ADVERTISEMENT

ಒಳನೋಟ: ‘ಬಲಿಯುಗ’ದ ಕವಿತೆಗಳು

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2022, 19:30 IST
Last Updated 12 ಫೆಬ್ರುವರಿ 2022, 19:30 IST
ಎಸ್‌.ಜಿ. ಸಿದ್ಧರಾಮಯ್ಯ ಪದ್ಯಗಳು
ಎಸ್‌.ಜಿ. ಸಿದ್ಧರಾಮಯ್ಯ ಪದ್ಯಗಳು   

ನಾಲ್ಕು ದಶಕಗಳಿಗೂ ಹೆಚ್ಚಿನ ಕಾಲದಿಂದ ಕಾವ್ಯದ ಗಂಭೀರ ಅಭ್ಯಾಸದಲ್ಲಿ ತೊಡಗಿಕೊಂಡಿರುವ ಎಸ್‌.ಜಿ. ಸಿದ್ಧರಾಮಯ್ಯ ‘ನೆಲಮೂಲ’ದ ಕವಿಯೆಂದೇ ಪ್ರಸಿದ್ಧರು. ಈ ನೆಲ–ಸಂಸ್ಕೃತಿಯ ಕಳ್ಳುಬಳ್ಳಿಗಳನ್ನು ಎಸ್‌ಜಿಎಸ್‌ ಕಾವ್ಯ ನಿರಂತರವಾಗಿ ಶೋಧಿಸುತ್ತಿದೆ. ಅವರ ಹೊಸ ಕೃತಿ ‘ನೀನು ಹೋಗಿ ನಾನು ಜೋಗಿ’ ಸಂಕಲನದ ಕವಿತೆಗಳು ಕೂಡ ‘ನೆಲಮೂಲ’ ವಿಶೇಷಣಕ್ಕೆ ತಕ್ಕಂತೆಯೇ ಇವೆ.

ಹಿಂದಣ ದಾರಿಯ ಮುಂದುವರಿಕೆಯಾಗಿ ಎಸ್‌ಜಿಎಸ್‌ ಅವರ ಶೈಲಿಯ ಅಭಿವ್ಯಕ್ತಿಗಳಾದ ‘ಅಕ್ಕ ಕರಿಯಕ್ಕ’, ‘ನೀನು ಹೋಗಿ ನಾನು ಜೋಗಿ’ಯಂಥ ಕೆಲವು ಕವಿತೆಗಳು ಈ ಸಂಕಲನದಲ್ಲಿವೆ. ಆದರೆ, ಪ್ರಸಕ್ತ ಸಂಕಲನದ ಮುಖ್ಯ ಕವಿತೆಗಳು ‘ರಾಜಕೀಯ ಕವಿತೆ’ಗಳು. ಸಮಕಾಲೀನ ರಾಜಕಾರಣ – ರಾಜಕಾರಣಿಗಳ ಭ್ರಷ್ಟತೆ ಹಾಗೂ ಕ್ರೌರ್ಯದ ಹಲವು ಆಯಾಮಗಳನ್ನು ಸಿಟ್ಟು, ವ್ಯಂಗ್ಯ, ಹತಾಶೆ, ಸ್ಫೋಟದ ಮನಸ್ಥಿತಿಯಲ್ಲಿ ಕವಿ ಚಿತ್ರಿಸುತ್ತಾರೆ. ‘ಗಂಗೆ ಅಳುತ್ತಿದ್ದಾಳೆ’ ಕವಿತೆಯ ಶೀರ್ಷಿಕೆ ನದಿಯೊಂದರ ಮಾಲಿನ್ಯದ ಕುರಿತು ನೆನಪಿಸಿದರೂ, ಇಲ್ಲಿನ ಗಂಗೆ ಭಾರತೀಯ ಸಮಾಜವೆನ್ನುವ ಜೀವನದಿಯೇ ಆಗಿದೆ. ಈ ಜೀವನದಿಯನ್ನು ಹೆಣಗಳ ಬಣವೆಯನ್ನಾಗಿಸಿದ ರಾಜಕೀಯ ನಾಯಕನ ಸೋಗಲಾಡಿತನವನ್ನು ಕವಿತೆ ಚಿತ್ರಿಸುತ್ತದೆ. ಬಹುತ್ವ ಭಾರತದ ಜೀವಪರ ಪರಂಪರೆಯನ್ನು ಚಿತ್ರಿಸುವ ‘ನಮ್ಮ ಮನೆ’ ಕವಿತೆ, ದೇಶದ ಅಂತಃಸತ್ವವನ್ನೇ ಅರಿಯದ ‘ಸೊಗಸುಗಾರ ಪುಟ್ಟಸ್ವಾಮಿ’ಯ ಆತ್ಮಾವಲೋಕನಕ್ಕೆ ಒತ್ತಾಯಿಸುತ್ತದೆ.

