಕರು ಬೆಳಕು ಚೆಲ್ಲಿದ್ದಾರೆ.

ಕಳ್ಳ ಪದದ ಅರ್ಥ ವೈಶಾಲ್ಯದ ಕುರಿತು ಕೂಡ ಅಧ್ಯಯನ ನಡೆಸಿರುವ ಲೇಖಕರು ಈ ಪದದಲ್ಲೂ ವೈವಿಧ್ಯವನ್ನು ಕಂಡಿದ್ದಾರೆ. ‘ರೆ’ ವಿಚಾರದಿಂದಾಚೆ ಬಂದರೆ’ ಎಂಬ ಲೇಖನ ಮತ್ತು ‘ಜೀವಹಾನಿ (ಮರಣ): ವೈವಿಧ್ಯತೆ’ ಎಂಬ ಲೇಖನ ಸಾಮಾಜಿಕ ಚಿಂತನೆಯ ವಿಶಿಷ್ಟವಾದೊಂದು ಮಾದರಿಯಾಗಿದೆ.

ಹಳಗನ್ನಡ ಸಾಹಿತ್ಯದಲ್ಲಿ ಉಲ್ಲೇಖವಾಗಿರುವ ನ್ಯಾಯಾಂಗ ವ್ಯವಸ್ಥೆ, ಜೈನ-ಚಂಪೂ ಕಾವ್ಯಗಳಲ್ಲಿನ ನ್ಯಾಯ ಮತ್ತು ಶಿಕ್ಷಾ ಪದ್ಧತಿ, ವಚನ ಸಾಹಿತ್ಯದಲ್ಲಿ ಅನುಭಾವದ ಪರಿಕಲ್ಪನೆ, ದಲಿತ ಚಳವಳಿಯಲ್ಲಿ ಸಾಹಿತ್ಯ-ವೈಚಾರಿಕ ಪ್ರಜ್ಞೆ ಇತ್ಯಾದಿ ಲೇಖನಗಳೊಂದಿಗೆ ಭಾರತದಲ್ಲಿ ನೀರಾವರಿ ಅಭಿವೃದ್ಧಿ ಮತ್ತು ಸವಾಲುಗಳು, ಅಂಬೇಡ್ಕರರ ರಾಷ್ಟ್ರೀಯ ವಿಚಾರಧಾರೆಗಳು, ಸಂಕ್ರಮಣಾವಸ್ಥೆಯಲ್ಲಿರುವ ಹಳ್ಳಿಗಳು, ಬೆಲ್ಲದ ಗಾಣಗಳ ಸ್ಥಿತಿ-ಗತಿ, ಪ್ರಾದೇಶಿಕ ಭಾಷೆಗಳ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳು ಮತ್ತಿತರ ಲೇಖನಗಳ ಮೂಲಕ ಈ ಕೃತಿ ಸಾಹಿತ್ಯ-ಚಿಂತನ ಸಮೃದ್ಧವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.