ADVERTISEMENT

ಆದರ್ಶವಾದದ ರಮ್ಯ ಕಥನ

​ಪ್ರಜಾವಾಣಿ ವಾರ್ತೆ
Published 2 ಮೇ 2020, 19:30 IST
Last Updated 2 ಮೇ 2020, 19:30 IST
ಬುದ್ಧ
ಬುದ್ಧ   

ಪತ್ರಕರ್ತರಾಗಿ ಮತ್ತು ಹೋರಾಟಗಾರರಾಗಿ ಹೆಚ್ಚು ಗುರುತಿಸಲ್ಪಟ್ಟಿರುವ ಜಾಣಗೆರೆ ವೆಂಕಟರಾಮಯ್ಯ, ಬರೆದಿರುವ ಎಂಟನೇ ಕಾದಂಬರಿ ಇದು. ಅವರ ಈ ಹಿಂದಿನ ಕಾದಂಬರಿಗಳು ಸಾಹಿತ್ಯಲೋಕದಲ್ಲಿ ಹೆಚ್ಚಿನ ಚರ್ಚೆಗೆ ಒಳಗಾದಂತಿಲ್ಲ. ಹಾಗೆಂದು ಅವರು ಬರೆಯುವುದನ್ನು ನಿಲ್ಲಿಸಿಯೂ ಇಲ್ಲ. ಈಗಾಗಲೆ ಅವರ ಆರು ಕಥಾಸಂಕಲನಗಳೂ ಹೊರಬಂದಿವೆ. ಜೀವನಕಥನ, ಅಂಕಣ ಬರಹ, ಪ್ರವಾಸ ಕಥನ, ಚಿಂತನಶೀಲ ಬರಹಗಳು– ಹೀಗೆ ಅವರ ಬರವಣಿಗೆ ಸಾಗಿದೆ.

ಭಯೋತ್ಪಾದನೆಯ ಸಮಕಾಲೀನ ಸಂಗತಿಯನ್ನು ಇಟ್ಟುಕೊಂಡು ಹೆಣೆದ 52 ಅಧ್ಯಾಯಗಳುಳ್ಳ ಸುದೀರ್ಘ ಕಾದಂಬರಿ ಇದು. ಮೂರು ಹಂತಗಳಲ್ಲಿ ಕಾದಂಬರಿ ವಿಸ್ತರಿಸಿದೆ. ಬುದ್ಧ ಎಂಬ ಕಥಾನಾಯಕ ಹುಟ್ಟಿದ ಹಳೆಯೂರು, ಆ ಊರಿನ ಜಮೀನ್ದಾರಿ ಸಂಬಂಧಗಳು, ವರ್ಗ ಸಂಘರ್ಷದ ತಲ್ಲಣಗಳು ಮೊದಲ ಹಂತದಲ್ಲಿದ್ದರೆ, ಬೆಂಗಳೂರು–ಬಾಂಬೆ–ದುಬೈ ಈ ಊರುಗಳಲ್ಲಿ ಕಥಾನಾಯಕ ಬೆಳೆಯುವ ಪರಿ ಎರಡನೆಯದ್ದು. ಈ ಎರಡನೆಯ ಹಂತದಲ್ಲಿ ಭಯೋತ್ಪಾದಕರ ಸಿಟ್ಟಿಗೆ ಗುರಿಯಾಗಿ ಕಥಾನಾಯಕ ಕೊನೆಗೆ ತಪ್ಪಿಸಿಕೊಂಡು ಬರುವ ರಮ್ಯ ವಿವರಗಳಿವೆ. ಕೊನೆಯ ಹಂತದಲ್ಲಿ ಕಥೆ ಮತ್ತೆ ಗ್ರಾಮ್ಯಭಾರತಕ್ಕೆ ಬಂದು ಬೆಟ್ಟಸಾಲೂರಿನಲ್ಲಿ ಬೆಳೆಯುತ್ತದೆ. ಅಲ್ಲಿ ಬುದ್ಧ ತಾನು ಕನಸಿದ ಸಾಮರಸ್ಯದ ಸಮಾಜವನ್ನು ಹಿರಿಯ ಜೀವಿಗಳ ’ಕರುಣಾಧಾಮ‘ವನ್ನು ಕಟ್ಟುವ ಮೂಲಕ ಕಂಡುಕೊಳ್ಳುತ್ತಾನೆ. ಈ ಕಥಾ ವಿಸ್ತಾರದಲ್ಲಿ ನಮ್ಮ ಸಮಾಜದ ಈಗಲೂ ಕಾಣಿಸಿಕೊಳ್ಳುವ ಹಲವು ವೈವಿಧ್ಯಮಯ ಪಾತ್ರಗಳು ಜೀವ ತಳೆಯುತ್ತವೆ.