‘ಚಕ್ರವ್ಯೂಹ’, ‘ನೆಹರು ನಿವೃತ್ತರಾದರು’, ‘ಕೋಮು ಹುಚ್ಚಲಿ’, ‘ಬಹುತ್ವ ಭಾರತ’, ‘ಬಲಿಯುಗ ದರ್ಶನ’ – ಈ ಕವಿತೆಗಳ ಶೀರ್ಷಿಕೆಗಳೇ ಎಸ್‌ಜಿಎಸ್‌ ಅವರ ಈ ಹೊತ್ತಿನ ಕಾವ್ಯದ ಕೇಂದ್ರ ಯಾವುದೆನ್ನುವುದನ್ನು ಸ್ಪಷ್ಟಪಡಿಸುವಂತಿವೆ. ಸಮಕಾಲೀನ ಬಿಕ್ಕಟ್ಟುಗಳು ಹಾಗೂ ರಾಜಕಾರಣದ ಬಗ್ಗೆ ಬರೆಯುವಾಗ ಕವಿ ಪ್ರಜ್ಞಾಪೂರ್ವಕವಾಗಿಯೇ ಕೊಂಚ ವಾಚ್ಯವಾದಂತಿದೆ.

ADVERTISEMENT

ರಾಜಕೀಯ ಕವಿತೆಗಳಿಗೆ ಭಿನ್ನವಾದ, ಮನಸ್ಸನ್ನು ಮುದಗೊಳಿಸುವಂತಹ ಕೆಲವು ಕವಿತೆಗಳೂ ಸಂಕಲನದಲ್ಲಿವೆ. ಅವು ಮೊಮ್ಮಗನನ್ನು ಕುರಿತಾದ ಪದ್ಯಗಳು, ಆತ್ಮೀಯರ ಕುರಿತ ಪದ್ಯಚಿತ್ರಗಳು. ಕೆ.ಎಸ್‌. ನರಸಿಂಹಸ್ವಾಮಿ ಅವರ ‘ತುಂಗಭದ್ರೆ’ ಕವಿತೆಯನ್ನು ನೆನಪಿಸುವಂತಿರುವ ‘ಮೊಮ್ಮಗ’ ಶೀರ್ಷಿಕೆಯ ರಚನೆಗಳಲ್ಲಿ ಹೃದಯಕ್ಕೆ ತಾಗುವ ಸಾಲುಗಳಿವೆ. ‘ಪುಟ್ಟ ಪಾದದ
ಹೆಜ್ಜೆ ಹೆಜ್ಜೆಯಲ್ಲೂ ಹಿಲೇರಿಯ ಗಮನ / ಮೊದಲ ತೊದಲುಗಳಲ್ಲಿ ಜಗದ ಭಾಷೆಗಳ / ಅರ್ಥದೋಕುಳಿ ನಮನ’ ಎನ್ನುವ ಚಂದದ ಸಾಲುಗಳ ಮೊಮ್ಮಗ ಕವಿತೆಗಳು, ಮಕ್ಕಳ ಮೂಲಕ ಜಗದ ಜಂಜಡಗಳಿಗೆ ಮದ್ದು ಹುಡುಕುವ ಪ್ರಯತ್ನದಂತೆ ಆಪ್ತವಾಗುತ್ತವೆ.

ಕೃತಿ: ನೀನು ಹೋಗಿ ನಾನು ಜೋಗಿ

ಲೇ: ಎಸ್‌.ಜಿ. ಸಿದ್ಧರಾಮಯ್ಯ

ಪ್ರ: ವಸಂತ ಪ್ರಕಾಶನ, ಬೆಂಗಳೂರು

ಸಂ: 7892106719.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.