ಮನುಷ್ಯ ತನ್ನ ದುರಾಸೆ, ಹಪಾಹಪಿ, ನಾನಾ ಕಾರಣಗಳಿಂದ ಪ್ರಕೃತಿಯನ್ನು ಆಪೋಶನ ತೆಗೆದುಕೊಂಡ, ತೆಗೆದುಕೊಳ್ಳುತ್ತಿರುವ ದುರಂತ ಕಥನಗಳ ಸರಣಿಯನ್ನೊಳಗೊಂಡ ಕೃತಿ ಇದು. ಪಶ್ಚಿಮ ಘಟ್ಟಕ್ಕೆ ಬಂದೊದಗಿದ ವಿಪತ್ತಿನ ಬಗ್ಗೆ ಲೇಖಕರ ಆತಂಕ, ಕಾಳಜಿ ಇಲ್ಲಿ ವ್ಯಕ್ತವಾಗಿದೆ. ಸರ್ಕಾರದ ಯೋಜನೆಗಳು, ಅಭಿವೃದ್ಧಿ ಹೆಸರಿನಲ್ಲಿ ಪ್ರಕೃತಿ ಮೇಲಾಗುತ್ತಿರುವ ದೌರ್ಜನ್ಯ, ಅದರಿಂದಾಗುವ ಪರಿಣಾಮ, ಒಂದು ಜೀವಿ ಅಳಿದರೆ, ಅಥವಾ ಸಂಖ್ಯೆ ಹೆಚ್ಚಾದರೆ ಪರಿಸರದ ಸಮತೋಲನದ ಏರುಪೇರಾಗುವ ಬಗೆ, ಆಹಾರ ಸರಪಳಿಯಲಿ ಮಾನವನ ಹಸ್ತಕ್ಷೇಪ, ಅವೈಜ್ಞಾನಿಕ ಪ್ರಾಣಿ ಸಂರಕ್ಷಣೆ, ಮಾನವ- ವನ್ಯಜೀವಿ ಸಂಘರ್ಷ, ಅದಕ್ಕಿರುವ ಪರಿಹಾರೋಪಾಯಗಳ ಮೇಲೆ ಇಲ್ಲಿನ ಲೇಖನಗಳು ಬೆಳಕು ಚೆಲ್ಲುತ್ತವೆ.
‘ಹಾರ್ಬೆಕ್ಕಿನ ಕಟ್ಟ ಕಡೆಯ ಸ್ವಗತ’ ಎನ್ನುವ ಮೊದಲ ಲೇಖನ ಸೂಕ್ಷ್ಮ ಓದುಗನ ಎದೆಗೆ ನಾಟುತ್ತದೆ. ತನ್ನ ನಾಲಗೆ ಚಪಲಕ್ಕಾಗಿ ಒಂದು ಜೀವಿಯನ್ನು ನಿರ್ವಂಶ ಮಾಡಿದ ಮನುಷ್ಯನ ದುರಾಸೆಯ ಪರಿಚಯವಾಗುತ್ತದೆ. ಹಾರ್ಬೆಕ್ಕು ತನ್ನ ಸ್ವಗತ ಹೇಳಿ ಮುಗಿಸುವಾಗ ಮನಸ್ಸು ಆರ್ದ್ರಗೊಳ್ಳುತ್ತದೆ. ಓದಿಸಿಕೊಂಡು ಹೋಗುವ ಇಂತಹ ಗುಣಗಳು ಇಲ್ಲಿನ ಎಲ್ಲಾ ಲೇಖನಗಳಲ್ಲಿ ಇವೆ. ಸರಳ ಭಾಷೆ ಹಾಗೂ ವಿವರಣೆಗಳು ಓದುಗನಿಗೆ ಆಪ್ತವಾಗುವಂತಿದೆ.
ಜಾನುವಾರುಗಳಿಗೆ ಬಳಸುವ ರೋಗ ನಿರೋಧಕದಿಂದ ಹದ್ದುಗಳು ಕಾಣೆಯಾದ ಬಗ್ಗೆ ಇರುವ ಲೇಖನ ಕುತೂಹಲ ಮೂಡಿಸುತ್ತದೆ. ಮನುಷ್ಯ ಮುಟ್ಟಿದ್ದೆಲ್ಲವೂ ವಿನಾಶ ಎನ್ನುವ ಭಾವ ಓದುಗನ ಮನಸ್ಸಿನಲ್ಲಿ ಮೂಡುವುದಲ್ಲದೆ, ಪರಿಸರದ ಸಂರಕ್ಷಣೆಗಾಗಿ ತಾನೇನು ಮಾಡಬಹುದು ಎನ್ನುವ ಪ್ರಜ್ಞೆಯ ಬೀಜವನ್ನೂ ಬಿತ್ತುತ್ತದೆ. ಸೂಕ್ಷ್ಮ ಪಶ್ಚಿಮ ಘಟ್ಟದ ಮೌನ ರೋದನೆಗೆ ಪುಸ್ತಕ ಕಿವಿಯಾಗುತ್ತದೆ. ಆನೆ, ಹುಲಿ ಕಾರಿಡಾರ್ ಯೋಜನೆಯ ಅಪಾಯಗಳು, ಅರಣ್ಯ ಇಲಾಖೆಯ ಪ್ರಜ್ಞಾಹೀನ ಕೆಲಸಗಳು, ಅರಣ್ಯ ಸಂರಕ್ಷಣೆ ಕಾಯ್ದೆಯ ಸಮಸ್ಯೆಗಳು.. ಇವೆಲ್ಲವುಗಳು ಕಡೆಯದಾಗಿ ನಮಗೆ ಮಾರಕವಾಗುತ್ತದೆ ಎನ್ನುವುದಕ್ಕೆ ಈ ಪುಸ್ತಕ ಓದಬೇಕು. ಪಶ್ಚಿಮ ಘಟ್ಟದ ನೋವನ್ನೂ ನೀವೂ ಕೇಳಬೇಕು.
ಸೋಲುತಿದೆ ಸಹ್ಯಾದ್ರಿ
ಲೇ: ಅಖಿಲೇಶ್ ಚಿಪ್ಪಳಿ
ಪ್ರ: ಭೂಮಿ ಬುಕ್ಸ್
ಸಂ: 94491 77628
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.