ಜಾಣಗೆರೆ ಅವರಿಗೆ ಸ್ವಾರಸ್ಯಕರವಾಗಿ ಕಥೆ ಬರೆಯುವ ಕಲೆ ಸಿದ್ಧಿಸಿದೆ. ಅದನ್ನು ಸಾಬೀತುಪಡಿಸುವಂತೆ ಇಲ್ಲಿ ಕಾದಂಬರಿಯ ಓಘವಿದೆ. ಪಾತ್ರಗಳನ್ನು ರೂಪಿಸುತ್ತಲೇ ಅವುಗಳ ಗುಣವೈವಿಧ್ಯಗಳನ್ನು ಬಿಚ್ಚಿಡುವ ಕಸುಬುಗಾರಿಕೆ ಗಮನಾರ್ಹ. ಆದರ್ಶ ಮತ್ತು ವಾಸ್ತವಗಳನ್ನು ಮುಖಾಮುಖಿಯಾಗಿಸುತ್ತಲೇ ಜಾಣಗೆರೆ ಅವರು ತಮ್ಮ ಸಾಮರಸ್ಯ ಸಮಾಜ ಕಟ್ಟುವ ಆಶಯಗಳನ್ನು ಈ ಪಾತ್ರಗಳ ಮೂಲಕ ಹೇಳುತ್ತಾ ಹೋಗುತ್ತಾರೆ. ಹಿರಿಯರಾದ ಮಲ್ಲೇಪುರಂ ಜಿ. ವೆಂಕಟೇಶ ಅವರ ಮುನ್ನುಡಿ ಇಡೀ ಕಾದಂಬರಿಯ ಓದಿಗೆ ಸೂಕ್ತ ಪ್ರವೇಶಿಕೆಯನ್ನು ಸಿದ್ಧಪಡಿಸಿದೆ.

ADVERTISEMENT

ಭಯೋತ್ಪಾದನೆಯ ಹಿಂದಿರುವ ಹಿಂಸಾತ್ಮಕ ನೆಲೆಗಳನ್ನು ಕಾದಂಬರಿಯ ಕೊನೆಯಲ್ಲಿ ತಾತ್ವಿಕತೆಯಾಗಿ ತರುವ ಜಾಣಗೆರೆ, ಬುದ್ಧನು ಬೋಧಿಸಿರುವ ಕಾರುಣ್ಯವೇ ಅಂತಿಮ ಸತ್ಯ ಎನ್ನುವುದನ್ನು ಗುರುತಿಸುತ್ತಾರೆ.ರಮ್ಯತೆಯೇ ಕಾದಂಬರಿಯ ಮೂಲಗುಣ. ಅಲ್ಲಲ್ಲಿ ಸೃಜನಶೀಲ ಕುಸುರಿಕೆಲಸವೂ ಗಮನ ಸೆಳೆಯುತ್ತದೆ.ಕಥಾನಾಯಕನಿಗೆ ಬುದ್ಧ ಎನ್ನುವ ಹೆಸರಿಡುವ ಮೂಲಕ ಕಾದಂಬರಿಯ ಆರಂಭದಲ್ಲೇ ತಮ್ಮ ಆಶಯಗಳನ್ನು ಪ್ರಕಟಿಸುವ ಕಥೆಗಾರ, ರಮ್ಯತೆಯನ್ನೇ ನಂಬಿಕೊಂಡು ಮುಂದುವರಿದಿದ್ದಾರೆ. ಹಾಗಿದ್ದೂ ಯಂಡಮೂರಿ ವೀರೇಂದ್ರನಾಥ ಮುಂತಾದವರ ಬರವಣಿಗೆಯ ರೋಚಕತೆಯ ಗುಣ ಇಲ್ಲಿ ನುಸುಳುವುದಿಲ್ಲ. ತಣ್ಣಗೆ, ಸಂಯಮದಿಂದ ಪಾತ್ರಗಳನ್ನು ನಿರೂಪಿಸುತ್ತಾ ಸಾಗುವ ವಿಭಿನ್ನ ಕಥನಹಾದಿಯಿದು. ಆದರೆ ಆದರ್ಶವಾದವೇ ಎಲ್ಲ ಪಾತ್ರಗಳನ್ನು ಆವರಿಸಿಕೊಳ್ಳುವ ನಿರೂಪಣೆಯಿಂದಾಗಿ, ಪಾತ್ರಗಳ ಮಧ್ಯೆ ಸೃಜನಶೀಲ ಬಿಕ್ಕಟ್ಟುಗಳನ್ನು ಉಂಟು ಮಾಡಿ ಓದುಗರಲ್ಲಿ ಹೊಸಹೊಳಹುಗಳನ್ನು ಮಿಂಚಿಸುವ ಕಲೆಗಾರಿಕೆಯಿಂದ ಲೇಖಕರು ವಂಚಿತರಾಗಿದ್ದಾರೆ. ಅದು ಅವರ ಶೈಲಿಯೂ ಅಲ್ಲ ಎನ್ನುವುದು ಮೊದಲೇ ಗೊತ್ತಾಗುವುದು ಈ ಕಾದಂಬರಿಯ ಮಿತಿಯೂ ಹೌದು.

ಮರಳಿ ಬಂದ ಬುದ್ಧ (ಕಾದಂಬರಿ)

ಪುಟ 440 ಬೆಲೆ ₹300

ಜಾಣಗೆರೆ ವೆಂಕಟರಾಮಯ್ಯ/

ಜಾಣಗೆರೆ ಪತ್ರಿಕೆ ಪ್ರಕಾಶನ,

ಬೆಂಗಳೂರು.

ದೂರವಾಣಿ: 080 23210444

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.