ಮಕ್ಕಳಿಗಾಗಿ ಕತೆ ಕವನಗಳು
ಅತ್ಯಾಕರ್ಷಕ ಚಿತ್ರಗಳಿರುವ ಹೊಳೆಯುವ ನುಣುಪುಳ್ಳ ಗ್ಲೇಸ್ಡ್ ಶೀಟಿನ ಪುಸ್ತಕವಿದು. ಸುತ್ತಲ ಕಥನಗಳನ್ನೇ ಕವಿತೆಯ ರೂಪದಲ್ಲಿ, ಮಕ್ಕಳು ಓದಿಕೊಂಡು, ಓಡಾಡಿಕೊಂಡು, ಹಾಡಿಕೊಂಡು ಹೇಳುವಂಥ ಕವಿತೆಗಳು ಇಲ್ಲಿವೆ. ಪ್ರಾಥಮಿಕ ಮಕ್ಕಳು ಸರಾಗವಾಗಿ ಓದಿ, ಅರ್ಥ ಮಾಡಿಕೊಳ್ಳಬಲ್ಲ ಕವಿತೆಗಳು ಇವು. ಪೂರ್ವ ಪ್ರಾಥಮಿಕ ಮಕ್ಕಳಿಗೆ ಚಿತ್ರ ತೋರಿಸಿ, ಬಾಯಿಪಾಠವಾಗಿಸುವಂಥ ಹಾಡುಗಳಿವು. ಮಕ್ಕಳಲ್ಲಿ ಓದುವ ಅಭಿರುಚಿ ಬೆಳೆಸಲು, ಕನ್ನಡದ ಬಗ್ಗೆ ಅಕ್ಕರಾಸ್ಥೆ ಮೂಡಿಸಲು ಪ್ರಕಾಶಕರು ಚಂದದ ಮತ್ತು ಗುಣಮಟ್ಟದ ಮುದ್ರಣದಲ್ಲಿ ಪುಸ್ತಕವನ್ನು ತಂದಿದ್ದಾರೆ. ಅಂತ್ಯಪ್ರಾಸದ ಕವಿತೆಗಳು ಹೆಚ್ಚಾಗಿದ್ದು, ಮಕ್ಕಳನ್ನು ಈಗಲೂ ಸೆಳೆಯುವ ಪ್ರಾಣಿಗಳು, ಪ್ರಕೃತಿಯ ಚಿತ್ರಗಳು ಹೇರಳವಾಗಿವೆ. ನದಿ ನದಿ ಎಲ್ಲಿ ಹೋತು, ಖಲೀಲ್ ಗ್ರಿಬ್ರಾನ್ ಅವರ ರಿವರ್ ಕವಿತೆಯನ್ನು ನೆನಪಿಸುವಂತಿದೆ. ಕನ್ನಡದ ಆಡುಭಾಷೆಯಲ್ಲಿ ಇನ್ನೂ ಆಪ್ತವೆನಿಸುತ್ತದೆ.
ಕೆಲವೇ ಸಾಲುಗಳಲ್ಲಿ ಮುಗಿಯುವ ಈ ಕತೆಗಳಿಗೆ ಅತ್ಯಾಕರ್ಷಕ ಚಿತ್ರಗಳಿವೆ. ಚಿತ್ರಗಳನ್ನು ನೋಡುತ್ತ ಮಕ್ಕಳು ತಮ್ಮದೇ ಆದ ಕತೆಯನ್ನೂ ಕಟ್ಟಬಹುದು. ಮಕ್ಕಳ ಕಲ್ಪನಾಶಕ್ತಿಗೆ ರೆಕ್ಕೆಗಳನ್ನು ನೀಡುತ್ತ, ಪದಕೋಶವನ್ನೂ ವಿಸ್ತರಿಸುವಂಥ ಪುಸ್ತಕಗಳಿವು. ಮಕ್ಕಳನ್ನು ಪುಸ್ತಕ ಲೋಕಕ್ಕೆ ಸೆಳೆಯುವ ಪ್ರಥಮ್ ಬುಕ್ಸ್‌ನ ಈ ಪ್ರಯತ್ನದಲ್ಲಿ ಕನ್ನಡ ಮೂಲದ್ದೇ ಎರಡು ಕತೆಗಳು ಬಂದಿರುವುದು ಕನ್ನಡಿಗರು ಹೆಮ್ಮೆ ಪಡುವ ವಿಷಯ. ಓದಲು ಕಲಿಯಲು ಪ್ರೇರೇಪಿಸಲು ಎರಡನೆಯ ಹಂತದ ಈ ಪುಸ್ತಕಗಳು ಮಕ್ಕಳಿಗೆ ರಜೆಯಲ್ಲಿ ಫೋನು ಬಿಟ್ಟು ಹೊಸದೊಂದು ಕತೆ ಹೆಣೆಯಲೂ ಅನುವು ಮಾಡಿಕೊಡುವಂಥವು. ಮಾತು ಬರುವ, ಓದಲು ಬಾರದ ಮಕ್ಕಳೂ ಕತೆ ಹೇಳಬಹುದು. ಕತೆ ಕೇಳಬಹುದು. ಈ ಕತೆ ಹೇಳುವ–ಕೇಳುವ ಆಟದೊಳು ಮಕ್ಕಳು ಮತ್ತು ಪಾಲಕರ ಬಾಂಧವ್ಯಕ್ಕೆ ಹೊಸ ಹೊಳಹು ಬರಬಹುದು. ಉಣ್ಣಿಸುವಾಗ, ಮಲಗಿಸುವಾಗ ಮೊಬೈಲು ಫೋನು ಬಿಟ್ಟು, ಚಿತ್ರಗಳ ಸಂತೆಯಲ್ಲಿ ಮಕ್ಕಳ ಪದಸಂಪತ್ತನ್ನು ಹೆಚ್ಚಿಸಲು ಈ ಪುಸ್ತಕಗಳು ಓದುಗರ ಮನೆಗೆ ಪ್ರವೇಶ ಪಡೆಯಬಹುದು.
ಗೊಗ್ಗಯ್ಯನ ಹೆಸರು ಹೇಳಿ, ಉಣಿಸುವುದು, ಮಲಗಿಸುವುದು ಸಾಮಾನ್ಯವಾಗಿದೆ. ಆದರೆ ಮಕ್ಕಳು ಗೊಗ್ಗಯ್ಯನ ಬಗ್ಗೆ ಏನು ಯೋಚಿಸುತ್ತಾರೆ ಎಂಬುದು ಗೊಗ್ಗಯ್ಯ ಕತೆ ಪುಸ್ತಕವಾಗಿದೆ. ಅಂಜೂರ, ಅಂಜೂರ ಯಾರ ಅಂಜೂರದಲ್ಲಿ ಪುನುಗು ಬೆಕ್ಕು ಮತ್ತು ಮುಳ್ಳುಹಂದಿಗಳೂ ಅಂಜೂರವನ್ನು ತಿನ್ನುವ ಮಾಹಿತಿಯೊಂದಿಗೆ ಆಸಕ್ತಿಕರ ಕತೆ ನಿರೂಪಿಸಲಾಗಿದೆ.
ಕನ್ನಡವನ್ನು ಸರಾಗವಾಗಿ ಓದಲು ಸರಳವಾಗಿ ಕಲಿಸಬೇಕು ಎನ್ನುವ ಪೋಷಕರಿಗೆ ಈ ಪುಸ್ತಕಗಳು ವರದಾನವಾಗಿವೆ. ವಯೋಮಿತಿಯನ್ನು ಬದಿಗಿರಿಸಿಯೂ ಕನ್ನಡ ಕಲಿಕೆಗಾಗಿ ಕೊಂಡುಕೊಳ್ಳಬೇಕಾದ ಪುಸ್ತಕಗಳಿವು.
ನದಿ ನದಿ ಎಲ್ಲಿ ಹೋತು
ಲೇ: ಲಲಿತಾ ಕೆ. ಹೊಸಪ್ಯಾಟಿ
ಪ್ರ: ಅವ್ಯಕ್ತ ಪ್ರಕಾಶನ
ಸಂ: 8792693438
ಗೊಗ್ಗಯ್ಯ ಎಲ್ಲಿ
ಲೇ: ಕೊಳ್ಳೇಗಾಲ ಶರ್ಮ
ಪ್ರ: ಪ್ರಥಮ್ ಬುಕ್ಸ್
prathambooks.org
ಅಂಜೂರ ಅಂಜೂರ ಯಾರ ಅಂಜೂರ
ಲೇ: ದೀಪಾ ಭಾಸ್ತಿ
ಪ್ರ: ಪ್ರಥಮ್ ಬುಕ್ಸ್
prathambooks.org
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.